1947 – 2022……
ಎಲ್ಲಾ ಸರಿ ತಪ್ಪುಗಳ ನಡುವೆ ಭಾರತ ಇತಿಹಾಸದ ಸ್ವರ್ಣಯುಗ ಎಂದರೆ ಈ 75 ವರ್ಷಗಳು ಅದರಲ್ಲೂ ಕಳೆದ 25 ವರ್ಷಗಳು ನಾಗರಿಕ ಸ್ವಾತಂತ್ರ್ಯದ ನೆಲೆಯಲ್ಲಿ ಅತ್ಯಂತ ಮಹತ್ವದ ಸುವರ್ಣ ಯುಗ ಎಂದು ಕರೆಯಬಹುದು.
ಅದಕ್ಕಾಗಿ ಭಾರತದ ಸಂವಿಧಾನಕ್ಕೆ ಹೃದಯ ಪೂರ್ವಕ ಅಭಿನಂದನೆಗಳು ಮತ್ತು ಧನ್ಯವಾದಗಳನ್ನು ಅರ್ಪಿಸುತ್ತಾ……
ಕೊರತೆಗಳಿವೆ, ಸಮಸ್ಯೆಗಳಿವೆ, ಶೋಷಣೆಗಳಿವೆ, ಬಲಾಡ್ಯರ ದೌರ್ಜನ್ಯವಿದೆ ಅದೆಲ್ಲದರ ನಡುವೆ ಹಕ್ಕುಗಳಿಗಾಗಿ ಧ್ವನಿ ಎತ್ತುವ ವ್ಯವಸ್ಥೆಯಿದೆ ಎಂಬ ಸಮಾಧಾನದೊಂದಿಗೆ….
ಜನ ಜಾಗೃತಿ ಮತ್ತು ಸಂವಿಧಾನವೇ ನಿಜವಾದ ಧರ್ಮ ಎಂಬ ಮನೋಭಾವ ಸರ್ವವ್ಯಾಪಿಯಾಗಿ ಬಲವಾಗುತ್ತಿರುವ ಕಾರಣದಿಂದಾಗಿ ಗುಂಪು ನಾಯಕತ್ವ, ಸರ್ವಾಧಿಕಾರ, ರಾಜಪ್ರಭುತ್ವದ, ದಾಳಿ ಕೋರರ ಆಡಳಿತ ಮುಂತಾದ ಸಮಯದಲ್ಲಿ ಮನುಷ್ಯರ ಮೂಲಭೂತ ಅವಶ್ಯಕತೆಯಾದ ವ್ಯಕ್ತಿ ಸ್ವಾತಂತ್ರ್ಯ ಈ ಮಟ್ಟದಲ್ಲಿ ಇರಲಿಲ್ಲ ಮತ್ತು ಆರ್ಥಿಕ ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ಸ್ವಾತಂತ್ರ್ಯ ಸಹ ಈಗಿನಷ್ಟು ಇರಲಿಲ್ಲ ಎಂಬ ಕಾರಣಗಳಿಗಾಗಿ ಇದನ್ನು ಸ್ವರ್ಣ ಯುಗ ಎಂದು ಕರೆಯಲು ಮನಸ್ಸು ಬಯಸ್ಸುತ್ತಿದೆ.
ಈ 75 ವರ್ಷಗಳನ್ನು ಹೊಗಳಲೂ ಕಾರಣಗಳಿವೆ, ತೆಗಳಲೂ ಕಾರಣಗಳಿವೆ, ಸಮಾಧಾನ ಪಟ್ಟುಕೊಳ್ಳಲು ಸಹ ಕಾರಣಗಳಿವೆ. ಈಗ ಅದನ್ನು ಮೀರಿ ನಮ್ಮ ಕರ್ತವ್ಯಗಳ ಕಡೆ ಗಮನ ಕೊಡುವ ಸಮಯ ಬಂದಿದೆ.
