ಹಣ್ಣುಗಳಲ್ಲಿ ಅತ್ಯಂತ ಪೌಷ್ಟಿಕಾಂಶದ ಹಣ್ಣು ಎಂದು ಸೇಬನ್ನು ಕರೆಯಲಾಗುತ್ತದೆ.
Apple a day keeps the doctor away – ಒಂದು ಸೇಬು ಹಣ್ಣು ನಿಮ್ಮನ್ನು ವೈದ್ಯರಿಂದ ದೂರ ಇಡುತ್ತದೆ.
ಕಾಶ್ಮೀರ, ಹಿಮಾಚಲ ಪ್ರದೇಶ, ಡಾರ್ಜಿಲಿಂಗ್ ಮುಂತಾದ ಹಿಮಚ್ಚಾದಿತ ಉತ್ತರ ಭಾರತದಲ್ಲಿ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.
ನಿಮಗೆ ಆಶ್ಚರ್ಯವಾಗಬಹುದು ಅಥವಾ ಸೋಜಿಗವೆನಿಸಬಹುದು. 30/40 ವರ್ಷಗಳ ಹಿಂದೆ ನಮ್ಮ ಹಳ್ಳಿಗಳಲ್ಲಿ ಎಷ್ಟೋ ಜನ ಸೇಬಿನ ಹಣ್ಣು ತಿನ್ನುವುದಿರಲಿ ನೋಡಿಯೂ ಇರಲಿಲ್ಲ.
ಕೇವಲ ಕೆಲವೇ ಕೆಲವು ಶ್ರೀಮಂತರು ಇದನ್ನು ಅಪರೂಪವಾಗಿ ಪಟ್ಟಣದಿಂದ ತಂದು ತಿನ್ನುತ್ತಿದ್ದರು. ಮಧ್ಯಮ ವರ್ಗದವರು ಮತ್ತು ಸರ್ಕಾರಿ ಅಧಿಕಾರಿಗಳು ತೀವ್ರ ಅನಾರೋಗ್ಯದ ಸಂದರ್ಭದಲ್ಲಿ ಈ ಹಣ್ಣನ್ನು ಆಹಾರವಾಗಿ ತೆಗೆದುಕೊಳ್ಳುತ್ತಿದ್ದರು.
ಈಗಲೂ ಈ ಹಣ್ಣು ಸುಮಾರು 2000 ಕಿಲೋಮೀಟರ್ ದೂರದಿಂದ ನಮ್ಮ ರಾಜ್ಯಕ್ಕೆ ಬರುತ್ತದೆ. ಅಪಾರ ಸಂಪನ್ಮೂಲಗಳನ್ನು, ಅನೇಕ ದಿನಗಳವರೆಗೆ ಉಪಯೋಗಿಸಿ ರೈತರು ಶ್ರಮದಿಂದ ಬೆಳೆಯುವ ಹಣ್ಣು ಈ ಸೇಬು.
ಅಸಲಿ ವಿಷಯವೇನೆಂದರೆ…..,
ಇಂತಹ ಹಣ್ಣುಗಳನ್ನು ಕಬ್ಬಿಣದ ದಬ್ಬಳದಿಂದ – ಸೂಜಿಯಿಂದ ದಾರದಲ್ಲಿ ಪೋಣಿಸಿ ಹಾರವಾಗಿ ಮಾಡಿ ಕ್ರೇನ್ ಸಹಾಯದಿಂದ ಅದನ್ನು ಹುಲುಮಾನವರ ಕುತ್ತಿಗೆಗೆ ಹಾರದ ರೂಪದಲ್ಲಿ ಗೌರವ ಸೂಚಿಸುವ ಸಲುವಾಗಿ ಹಾಕುತ್ತೀರಲ್ಲ. ಇದನ್ನು ಏನೆಂದು ಕರೆಯುವುದು.
