Spread the love

ಭಾರತದ ಈ ಕ್ಷಣದ ಸಾಮಾಜಿಕ ಮತ್ತು ಧಾರ್ಮಿಕ ಸಂಘಟನಾತ್ಮಕ ಚಟುವಟಿಕೆಗಳನ್ನು ಗಮನಿಸೋಣ..

1) ಬ್ರಾಹ್ಮಣರ ಸ್ವಾಭಿಮಾನ ವೇದಿಕೆ.


ಹಾದಿ ಬೀದಿಯಿಂದ – ಎಲ್ಲಾ ದೊಡ್ಡ ವಿಚಾರಸಂಕೀರ್ಣಗಳಲ್ಲೂ ಸಾಮಾನ್ಯರು ಅಸಾಮಾನ್ಯರು ಕನಿಷ್ಠರು ಎಲ್ಲರೂ ಬ್ರಾಹ್ಮಣರನ್ನು ಟೀಕಿಸುವುದೇ ಆಗಿದೆ. ಅದಕ್ಕೆ ಉತ್ತರವಾಗಿ ಬ್ರಾಹ್ಮಣ ಶ್ರೇಷ್ಠತೆ ಸಾರುವ ಸ್ವಾಭಿಮಾನಿ ವೇದಿಕೆ.

2) ವೀರಶೈವ – ಲಿಂಗಾಯತ ಜಾಗೃತ ಬ್ರಿಗೇಡ್
***ಗ
ಬೇರೆ ಬೇರೆ ಹೆಸರುಗಳಲ್ಲಿ ಹರಿದು ಹಂಚಿಹೋಗಿ ಜಾತಿಯ ಕಾರಣಕ್ಕೆ ಅನೇಕ ಸೌಕರ್ಯಗಳಿಂದ ವಂಚಿತವಾದ ಬ್ರಾಹ್ಮಣ್ಯ – ಪೌರೋಹಿತಶಾಹಿ ವಿರುದ್ಧ ಪ್ರತ್ಯೇಕ ಧರ್ಮದ ಮೀಸಲಾತಿಯ ಮುಖಾಂತರ ಅಭಿವೃದ್ಧಿ ಸಾಧಿಸಲು ಹೋರಾಡುವ ವೇದಿಕೆ.

3) ಮುಸ್ಲಿಂ ಹಿತರಕ್ಷಣಾ ಸಂಘಟನೆ.


ಜಾತ್ಯಾತೀತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲರಂತೆ ಸರಿಸಮನಾದ ಹಕ್ಕುಗಳಿದ್ದರೂ ಎರಡನೇ ದರ್ಜೆಯ ವ್ಯಕ್ತಿಗಳಂತೆ ತುಳಿಯುವ ಹಿಂದುಗಳ ದೌರ್ಜನ್ಯದ ವಿರುದ್ಧ ಸಂಘಟನಾತ್ಮಕ ಹೋರಾಟ ನಡೆಸುವ ಸಂಸ್ಥೆ.

4) ಹಿಂದೂ ರಕ್ಷಣಾ ಸೇನೆ.


ಹಿಂದೂ ಮೂಲನಿವಾಸಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಮುಸ್ಲಿಂ ಕ್ರಿಶ್ಚಿಯನ್ ಮುಂತಾದ ಅನ್ಯ ಧರ್ಮೀಯರ ಬಲಪ್ರಯೋಗ ಮತ್ತು ಕುತಂತ್ರಗಳಿಂದ ರಕ್ಷಣೆ ಪಡೆಯಲು ಸ್ಥಾಪಿಸಲಾದ ಕ್ರಾಂತಿಕಾರಿ ಸಂಘಟನೆ.

5) ದಲಿತ – ಧಮನಿತರ ಸಂಘರ್ಷ ಪಡೆ.


ಶತಶತಮಾನಗಳಿಂದ ಮನುಸ್ಮೃತಿಯ ಆಚಾರ ವಿಚಾರಗಳಿಂದ ಪಶುಗಳಿಗಿಂತ ಕೀಳಾಗಿ ನಡೆಸಿಕೊಳ್ಳಿತ್ತಿರುವ ಬಲಾಡ್ಯ ಜಾತಿಗಳಿಂದ ವಿಮೋಚನೆಗಾಗಿ ಹೋರಾಡುವ ಸಂಘಟನೆ..

6) ಮಹಿಳಾ ವಿಮೋಚನಾ ಸಂಸ್ಥೆ.


ಸೃಷ್ಟಿಯ ಸಮಾನತೆಯನ್ನು ದಿಕ್ಕರಿಸಿ ಅನವಶ್ಯಕ ಪೂಜನೀಯ ಭಾವನೆಯನ್ನು ಉಂಟುಮಾಡಿ ಅದನ್ನೇ ನೆಪವಾಗಿಟ್ಟುಕೊಂಡು ಮಹಿಳೆಯನ್ನು ಗುಲಾಮಳಂತೆ ತಮ್ಮ ಧರ್ಮಗಳಲ್ಲಿ ಬಂಧಿಸಿ ಶೋಷಿಸುತ್ತಿರು ಪುರುಷ ಸಮಾಜದ ವಿರುದ್ಧ ಧ್ವನಿ ಎತ್ತುವ ವೇದಿಕೆ.

7) ಅನ್ನಧಾತ ಸುಖೀಭವ ಹೋರಾಟ ಸಮಿತಿ.


