ತುತ್ತು ಅನ್ನಕ್ಕಾಗಿ ಅಲೆದಾಡುತ್ತಾ, ಅನ್ನದ ಋಣ ಎಂದು ತಿನ್ನಲು ಕೊಟ್ಟವರಿಗೆ ವಂದಿಸುತ್ತಾ, ತಪ್ಪು ಮಾಡಿದರೆ ಅನ್ನವೇ ಸಿಗುವುದಿಲ್ಲ ಎನ್ನುವಷ್ಟು ಭಯ ಭಕ್ತಿ ತೋರಿಸುತ್ತಾ, ಅನ್ನದ ಪ್ರತಿ ಅಗುಳಿನ ಮೇಲೂ ತಿನ್ನುವವನ ಹೆಸರು ಬರೆದಿರುತ್ತದೆ ಎನ್ನುವ ಗಾಢ ಭಾವನಾತ್ಮಕ ನಂಬಿಕೆ ಸೃಷ್ಟಿಸುತ್ತಾ ಇದ್ದ ವಾತಾವರಣ ಮಾಯವಾಗಿ, ಆಹಾರವನ್ನು ವ್ಯರ್ಥ ಮಾಡಬೇಡಿ, ತಿನ್ನುವ ಹಕ್ಕಿದೆ ಬಿಸಾಡುವ ಹಕ್ಕಿಲ್ಲ ಎಂಬ ಘೋಷವಾಕ್ಯಗಳನ್ನು ಪ್ರಚಾರ ಮಾಡಬೇಕಾದ ಬದಲಾವಣೆಗೆ ನಾವು ಬಂದಿದ್ದೇವೆ…….
ವರ್ಷದ ಒಂದು ಹಬ್ಬಕ್ಕೆ ಒಂದು ಹೊಸ ಬಟ್ಟೆ ಕೊಳ್ಳಲು ಸಾಲ ಮಾಡಬೇಕಾದ ಪರಿಸ್ಥಿತಿಯಿಂದ ಫ್ಯಾಷನ್ ಡಿಸೈನರ್ ಫ್ಯಾಷನ್ ಟೆಕ್ನಾಲಜಿ ಎಂಬ ಶಿಕ್ಷಣ ಮತ್ತು ಬೃಹತ್ ಉದ್ಯಮಗಳು ತಲೆ ಎತ್ತಿ ಆರ್ಥಿಕತೆಯ ಒಂದು ಭಾಗವಾಗಿರುವ ಹಂತದಲ್ಲಿ ನಾವಿದ್ದೇವೆ…….
ಕಿತ್ತುಹೋದ, ಹಳ್ಳ ಬಿದ್ದ ಕಲ್ಲು ಮಣ್ಣಿನ ನರಕ ಸದೃಶವಾದ ರಸ್ತೆಗಳು, ಆಗಾಗ ಕಾರಣವಿಲ್ಲದೇ ನಿಂತು ಹಠ ಮಾಡಿ ತಳ್ಳಿಸಿಕೊಂಡು ಮುನ್ನಡೆಯುವ ವಾಹನಗಳು ಕೆಲವೇ ವರ್ಷಗಳಲ್ಲಿ ನಮ್ಮ ಕಣ್ಣ ಮುಂದೆಯೇ ಟಾರು ಸಿಮೆಂಟ್ ಕಾಂಕ್ರೀಟ್ ರಸ್ತೆಗಳಾಗಿ ಮಾರ್ಪಾಡು ಹೊಂದಿ ಅತ್ಯುತ್ತಮ ಜೀವ ಉಳಿಸುವ ಏರ್ ಬ್ಯಾಗ್ ಹೊಂದಿದ ವಾಹನಗಳು, ಸಾಕಷ್ಟು ತಂತ್ರಜ್ಞಾನದ ಸಹಾಯದಿಂದ ವೇಗ ನಿಯಂತ್ರಣ ಸಾಧಿಸುವ ವಾಹನಗಳು ಈಗ ನಮ್ಮ ಮುಂದೆ ಆಯ್ಕೆಗಳಾಗಿವೆ…
ಊರ ಹೊರಗೆ ದೂರದಲ್ಲಿ ಒಂದು ಪಾಳುಬಿದ್ದ ಮನೆ ಅಥವಾ ಗುಡಿಸಲುಗಳಲ್ಲಿ ಹೆಂಡ ಸಾರಾಯಿ ಮಾರಾಟ ಮಾಡಲಾಗುತ್ತಿತ್ತು. ಕುಡಿಯುವವರು ರಾತ್ರಿ ಕತ್ತಲಿನಲ್ಲಿ ಯಾರಿಗೂ ಕಾಣದಂತೆ ಕುಡಿದು ಕಳ್ಳರಂತೆ ಬಚ್ಚಿಟ್ಟುಕೊಂಡು ಮನೆ ಸೇರುತ್ತಿದ್ದರು. ಈಗ ಗಾಂಧಿ ರಸ್ತೆ, ಬಸವ ಮಾರ್ಗ, ಅಂಬೇಡ್ಕರ್ ಬೀದಿ, ವಿವೇಕಾನಂದ ಕಾಲೋನಿಗಳೆಂಬ ಹೆಸರಗಳುಳ್ಳ ಜಾಗದಲ್ಲಿ ಲಕ್ಷ್ಮೀ ಬಾರ್, ವೆಂಕಟೇಶ್ವರ ವೈನ್ನ್, ತಿರುಮಲ ಮದ್ಯದ ಅಂಗಡಿ ಮುಂತಾದ ಹೆಸರು ಇಟ್ಟುಕೊಂಡು ಊರ ಮಧ್ಯೆ ಮಿಣ ಮಿಣ ದೀಪಾಲಂಕಾರ ಮಾಡಿಕೊಂಡು ಬಹಿರಂಗವಾಗಿ ಹೆಂಗಸರು ಗಂಡಸರು ಒಟ್ಟಿಗೆ ಕುಡಿಯುವುದು ಒಂದು ಫ್ಯಾಶನ್ ಎನ್ನುವಲ್ಲಿಗೆ ಬಂದಿದೆ….