ನಾನು ವೈಯಕ್ತಿಕವಾಗಿ ಈ ಸಂಪೂರ್ಣ ಚಟುವಟಿಕೆಯಲ್ಲಿ ಭಾಗವಹಿಸುವವರನ್ನು ಅದು ಯಾರೇ ಆಗಿರಲಿ, ಕಾರಣವೇನೇ ಇರಲಿ ಬುದ್ದಿಮಾಂಧ್ಯರು ಎಂದೇ ಕರೆಯುತ್ತೇನೆ.
ಅಲ್ಲಾರಿ, ಈ ಪ್ರಕೃತಿಯ ಅಪೂರ್ವ ಕೊಡುಗೆಗಳಾದ ಗಾಳಿ, ನೀರು, ಮಣ್ಣು, ಬೆಳಕು, ಹಣ್ಣು, ತರಕಾರಿ, ಪ್ರಾಣಿ ಪಕ್ಷಿಗಳು ರಾಷ್ಟ್ರೀಯ ಸಂಪತ್ತುಗಳು. ನೀವು ಯಾವುದೇ ಅಧಿಕಾರದಲ್ಲಿರಿ ಅಥವಾ ಎಷ್ಟೇ ಶ್ರೀಮಂತರಾಗಿರಿ ಆಹಾರದ ದುರುಪಯೋಗ ಅಥವಾ ಆಹಾರ ನಾಶಪಡಿಸುವುದು ದೇಶ ದ್ರೋಹ, ಮಾನವ ದ್ರೋಹ, ಧರ್ಮ ದ್ರೋಹ.
ಇತ್ತೀಚಿನ ವರದಿಯಂತೆ ಭಾರತದಲ್ಲಿ ಎಷ್ಟೋ ಲಕ್ಷ ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಮತ್ತು ಸಮಾಜದಲ್ಲಿ ತಿನ್ನುವ ಹಣ್ಣುಗಳನ್ನು ಕುತ್ತಿಗೆಗೆ ಹಾರವಾಗಿ ಬಳಸುವುದಕ್ಕೆ ಜನರಿಗೆ ಪಾಪ ಪ್ರಜ್ಞೆ ಕಾಡದಿದ್ದರೆ ಅವರನ್ನು ಮನುಷ್ಯರು ಎಂದು ಹೇಗೆ ಕರೆಯುವುದು.
ಹೀಗೆ ಹಾರವಾಗಿ ಬಳಸಿದ ಹಣ್ಣನ್ನು ಮತ್ತೆ ತಿನ್ನಲು ಉಪಯೋಗಿಸಬಹುದು ಎಂಬ ಸಮರ್ಥನೆ ನೀಡಬಹುದು. ಅದು ಒಳ್ಳೆಯ ಕಾರಣ ಖಂಡಿತ ಅಲ್ಲ. ಈ ಸಂದರ್ಭದಲ್ಲಿ ಹಣ್ಣುಗಳು ಹಾಳಾಗುವ ಸಾಧ್ಯತೆಯೇ ಹೆಚ್ಚು. ಒಂದು ವೇಳೆ ನಿಮಗೆ ಹಾರ ಹಾಕಿಸಿಕೊಳ್ಳುವ ಮತ್ತು ಹಾಕುವ ತೆವಲು ಇದ್ದರೆ ಪ್ರಕೃತಿಯಲ್ಲಿ ಯಥೇಚ್ಛವಾಗಿ ಸಿಗುವ ಕಲ್ಲು ಮಣ್ಣು ಗಿಡ ಬಳ್ಳಿ ಎಲೆ ಇದ್ದಿಲು ಬಟ್ಟೆ ಹೂವು ಮುಂತಾದ ವಸ್ತುಗಳ ಹಾರ ಮಾಡಿ ಹಾಕಿಸಿಕೊಳ್ಳಿ……..
