ವೃತ್ತ ಪತ್ರವು ಜನತೆಯ ವಿಶ್ವವಿದ್ಯಾಲಯವಾಗಿದೆ. ಬಹುತೇಕ ಜನರು ಪತ್ರಿಕೆಯನ್ನಲ್ಲದೆ ಬೇರೆ ಏನನ್ನು ಓದುವುದಿಲ್ಲ. ಒಂದು ಒಳ್ಳೆಯ ಪತ್ರಿಕೆ ಒಂದು ರಾಷ್ಟ್ರ ಏನು ಮಾಡುತ್ತದೆ ಎನ್ನುವುದನ್ನು ಹೇಳುತ್ತದೆ.
ದೇಶದಲ್ಲಿ ಅರಾಜಕತೆ ಇದ್ದು ಪತ್ರಿಕೆ ಮುಕ್ತವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಅದು ಆ ಅರಾಜಕತೆಯನ್ನು ಅಳಿಸಿ ಹಾಕಿ ಅಲ್ಲಿ ವ್ಯವಸ್ಥೆಯನ್ನು ತರಬಹುದು. ಸ್ವತಂತ್ರ ಪತ್ರಿಕೆಯನ್ನು ತೆಗೆದು ಹಾಕಿದರೆ ನಾವು ಅರಾಜಕತೆಯನ್ನು ಆಮಂತ್ರಿಸಿ ಕರೆದುಕೊಳ್ಳುತ್ತೇವೆ.
ಒಂದು ಪತ್ರಿಕೆ ನಮಗೆ ನಾವಿರುವ ಜಗತ್ತಿನ ದಿನದ ಇತಿಹಾಸವನ್ನು ಹೇಳುತ್ತದೆ. ನಿನ್ನೆ ಏನು ಆಗಿದೆ ಎನ್ನುವುದಕ್ಕಿಂತಲೂ ನಮಗೆ ಇಂದು ಏನು ಆಗುತ್ತಿದೆ ಎನ್ನುವುದು ಹೆಚ್ಚು ಮಹತ್ವದ್ದಾಗಿದೆ. ಹಿಂದಿನ ಜೀವನವನ್ನು ನಾವು ನೆನೆದರೂ ನಾವು ಇಂದಿನ ಜೀವನವನ್ನು ಇಂದೇ ಬದುಕಬೇಕಾಗುತ್ತದೆ. ಅದನ್ನು ನಿನ್ನೆ, ಇಲ್ಲವೇ ನಾಳೆ ಬದುಕುವುದಕ್ಕೆ ಆಗುವುದಿಲ್ಲ.
ಜಗತ್ತಿನಲ್ಲಿ ಏನು ನಡೆದಿದೆ ಎನ್ನುವುದನ್ನು ಪತ್ರಿಕೆಯು ನಮ್ಮ ಕಿವಿಯಲ್ಲಿ ಪಿಸುಗುಡುತ್ತಾ ನಮ್ಮ ಕೆಣ್ಣೆದುರು ತಂದು ನಿಲ್ಲಿಸುತ್ತದೆ. ಪತ್ರಿಕೆ ಮನಸ್ಸಿಗೆ ಪ್ರಸನ್ನತೆ ತಂದುಕೊಡುತ್ತದೆ. ಮನರಂಜನೆ ಒದಗಿಸುತ್ತದೆ. ಶಿಕ್ಷಣವನ್ನು ನೀಡುತ್ತದೆ.
ತಾನು ಜೀವಿಸುವ ಜಗತ್ತು ಕೆಟ್ಟೆ ಹೋಗಿದೆ ಎನ್ನುವ ಭಾವನೆ ಪತ್ರಿಕೆ ಓದುವ ಜನರಲ್ಲಿ ಉಂಟಾಗಬಾರದು. ಇಂದಿನ ಜೀವನವನ್ನು ಬದುಕಿದ ಓದುಗನನ್ನು ಉತ್ಸಾಹಗೊಳಿಸಿ ನಾಳೆಯ ಜೀವನಕ್ಕೆ ಅದು ಅವನನ್ನು ಅಣಿಗೊಳಿಸಬೇಕು.
ಪತ್ರಿಕೆಯು ಮನುಷ್ಯನ ವಿಚಾರಕ್ಕೆ ಅನ್ನವನ್ನು ಒದಗಿಸಿಕೊಡುತ್ತದೆ. ಮನುಷ್ಯನು ಉಲ್ಲಾಸದಿಂದ ಕೆಲಸ ಮಾಡುತ್ತಾ ಮರುದಿನ ತನ್ನ ಕೆಲಸಕ್ಕೆ ಆನಂದದಿಂದ ಹಿಂದಿರುಗುವಂತೆ ಅವನನ್ನು ಅದು ಪ್ರೇರೇಪಿಸುತ್ತದೆ.
