IMG_20261104_133129.png
Spread the love

ಕಾಪು: ದಿನಾಂಕ:04-11-2026 (ಹಾಯ್ ಉಡುಪಿ ನ್ಯೂಸ್)

  ಮದುವೆಯಾದ ದಿನದಿಂದಲೇ ಪತಿ ಹಾಗೂ ಅತ್ತೆ ಮನೆಯವರಿಂದ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗುತ್ತಿದ್ದು, ತನ್ನ 70 ಪವನ್ ಚಿನ್ನವನ್ನು ವಾಪಸ್ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಉಡುಪಿ ತಾಲೂಕಿನ 28 ವರ್ಷದ ರೂಹಿ ಪರ್ವಿನ್ ಎಂಬವರು ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಪ್ರಕಾರ, ಉದ್ಯಾವರ ನಿವಾಸಿ ಬಿಲಾಲ್ ಸೈಯದ್ ಮೊಹಮ್ಮದ್ ಅವರೊಂದಿಗೆ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದು, ಮದುವೆ ಸಂದರ್ಭದಲ್ಲಿ ತಾಯಿ ಮನೆಯವರು 52 ಪವನ್ ಚಿನ್ನಾಭರಣ ನೀಡುವುದರ ಜೊತೆಗೆ ಸುಮಾರು 10 ಲಕ್ಷ ರೂ. ಖರ್ಚು ಮಾಡಿದ್ದರು ಎಂದು ತಿಳಿಸಿದ್ದಾರೆ.

ಮದುವೆಯ ಬಳಿಕ ಪತಿ, ಅತ್ತೆ, ಮೈದುನ ಹಾಗೂ ನಾದಿನಿಯ ಕಡೆಯಿಂದ ಕಿರುಕುಳ ಆರಂಭವಾಗಿತ್ತು. ಪತಿ ಸರಿಯಾಗಿ ಮನೆಗೆ ಬರುತ್ತಿರಲಿಲ್ಲ. ಈ ವಿಚಾರವಾಗಿ ಪ್ರಶ್ನಿಸಿದಾಗ ಹಲ್ಲೆ ನಡೆಸಿ ಹಿಂಸೆ ನೀಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಪತಿ ಕೆಲಸ ಕಳೆದುಕೊಂಡ ಸಂದರ್ಭದಲ್ಲಿ ತಾನು ಉದ್ಯೋಗಕ್ಕೆ ಸೇರಿ ಸಂಪಾದಿಸಿದ ಸಂಬಳವನ್ನೂ ನೀಡುವಂತೆ ಒತ್ತಾಯಿಸಿ, ಹಣ ನೀಡದಿದ್ದಾಗ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ತಿಳಿಸಿದ್ದಾರೆ.

ತನ್ನ ಒಟ್ಟು 70 ಪವನ್ ಚಿನ್ನಾಭರಣವನ್ನು ಪತಿ-ಪತ್ನಿಯ ಜಂಟಿ ಬ್ಯಾಂಕ್ ಲಾಕರ್‌ನಲ್ಲಿ ಇರಿಸಲಾಗಿತ್ತು. ಆದರೆ, ತನಗೆ ತಿಳಿಸದೆ 2026ರ ಜೂನ್ 9ರಂದು ಲಾಕರ್‌ನಲ್ಲಿದ್ದ ಚಿನ್ನವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಸಹೋದರಿಯ ಮದುವೆಗಾಗಿ ಚಿನ್ನ ಕೇಳಿದಾಗ ನೀಡಲು ನಿರಾಕರಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪತಿಯ ಸಹೋದರನ ಮದುವೆಗೆ ಊರಿಗೆ ಬಂದಿದ್ದ ಸಂದರ್ಭದಲ್ಲಿ ಬಿಸಿಯಾದ ಇಸ್ತ್ರಿ ಪೆಟ್ಟಿಗೆಯಿಂದ ಬೆನ್ನಿಗೆ ಗಾಯಗೊಳಿಸಿರುವುದಾಗಿಯೂ ಮಹಿಳೆ ಆರೋಪಿಸಿದ್ದಾರೆ. ಪತಿಯ ಸಂಬಂಧಿಕರು 30 ಲಕ್ಷ ರೂ. ಹಣ ತರುವಂತೆ ಒತ್ತಾಯಿಸಿ, ಇಲ್ಲದಿದ್ದರೆ ಪತಿಗೆ ಮತ್ತೊಂದು ಮದುವೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಪತಿ ತನ್ನೊಂದಿಗೆ ಸಂಪರ್ಕದಲ್ಲಿಲ್ಲದೆ, ವೈಯಕ್ತಿಕ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಕೂಡ ಮರಳಿಸದೆ ಸತಾಯಿಸುತ್ತಿದ್ದಾರೆ ಎಂದು ರೂಹಿ ಪರ್ವಿನ್ ಆರೋಪಿಸಿದ್ದಾರೆ.

ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 145/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 85 ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಕಲಂ 3 ಮತ್ತು 4ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!