ಮಣಿಪಾಲ: ದಿನಾಂಕ : 23/10/2026(ಹಾಯ್ ಉಡುಪಿ ನ್ಯೂಸ್) ಟೆಂಪೋ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ್ ಸಿ.ಎನ್ ಅವರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ್ ಬಿ.ಎನ್ ಅವರಿಗೆ ದಿನಾಂಕ:22-10-2026 ರಂದು ಸಂಜೆ ಶಿವಳ್ಳಿ ಗ್ರಾಮದ ಮಣಿಪಾಲ ಟೆಂಪೋ ನಿಲ್ದಾಣದ ಬಳಿ ಸಾರ್ವಜನಿಕ ಶೌಚಾಲಯದ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಹಣವನ್ನು ಪಣವಾಗಿ ಪಡೆದು ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ ಬಂದ ಸಾರ್ವಜನಿಕ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿದ್ದಾರೆ .
ಪೊಲೀಸರು ದಾಳಿ ನಡೆಸಿದಾಗ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು,ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿದ್ದ ಆರೋಪಿ ಕೂಡಾ ಓಡಲು ಪ್ರಯತ್ನಿಸಿದಾಗ ಆತನನ್ನು ಹಿಡಿದು ಬಂಧಿಸಿ ವಿಚಾರಣೆ ನಡೆಸಿದಾಗ ಆತ ತನ್ನ ಹೆಸರು ಯತೀಶ್ ಮೆಂಡನ್ (32), ಕೋಟೆ ಕಟಪಾಡಿ ಎಂಬುದಾಗಿ ತಿಳಿಸಿದ್ದು ಆತನು ತನ್ನ ಸ್ವಂತ ಲಾಭಕ್ಕೋಸ್ಕರ ಸಾರ್ವಜನಿಕರಿಂದ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ನಂಬಿಸಿ ಹಣವನ್ನು ಪಣವಾಗಿ ಪಡೆದು ಮಟ್ಕಾ ಚೀಟಿ ಬರೆದು ಕೊಡುತ್ತಿರುವುದಾಗಿ ತಿಳಿಸಿದ್ದು, ಹಾಗೂ ಸಂಗ್ರಹಿಸಿದ ಹಣವನ್ನು ಗಣೇಶ್ ಎಂಬಾತನಿಗೆ ಕೊಡುತ್ತಿರುವುದಾಗಿ ತಿಳಿಸಿದ್ದು ಸಾರ್ವಜನಿಕರಿಂದ ಸಂಗ್ರಹಿಸಿದ 1320/- ರೂಪಾಯಿ ನಗದು ಹಣ, ಮಟ್ಕಾ ನಂಬ್ರ ಬರೆದ ಚೀಟಿ-1, ಬಾಲ್ಪೆನ್ನು-1 ನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 172/2026 ಕಲಂ: 78 (i)(iii) ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.
