ಏನಾದರೂ ಮಾಡಿ ಪೋಲೀಸ್ ಅಧಿಕಾರಿಗಳೇ, ನ್ಯಾಯಾಧೀಶರುಗಳೇ, ಆಡಳಿತಗಾರರೇ, ಕಾನೂನು ಪಂಡಿತರೇ ಈ ಭಯಾನಕ ಕೊಲೆಗಳನ್ನು ನೋಡಲಾಗುತ್ತಿಲ್ಲ. ಅಬ್ಬಾ ಕೊರೋನಾ ವೈರಸ್ ಮುಂತಾದ ಸಾಂಕ್ರಾಮಿಕ ರೋಗಗಳು, ಭಯೋತ್ಪಾದಕ ಘಟನೆಗಳು, ಪ್ರಾಕೃತಿಕ ವಿಕೋಪಗಳು, ಅಪಘಾತಗಳು, ಆತ್ಮಹತ್ಯೆಗಳನ್ನು ನೋಡುತ್ತಾ ಬದುಕುತ್ತಿರುವಾಗ ಈ ವೈಯಕ್ತಿಕ ಕತ್ತು ಕತ್ತರಿಸುವುದು, ಚಾಕುವಿನಿಂದ ಹಿರಿಯುವುದು, ಬೆಂಕಿ ಹಚ್ಚುವುದನ್ನೂ ನೋಡುತ್ತಾ ಆತಂಕದಿಂದ ಜೀವಿಸುವ ಕರ್ಮ ನಮ್ಮದಾಗಿದೆ.
ಅಲ್ಲೆಲ್ಲೋ ಸಂಗೀತದ ರಸದೌತಣ, ಇಲ್ಲೆಲ್ಲೋ ಜಲಪಾತದ ರುದ್ರ ರಮಣೀಯ ಸೌಂದರ್ಯ, ಇನ್ನೆಲ್ಲೋ ಹಾಸ್ಯದ ನಗೆಕೂಟ, ಮತ್ತೆಲ್ಲೋ ಚದುರಂಗದಾಟದ ಮಹತ್ಸಾಧನೆ, ನಭಕ್ಕೇರಿದ ಬಹುಪಯೋಗಿ ಉಪಗ್ರಹ, ಮಗುವಿನ ಅತ್ಯದ್ಭುತ ನೆನಪಿನ ಶಕ್ತಿ, ರೈತರ ಅತ್ಯುತ್ತಮ ಬೆಳೆ ಬೆಳೆದ ಸಾಧನೆ ಹೀಗೆ ಉಲ್ಲಾಸದಾಯಕ – ಉತ್ಸಾಹದಾಯಕ ಸುದ್ದಿಗಳನ್ನು ಕೇಳುತ್ತಾ ನೋಡುತ್ತಾ ಬೆಳೆಯಬೇಕಾದ ನಮ್ಮ ಮಕ್ಕಳನ್ನು ನೋಡಲು ಮನಸ್ಸು ಹಾತೊರೆಯುತ್ತಿದೆ.