ಭಾರತವೆಂಬ ಭೂ ಪ್ರದೇಶದ ಗಾಳಿ ನೀರು ಆಹಾರ ಮಲಿನವಾಗುತ್ತಿರುವುದು ಅತ್ಯಂತ ಗಂಭೀರ ಸಮಸ್ಯೆ. ಇದರಿಂದಾಗಿ ಭಾರತೀಯರ ದೇಹ ಮತ್ತು ಮನಸ್ಸು ದುರ್ಬಲವಾಗುತ್ತಿದೆ. ಅದನ್ನು ಶುದ್ಧವಾಗಿ ಉಳಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯ ನಾಗರಿಕರ ಕರ್ತವ್ಯ.
ಮಾನವೀಯ ಮೌಲ್ಯಗಳು ಅಪಾಯಕಾರಿ ಹಂತವನ್ನು ಮೀರಿ ವ್ಯಾಪಾರೀಕರಣವಾಗಿದೆ. ಪ್ರೀತಿ ಕರಣೆ ತಾಳ್ಮೆ ತ್ಯಾಗ ಸಭ್ಯತೆ ಸಹಕಾರ ಸಮನ್ವಯ ಎಲ್ಲವೂ ಹಣ ಅಧಿಕಾರದ ಮೂಲದಿಂದ ಅಳೆಯುವ ಮಾನದಂಡ ಭಾರತದ ಮೂಲ ಸಂಸ್ಕೃತಿಗೆ ಮಾಡುವ ಅವಮಾನ. ಅದನ್ನು ಪುನರುತ್ಥಾನ ಮಾಡುವುದು ನಮ್ಮೆಲ್ಲರ ಕರ್ತವ್ಯ.
ಸಾಮಾಜಿಕ ಸಾಮರಸ್ಯ ಮತ್ತು ನೈತಿಕ ಮೌಲ್ಯಗಳು ತೀರಾ ಕೆಳಹಂತಕ್ಕೆ ತಲುಪಿದೆ. ಜಾತಿ ಧರ್ಮ ಭಾಷೆಯ ಹೆಸರಿನಲ್ಲಿ ಹಿಂಸೆ ತುಂಬಾ ಹೆಚ್ಚಾಗಿದೆ. ಒಳ್ಳೆಯವರು ಒಳ್ಳೆಯವರಾಗಿಯೇ ಬದುಕುವುದು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಭ್ರಷ್ಟಾಚಾರ ವ್ಯಾಪಕವಾಗಿದೆ. ಅದನ್ನು ಮತ್ತೆ ಸರಿಯಾದ ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ.
ಇದು ಮೂಲಭೂತವಾಗಿ ಪರಿವರ್ತನೆ ಆಗಬೇಕಾದ ಸಮಸ್ಯೆಗಳು. ನಂತರ ಈ ಮೂಲಕ ಉಳಿದ ಸಮಸ್ಯೆಗಳು ಸಹಜವಾಗಿ ಬದಲಾಗುತ್ತದೆ.
ಆದರೂ ನಮ್ಮ ದೇಶದ ವೈವಿಧ್ಯತೆ ಒಮ್ಮೆ ನೋಡಿ…..
