ದಿನಾಂಕ:23-10-2026(ಹಾಯ್ ಉಡುಪಿ ನ್ಯೂಸ್)
ಬೀಜಿಂಗ್: ಟಿಬೆಟ್ನ ಉತ್ತರದ ಪರ್ವತ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಭೀಕರ ಭೂಕಂಪಕ್ಕೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 54 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿರುವ ಈ ಪ್ರಬಲ ಭೂಕಂಪದಿಂದಾಗಿ ನೂರಾರು ವಸತಿ ಗೃಹಗಳು ನೆಲಸಮಗೊಂಡಿವೆ.
ಭೂಕಂಪದಿಂದ ಕನಿಷ್ಠ 339 ಮನೆಗಳು ಹಾಗೂ ಜಾನುವಾರುಗಳಿಗಾಗಿ ನಿರ್ಮಿಸಿದ್ದ 20 ಕೊಟ್ಟಿಗೆಗಳು ಕುಸಿದಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳೀಯ ಜಿಲ್ಲೆಯಿಂದ 1,600ಕ್ಕೂ ಹೆಚ್ಚು ಮಂದಿಯನ್ನು ನಿಯೋಜಿಸಲಾಗಿದೆ. ಸಂತ್ರಸ್ತರ ನೆರವಿಗಾಗಿ 1,000 ತಾತ್ಕಾಲಿಕ ವಸತಿ ಘಟಕಗಳು, ಸುಮಾರು 3,000 ಡೇರೆಗಳು, ಮಡಚಬಹುದಾದ ಹಾಸಿಗೆಗಳು, ಕೈದೀಪಗಳು ಹಾಗೂ ಚಳಿಗಾಲಕ್ಕೆ ಅಗತ್ಯವಾದ ಉಡುಪುಗಳನ್ನು ಪ್ರದೇಶಕ್ಕೆ ರವಾನಿಸಲಾಗಿದೆ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, ಸ್ಥಳೀಯ ಕಾಲಮಾನ ರಾತ್ರಿ 10.33ಕ್ಕೆ ಭೂಕಂಪ ಸಂಭವಿಸಿದೆ. ಟಿಬೆಟ್ನ ಉತ್ತರ ಭಾಗದಲ್ಲಿರುವ ಕಡಿಮೆ ಜನಸಂಖ್ಯೆಯ, ಎತ್ತರದ ಪ್ರದೇಶದಲ್ಲಿ ನಾಗ್ಚು ನಗರದ ಪೂರ್ವ-ಈಶಾನ್ಯಕ್ಕೆ 191 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಭೂಮಿಯ ಮೇಲ್ಮೈಯಿಂದ ಸುಮಾರು 18 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ತಿಳಿಸಿದೆ.
ಭೂಕಂಪದ ಬಳಿಕ 4.3ರಿಂದ 5.2 ತೀವ್ರತೆಯ ಕನಿಷ್ಠ ಏಳು ಭೂಕಂಪನಗಳು ಸಂಭವಿಸಿರುವುದನ್ನು ಅಮೆರಿಕದ ಸಂಸ್ಥೆ ದಾಖಲಿಸಿದೆ. ಈ ಎಲ್ಲ ಕಂಪನಗಳ ಕೇಂದ್ರಗಳು ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿದ್ದವು ಎಂದು ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
