Spread the love

(ಕವನ)

ನಾನು ಸತ್ತಾಗ
ಅಳಬೇಡಿ
ಸಮಾಧಾನಪಡಿ
ಸಾವು ಬಂದರೆ ಬೇಗ
ಸಂತೋಷ ಇಮ್ಮಡಿ
ಆಗಬಾರದಲ್ಲ ನಾನು ನೀವು ಲಗಾಡಿ.

ಮನೆಮಂದಿಗೆ, ಆಪ್ತರಿಗೆ ಮಾತ್ರ ಸಾಕು ಹೇಳಿಬಿಡಿ
ಜಾತಿ ಮತ ನೋಡಲೇಬೇಡಿ
ಪತ್ರಕರ್ತರು, ಗಣ್ಯರು ಬೇಡವೇ ಬೇಡ ಬಿಟ್ಟುಬಿಡಿ.
ನೋಡಲು ಕೇಳಲು ಓದಲು ನಾನಿರುವುದಿಲ್ಲ ನೋಡಿ
ಮತ್ತೇನಾಗಬೇಕು ನನಗೆ ನನ್ನಷ್ಟಕ್ಕೆ ಬಿಟ್ಟುಬಿಡಿ.

ಕಲಿಯುವವರಿಗಾಗಲಿ ದೇಹದಾನ ಮಾಡಿ
ವ್ಯವಸ್ಥೆಗೆ ಡಾಕ್ಟರ್ ಭಂಡಾರಿಗೆ ಬಿಟ್ಟುಬಿಡಿ.
ಚಿತೆಗಾದರೆ ಪ್ರಕಾಶ ಪೂಜಾರಿಗೆ ಹೇಳಿಬಿಡಿ.
ಮತ್ತೆಲ್ಲವನ್ನೂ ಅವರೇ ಮಾಡುತ್ತಾರೆ ಚಿಂತೆ ಬೇಡ ಬಿಡಿ.

ಅಂತಿಮ ದರ್ಶನಕ್ಕೆಂದು ಶವ ಇಡಲೇಬೇಡಿ
ನಾಯಕನಲ್ಲ, ಮುಖ್ಯನೂ ಅಲ್ಲ, ಕೇವಲ ಜನಪರ ಕಾರ್ಯಕರ್ತನಿಗೇಕೆ ನಮನದ ನುಡಿ.

ಹೂ ಹಾರ ಬಟ್ಟೆ ಶವದ ಮೇಲಿಡಬೇಡಿ
ಮಣ್ಣಲ್ಲಿ ಮಣ್ಣಾಗುವ ಶವಕ್ಕೇಕೆ ಭಾರ.
ಹೂ ಹಕ್ಕಿಗಳಿಗಿರಲಿ
ಬಟ್ಟೆ ನಮ್ಮ ನಾಯಿಗಳಿಗಿರಲಿ
ಬೆತ್ತಲೆ ಬಂದವನು ಬೆತ್ತಲಾಗೇ ಹೋಗುವೆ ನನ್ನನ್ನು ನನ್ನಷ್ಟಕ್ಕೇ ಬಿಟ್ಟುಬಿಡಿ

ಸತ್ತ ಸುದ್ಧಿ ಪತ್ರಿಕೆಗೂ ಕೊಡಬೇಡಿ
ಜನರೋದಿ ಆಗಬೇಕಾದ್ದೇನಿದೆ ಹೇಳಿಬಿಡಿ
ಉತ್ತರಕ್ರೀಯೆಯೋ, ಬೊಜ್ಜವೋ ಶಪುಂಡಿಯೋ ವರ್ಷಾಂತಿಕವೋ ಯಾವುದೂ ಬೇಡ ಬಿಟ್ಟುಬಿಡಿ
ನಾನಿಲ್ಲದ ಮೇಲೆ ನನಗೇಕೆ ಅವುಗಳ ಗಡಿಬಿಡಿ

ಸತ್ತವನ ಭಯಬಿಡಿ, ಧೈರ್ಯದಿಂದಲೇ ಜೀವನವ ಮಾಡಿ
ವ್ಯರ್ಥವಾಗದಿರಲಿ ಹಣ, ಕಷ್ಟದಲ್ಲಿರುವವರಿಗೆ ನೆರವಾಗಿ ಸಂತೃಪ್ತಿಪಡಿ.

~ ಶ್ರೀರಾಮ ದಿವಾಣ
22/07/2022

error: No Copying!