ಮೊದಲೆಲ್ಲಾ ಕೇವಲ ವ್ಯಾಪಾರಿಗಳು, ಅಧಿಕಾರಿಗಳು, ರಾಜಕಾರಣಿಗಳು, ಕಾರ್ಮಿಕರು, ವೃತ್ತಿ ನಿರತರು ಮುಂತಾದ ಕೆಲವೇ ಜನ ಬ್ಯುಸಿ ಎಂದು ಹೇಳುತ್ತಿದ್ದರು. ಈಗ ಬಹುತೇಕ ಮನುಷ್ಯರು ಎನಿಸಿಕೊಳ್ಳುವ ಗಂಡು ಹೆಣ್ಣು ಎಲ್ಲರೂ ಸೇರಿ ಪ್ರತಿಯೊಬ್ಬರೂ ಬ್ಯುಸಿಯಾಗಿದ್ದಾರೆ.
ಹಿಂದೆ ಪೋಲೀಸು, ಜೈಲು, ಕೋರ್ಟ್ ಎಂದರೆ ಜನಕ್ಕೆ ಭಯ ಮತ್ತು ಆತಂಕದ ಜೊತೆಗೆ ಅದು ಕೇವಲ ಕಳ್ಳರು ಸುಳ್ಳುರು, ಮೋಸಗಾರರಿಗೆ ಮಾತ್ರ ಎಂಬ ಅಭಿಪ್ರಾಯವಿತ್ತು. ಈಗ ಅದು ಒಂದು ಪ್ರತಿಷ್ಠೆಯ ವಿಷಯವಾಗಿದೆ.
ಶಿಕ್ಷಕರು, ವೈದ್ಯರು, ಪತ್ರಕರ್ತರು, ಸ್ವಾಮೀಜಿಗಳು ಏನೇ ಹೇಳಿದರು ಭಯ ಭಕ್ತಿಯಿಂದ ಕೇಳಿಸಿಕೊಂಡು ಅವರು ಹೇಳುವುದೆಲ್ಲಾ ಸತ್ಯ ಎನ್ನುವ ಮನೋಭಾವದಿಂದ ಈಗ ಅವರುಗಳು ಸತ್ಯವನ್ನೇ ಹೇಳಿದರು ಅದರ ಬಗ್ಗೆ ಅನುಮಾನ ವ್ಯಕ್ತಪಡಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ.
ಹೀಗೆ ಇನ್ನೂ ಅನೇಕ ವಿಷಯಗಳಲ್ಲಿ ನಿರಂತರ ಬದಲಾವಣೆಗಳನ್ನು ಕಾಣುತ್ತಾ ಸಾಗುತ್ತಿದ್ದೇವೆ. ಬದಲಾವಣೆ ಜಗದ ನಿಯಮ. ಆದರೆ ಬದಲಾವಣೆ ಒಳ್ಳೆಯ – ಪ್ರಗತಿಪರ – ಮಾನವೀಯ ಮೌಲ್ಯಗಳ ಅಳವಡಿಕೆಯ ನಿಟ್ಟಿನಲ್ಲಿ ಇದ್ದರೆ ಸಮಾಜ ಉತ್ತಮ ಗುಣಮಟ್ಟದಲ್ಲಿ ಇರುತ್ತದೆ. ಆ ನಿಟ್ಟಿನಲ್ಲಿ ನಾವು ಪ್ರಯತ್ನಿಸಬೇಕಾಗಿದೆ…………..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……