ಇತ್ತೀಚಿನ ಹಿಂಸಾತ್ಮಕ ಘಟನೆಗಳಿಗೆ ಮಾಧ್ಯಮಗಳ ಪ್ರಚೋದನೆಯ ಪಾಲು ಎಷ್ಟು………..
ವಾಸ್ತು ಎಂಬ ಸ್ವಾಭಾವಿಕ ಮತ್ತು ಪ್ರಾಕೃತಿಕ ಅನುಕೂಲಗಳ ವಿನ್ಯಾಸವನ್ನು ಭ್ರಮಾತ್ಮಕ – ಭಯಾತ್ಮಕ – ಭಕ್ತಿಯಾತ್ಮಕ – ವ್ಯಾಪಾರಾತ್ಮಕ – ಶೋಷಣಾತ್ಮಕ ಪರಿಕಲ್ಪನೆ ನೀಡಿ ಸಾವಿರಾರು ಕೋಟಿಯ ವ್ಯವಹಾರ ಮಾಡಿ ಹಣ ಮಾಡಿದ ಶ್ರೀ ಚಂದ್ರಶೇಖರ ಅಂಗಡಿ ಮತ್ತು ಆ ರೀತಿಯ ಯಂತ್ರ ತಂತ್ರಗಳ ಮಾರಾಟಗಾರರು ಕೇವಲ ಮುಖವಾಡಗಳು ಮಾತ್ರ. ಅದರ ಸಂಪೂರ್ಣ ಲಾಲನೆ ಪಾಲನೆ ಪೋಷಣೆ ಮಾಡಿದ ಶ್ರೇಯ ಎಲೆಕ್ಟ್ರಾನಿಕ್ ಟಿವಿ ಮಾಧ್ಯಮಗಳಿಗೆ ಸಲ್ಲಬೇಕು…..
ಒಂದು ಪ್ರಾಥಮಿಕ ಅಂದಾಜಿನಂತೆ ನೂರಾರು ಕೋಟಿ ಹಣ ಜಾಹೀರಾತಿನ ರೂಪದಲ್ಲಿ ಹರಿದು ಬರುತ್ತಿರುವುದು ಈ ಮೌಡ್ಯಗಳ ಮಾರಾಟದ ಮೂಲಕ. ಟಿವಿ ಚಾನಲ್ ಗಳು ಮತ್ತು ಅದರ ಮೇಲೆ ಅವಲಂಬಿತರಾಗಿ ಬದುಕು ಸಾಗಿಸುತ್ತಿರುವವರು ಈ ಹಣದ ಕೆಲವು ಭಾಗದಿಂದಲೇ….
ನಾವು ಮುಖವಾಡದ ನಕಲಿಗಳನ್ನು ಮಾತ್ರ ಟೀಕಿಸುತ್ತೇವೆ. ಅದರ ಹಿಂದಿನ ಶಕ್ತಿಗಳನ್ನು ಗುರುತಿಸುವಲ್ಲಿ ಅಥವಾ ಅದನ್ನು ನಿಯಂತ್ರಿಸುವಲ್ಲಿ ಸೋಲುತ್ತೇವೆ. ಮೂಲ ಬುಡಸಮೇತ ಕಿತ್ತು ಹಾಕದೆ ಸಮಸ್ಯೆಗಳಿಗೆ ಪರಿಹಾರ ಕಷ್ಟ.
