Spread the love

ಇಲ್ಲಿ”ಅವರದು”ಎಂಬುದು ಏನೂ ಇಲ್ಲ ಎಲ್ಲವೂ ನಮ್ಮಿಂದ ಕಿತ್ತುಕೊಂಡದ್ದೇ, ತಿರುಚಿ ಇಟ್ಟುಕೊಂಡದ್ದೇ ಯಥಾವತ್ತು ಕಾಪಿಹೊಡೆದದ್ದೇ “ಗುರು ಪೂರ್ಣಿಮೆ”ಯೂ ಕೂಡ…!

ಬಂಧುಗಳೇ, “ಆರ್ಯರು ಮಧ್ಯ ಏಷ್ಯಾದಿಂದ ಖೈಬರ್ ಕಣಿವೆಯ ಮೂಲಕ ಭಾರತಕ್ಕೆ ವಲಸೆ ಬಂದ ಅಲೆಮಾರಿ ಪರದೇಶಿ ಜನಾಂಗ” ಎಂಬ ಸರಳ ಸತ್ಯದ ಇತಿಹಾಸವನ್ನು ನಾವು ಪ್ರಾಥಮಿಕ ಶಾಲೆಯಿಂದಲೂ ಓದುತ್ತಾ ಬಂದಿದ್ದೇವೆ. ಈ ಸತ್ಯವನ್ನು ಜಗತ್ತಿನ ಶ್ರೇಷ್ಟ ಇತಿಹಾಸ‌ತಜ್ಞರು ಸಂಶೋಧಕರು ಲೇಖಕರು ಚಿಂತಕರು ಒಪ್ಪಿದ್ದಾರೆ ಪ್ರಾಚೀನ ಚರಿತ್ರೆಯಿಂದ ಹಿಡಿದು ವೈಜ್ಞಾನಿಕ DNA ತನಕವೂ ಸಂಶೋಧಿಸಿ ಇದರ ಮೇಲೆ ಇನ್ನಷ್ಟು‌ ಸ್ಪಷ್ಟಬೆಳಕು ಚೆಲ್ಲಿದ್ದಾರೆ. ಆದರೆ, ‘ಇದು ಸುಳ್ಳು ಇತಿಹಾಸ ಇದು ಪಾಶ್ಚಾತ್ಯರ ತಿರುಚುವಿಕೆ ಆರ್ಯರು ಇಲ್ಲಿಯವರೇ..” ಎಂದು ಕೋಪಗೊಂಡು ಮೇಲೆ ಬಿದ್ದು ವಾದಿಸುತ್ತಿರುವ ತಮ್ಮನ್ನು ಆರ್ಯಮೂಲದವರೆಂದು‌ ಕೊಂಡ ಭಾರತದ ಕೆಲ ಸಂಪ್ರದಾಯಿಕ ಬ್ರಾಹ್ಮಣರು ಇದು ಸುಳ್ಳೆಂದು‌ ಸಾಬೀತುಪಡಿಸಲು ಹರಸಾಹಸ ಪಡುತ್ತಾ ಆ‌ ನಿಟ್ಟಿನಲ್ಲಿ ಒಂದಷ್ಟು ಪುಸ್ತಕಗಳನ್ನು ಬರೆದಿಟ್ಟು ಮಂಡಿಸುತ್ತಾರೆ.

