ಕೋಟ: ದಿನಾಂಕ:04-11-2026(ಹಾಯ್ ಉಡುಪಿ ನ್ಯೂಸ್) ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಹೋಟೆಲ್ ಉದ್ಯಮಿಯೊಬ್ಬರಿಂದ ಒಟ್ಟು 5.76 ಲಕ್ಷ ರೂ. ಪಡೆದು ವಂಚಿಸಿರುವ ಆರೋಪದಡಿ ಮೂವರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪುರ ತಾಲೂಕಿನ ವಡೇರ ಹೋಬಳಿಯ ಪ್ರಕಾಶ್ (38) ವಂಚನೆಗೊಳಗಾದವರು. ಇವರು ಕೋಟದಲ್ಲಿ ಹಲವು ವರ್ಷಗಳಿಂದ ಹೋಟೆಲ್ ಉದ್ಯಮ ನಡೆಸಿಕೊಂಡಿದ್ದು, ಈ ಸಂದರ್ಭದಲ್ಲಿ ಬಸ್ರೂರು ಗ್ರಾಮದ ಜ್ಯೋತಿ ಎಂಬಾಕೆ ಪರಿಚಯವಾಗಿದ್ದಳು. ಆಕೆ ಹಣಕಾಸಿನ ವ್ಯವಹಾರ ಹಾಗೂ ಹೂಡಿಕೆ ಯೋಜನೆಗಳ ಮೂಲಕ ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ಪ್ರಕಾಶ್ ಅವರನ್ನು ನಂಬಿಸಿದ್ದಳು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ 2025ರ ಜನವರಿ 21ರಿಂದ ಮೇ 23ರವರೆಗೆ ಜ್ಯೋತಿಯ ಸೂಚನೆಯಂತೆ ಅಕ್ಷತಾ ದೇವಾಡಿಗ ಎಂಬಾಕೆಯ ಖಾತೆಗೆ ಫೋನ್ ಪೇ ಮೂಲಕ ಹಂತ ಹಂತವಾಗಿ 3,68,000 ರೂ. ವರ್ಗಾಯಿಸಿದ್ದರು. ಅಲ್ಲದೆ, ಪ್ರಶಾಂತ್ ಎಂಬಾತನ ಖಾತೆಗೆ 58,000 ರೂ. ವರ್ಗಾಯಿಸಿದ್ದು, ಜ್ಯೋತಿಗೆ 1,50,000 ರೂ. ನಗದು ನೀಡಿದ್ದರು. ಹೀಗೆ ಒಟ್ಟು 5,76,000 ರೂ. ಹಣವನ್ನು ಆರೋಪಿಗಳು ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಣವನ್ನು ಅಲ್ಪಾವಧಿಯಲ್ಲೇ ಲಾಭಾಂಶ ಸಹಿತ ದುಪ್ಪಟ್ಟು ಮಾಡಿ ಹಿಂದಿರುಗಿಸುವುದಾಗಿ ನಂಬಿಸಿದ್ದ ಜ್ಯೋತಿ, ಮತ್ತೆ ಹಣ ನೀಡುವಂತೆ ಒತ್ತಾಯಿಸಿದ್ದಳು ಎನ್ನಲಾಗಿದೆ. ಆದರೆ ಹೆಚ್ಚಿನ ಹಣ ನೀಡಲು ನಿರಾಕರಿಸಿ, ಈಗಾಗಲೇ ಹೂಡಿಕೆ ಮಾಡಿದ್ದ ಹಣವನ್ನು ಹಿಂದಿರುಗಿಸುವಂತೆ ಪ್ರಕಾಶ್ ಕೇಳಿದಾಗ ಜ್ಯೋತಿ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಕುರಿತು ನ್ಯಾಯಾಲಯಕ್ಕೆ ಸಲ್ಲಿಸಲಾದ ಖಾಸಗಿ ದೂರಿನ ಆಧಾರದಲ್ಲಿ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 173/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 316(2), 318(4), 352, 351(2) ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