ಹೌದು, ಮಾಧ್ಯಮಗಳ ಮೂಲ ಆದಾಯವೇ ಜಾಹೀರಾತು. ಅದನ್ನು ಅವರು ಪ್ರಸಾರ ಮಾಡಲೇ ಬೇಕು. ಆದರೆ ಯಾವುದು ಜಾಹೀರಾತು, ಯಾವುದು ವಂಚನೆ, ಯಾವುದು ಸಮಾಜಕ್ಕೆ ಅಪಾಯಕಾರಿ ಎಂಬುದರ ಅರಿವು ಮತ್ತು ಜವಾಬ್ದಾರಿ ಇರಬೇಕಲ್ಲವೇ……
ಹಣ ಸಂಪಾದನೆಯ ಮಾರ್ಗ ಸಹ ಬಹಳ ಮುಖ್ಯ. ಮೊದಲನೆಯದಾಗಿ ಜಾಹೀರಾತು ಕಾನೂನಿನ ವ್ಯಾಪ್ತಿಗೆ ಒಳಪಟ್ಟಿರಬೇಕು,
ಎರಡನೆಯದಾಗಿ ಅದು ಸಮಾಜದ ಅಲಿಖಿತ ನೈತಿಕ ಕಟ್ಟಳೆಗಳನ್ನು ಮೀರಬಾರದು,
ಮೂರನೆಯದಾಗಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ (ಕಾನೂನಿನ ಅನುಮತಿ ಇದ್ದರೂ) ಸಮಾಜದ ಮೇಲೆ ದುಷ್ಪರಿಣಾಮ ಬೀರುವಂತಿರಬಾರದು,
ನಾಲ್ಕನೆಯದಾಗಿ ಮಾಧ್ಯಮಗಳು ಪ್ರಜಾಪ್ರಭುತ್ವದ ಕಾವಲುಗಾರರು. ಅದಕ್ಕೆ ಬಹುದೊಡ್ಡ ಜವಾಬ್ದಾರಿ ಇರುತ್ತದೆ. ಜನರಿಗೆ ಅದರ ಮೇಲೆ ವಿಶ್ವಾಸವಿದೆ. ಅದರಲ್ಲಿ ಪ್ರಸಾರವಾಗುವ ವಿಷಯಗಳು ಸತ್ಯ ಎಂಬ ನಂಬಿಕೆ ಇದೆ. ಅಂತಹ ಸಂದರ್ಭದಲ್ಲಿ ಅತ್ಯಂತ ಮಹತ್ವದ ಜವಾಬ್ದಾರಿ ನಿರ್ವಹಿಸಬೇಕು. ಹಣಕ್ಕಾಗಿ ತಮ್ಮನ್ನು ಮಾರಿಕೊಳ್ಳುವುದು ಇಡೀ ವ್ಯವಸ್ಥೆಯ ಮೇಲೆ ಗಂಭೀರ ಮತ್ತು ಕೆಟ್ಟ ಪರಿಣಾಮ ಬೀರುತ್ತದೆ.
ಐದನೆಯದಾಗಿ ಜಾಹೀರಾತು ಎಂದರೆ ಪ್ರಚಾರವೇ ಹೊರತು ಮೋಸ ವಂಚನೆ, ಮುಗ್ಧರ, ತಿಳಿಯದವರ ಶೋಷಣೆಯಲ್ಲ. ಯಾವುದು ಜಾಹೀರಾತು, ಯಾವುದು ವಂಚನೆ ಎಂಬುದು ಸಾಮಾನ್ಯ ಜ್ಞಾನ ಇರುವ ಎಲ್ಲರಿಗೂ ತಿಳಿದಿರುತ್ತದೆ.