ಇವರು ಹೇಳುವಂತೆ ಇದು ಬ್ರಿಟಿಷರು ಅಥವಾ ಐರೋಪ್ಯರು ಬ್ರಾಹ್ಮಣರನ್ನು ಖಳರನ್ನಾಗಿಸಲು ಬರೆದ ಸುಳ್ಳು ಇತಿಹಾಸವಾದರೆ ಸ್ವಾತಂತ್ರ್ಯ ನಂತರ ಇಡೀ ಭಾರತದ ಆಡಳಿತ ಕಾಂಗ್ರೆಸ್ಸಿನ ಮೂಲಕ ಇದೇ ಆರ್ಯಬ್ರಾಹ್ಮಣ ಬನಿಯಾಗಳ ಕೈಗೇ ಬಂದಿತ್ತು..! ಕಾಶ್ಮೀರಿ ಬ್ರಾಹ್ಮಣ ಪಂಡಿತರಾದ ನೆಹರು ಎಂಬ ಪ್ರಧಾನ ಮಂತ್ರಿಗಳಿಂದ ಹಿಡಿದು ಭಾರತದ ಇಡೀ ಶಿಕ್ಷಣ ವ್ಯವಸ್ಥೆ, ಶಾಲೆ ಕಾಲೇಜು ವಿಶ್ವವಿದ್ಯಾಲಯಗಳ ಪಠ್ಯಪುಸ್ತಕಗಳಿಂದ ಹಿಡಿದು ಪಾಠ ಹೇಳುವ ಭಾಗಶಃ ಶಿಕ್ಷಕರೂ ಸಹ ಬ್ರಾಹ್ಮಣರೇ ಆಗಿದ್ದರು..! ಈಗ ಸಂಘಪರಿವಾರ ಹಾಗು ಬಿಜೆಪಿ ಕಟ್ಟಿರುವವರ ಬೇರುಗಳು ಆಗ ಕಾಂಗ್ರೆಸ್ ನಲ್ಲಿಯೇ ಇದ್ದರು. ಈ ಇತಿಹಾಸ ಸುಳ್ಳೇ ಆಗಿದ್ದರೆ ಬ್ರಿಟಿಷರು ಭಾರತ ಬಿಟ್ಟು ಭಾರತ ಸ್ವತಂತ್ರಗೊಂಡ ಕೂಡಲೆ ಆಗಲೇ ಅದನ್ನು ಬದಲಿಸಬಹುದಿತ್ತು..! ಆದರೂ ಐದಾರು ದಶಕಗಳು ಸುಮ್ಮನಿದ್ದರು‌ ಯಾಕೆ…!?

