Spread the love

ಆಷಾಢ ಮಾಸ ಕಳೆದು ಇನ್ನೇನು ಕೆಲವೇ ದಿನಗಳಲ್ಲಿ ಶ್ರಾವಣ ಮಾಸ ಪ್ರಾರಂಭವಾಗಲಿದೆ. ಈಗಾಗಲೇ ಹಬ್ಬಗಳ‌ ಆಚರಣೆಗಳು ಸಹ ಶುರುವಾಗಿದೆ…..

ಭಾರತೀಯ ಸಮಾಜದಲ್ಲಿ ಹಬ್ಬಗಳೆಂಬ ಸಾಂಸ್ಕೃತಿಕ ಉತ್ಸವಗಳು……..

ಕಾರಣಗಳು ಏನೇ ಇರಲಿ ಹಬ್ಬಗಳು ಭಾರತದ ಜನಜೀವನದ ಅವಿಭಾಜ್ಯ ಅಂಗಗಳು. ಬಹುಶಃ ಕ್ಯಾಲೆಂಡರ್‌ನ ಎಲ್ಲಾ ದಿನಗಳಲ್ಲೂ ಹಬ್ಬಗಳ ಒಂದು ವೈಶಿಷ್ಟ್ಯ ಉಳಿಸಿಕೊಂಡಿರುವ ದೇಶ ಭಾರತವೇ ಇರಬೇಕು.

ಎಲ್ಲಾ ಹಬ್ಬಗಳಿಗೂ ಒಂದು ಹಿನ್ನೆಲೆ ಇದ್ದೇ ಇರುತ್ತದೆ. ಅದು ಪೌರಾಣಿಕ, ಧಾರ್ಮಿಕ, ಐತಿಹಾಸಿಕ, ಸಾಮಾಜಿಕ ಅಥವಾ ಪ್ರಾಕೃತಿಕ ಅನುಕೂಲಗಳಿಗೆ ತಕ್ಕಂತೆ ರೂಪಗೊಂಡಿದೆ.

ಶಿವರಾತ್ರಿಯಿಂದ ಮಾರಮ್ಮನ ಜಾತ್ರೆಯವರೆಗೆ, ಸಂಕ್ರಾಂತಿಯಿಂದ ದಸರಾವರೆಗೆ, ರಂಜಾನ್ ನಿಂದ ಕ್ರಿಸ್ಮಸ್ ವರೆಗೆ ಚಿತ್ರ ವಿಚಿತ್ರ ವೈವಿಧ್ಯಮಯ ಹಬ್ಬಗಳನ್ನು ಆಚರಿಸಲಾಗುತ್ತದೆ.

ಪ್ರಾರಂಭದಲ್ಲಿ ಹಬ್ಬಗಳು ಭಕ್ತಿ ಮತ್ತು ನಂಬಿಕೆಯ ಮಹತ್ವ ಪಡೆದಿದ್ದರೆ, ನಂತರದಲ್ಲಿ ಕೌಟುಂಬಿಕ ಸಂಬಂಧಗಳನ್ನು ಬೆಸೆಯುವ ಆಚರಣೆಗಳಾದವು. ಊರಿನ ಜನರ ಐಕ್ಯತೆ ಸಾರುವ ಉತ್ಸವಗಳೂ ಆದವು. ತದನಂತರ ಮನೆಗೆ ಸುಣ್ಣ ಬಣ್ಣ ಹೊಸ ಬಟ್ಟೆಗಳ ಸಂಭ್ರಮವೂ ಮುಖ್ಯವಾದವು. ಆಧುನಿಕತೆ ಬೆಳೆದಂತೆ ಮತ್ತಷ್ಟು ಬದಲಾವಣೆಗಳಾದವು.

ಕಾಲಕಾಲಕ್ಕೆ ಹಬ್ಬದ ಆಚರಣೆಗಳು ಬದಲಾಗುತ್ತಾ ಬಂದರು ಹಬ್ಬದ ಊಟ ಮಾತ್ರ ಈಗಲೂ ತನ್ನ ಮಹತ್ವವನ್ನು ಹಾಗೆಯೇ ಉಳಿಸಿಕೊಂಡಿದೆ. ಒಂದೊಂದು ಹಬ್ಬಕ್ಕೆ ಒಂದೊಂದು ಬಗೆಯ ವಿಭಿನ್ನ ಅಡುಗೆಗಳು, ವಿವಿಧ ಪ್ರದೇಶಗಳಲ್ಲಿ ಇದರಲ್ಲೂ ಭಿನ್ನತೆ ಇದೆ. ವಯಸ್ಸಾದಂತೆ ಬಾಯಿ ರುಚಿ ಕಡಿಮೆಯಾದರೂ ಹೊಟ್ಟೆ ಮಾತ್ರ ಸ್ವಾದಿಷ್ಟ ಆಹಾರ ಬಯಸುವುದು ನಿಲ್ಲಿಸುವುದಿಲ್ಲ.