ಸುದ್ದಿ ಮಾಡುವ ಜನರನ್ನು ಪತ್ರಿಕೆ ಯಾವಾಗಲೂ ಮೆಚ್ಚುತ್ತದೆ. ಅಂತ ಅವರ ಬಗೆಗೆ ಬರೆಯುವ ಪತ್ರಿಕೆಯನ್ನು ಜನರು ಯಾವಾಗಲೂ ಮೆಚ್ಚುತ್ತಾರೆ. ಅವರು ಅಂತ ಪತ್ರಿಕೆ ಓದುವುದರಿಂದ ಸ್ನಾತಕರು ಒಂದು ಗ್ರಂಥಾಲಯದಲ್ಲಿ ಪಡೆಯುವುದಕ್ಕಿಂತಲೂ ಹೆಚ್ಚಿನ ಜ್ಞಾನವನ್ನು ಪಡೆಯುತ್ತಾರೆ. “ತನಗೆ ಗೊತ್ತಿರುವುದೆಲ್ಲವೂ ನಾನು ಪತ್ರಿಕೆಯಲ್ಲಿ ಓದಿದೆ” ಎಂದು ಅಮೆರಿಕ ವಿಲ್ ರೋಜರ್ಸ್ ಹೇಳುತ್ತಿದ್ದನು.
ಜನರನ್ನು ಸುರಕ್ಷಿತರನ್ನಾಗಿ ಮಾಡಲು, ಸುಸಂಸ್ಕೃತನನ್ನಾಗಿ ಮಾಡಲು ಪತ್ರಿಕೆಯಂತ ಉತ್ತಮ ಶಿಕ್ಷಕ ಇನ್ನೊಂದು ಇಲ್ಲ, ಅದನ್ನು ಸರಿಗಟ್ಟುವ ಶಕ್ತಿ ಇನ್ನೊಂದು ಇಲ್ಲ. ಪತ್ರಿಕೆಯು ಒಂದು ಪುಸ್ತಕ ಹೌದು, ಧರ್ಮ ಬೋಧನೆ ಕೇಂದ್ರವೂ ಹೌದು. ಅದು ರಾಜಕೀಯ ಸಾಹಿತ್ಯ ವೇದಿಕೆಯಾಗಿದೆ. ಅದು ಲೋಕ ಚರ್ಚಾಗೋಷ್ಠಿಯಾಗಿದೆ.
ಒಂದು ಪತ್ರಿಕೆ ಬಣ್ಣ ಬಳಿಯದೆ ಸುದ್ದಿಯನ್ನು ಒದಗಿಸಿಕೊಟ್ಟರೆ ಅದು ಮಾನವತೆಗೆ ಬಹುದೊಡ್ಡ ಉಪಕಾರ ಮಾಡುತ್ತದೆ. ಪತ್ರಿಕೆ ಬದುಕಿ ಉಳಿದರೆ ಒಂದು ದೇಶ ಬದುಕಿ ಉಳಿಯುತ್ತದೆ. ಒಂದು ಪತ್ರಿಕೆ ಸತ್ತರೆ ಅದು ನಮ್ಮನ್ನು ಬಡವರನ್ನು ಮಾಡುತ್ತದೆ.
ಇಷ್ಟೇಲ್ಲಾ ಗಂಭೀರ ಹೊಣೆ ಹೊರಬೇಕಾಗಿರುವ ಪತ್ರಿಕೆಗಳು, ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಬವೆಂದು ಪರಿಗಣಿಸಲ್ಪಡುವ ಪತ್ರಿಕೆಗಳು ಇಂದು ತಮ್ಮ ಕರ್ತವ್ಯವನ್ನು ಮರೆತು ಸ್ವ-ಜನ, ಸ್ವ-ಪಕ್ಷ ಮತ್ತು ಸ್ವ-ಸಿದ್ಧಾಂತದ ಕೆಸರಲ್ಲಿ ಹೂತು ಹೋಗಿವೆ. ಹೀಗೆಂದ ಮಾತ್ರಕ್ಕೆ ಎಲ್ಲ ಪತ್ರಿಕೆಗಳು ಅಡ್ಡ ಹಾದಿ ಹಿಡಿದಿವೆ ಎಂದರ್ಥವಲ್ಲ. ಕೆಲವಾದರೂ ಪತ್ರಿಕೆಗಳು ತಮ್ಮ ವೃತ್ತಿ ಧರ್ಮವನ್ನು ಅನುಪಾಲಿಸುತ್ತಿವೆ. ಆದರೆ, ಅಂತ ಪತ್ರಿಕೆಗಳ ಪ್ರಸಾರದ ಸಂಖ್ಯೆ ತೀರ ಸೀಮಿತವಾದದ್ದು.
ಓದುಗರ ಫ್ರೆಂಡ್ ಫಿಲಾಸಫರ್ ಅಂಡ್ ಗೈಡ್ ಆಗಬೇಕಾಗಿರುವ ಎಲ್ಲ ಪತ್ರಿಕೆಗಳು ತಮ್ಮ ವೃತ್ತಿ ಧರ್ಮವನ್ನು ಪಾಲಿಸುವಂತಾಗಲಿ ಎಂದು ಹಾರೈಸುತ್ತಾ ಎಲ್ಲ ಜನಪರ ಪತ್ರಿಕೆ ಮತ್ತು ಪತ್ರಕರ್ತರಿಗೆ ಹಾರ್ಧಿಕವಾಗಿ ಶುಭಹಾರೈಸುತ್ತೆನೆ.
- ಮೈತ್ರಿ ರೇಣುಕಾ ಸಿಂಗೆ