ದೇಶ ಕೆಲವು ವಿಷಯಗಳಲ್ಲಿ ಇಷ್ಟೊಂದು ಮುಂದುವರಿದರೂ ನಮ್ಮ ಜನಗಳಿಗೆ ವಿವೇಚನೆ ಬೇಡವೇ….ಛೇ…..
ಅನ್ನ ತಿನ್ನುವವರ ನಡವಳಿಕೆ ಖಂಡಿತ ಇದಲ್ಲ.
ಇಂತಹ ವಾತಾವರಣದಲ್ಲಿ ನಾವು ಇನ್ನೂ ಜೀವಂತ ಇದ್ದೇವೆ ಎಂಬುದೇ ನಾಚಿಕೆ ಅವಮಾನದ ವಿಷಯ.
ದುಡ್ಡು ನಮ್ಮದಾಗಿರಬಹುದು,
ಇದು ಪ್ರಜಾಪ್ರಭುತ್ವ ದೇಶವೇ ಆಗಿರಬಹುದು, ಕಾನೂನಿನ ವ್ಯಾಪ್ತಿಯಲ್ಲಿಯೇ ಸೇಬಿನ ಹಾರ ಹಾಕಿಸಿಕೊಳ್ಳಬಹುದು, ಆದರೆ ಯೋಚಿಸುವುದು ಬೇಡವೇ…….
ಹಸಿದ ಹೊಟ್ಟೆಗಳು ನಮಗೆ ನೆನಪಾಗುವುದು ಬೇಡವೇ……
ಎಲೇ ಮಾನವ ಪ್ರಾಣಿಗಳೇ, ನೀವು ತಿಗಣೆ, ಜಿರಲೆ, ಸೊಳ್ಳೆ, ನಾಯಿ,
ಹಂದಿ, ಕುರಿ, ಕ್ರಿಮಿ ಕೀಟಗಳಿಗಿಂತ ಅತ್ಯಂತ ಕೀಳಾದ ಮನೋಭಾವದವರು.
ನಾಗರಿಕ ಸಮಾಜವಂತೆ ಈ ಅಯೋಗ್ಯರು ಜೀವಿಸುತ್ತಿರುವುದು.
ಕ್ಷಮಿಸಿ, ಭಿಕ್ಷುಕರ ಕಾಲೋನಿಗಳು ಇರುವ ಸಮಾಜದಲ್ಲಿ ಸೇಬಿನ ಹಾರದ ಅತಿರೇಕ ನೋಡಿದಾಗ ಮನಸ್ಸು ನಿಯಂತ್ರಣ ಕಳೆದುಕೊಂಡಿತು…..
ಜಾತಿ ಧರ್ಮದ ಅಮಲಿನಲ್ಲಿ ಗೌಣವಾಗುತ್ತಿರುವ ಅನ್ನದಾತ………..
ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾಗುತ್ತಿರುವ ಆಕ್ರಮಣಕಾರಿ ನೀತಿಗಳು………
ಇಡೀ ವ್ಯವಸ್ಥೆಯನ್ನು ವಿರುದ್ಧ ದಿಕ್ಕಿನಲ್ಲಿ ಮುನ್ನಡೆಸುವ ದ್ವೇಷಮಯ ನೀತಿಗಳು ಎಲ್ಲಾ ಕಾಲಕ್ಕೂ ಸಮಾಜಕ್ಕೆ ಮಾರಕವೇ……
ಬಹುಮತವೇ ಆಡಳಿತ ನಡೆಸುವ ಮಾನದಂಡವಾಗಬಾರದು. ಬಹುಮತ ಅಧಿಕಾರಕ್ಕೇರಲು ಒಂದು ಸಾಧನ ಮಾತ್ರ……
ಇತಿಹಾಸ, ಸಂಸ್ಕೃತಿ, ಸಂಪ್ರದಾಯ, ಬದಲಾಗುತ್ತಿರುವ ಸನ್ನಿವೇಶ, ವಾಸ್ತವ ಪ್ರಜ್ಞೆ ಮತ್ತು ದೇಶ – ಜನರ ಹಿತಾಸಕ್ತಿ ಆಡಳಿತಗಾರ ಬಹುಮುಖ್ಯ ಗುರಿಯಾಗಿರಬೇಕು.