ಹಬ್ಬಗಳು ನಮ್ಮ ಮನೋಲ್ಲಾಸವನ್ನು ಹೆಚ್ಚಿಸುತ್ತವೆ. ಅದರಲ್ಲೂ ಚಿಕ್ಕ ಮಕ್ಕಳು ಹಬ್ಬಗಳನ್ನು ಸಂಭ್ರಮಿಸುತ್ತಾರೆ ಮತ್ತು ತಮ್ಮ ಬದುಕಿನ ಉದ್ದಕ್ಕೂ ಅದನ್ನು ನೆನಪಾಗಿ ಮೆಲುಕು ಹಾಕುತ್ತಿರುತ್ತಾರೆ.

ಹಬ್ಬಗಳ ಬಗ್ಗೆ ಆರೋಪಗಳು ಇಲ್ಲದಿಲ್ಲ. ಹಬ್ಬಗಳು ತಮ್ಮ ಮೂಲ ಆಶಯದಿಂದ ಹಿಂದೆ ಸರಿದು ಕೇವಲ ಕೃತಕ ಆಚರಣೆಗಳಾಗಿ ಮಾರ್ಪಟ್ಟಿವೆ. ತೋರಿಕೆಯ ಪ್ರದರ್ಶನವೇ ಹೆಚ್ಚು. ಹಬ್ಬಗಳು ಮೌಢ್ಯವನ್ನು ಬಿತ್ತುತ್ತವೆ ಮತ್ತು ಅದೇ ಶೋಷಣೆಯ ಮಾರ್ಗಗಳಾಗಿವೆ. ಹಬ್ಬಗಳು ಬಡವರ ನೋವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸಮಾಜದಲ್ಲಿ ಅಸಮಾನತೆ ಸೃಷ್ಟಿಸಲು ಹಬ್ಬಗಳ ಆಚರಣೆ ಮಾಡಲಾಗುತ್ತದೆ. ಇತ್ತೀಚೆಗೆ ಟಿವಿ ಸುದ್ದಿ ಮಾಧ್ಯಮಗಳು ಈ ಹಬ್ಬಗಳನ್ನು ವಾಣಿಜ್ಯೀಕರಣ ಮಾಡಿ ಹಬ್ಬಗಳ ವೈಚಾರಿಕ ಮಹತ್ವ ಕಡಿಮೆ ಮಾಡಿ ಕೇವಲ ಆಚರಣೆಗಳ ಬಗ್ಗೆ ಮಾತ್ರ ಪ್ರಚಾರ ಮಾಡಿ ಅದರ ಮೌಲ್ಯಗಳನ್ನು ನಾಶ ಮಾಡುತ್ತಿವೆ ಎಂಬ ಆರೋಪಗಳು ಸಾಮಾನ್ಯ ಜನರಲ್ಲಿ ಹರಿದಾಡುತ್ತಿದೆ.

ಏನೇ ಆಗಲಿ ಶ್ರಾವಣ ಮಾಸದಲ್ಲಿ ಹಬ್ಬಗಳು ಸರತಿ ಸಾಲಿನಲ್ಲಿ ಬರಲಿವೆ. ಕೊರೋನಾ ಮಾರಿ ನಮ್ಮೆಲ್ಲರನ್ನು ನಿರಾಸೆ ಆತಂಕಗಳಿಗೆ ದೂಡಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಅದರ ಚೇತರಿಕೆಯ ಅಗತ್ಯತೆಯೂ ಇದೆ.