ಯಾಕೆಂದರೆ, ಈ ಮಹಿಳೆಯರು ಈ ದಲಿತರು ಈ ಶೂದ್ರರು ಈ ಇತಿಹಾಸವನ್ನು ಓದಿತಾನೆ ಈ ಸತ್ಯವನ್ನು ತಿಳಿದು ತಾನೆ ಏನು ಮಾಡಿಯಾರು..!? ಅವರೇನು ದೇಶ ಆಳಲು ಮುಂದೆ ಬರುತ್ತಾರೆಯೇ..!? ಏನೇ ಆದರೂ ರಾಜಪ್ರಭುತ್ವವಿರಲಿ ಪ್ರಜಾಪ್ರಭುತ್ವವಿರಲಿ
ಈ ದೇಶವು ನಮ್ಮ (ಮೆದುಳಿನ) ನಿಯಂತ್ರಣದಲ್ಲಿರುತ್ತದೆ ಎಂಬ ಭರವಸೆಯೊಂದಿಗಿನ ತಾತ್ಸಾರದಿಂದ ಸುಮ್ಮನಿದ್ದರು..! ಅದನ್ನೇ ಓದಿಸಿದರು ಓದಲು ಬಿಟ್ಟರು..! ಆದರೆ, ಬಾಬಾಸಾಹೇಬರ ಬರಹ ಭಾಷಣಗಳ ಸಂಪುಟಗಳನ್ನು ಧ್ಯಾನದಿಂದ ಓದಿ ನೈಜಜ್ಞಾನಗಳಿಸಿದ ದಾದಾಸಾಹೇಬ್ ಕಾನ್ಷಿರಾಂಜಿ ಎಂಬ ಪಂಜಾಬಿನ ದಲಿತ ಸಮುದಾಯದ ವಿಜ್ಞಾನಿಯೊಬ್ಬರು ಫುಲೆ ಬಾಬಾಸಾಹೇಬರ ಮತ್ತು ಇನ್ನಿತರ ಬಹುಜನ ಪೂರ್ವಿಕರ ಚಿಂತನೆ ಸಂಶೋಧನೆ ಮತ್ತು ಮಾರ್ಗದರ್ಶನ ಬೆಳಕಿನಲ್ಲಿ ಕಲಿತು, ಬಾಬಾಸಾಹೇಬರು ಹೇಳುತ್ತಿದ್ದ ” ಪ್ರಾಚೀನ ಭಾರತದ ಚರಿತ್ರೆ ಎಂದರೆ ಬ್ರಾಹ್ಮಣತ್ವಕ್ಕೂ ಬೌದ್ಧತ್ವಕ್ಕೂ ನಡೆದ ಸಂಘರ್ಷವಲ್ಲದೆ ಬೇರೇನೂ ಅಲ್ಲ..'” ಮಾತನ್ನೇ ದಾದಾಸಾಹೇಬರು ಇನ್ನೂ ಸ್ಪಷ್ಟವಾಗಿ ಸರಳವಾಗಿ ಮತ್ತು‌ ನೇರವಾಗಿ “ಬ್ರಾಹ್ಮಣ ಕ್ಷತ್ರಿಯ ವೈಶ್ಯರೆಂಬ 15% Vs ದಲಿತ ಹಿಂದುಳಿದವರ್ಗ ಅಲ್ಪಸಂಖ್ಯಾತರೆಂಬ 85 % ಸಮುದಾಯಗಳ ಸಂಘರ್ಷವನ್ನು ಬಹುಜನ ಚಳವಳಿಯ ಮೂಲಕ ದೇಶದಾದ್ಯಂತ ಹಬ್ಬಿಸಿ ಅವರು ಈತನಕ ಭದ್ರವಾಗಿ ಹಿಡಿದು ಕೂತಿದ್ದ ರಾಜ್ಯಾಧಿಕಾರದ ಬುಡಕ್ಕೇ ಕೈಹಾಕಿದರು..! ಓಟ್ ಹಮಾರ ರಾಜ್ಯ್ ತುಮ್ಹಾರ ನಹಿ ಚಲೇಗಾ ನಹಿ ಚಲೇಗ…( ಓಟು ನಮ್ಮದು ರಾಜ್ಯ ನಿಮ್ಮದು ನಡೆಯೋದಿಲ್ಲ ನಡೆಯೋದಿಲ್ಲ..) ಎಂದು ಕೇವಲ ಓಟ್ ಬ್ಯಾಂಕ್ ಆಗಿದ್ದ ಅಥವಾ ಮೇಲ್ವರ್ಗ ಆರ್ಯಬ್ರಾಹ್ಮಣರ ಪಕ್ಷಗಳಲ್ಲಿ‌ ಗುಲಾಮರಾಗಿದ್ದ (OBC SC ST RM) ಬಹುಜನರನ್ನು ಸ್ವತಂತ್ರ ರಾಜಕೀಯ ಅಧಿಕಾರದೆಡೆಗೆ ಅದರ ಸಾಧ್ಯತೆಯೆಡೆಗೆ ಎಚ್ಚರಿಸಿದರು..! ತಮ್ಮದೇ ಆದ ಬಹುಜನ ಸಮಾಜ ಪಕ್ಷ ವನ್ನು ಕಟ್ಟಿ ಅಧಿಕಾರಹೀನರ ಎದೆಯೊಳಗೆ ನಮ್ಮದೇ ಸ್ವಂತ ಪಕ್ಷದಿಂದ ನಮ್ಮದೇ ಓಟುಗಳಿಂದ ನಾವೇ ಗೆದ್ದು ಅಧಿಕಾರ ಹಿಡಿದು ನಾವೇ ಸ್ವತಂತ್ರವಾಗಿ ರಾಜ್ಯದೇಶವಾಳಬಹುದು ಎಂಬುದನ್ನು ಸಾಧಿಸಿಯೂ ತೋರಿಸಿದ ಮೇಲೆ ಆರ್ಯಬ್ರಾಹ್ಮಣ ಸಮುದಾಯವು ಅಕ್ಷರಶಃ ನಿದ್ದೆಗೆಟ್ಟಿತು..!