ಈ ದೇಶದ ಬೆನ್ನೆಲುಬು ಪ್ರತಿಮನೆಯ ಅನ್ನಧಾತ ಇಂದು ಸ್ವತಃ ಊಟಕ್ಕೆ ಗತಿಯಿಲ್ಲದ ಸ್ಥಿತಿ ತಲುಪಿದ್ದಾನೆ. ಆದ್ದರಿಂದ ಆತನನ್ನು ಮತ್ತೆ ಮುಖ್ಯವಾಹಿನಿಯ ಅತಿಮುಖ್ಯ ವ್ಯಕ್ತಿಯಾಗಿಸುವ ಜಾಗೃತ ಸಂಘಟನೆ.

8) ಕಾರ್ಮಿಕ ಹಕ್ಕುಗಳ ಹೋರಾಟ ಯೂನಿಯನ್


ಬಂಡವಾಳಶಾಹಿಗಳ ನಿರಂತರ ಲಾಭದ ಒತ್ತಡದಿಂದ ಅಪಾರ ಸಂಕಷ್ಟಗಳಿಗೆ ಒಳಗಾಗಿ ಅತ್ಯಂತ ನಿಕೃಷ್ಟ ಜೀವನ ಸಾಗಿಸುತ್ತಿರುವ ಕಾರ್ಮಿಕ ಹಕ್ಕುಗಳ ರಕ್ಷಣೆಯ ಸಂಘಟನೆ.

9) ಕ್ರಿಶ್ಚಿಯನ್ ಕಮ್ಯುನಿಟಿ ಸರ್ವಿಸ್.


ಭಾರತದಲ್ಲಿ ಹೆಚ್ಚುತ್ತಿರುವ ಅಸಹನೆಯ ಪರಿಣಾಮ ಕ್ರಿಶ್ಚಿಯನ್ ಚರ್ಚುಗಳು ಮತ್ತು ಮಿಷನರಿಗಳ ಮೇಲೆ ನಡೆಯುತ್ತಿರುವ ಹಲ್ಲೆ ದೌರ್ಜನ್ಯಗಳ ತಡೆಗೆ ಹೋರಾಡುವ ಸಂಘಟನಾತ್ಮಕ ಸಂಸ್ಥೆ.

10) ಸರ್ವಧರ್ಮ – ಸರ್ವಜನಾಂಗದ
ಶಾಂತಿ ಸಮನ್ವಯ ಒಕ್ಕೂಟ.


ಯಾವುದೇ ಧರ್ಮ ಪಂಥ ವಾದಗಳಿಗೆ ಬಲಿಯಾಗದೆ ಮಾನವೀಯತೆಯಡೆಗೆ ಸಮಾಜವನ್ನು ಕೊಂಡೊಯ್ಯಲು ಜನರನ್ನು ಎಚ್ಚರಿಸುವ ಸಾಮಾಜಿಕ ಸಂಸ್ಥೆ..

ಯಪ್ಪಾ,……….‌‌………‌‌
ಯಾರ ವಿರುದ್ಧ ಹೋರಾಟ – ಯಾರ ಪರ ಹೋರಾಟ….
ಶೋಷಿತರು ಯಾರು – ಶೋಷಕರು ಯಾರು……………
ನ್ಯಾಯವಾಗಿರುವವರು ಯಾರು ಅನ್ಯಾಯವಾಗಿರುವುದು ಯಾರಿಗೆ……

ಸಂಸದೀಯ ಪ್ರಜಾಪ್ರಭುತ್ವ – ಸಂವಿಧಾನ ಏನು ಮಾಡುತ್ತಿದೆ.
ಇಡೀ ದೇಶ ಈ ರೀತಿಯ ಅತೃಪ್ತ ಆತ್ಮವೇ ,
ಅಥವಾ ಇದೇ ವಾಸ್ತವ ಇದನ್ನೇ ಒಪ್ಪಿಕೊಂಡು ಬದುಕುವುದು ಜಾಣತನವೇ ಅಥವಾ ಅನಿವಾರ್ಯವೇ.
ಭಾರತೀಯತೆ ಎಂಬುದು ಮರೀಚಿಕೆಯೇ,

ಯಾರಿಗೂ ತೃಪ್ತಿ ಇಲ್ಲ. ಒಬ್ಬರಿಗೊಬ್ಬರು ಅನುಮಾನದಿಂದ ನೋಡುವ ಈ Social structure ಸಂಪೂರ್ಣ ಪುನರ್ ಪರಿಶೀಲಿಸುವ ಅವಶ್ಯಕತೆ ಇದೆ‌.

” ನಾನು ಈ ಮಣ್ಣಿನ ಈ ಗಾಳಿಯ ಈ ನೀರಿನ ವಾರಸುದಾರ. ನನ್ನ ಮೂಲ ಯಾವುದೇ ಇರಲಿ. ಈ ಕ್ಷಣದಿಂದ ನಾನೊಬ್ಬ ಭಾರತೀಯ. ನನ್ನ ನಿಷ್ಠೆ ಭಾರತೀಯತೆಗೆ. “

ಭಾರತೀಯತೆ ಎಂದರೆ,…
” ಸರ್ವತಂತ್ರ ಸ್ವತಂತ್ರ ಸಾರ್ವಭೌಮ ಸಮಾನತೆಯ ಧರ್ಮಾತೀತ ಜಾತ್ಯಾತೀತ ಪ್ರಜ್ಞೆ. ಉಳಿದದ್ದೆಲ್ಲಾ ನಂತರ “
ಆ ಕನಸಿನ ದಿನಗಳ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ…………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ.
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.
9844013068…………….

error: No Copying!