ಸಾವುಗಳು ಸಹಜವಾಗುತ್ತಾ,
ಸಂವೇದನೆಗಳು ಸರ್ವನಾಶವಾಗುತ್ತಾ,
ಭಾವನೆಗಳು ಬರಿದಾಗುತ್ತಾ,
ಮಾತುಗಳು ಕೃತಕವಾಗುತ್ತಾ,
ಅಕ್ಷರಗಳು ಅಸಹನೀಯವಾಗುತ್ತಾ,
ಮನಸುಗಳು ಮಲಿನವಾಗುತ್ತಾ,
ಸಂಬಂಧಗಳು ಶಿಥಿಲವಾಗುತ್ತಾ,
ಮೌಲ್ಯಗಳು ಮಸುಕಾಗುತ್ತಾ,
ಆಡಳಿತ ಅರಾಜಕತೆಯಾಗುತ್ತಾ,
ಬದುಕು ಬರಡಾಗುತ್ತಾ,
ಸಮಾಜ ಅಸ್ತವ್ಯಸ್ತವಾಗುತ್ತಾ,
ಪರಿಸರ ಕಲ್ಮಶವಾಗುತ್ತಾ,
ವಿದ್ಯೆ ವ್ಯಾಪಾರವಾಗುತ್ತಾ,
ವಿವೇಚನೆ ವಿಕಾರವಾಗುತ್ತಾ,
ಆರೋಗ್ಯ ಅನಾರೋಗ್ಯವಾಗುತ್ತಾ,
ಗಂಡನ್ನು ಅನುಮಾನಿಸುತ್ತಾ,
ಹೆಣ್ಣನ್ನು ಅವಮಾನಿಸುತ್ತಾ,
ಹಣವನ್ನು ಪೂಜಿಸುತ್ತಾ,
ಅಧಿಕಾರವನ್ನು ಆರಾಧಿಸುತ್ತಾ,
ಭ್ರಮೆಗಳನ್ನು ಸೃಷ್ಟಿಸುತ್ತಾ,
ಅಮಾಯಕರನ್ನು ಶೋಷಿಸುತ್ತಾ,
ಅಸಹಾಯಕರನ್ನು ವಂಚಿಸುತ್ತಾ,
ಭ್ರಷ್ಟರನ್ನು ಚುನಾಯಿಸುತ್ತಾ,
ವಿಧಿಯನ್ನು ಅಳಿಯುತ್ತಾ,
ಕಾಣದ ಶಕ್ತಿಯನ್ನು ನಂಬುತ್ತಾ,
ಆತ್ಮ ಶಕ್ತಿಯನ್ನು ನಿರ್ಲಕ್ಷಿಸುತ್ತಾ,
ಆತ್ಮವಂಚನೆಗೆ ಬಲಿಯಾಗುತ್ತಾ,
ಆಡಂಬರಕೆ ಆಕರ್ಷಿತವಾಗುತ್ತಾ,
ಪ್ರೀತಿಗೆ ಹಂಬಲಿಸುತ್ತಾ,
ದ್ವೇಷಕ್ಕೆ ಬಲಿಯಾಗುತ್ತಾ,
ಒಳ್ಳೆಯದನ್ನು ಹುಡುಕುತ್ತಾ,
ಕೆಟ್ಟದ್ದನ್ನು ಅನುಸರಿಸುತ್ತಾ,
ಮುನ್ನಡೆಯುತ್ತಿರುವುದೇ,……

ಆಧುನಿಕ ನಾಗರಿಕ ಸಮಾಜ.
ನಾವು – ನೀವು – ಅವರು – ಇವರು,
ಎಲ್ಲರೂ ಪಾತ್ರಧಾರಿಗಳು,
ನಿಜ ಸೂತ್ರಧಾರಿಯನ್ನು ಹುಡುಕುತ್ತಾ…‌…
ಬದಲಾವಣೆ ಬಯಸುತ್ತಾ…..
ನಂಬಿಕೆಗಳು ವಾಸ್ತವವಾಗಲಿ, ವೈಚಾರಿಕವಾಗಲಿ ಎಂದು ಇಚ್ಚಿಸುತ್ತಾ….

ಈ ದಿನಗಳಲ್ಲಿ ಹಬ್ಬಗಳು ನಮ್ಮಲ್ಲಿ ಹೊಸ ಚೈತನ್ಯ ಮೂಡಿಸಿ, ಬದುಕಿನ ಭರವಸೆಗೆ ಮುನ್ನುಡಿಯಾಗಲಿ. ಉತ್ತಮ ಮುಂಗಾರಿನ ಕಾರಣದಿಂದ ಜನರ ಜೀವನದಲ್ಲಿ ಹೊಸ ಆಸೆ ಚಿಗುರಲಿ, ಎಲ್ಲರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿ ಎಂದು ಆಶಿಸುತ್ತಾ – ಹಾರೈಸುತ್ತಾ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……

error: No Copying!