ಈ ಬಹುಜನ Vs ಸ್ವಲ್ಪಜನ ಎಂಬ ಸಂಘರ್ಷದ ಬೇರು ನಾಗದ್ರಾವಿಡ ಮೂಲನಿವಾಸಿ Vs ಆರ್ಯ ಪರದೇಶಿ ಎಂಬ ವಾದದಲ್ಲಿದೆ ಎಂಬುದನ್ನು ಗಂಭೀರವಾಗಿ ಮನಗಂಡ ಆರ್ಯಬ್ರಾಹ್ಮಣ ಸಮುದಾಯವು “ಆರ್ಯರು ಇಲ್ಲಿಯವರಲ್ಲ” ಎಂಬ ಬೇರಿಗೇ ಬೆಂಕಿ ಇಡದ ಹೊರತು ಮತ್ತು ಈ ಸತ್ಯದ ಜಾಡನ್ನು ಹಿಡಿದು ದೇಶ ಆಳಲು ಹೊರಟಿರುವ ಬಹುಜನ ಚಳವಳಿಯನ್ನು ಒಡೆದು ಮುಗಿಸದ ಹೊರತು ದೇಶದ ಅಧಿಕಾರವನ್ನು ನಮ್ಮ ಕೈಯಲ್ಲಿರಿಸಿಕೊಳ್ಳಲಾಗದೆಂದು ಅರಿತ ಮೆದುಬ್ರಾಹ್ಮಣರ ಕಾಂಗ್ರೆಸ್ ಮತ್ತು ಕಠೋರ ಬ್ರಾಹ್ಮಣರ ಬಿಜೆಪಿಯು ಹೊಸ ಹುನ್ನಾರ ಹೊಸೆಯಿತು…! ಬಹುಜನ ಚಳವಳಿಯನ್ನೇ ಮುಗಿಸಲು ಅವರ ದಿ ಓಲ್ಢೆಸ್ಟ್ ತಂತ್ರಗಾರಿಕೆಯಾದ ಒಡೆದು ಆಳುವ ನೀತಿಯನ್ನು ಬಳಸಿ ಚಳವಳಿಯನ್ನು ಒಂದು ಹಂತಕ್ಕೆ ಒಡೆದರು ತಮ್ಮ ಅಧಿಕಾರವೆಂಬ ಬುಡಕ್ಕೇ ಕೈಹಾಕಿ ಅಲುಗಾಡಿಸಿದ ಬಹುಜನ ಚಳವಳಿ ಮತ್ತು ಬಹುಜನ ಸಮಾಜ ಪಕ್ಷವನ್ನು ಒಂದು‌ ಜಾತಿಯ ಪಕ್ಷವೆಂಬ ಹಣೆಪಟ್ಟಿ ಅಂಟಿಸುವಲ್ಲಿ ಯಶಸ್ವಿಯೂ ಆದರು. ಅಷ್ಟೇ ಅಲ್ಲ ಆ ಜಾತಿಯವರೂ ಸಹ ಆ ಪಕ್ಷವನ್ನು ಟೀಕಿಸುವಂತೆ ಮಾಡಲು ಮಾಧ್ಯಮಗಳನ್ನು ಬಳಸಿದರು..! ಯಶಸ್ವಿಯೂ ಆದರು. ಜೊತೆಗೆ ಆರ್ಯರು ಇಲ್ಲಿಯವರೇ ಎಂದು ಹೇಳುವ ಹೊಸ ಸಂಶೋಧನೆಗಳನ್ನು ಮಾಡಿಸಲಾಯಿತು ಬರೆಸಲಾಯಿತು..!

ಸ್ವತಃ ಬ್ರಾಹ್ಮಣರಾದ ನೆಹರೂರವರೇ ತಮ್ಮ ಡಿಸ್ಕವರಿ ಆಫ್ ಇಂಡಿಯಾ ಪುಸ್ತಕದಲ್ಲಿ “ಆರ್ಯರು ಹೊರಗಿನವರು ಅರ್ಥಾತ್ ಬ್ರಾಹ್ಮಣರಾದ ನಾವು ಆರ್ಯ ಜನಾಂಗಕ್ಕೆ ಸೇರಿದವರು” ಎಂದು ಬರೆದಿದ್ದಾರೆ ಇವರಷ್ಟೇ ಅಲ್ಲದೆ ಸತ್ಯಚರಿತೆಪರರಾದ ಎಷ್ಟೋ‌ ಬ್ರಾಹ್ಮಣ ಇತಿಹಾಸಕಾರರು ಲೇಖಕರೇ ಇದನ್ನು ಮರುದಾಖಲಿಸಿ ಒಪ್ಪಿದ್ದಾರೆ..! ಆದರೆ “ಇವರು” ಕೇವಲ ಸತ್ಯ ಹೇಳುವ ಮಹಿಳೆ ಶೂದ್ರ ದಲಿತ ಅಲ್ಪಸಂಖ್ಯಾತ ಚಿಂತಕರನ್ನು ಮಾತ್ರವಲ್ಲ ಸತ್ಯ ಹೇಳುವ ತಮ್ಮದೇ ಸಮುದಾಯದ ಬ್ರಾಹ್ಮಣರನ್ನೂ ಬಿಡದೆ ತಿರಸ್ಕಾರ ಭಾವದಿಂದ ಟೀಕಿಸುತ್ತಾರೆ ದ್ವೇಷಿಸುತ್ತಾರೆ..!