” ನಾನು ಗಾಂಧಿಯನ್ನು ಏಕೆ ಕೊಂದೆ ” ಎಂಬಂತಹ ಪುಸ್ತಕ ಓದಿ ಪ್ರಭಾವಿತರಾದರೆ ಏನು ಮಾಡುವುದು. ಕಾರಣ ಏನೇ ಇರಲಿ ಕೊಂದಿದ್ದೇ ತಪ್ಪು ಎನ್ನುವ ಮನೋಭಾವ ಬೆಳೆದಾಗ ಮಾತ್ರ ಪರಿಸ್ಥಿತಿಯಲ್ಲಿ ಸುಧಾರಣೆ ಸಾಧ್ಯವಾಗಬಹುದು. ಕೊಲ್ಲಲು ಕಾರಣ ಹುಡುಕುತ್ತಾ ಹೋದಾಗ ಕೊಲೆಗಳು ಸಹ ಸಹಜವಾಗುತ್ತಾ ಹೋಗುತ್ತದೆ. ಇದು ಯಾವ ಹಂತ ಮುಟ್ಟಿದೆ ಎಂದರೆ ಉದಯಪುರದಲ್ಲಿ ನೇರವಾಗಿ ಕೊಲೆಯನ್ನು ವಿಡಿಯೋ ಮುದ್ರಣ ಮಾಡುತ್ತಾರೆ. ಹುಬ್ಬಳ್ಳಿ ಹೋಟೆಲೆನಲ್ಲಿ ಸಿಸಿ ಕ್ಯಾಮರಾ ಎದುರಿನಲ್ಲಿಯೇ ನಿರ್ಭಯವಾಗಿ ಇರಿಯುತ್ತಾರೆ. ಅಂದರೆ ತಮ್ಮ ವಿರೋಧಿಗಳನ್ನು ಅಥವಾ ಯಾವುದೋ ಕಾರಣದಿಂದ ತಾವು ಕೊಲ್ಲಲು ಇಚ್ಚಿಸುವವರನ್ನು ಧೈರ್ಯವಾಗಿ – ಬಹಿರಂಗವಾಗಿ – ಬರ್ಭರವಾಗಿ ಕೊಲ್ಲುವುದು ಸಹ ಸುಲಭವಾಗಿದೆ. ಅಂದರೆ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದೇ ಪರಿಗಣಿಸಬೇಕು.
ಐಎಎಸ್ ಐಪಿಎಸ್ ದರ್ಜೆಯ ಅಧಿಕಾರಿಗಳೇ ಭ್ರಷ್ಟಾಚಾರ ಮಾಡಿ ಬಂಧನಕ್ಕೆ ಒಳಗಾಗುವುದು, ಕ್ಯಾಮರಾಗಳ ಮುಂದೆಯೇ ಕೊಲೆ ಮಾಡುವುದು, ಮೌಡ್ಯಗಳನ್ನೇ ನಾಚಿಕೆ ಇಲ್ಲದೇ ಟಿವಿ ಸುದ್ದಿವಾಹಿನಿಗಳಲ್ಲಿ ಪ್ರಸಾರ ಮಾಡುವುದು, ಧಾರ್ಮಿಕ ನಾಯಕರೇ ಹಿಂಸೆಯನ್ನು ಪ್ರಚೋದಿಸುವುದು ಏನನ್ನು ಸೂಚಿಸುತ್ತದೆ ಸ್ವಲ್ಪ ಯೋಚಿಸಿ.
ಇದನ್ನೆಲ್ಲಾ ನೋಡಿಕೊಂಡು ಸಹ ಸುಮ್ಮನೆ ನಮ್ಮ ಪಾಡಿಗೆ ನಾವು ಇದು ಆಧ್ಯಾತ್ಮದ ತವರೂರು, ವಿಶ್ವಗುರು ಎಂದು ಹೇಳಿಕೊಂಡು ಇದ್ದು ಬಿಡೋಣವೇ ? ಇದನ್ನು ತಡೆಯಲು ನಾವು ಪ್ರಯತ್ನಿಸುವುದು ಬೇಡವೇ ?…
ಧರ್ಮ ದೇವರುಗಳು ತಮ್ಮ ಕರ್ತವ್ಯ ಪಾಲನೆಯಲ್ಲಿ ವಿಫಲರಾದರು. ಕಾನೂನು ಸಹ ಬಹುತೇಕ ವಿಫಲತೆಯ ಹಾದಿಯಲ್ಲಿದೆ. ಮನುಷ್ಯನ ಮಾನವೀಯ ಮೌಲ್ಯಗಳನ್ನು ಕೇಳುವವರಿಲ್ಲ. ” ಬಲವೇ ನ್ಯಾಯ ” ಅಥವಾ ” ಹಣವೇ ನ್ಯಾಯ ” ಅಥವಾ ” ಗೆಲುವೇ ನ್ಯಾಯ ” ಅಥವಾ ” ಭಯ ಪಡಿಸುವುದೇ ನ್ಯಾಯ “
ಅಥವಾ ” ಯಶಸ್ಸೇ ನ್ಯಾಯ ” ಮುಂತಾದ ನಂಬಿಕೆಗಳೇ ಇಂದು ಜನರಲ್ಲಿ ಬೆಳೆಯುತ್ತಿದೆ. ಅದರ ಪರಿಣಾಮವೇ ಈ ಹತ್ಯೆಗಳು.