ಹಠ, ಸರ್ವಾಧಿಕಾರ, ಚುನಾವಣೆ ಗೆಲ್ಲುವ ತಂತ್ರಗಾರಿಕೆ ಮುಖ್ಯವಾಗದೆ ತಾಳ್ಮೆ, ಕ್ಷಮಾಗುಣ ಎಲ್ಲರನ್ನೂ ಪ್ರೀತಿಸುವ ಮನೋಭಾವ ತಮ್ಮ ನೀತಿಯಾಗಬೇಕು.
ವಿರೋಧ ಪಕ್ಷಗಳಿಗಿಂತ ಹತ್ತು ಪಟ್ಟು ಹೆಚ್ಚು ಜವಾಬ್ದಾರಿ ಆಡಳಿತ ಮಾಡುವವರಿಗೆ ಇರಬೇಕು.
ದೇಶವೆಂಬುದು ಕುಟುಂಬದ ವಿಸ್ತೃತ ರೂಪ. ಅನೇಕ ಕುಟುಂಬಗಳೇ ಸಮಾಜ. ಸಮಾಜದ ಪ್ರತಿನಿಧಿಗಳೇ ಸರ್ಕಾರ. ಅದು ಎಲ್ಲರಿಗೂ ಸೇರಿದ್ದು. ಯಾವುದೋ ಒಂದು ಪಕ್ಷದ ಆಸ್ತಿಯಲ್ಲ.
ಕಾಂಗ್ರೆಸ್ ಬಿಜೆಪಿಯನ್ನು ದ್ವೇಷಿಸುವುದು, ಬಿಜೆಪಿ ಕಮ್ಯುನಿಸ್ಟರನ್ನು ದ್ವೇಷಿಸುವುದು ಹೀಗೆ ಒಬ್ಬರಿಗೊಬ್ಬರು ದ್ವೇಷಿಸಿದರೆ ಆಯಾ ಪಕ್ಷಗಳಿಗೆ ಲಾಭ. ಆದರೆ ಅದೇ ಸಮಯದಲ್ಲಿ ಇಡೀ ದೇಶ ಈ ದ್ವೇಷದಿಂದ ಹಾಳುಗುತ್ತಿದೆ ಎನ್ನುವ ಯೋಚನೆ ಮತ್ತು ಜವಾಬ್ದಾರಿ ಈ ಪಕ್ಷಗಳಿಗೆ ಇರುವುದಿಲ್ಲ. ಅದರ ಪರಿಣಾಮವೇ ಈ ಹಿಂಸಾಚಾರಗಳು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ,
ಚುನಾವಣಾ ರಾಜಕೀಯದಲ್ಲಿ,
ಪಕ್ಷಗಳ ಅಧಿಕಾರದ ದುರಾಸೆಯಲ್ಲಿ,
ಜಾತಿಗಳ ನೆರಳಿನಲ್ಲಿ,
ಧರ್ಮಗಳ ಅಮಲಿನಲ್ಲಿ,
ಅನ್ನದಾತರು ಗೌಣವಾಗುತ್ತಿರುವ ಸಂದರ್ಭದಲ್ಲಿ………
ಮೌನ ಮುರಿಯಬೇಕಾದದ್ದು ಎಲ್ಲರ ಕರ್ತವ್ಯ.