ಆರ್ಯರು ಹೊರಗಿನವರು ಎಂಬುದಕ್ಕೆ ಬಹಳ
“ಆಳ ಅಗಲ”ದ ಅಧ್ಯಯನ ಬೇಕಿಲ್ಲ. ಆರ್ಯತ್ವದ ಮೇಲ್ಮೈಲಕ್ಷಣಗಳಾದ ‘ಬಣ್ಣ ಭಾಷೆ ಆಹಾರ ವಸ್ತ್ರ ಸಂಸ್ಕೃತಿ ಮದುವೆ ಮುಂಜಿ ಇತ್ಯಾದಿ ಸಂಪ್ರದಾಯ ನಂಬಿಕೆ ಅನುಸರಣೆ ದೇವತೋಪಾನಾ ಶೈಲಿ ನಡೆ ನುಡಿ ಆಚಾರ ವಿಚಾರಗಳನ್ನು ಗಮನಿಸಿದರೆ ಸಾಕು..!
ಆದರೆ ಅವರು ಇದನ್ನು ಒಪ್ಪಲು ಸುತಾರಾಂ ಸಿದ್ಧರಿಲ್ಲ.
ಸತ್ಯವನ್ನೂ ಸೂರ್ಯನನ್ನೂ ಮುಚ್ಚಲು ಸಾಧ್ಯವಿಲ್ಲ.

ಅದೇನೇ ಇರಲಿ ಈಗ ಭಾರತದ ಸಂವಿಧಾನದ ಅಡಿಯಲ್ಲಿ ಆರ್ಯರು ನಾಗದ್ರಾವಿಡರು ಎಲ್ಲರೂ ಭಾರತೀಯ ಜನತೆಯಾಗಿ ಸೇರಿಹೋಗಿದ್ದೇವೆ..!
ಅದಕ್ಕಾಗಿ ಸಂವಿಧಾನಕ್ಕೆ ನಾವೆಲ್ಲರೂ ಕೃತಜ್ಞರಾಗಿರಬೇಕು.

