Spread the love

ಕಾಮ್ರೇಡ್ ಶಾಂತಾರಾಮ ಪೈ ನಿಧನರಾದ ದಿನ 02/07/1967). ಶಾಂತಾರಾಮ ಪೈ ಅವರು ಅವಿಭಜಿತ ಕಮ್ಯೂನಿಸ್ಟ್ ಪಕ್ಷದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಮುಖಂಡರಲ್ಲೊಬ್ಬರಾಗಿದ್ದವರು.

ಹನ್ನೆರಡು ವರ್ಷಗಳ ಕಾಲ ಮಂಗಳೂರು ನಗರಸಭೆಯ ಸದಸ್ಯರಾಗಿದ್ದ ಪೈಗಳು ಆ ಕಾಲದ ಪ್ರಮುಖ ಕಾರ್ಮಿಕ ನಾಯಕರಾಗಿದ್ದವರು.

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಶಾಂತಾರಾಮ ಪೈಗಳು, ಬಳಿಕ ಉದ್ಯೋಗ ನಿಮಿತ್ತ ಮುಂಬಯಿಗೆ ಹೋದವರು ಎಸ್. ವಿ. ಘಾಟೆಯವರ ಸಂಪರ್ಕದಿಂದಾಗಿ ಕಮ್ಯೂನಿಸ್ಟರ ಹೋರಾಟಕ್ಕೆ ಸೇರಿಕೊಂಡು ಪಕ್ಷದ ನಾಯಕರಾಗಿ ಸುಧೀರ್ಘ ಕಾಲ ಕೆಲಸ ಮಾಡಿದ ಅಜಾತಶತ್ರು. ಸರಳತೆ, ತ್ಯಾಗಶೀಲತೆ, ಸಜ್ಜನತೆ ಇತ್ಯಾದಿಗಳು ಇವರ ವ್ಯಕ್ತಿತ್ವಗಳಾಗಿದ್ದುವು.

1940ರ ದಶಕದಲ್ಲಿ ಸಿ. ಪಿ. ಜೋಷಿಯವರು ಪಕ್ಷದ ನಾಯಕರಾಗಿದ್ದಾಗ ಪಕ್ಷದ ಭೂಗತ ಕೇಂದ್ರದ ಸಾಹಿತ್ಯ ವಿತರಕರಾಗಿದ್ದ ಶಾಂತಾರಾಮ ಪೈಗಳು, ಅತ್ಯಂತ ಅಪಾಯಕಾರಿಯೂ, ಕಠಿಣತೆಯಿಂದ ಕೂಡಿದ್ದ ಈ ಕೆಲಸಗಳಿಗಾಗಿ ದೇಶಾದ್ಯಂತ ಸಂಚರಿಸಿದವರು ಮತ್ತು ತಮಗೆ ಕೊಟ್ಟ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದವರು.

ಸಿಪಿಐನ ಜಿಲ್ಲಾ ಸಮಿತಿಯ ಕಾರ್ಯದರ್ಶಿಯೂ ಆಗಿದ್ದ ಪೈಗಳು ಕಾರ್ಮಿಕ ಬೇಡಿಕೆಗಳಿಗಾಗಿ ಉಪವಾಸ ಮುಷ್ಕರ ಎಂಬ ಅಸ್ತ್ರವನ್ನೂ ಉಪಯೋಗಿಸಿ ಜನಮೆಚ್ಚುಗೆಗೆ ಪಾತ್ರರಾದವರು.

ಶಾಂತಾರಾಮ ಪೈವರ ಬಗ್ಗೆ ಆ ಕಾಲದ ಹಿರಿಯ ಕಮ್ಯೂನಿಸ್ಟ್ ನಾಯಕರಾಗಿದ್ದ ಕಾಮ್ರೇಡ್ ಬಿ. ವಿ. ಕಕ್ಕಿಲ್ಲಾಯರು ತಮ್ಮ “ಬರೆಯದ ದಿನಚರಿಯ ಮರೆಯದ ಪುಟಗಳು” ಪಯಸ್ತಕದಲ್ಲಿ ಈ ಕೆಳಗಿನಂತೆ ಬರೆದಿದ್ದಾರೆ:

“ದಕ್ಷಿಣ ಕನ್ನಡ ಜಿಲ್ಲೆಯ ಟ್ರೇಡ್ ಯೂನಿಯನ್ ಚಳವಳದ ಜೀವಾಳವಾಗಿದ್ದ ಶಾಂತಾರಾಂ ಪೈ ಅವರ ಬದುಕೇ ಕಾರ್ಮಿಕ ವರ್ಗಕ್ಕೆ ಅರ್ಪಿತವಾಗಿತ್ತು. ಒಂದೆರಡು ತಿಂಗಳುಗಳ ಹಿಂದೆಯೇ ಚಿಕಿತ್ಸೆಗೆ ತೆರಳಬೇಕಾಗಿದ್ದ ಅವರು, ಒಂದಲ್ಲ ಒಂದು ಕೆಲಸದಲ್ಲಿ ಮುಳುಗಿದ್ದು ಸ್ವಂತ ಆರೋಗ್ಯವನ್ನು ಅಲಕ್ಷಿಸಿದ್ದರು. ಮರಣವೂ ಅಜ್ಞಾತವಾಗಿ ಬೆನ್ನ ಹಿಂದೆ ಬಂದು ನಿಂತಿದ್ದಾಗಲೂ ವಿಶ್ರಾಂತಿ ಇಲ್ಲದೆ ದುಡಿಯುತ್ತಿದ್ದರು. ಅವರು ಆಸ್ಪತ್ರೆಗೆ ದಾಖಲಾಗಬೇಕೆಂದು ವೈದ್ಯರು ನೀಡಿದ್ದ ಸಲಹೆಯನ್ನು ತಕ್ಷಣ ಅಂಗೀಕರಿಸದೆ, ಕಾರ್ಮಿಕ ವಿವಾದವೊಂದರ ಸಂಬಂಧ ಕಲ್ಲಿಕೋಟೆಗೆ ಹೋಗಿ ಬಂದ ಬಳಿಕ ದಾಖಲಾಗುವುದಾಗಿ ಅವರು ಹೇಳುತ್ತಿದ್ದರು. ಮರಣದ ದಿನ ಬೆಳಿಗ್ಗೆ ಪಕ್ಷದ ಕಚೇರಿಯಲ್ಲಿ ಯಾವುದೋ ಗೇರುಬೀಜ ಕೆಲಸಗಾರರ ವಿವಾದದ ವಿಚಾರದಲ್ಲಿ ಟ್ರಿಬ್ಯೂನಲ್ ಮುಂದೆ ವಾದ ಮಾಡಲು ಸಿದ್ಧತೆ ಮಾಡುತ್ತಿದ್ದಾಗಲೇ ಕೊನೆಯುಸಿರೆಳೆದರು”.

ಬಂಟ್ವಾಳದಲ್ಲಿ, ಪಕ್ಷವು ಪಕ್ಷದ ಕಾರ್ಯಕರ್ತರಾಗಿದ್ದ ವಿಶ್ವನಾಥ ನಾಯಕ್ ಅವರು ದಾನವಾಗಿ ನೀಡಿದ್ದ ಭೂಮಿಯಲ್ಲಿ ಹಲವರ ಸಹಾಯ ಸಹಕಾರದೊಂದಿಗೆ “ಶಾಂತಾರಾಮ ಪೈ ಸ್ಮಾರಕ ಭವನ” ನಿರ್ಮಿಸಿ ಅವರ ಹೆಸರನ್ನು ಚಿರಸ್ಥಾಯಿಗೊಳಿಸಿದೆ.

ಮನೋರಮಾ ಪೈಯವರು ಶಾಂತಾರಾಮ ಪೈಗಳ ಪತ್ನಿ. ಕೃಷ್ಣ ಪೈ ಹಾಗೂ ಉದಯಕುಮಾರ್ ಪೈ ಮಕ್ಕಳು. ಅವಿಭಜಿತ ಕಮ್ಯೂನಿಸ್ಟ್ ಪಕ್ಷಕ್ಕೆ, ಕಾರ್ಮಿಕ – ರೈತ ಚಳುವಳಿಗೆ ಶಾಂತಾರಾಮ ಪೈಗಳು ನಡೆಸಿದ ಹೋರಾಟ ಮರೆಯಲಾಗದ್ದು, ಮರೆಯಬಾರದ್ದು.

~ ಶ್ರೀರಾಮ ದಿವಾಣ, ಉಡುಪಿ
02/07/2022

error: No Copying!