ಪೀಜಾ ಬರ್ಗರ್ ಗಳು ದುಬಾರಿಯಾಗುತ್ತಿವೆ,
ಲಿಪ್ ಸ್ಟಿಕ್, ಶೂಗಳು ಕೊಸರು ಮುಕ್ತವಾಗುತ್ತಿವೆ,
ಸೈಟು, ಚಿನ್ನಗಳು ಭ್ರಷ್ಟತೆಯ ಕೂಪಗಳಾಗುತ್ತಿವೆ,
ಶಾಲೆ, ಆಸ್ಪತ್ರೆಗಳು ದಂಧೆಗಳಾಗುತ್ತಿವೆ,
ತಿನ್ನುವ ಅನ್ನ ಬೆಳೆವ ರೈತರು ಮಾತ್ರ ಬೀದಿಯ ಹೆಣವಾಗುತ್ತಿದ್ದಾರೆ…….
ಇದೀಗ ಅನ್ನ ತಿನ್ನುವ, ದೇಶ ಪ್ರೀತಿಸುವ, ಜನರನ್ನು ಇಷ್ಟಪಡುವುದು ಎಲ್ಲರ ಕರ್ತವ್ಯ. ಅಂದರೆ,
ಆಡಳಿತಗಾರರನ್ನು ಎಚ್ಚರಿಸುವ, ಹಠಕ್ಕಿಂತ ತಾಳ್ಮೆಗೆ ಮಹತ್ವ ಕೊಡುವ, ದ್ವೇಷಕ್ಕಿಂತ ಪ್ರೀತಿಗೆ ಪ್ರಾಮುಖ್ಯತೆ ನೀಡುವ, ಘರ್ಷಣೆಗಿಂತ ಸಹನೀಯ ವಾತಾವರಣ ನಿರ್ಮಿಸುವ ಒತ್ತಡವನ್ನು ಹಾಕಬೇಕಿದೆ.
ದೇಶ ವಿಭಜಕ ಶಕ್ತಿಗಳು ಇಡೀ ಘಟನಾವಳಿಗಳನ್ನು ದೇಶದ ಒಳಗೆ ಮತ್ತು ಹೊರಗೆ ತದೇಕಚಿತ್ತದಿಂದ ಗಮನಿಸುತ್ತಾ ಅದರ ಲಾಭ ಪಡೆಯಲು ಹೊಂಚು ಹಾಕುತ್ತಾ ಕಾಯುತ್ತಿರುತ್ತವೆ ಎಂಬ ಪ್ರಜ್ಞೆಯನ್ನು ಭಾರತೀಯ ಪ್ರಜೆಗಳಾದ, ಎಲ್ಲಾ ಪಕ್ಷ ಸಿದ್ದಾಂತಗಳ ಮತದಾರರಾದ ನಾವುಗಳು ಸದಾ ನೆನಪಿನಲ್ಲಿ ಇಟ್ಟುಕೊಂಡಿರಬೇಕು. ಇಲ್ಲದಿದ್ದರೆ ಇದೇ ರೀತಿ ಕಚ್ಚಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ……
ಅಲೆಗ್ಸಾಂಡರ್, ಘಜ್ನಿ ಘೋರಿ ಮಹಮದ್, ಬ್ರಿಟಿಷ್ ಫ್ರೆಂಚ್ ಡಚ್ಚರ ರೀತಿಯಲ್ಲಿ ಮತ್ಯಾರೋ ಈ ದೇಶಕ್ಕೆ ನುಗ್ಗಬಹುದು. ಆಗ ಅದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗುವುದು ಕಾಂಗ್ರೆಸ್ ಬಿಜೆಪಿ ಕಮ್ಯುನಿಸ್ಟರಲ್ಲ ಸಾಮಾನ್ಯ ಜನ ಎಂದು ಎಚ್ವರಿಸುತ್ತಾ…..
ಸಂವಿಧಾನದ ಮೂಲ ಪೀಠಿಕೆಯನ್ನು ಉಲ್ಲೇಖಿಸುತ್ತಾ……
” ಭಾರತೀಯ ಪ್ರಜೆಗಳಾದ ನಾವು…………..”
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