ಈಗ ನಾನು ಹೇಳಲು ಹೊರಟಿದ್ದು, ಸಂಶೋಧನಾ ಚರಿತ್ರೆಯ ಪ್ರಕಾರ ಪರದೇಶಿಗಳಾದ ಆರ್ಯರಿಗೆ ಹೇಳಿಕೊಳ್ಳುವ ಯಾವ ಸಂಸ್ಕೃತಿಗಳಿರಲಿಲ್ಲ. ಇಲ್ಲಿಯ ನಾಗದ್ರಾವಿಡ ಬೌದ್ಧ ಮೂಲನಿವಾಸಿಗಳ ಮೇಲೆ ದಾಳಿ ಮಾಡಿ ಒಡೆದು ಆಳಲು ಆರಂಭಿಸಿದ ಪ್ರಾರಂಭದಿಂದಲೇ ಇಲ್ಲಿನ ಮೂಲನಿವಾಸಿಗಳ ಎಷ್ಟೋ ಸಂಸ್ಕೃತಿಗಳನ್ನು ಇದು ತಮ್ಮದೆಂದಂತೆ ಬದಲಾಯಿಸಿಕೊಂಡು ಅಲ್ಪಸ್ವಲ್ಪ ಬದಲಾಯಿಸಿಕೊಂಡು ಮುಂದುವರಿಸಿಕೊಂಡು ಬರಲಾಗುತ್ತಿದೆ.‌.! ಅದರಲ್ಲಿ ಈ ಗುರುಪೂರ್ಣಿಮೆಯೂ ಒಂದು..! ಯುದ್ಧ ಹಿಂಸೆಯನ್ನು ವಿರೋಧಿಸಿ ಅರಮನೆತೊರೆದು ಕಾಡು ಸೇರಿ ತನ್ನ ಧ್ಯಾನಬಲದಿಂದ ಜ್ಞಾನೋದಯಗೊಂಡ ಜಗದ ಜ್ಞಾನಿ ಏಷ್ಯಾದ ಬೆಳಕು ಭಾರತದ ಹೆಮ್ಮೆ ಗೌತಮ ಬುದ್ಧರು ತಾನು ಕಂಡುಕೊಂಡ ಸತ್ಯವನ್ನು ಜನತೆಗೆ ಬೋಧಿಸಲು ಮೊದಲು ಸಾರನಾಥಕ್ಕೆ ಬರುತ್ತಾರೆ. “ಜಗತ್ತಿನ ಪ್ರತಿಯೊಂದು ಜೀವಿಯೂ ದುಃಖದಿಂದ ಬಳಲುತ್ತಿದೆ ದುಃಖದಿಂದ ಬಿಡುಗಡೆ ಹೊಂದಲು ಮಾನವ ತಾನು ಒಂದಷ್ಟು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು… ಇದರಿಂದ ಮಾತ್ರ ಲೋಕಕಲ್ಯಾಣ ಸಾಧ್ಯ.. ದೇವರು ಆತ್ಮ ಇಲ್ಲ. ಮೌಢ್ಯದ ಪೂಜೆ ಸಂಪ್ರದಾಯ ಸಲ್ಲ. ಮನುಷ್ಯರು ಭೇದವಿಲ್ಲದೆ ದ್ವೇಷವಿಲ್ಲದೆ ಒಟ್ಟಿಗೆ ಹೇಗೆ ಬದುಕಬಹುದು ಎಂದು ಹೇಳಿಕೊಡುವುದೇ ಧರ್ಮ. ಮೊದಲು ಮಾನವರಿಗೆ ಮಾನವತೆಯನ್ನು‌ /ಧರ್ಮವನ್ನು ಬೋಧಿಸಿದ ಮೊದಲ ಜಗದ್ಗುರು ಗೌತಮ ಬುದ್ಧ. ಬುದ್ಧರು ತಮ್ಮ ಮೊದಲ ಐವರು ಶಿಷ್ಯಂದಿರಿಗೆ ಧರ್ಮವನ್ನು ಬೋಧಿಸಿದ ಈ ದಿನವನ್ನು ಧರ್ಮಚಕ್ಕಪಬತ್ತನ ದಿನ ಅಥವಾ ಧರ್ಮ ಚಕ್ರ ಪರಿವರ್ತನಾದಿನ ಎಂದು ಕರೆಯಲಾಯಿತು. ಅಂದು ತುಂಬು ಹುಣ್ಣಿಮೆ ಇತ್ತು. ಅದರ ನೆನಪಿಗಾಗಿ ಆ ದಿನವನ್ನು “ಗುರುಪೂರ್ಣಿಮೆ” ಎಂದು ಕರೆಯಲಾಯಿತು.. ! ಜಗತ್ತಿನ ಎಲ್ಲಾ‌ ಬೌದ್ಧರಾಷ್ಟ್ರಗಳು ಇಂದು ಈ ಕಾರಣಕ್ಕಾಗಿ ಗುರು ಪೂರ್ಣಿಮ ಅಥವಾ ಅಸಲ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಆದರೆ ಬುದ್ಧರು ಹುಟ್ಟಿದ ಭಾರತದಲ್ಲಿ ಇದನ್ನು ಮನುವಾದಿಗಳು ತಮ್ಮ ಮನಸೋ ಇಚ್ಛೆ ತಿರುಚಲಾಗಿದೆ.! ಆದರೂ ಇಲ್ಲಿನ ಮೂಲನಿವಾಸಿ ಪ್ರಜ್ಞಾವಂತ ಬೌದ್ಧರು ಇಂದು ಬುದ್ಧಗುರು ಪೂರ್ಣಿಮೆಯನ್ನು ಆಚರಿಸುತ್ತಾರೆ.

ಸತ್ಯವನ್ನು ಸತ್ಯವೆಂದೂ ಸುಳ್ಳನ್ನು ಸುಳ್ಳು ಎಂದು ಒಪ್ಪುವ ಮಟ್ಟಿಗಾದರೂ ನಮ್ಮ ಜ್ಞಾನ ಪ್ರಜ್ಞೆ ಧೈರ್ಯ ವೃದ್ದಿಯಾಗಲಿ.. ಸರ್ವರಿಗೂ‌ ಬುದ್ಧಗುರುಪೂರ್ಣಿಮೆಯ ಶುಭಾಶಯಗಳು.

ಜೈಭೀಮ್… ನಮೋ‌ ಬುದ್ಧಾಯ..🙏

-ಹ.ರಾ.ಮಹಿಶ ಬೌದ್ಧ

error: No Copying!