ಕೊಲೆಯಾದವರು ಒಳ್ಳೆಯವರಲ್ಲದಿರಬಹುದು ಅಥವಾ ಮೋಸ ವಂಚಕರಿರಬಹುದು ಅಥವಾ ಬೇರೆ ಯಾರೇ ಆಗಿರಬಹುದು ಆದರೆ ಅವರನ್ನು ಇನ್ಯಾರೋ ಕೊಲ್ಲುವುದು ಅತ್ಯಂತ ಅನಾಗರಿಕ ಸಮಾಜದ ಲಕ್ಷಣ.
ಅವರನ್ನು ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕು. ಆದರೆ ಕಾನೂನನ್ನು ಮತ್ತು ಅದನ್ನು ಜಾರಿ ಮಾಡುವವರನ್ನು ಹಣದ ಬಲದಿಂದ ಕೊಳ್ಳಬಹುದು ಎಂಬ ನಂಬಿಕೆ ಜನರಲ್ಲಿ ಬಂದಿರುವುದರಿಂದ ಅದಕ್ಕೆ ಪರ್ಯಾಯವಾಗಿ ತಾವೇ ಕಾನೂನನ್ನು ಕೈಗೆ ತೆಗೆದುಕೊಂಡು ತಮ್ಮ ಅನುಕೂಲಕ್ಕೆ ತಕ್ಕಂತೆ ಶಿಕ್ಷಿಸುವ ಮನಸ್ಥಿತಿ ದೊಡ್ಡದಾಗಿ ಬೆಳೆಯುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ.
ಆದ್ದರಿಂದ ದಯವಿಟ್ಟು ಸಾಮಾನ್ಯ ಜನರೇ ಇನ್ನು ಮುಂದಾದರು ಮೌನಿ ಬಾಬಾಗಳಾಗಿ ಮನೆಯಲ್ಲಿ ತಮ್ಮ ಪಾಡಿಗೆ ತಾವು ಇರುವುದು ಬಿಟ್ಟು ಅನ್ಯಾಯ ಅಕ್ರಮವಾಗಳ ವಿರುದ್ಧ ಶಾಂತಿಯ – ಪ್ರೀತಿಯ ಧ್ವನಿ ಎತ್ತಿ. ಆಡಳಿತಾತ್ಮಕ ಸುಧಾರಣೆಗಾಗಿ ಪ್ರಯತ್ನಿಸಿ. ಈ ನೆಲದ ಋಣ ತೀರಿಸಲು ಸ್ವಲ್ಪ ಪ್ರಯತ್ನಿಸಿ. ಇಲ್ಲದಿದ್ದರೆ ಈ ಹಿಂಸೆಯ ಬೆಂಕಿ ಮುಂದೆ ನೇರ ನಮ್ಮನ್ನು ಸುಡಬಹುದು. ನಮ್ಮ ಬದುಕುವ ಹಕ್ಕನ್ನೇ ಕಿತ್ತುಕೊಳ್ಳಬಹದು.
ಕೆಟ್ಟವರು ವಿಜೃಂಭಿಸುವಾಗ ಒಳ್ಳೆಯವರ ಮೌನ ಒಂದು ದೊಡ್ಡ ದುರಂತ. ಈಗಿನಿಂದಲೇ ನಾವು ನಮ್ಮ ನಮ್ಮ ನೆಲೆಯಲ್ಲಿ ಸಮಾಜದ ಅನ್ಯಾಯದ ವಿರುದ್ಧ ಹೋರಾಡುವ ಸಂಕಲ್ಪ ಮಾಡೋಣ. ಕನಿಷ್ಠ ನಮ್ಮ ನಮ್ಮ ಸುತ್ತಲಿನ ಜನರಲ್ಲಿ ಒಂದಷ್ಟು ಅರಿವು ಮೂಡಿಸಲು ಪ್ರಯತ್ನಿಸೋಣ. ಮುಂದೆ ಸುಧಾರಣೆಯ ಎಲ್ಲಾ ಸಾಧ್ಯತೆ ಇದೆ. ದಯವಿಟ್ಟು ಒಮ್ಮೆ ಯೋಚಿಸಿ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……