ಉದಾಹರಣೆ, ಯಾವುದೋ ಒಂದು ದೇವರ ಯಂತ್ರ ಅಥವಾ ವಾಸ್ತು ಅಥವಾ ಸಂಖ್ಯೆ ಅಥವಾ ಬಣ್ಣ ನಮ್ಮ ಎಲ್ಲಾ ಕಷ್ಟಗಳನ್ನು ಪರಿಹರಿಸುತ್ತದೆ, ಅದರಲ್ಲೂ ಮದುವೆ ವಿಚ್ಚೇದನ ವಿದ್ಯಾಭ್ಯಾಸ ಆರ್ಥಿಕ ಆರೋಗ್ಯ ಎಲ್ಲವೂ ಪರಿಹಾರವಾಗುತ್ತದೆ ಎಂಬುದು ಸಾರ್ವತ್ರಿಕ ಸತ್ಯವೇ ? ಸರ್ಕಾರ, ಮಾಧ್ಯಮ, ದೇಶದ ಮಹತ್ವದ ವ್ಯಕ್ತಿಗಳು ಗ್ಯಾರಂಟಿ ಕೊಡುತ್ತಾರೆಯೇ ? ಯಾವುದೋ ಒಂದು ಜಾಹೀರಾತಿನಲ್ಲಿ ಬರುವ ಮಧುಮೇಹ ಔಷಧಿ ನಮ್ಮ ಸಕ್ಕರೆ ಖಾಯಿಲೆ ಸಂಪೂರ್ಣ ಗುಣಪಡಿಸುತ್ತದೆ ಎಂದು ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಘೋಷಿಸುತ್ತದೆಯೇ ? ಯಾವುದೇ ಒಂದು ತೈಲ ಬೋಳಾದ ತಲೆಕೂದಲು ಸಂಪೂರ್ಣ ಮತ್ತೆ ಹುಟ್ಟುತ್ತದೆ ಎಂದು ಖಚಿತವಾಗಿ ಹೇಳಬಹುದೇ ? ಇದು ವಂಚನೆ ಎಂದು ಅನಿಸುವುದಿಲ್ಲವೇ ?
ಹಾಗೆಯೇ, ಅನೇಕ ಜೂಜಾಟದ ಜಾಹೀರಾತುಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದಿಲ್ಲವೇ ? ಇದು ಒಳ್ಳೆಯದು ಅಥವಾ ಕೆಟ್ಟದ್ದು ಎಂದು ತೀರ್ಮಾನ ಮಾಡಲು ವಿಶೇಷ ಅಧ್ಯಯನ ಬೇಕೆ ?
ಇಲ್ಲಿ ಕೇವಲ ಮಾಧ್ಯಮ ಮಾತ್ರವಲ್ಲ ಸರ್ಕಾರದ ಜವಾಬ್ದಾರಿ ಸಹ ನೆನಪಿಸಬೇಕಾಗುತ್ತದೆ. ಇದರಿಂದ ಹಣ ಬರುತ್ತದೆ ಎಂದ ತಕ್ಷಣ ಅದರ ಭವಿಷ್ಯದ ಪರಿಣಾಮ ಯೋಚಿಸದೆ ಪ್ರಸಾರ ಮಾಡುವುದು ಅಥವಾ ಅನುಮತಿ ನೀಡುವುದು ಸಮಾಜ ದ್ರೋಹ ಆಗುವುದಿಲ್ಲವೇ ?
ಆದ್ದರಿಂದ ದುಷ್ಟ ಶಕ್ತಿಗಳ ವಿಜೃಂಭಣೆ ಮತ್ತು ಈ ರೀತಿಯ ಹಿಂಸಾತ್ಮಕ ಘಟನೆಗಳ ಹಿಂದೆ ಮಾಧ್ಯಮಗಳ ವಿವೇಚನಾರಹಿತ ಸುದ್ದಿಗಳ, ಪ್ರಚೋದನೆಗಳ, ಪರೋಕ್ಷ ಬೆಂಬಲವೂ ಇರುತ್ತದೆ. ಅದನ್ನು ಗುರುತಿಸಿ ಮಾಧ್ಯಮಗಳನ್ನು ಎಚ್ಚರಿಸುವ ಜವಾಬ್ದಾರಿ ಸಾರ್ವಜನಿಕರು ತೆಗೆದುಕೊಳ್ಳಬೇಕಿದೆ.
ಈ ಸ್ಪರ್ಧಾ ಜಗತ್ತಿನಲ್ಲಿ ಬ್ರೇಕಿಂಗ್ ನ್ಯೂಸ್ ಅಮಲಿನಲ್ಲಿ ತೇಲುತ್ತಿರುವ ಮಾಧ್ಯಮಗಳೇ ಪರಿಸ್ಥಿತಿ ಹೀಗೆ ಮುಂದುವರೆದರೆ ನೀವು ಸಹ ಬ್ರೇಕಿಂಗ್ ನ್ಯೂಸ್ ಆಗುವ ಸಮಯ ದೂರವಿಲ್ಲ ಎಚ್ಚರ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……