ಮೇಲೆ ನೋಡಿದರೆ ಹಿಮರಾಶಿಯ ಕಾಶ್ಮೀರ,
ಕೆಳಗೆ ನೋಡಿದರೆ ನೀಲಿ ಸಾಗರದ ಕನ್ಯಾಕುಮಾರಿ,
ಪೂರ್ವಕ್ಕೆ ಸಪ್ತ ಸೋದರಿಯರ ಸುಂದರ ನಾಡು,
ಪಶ್ಚಿಮದಲ್ಲಿ ವಾಣಿಜ್ಯ ನಗರಿಯ ಬೀಡು,
ಮಧ್ಯದಲ್ಲಿ ವಿಂಧ್ಯ ಗಿರಿ,
ಅಗೋ ಅಲ್ಲಿ ನೋಡು ಹರಿಯುತ್ತಿದ್ದಾಳೆ ಗಂಗೆ,
ಇಗೋ ಇಲ್ಲಿ ನೋಡು ನಲಿಯುತ್ತಿದ್ದಾಳೆ ಕಾವೇರಿ,
ಅಲ್ಲಲ್ಲಿ ಮುದುನೀಡುವ ಮನೋಹರ ನದಿ ಕಾಡುಗಳು,
ಅಲ್ಲಿಯೇ ಹುಲಿ ಸಿಂಹಗಳ ಘರ್ಜನೆ,
ನವಿಲ ನರ್ತನ, ಕೋಗಿಲೆಯ ಕುಹೂ ಕುಹೂ ಗಾನ,
ಹಾಡಲೊಂದು ಶಾಸ್ತ್ರೀಯ ಸಂಗೀತ,
ಕೇಳಲೊಂದು ಕರ್ನಾಟಕ ಸಂಗೀತ,
ಅಲ್ಲೊಂದಿಷ್ಟು ಮರುಭೂಮಿ,
ಇಲ್ಲೊಂದಿಷ್ಟು ಪಶ್ಚಿಮ ಘಟ್ಟಗಳು,
ಮತ್ತೊಂದಿಷ್ಟು ನಿತ್ಯ ಹರಿದ್ವರ್ಣದ ಕಾಡುಗಳು,
ಓದಲು ರಾಮಾಯಣ, ಮಹಾಭಾರತ,
ಕಲಿಯಲು ಬೃಹತ್ ಸಂವಿಧಾನ,
ಅರಿಯಲೊಬ್ಬ ಬುದ್ದ,
ಅಳವಡಿಸಿಕೊಳ್ಳಲೊಬ್ಬ ಬಸವ,
ಬುದ್ಧಿ ಹೇಳಲೊಬ್ಬ ವಿವೇಕಾನಂದ,
ತಿಳುವಳಿಕೆ ಮೂಡಿಸಲೊಬ್ಬ ಅಂಬೇಡ್ಕರ್,
ಎಲ್ಲರೊಳಗೊಬ್ಬ ಗಾಂಧಿ,
ಗುರುಹಿರಿಯರೆಂಬ ಗೌರವ,
ಮಕ್ಕಳೇ ಮಾಣಿಕ್ಯವೆಂಬ ಸಂಸ್ಕಾರ,
ಆಡಲು ಹಾಕಿ, ನೋಡಲು ಕ್ರಿಕೆಟ್,
ಕಾಯಲೊಬ್ಬ ಪ್ರಧಾನಮಂತ್ರಿ,
ಕರುಣಿಸಲೊಬ್ಬ ಮುಖ್ಯಮಂತ್ರಿ,
ಸಂಭ್ರಮಿಸಲು ಸಂಕ್ರಾಂತಿ,
ಸ್ವಾಗತಿಸಲು ಯುಗಾದಿ,
ಕುಣಿದು ಕುಪ್ಪಳಿಸಲು ಗಣೇಶ,
ಮನರಂಜಿಸಲು ದೀಪಾವಳಿ,
ವಿಜೃಂಬಿಸಲು ದಸರಾ,
ಭಾವೈಕ್ಯತೆಯ ರಂಜಾನ್,
ರಂಗುರಂಗಿನ ಕ್ರಿಸ್ ಮಸ್,
ಸತ್ಯ, ಅಹಿಂಸೆ, ಮಾನವೀಯತೆ ಎಂಬ ಸಂಪ್ರದಾಯ,
ದಯವೇ ಧರ್ಮದ ಮೂಲವಯ್ಯ ಎಂಬ ಸಂಸ್ಕೃತಿ,
ಧನ್ಯ ಈ ನೆಲವೇ ಧನ್ಯ ಧನ್ಯ,
ನನ್ನುಸಿರಾಗಿರುವ ಭಾರತ ದೇಶವೇ,
ನಿನಗೆ ನನ್ನ ಶುಭಾಶಯದ ಹಂಗೇಕೆ,
ನೀನಿರುವುದೇ ನನಗಾಗಿ,
ನನ್ನ ಜೀವವಿರುವುದೇ ನಿನಗಾಗಿ,
ಭಿನ್ನತೆಯಲ್ಲೂ ಐಕ್ಯತೆ,
ಅದುವೇ,
ನಮ್ಮ ಭಾರತೀಯ ಗಣರಾಜ್ಯ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……