images-9.jpeg
Spread the love

ಟಾಕ್ಸಿಕ್ ಎಂಬ ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾದ ಕೆಲವೇ ದಿನಗಳ ನಂತರ ಪ್ರೇಮದ ಊರಲಿ ಎಂಬ ಸಿನಿಮಾ ಸ್ವಲ್ಪ ಮಟ್ಟಿಗೆ ಯಶಸ್ಸಿನತ್ತ ಸಾಗುತ್ತಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಕುತೂಹಲಕರವಾಗಿದೆ ಮತ್ತು ಆಶಾದಾಯಕವಾಗಿದೆ.

ಕನ್ನಡ ಸಿನಿಮಾ ರಂಗದಲ್ಲಿ ವರ್ಷಕ್ಕೆ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗುತ್ತಿದ್ದರು ಯಶಸ್ಸಿನ ಪ್ರಮಾಣ ಶೇಕಡಾ ಐದರಿಂದ ಹತ್ತು ಮಾತ್ರ. ಉಳಿದವು ವಿಫಲವಾಗುವುದೇ ಹೆಚ್ಚು.

ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ರೀತಿಯ ಸಿನಿಮಾಗಳು ಯಶಸ್ವಿಯಾಗುವುದನ್ನು ಗಮನಿಸಬಹುದು. ಇತ್ತೀಚಿನ ವರ್ಷಗಳಲ್ಲಿ ಬಾಹುಬಲಿ, ಕೆಜಿಎಫ್, ಅನಿಮಲ್, ಪುಷ್ಪ, ದುರಂಧರ್ ಮುಂತಾದ ಹೆಚ್ಚು ಕೊಲೆ, ರಕ್ತಪಾತ, ಸೇಡು, ಕ್ರೌರ್ಯ, ಹಿಂಸೆ ಮತ್ತು ಅದ್ದೂರಿತನದ ಎರಡೆರಡು ಭಾಗಗಳ ಚಿತ್ರಗಳು ಬಿಡುಗಡೆಯಾಗಿ ಯಶಸ್ವಿಯಾದವು. ಆದರೆ ಟಾಕ್ಸಿಕ್ ವಿಫಲತೆಯೊಂದಿಗೆ ಸದ್ಯಕ್ಕೆ ತಾತ್ಕಾಲಿಕವಾಗಿ ಈ ರೀತಿಯ ಚಿತ್ರಗಳು ಕೊನೆಯಾಗಬಹುದೇ ?

ಏಕೆಂದರೆ ಸದಾ ಕಾಲ ನವಿರು ಪ್ರೇಮದ, ಹಾಸ್ಯದ, ಮನುಷ್ಯ ಸಂಬಂಧದ, ವ್ಯವಸ್ಥೆಯ ವಿರುದ್ಧ ಬಂಡಾಯದ ಚಿತ್ರಗಳು ಆಗಾಗ ಪ್ರೇಕ್ಷಕರಿಗೆ ಮತ್ತೆ ಮತ್ತೆ ನೆನಪಾಗುತ್ತದೆ. ಈಗ ಗ್ರಾಮೀಣ ಭಾಗದ ರೈತರ ಒಂದಷ್ಟು ಅಂಶಗಳನ್ನು ಇಟ್ಟುಕೊಂಡು ಮಾಡಿದ, ತ್ರಿಕೋನ ಪ್ರೇಮಕಥೆಯ, ರೈತ ಮಕ್ಕಳಿಗೆ ಹೆಣ್ಣು ಸಿಗದ ಪ್ರೇಮದ ಊರಲಿ ಎಂಬ ಸಿನಿಮಾ ಯಶಸ್ವಿಯಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇದು ನಿಜಕ್ಕೂ ಕನ್ನಡ ಚಿತ್ರರಂಗದ ಅಥವಾ ಸಮಾಜದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎನಿಸುತ್ತದೆ. ಪ್ರೇಕ್ಷಕರು ಸಹ ಪ್ರಕ್ಷ್ಯುದ್ಧ ಮನಸ್ಥಿತಿಯಿಂದ ಸ್ವಲ್ಪಮಟ್ಟಿಗೆ ಸಮಾಧಾನಕರ ಮನಸ್ಥಿತಿಯ ಹುಡುಕಾಟದಲ್ಲಿ ಇರಬಹುದೇ ?

ಟಾಕ್ಸಿಕ್ ಸೋತಿದ್ದು ಸಹ ಸರಿ ಇದೆ. ಹಿಂಸೆಯ ಅಷ್ಟೊಂದು ವಿಜೃಂಭಣೆ ಸಮಾಜದಲ್ಲಿ ಯಾವಾಗಲೂ ಮಾನ್ಯತೆ ಪಡೆಯಬಾರದು. ಹಾಗೆಂದು ಪ್ರೇಮದ ಊರಲಿ ನೀಡುತ್ತಿರುವ ಸಂದೇಶ ಪರಿಪೂರ್ಣ ಎಂದೇನು ಅಲ್ಲ. ಆದರೆ ಸದ್ಯದ ಮಟ್ಟಿಗೆ ಚಲನ ಚಿತ್ರಗಳು ಒಂದಷ್ಟಾದರೂ ಸಂಯಮದಿಂದ ಮನರಂಜನೆ ನೀಡುತ್ತಾ, ಒಂದಷ್ಟು ಒಳ್ಳೆಯ ಸಂದೇಶವನ್ನು ಕ್ರಿಯಾತ್ಮಕವಾಗಿ ಕೊಡುವ ನಿಟ್ಟಿನಲ್ಲಿ ಸಾಗಿದರೆ ಸಮಾಜಕ್ಕೆ ಒಳ್ಳೆಯದೇ. ಹಸಿರ ವನಸಿರಿಯ ನಡುವಿನ ದೃಶ್ಯಗಳು ರಕ್ತದ ಚೆಲ್ಲಾಟಕಿಂತ ಮನಸ್ಸಿಗೆ ಹೆಚ್ಚು ಮುದ ನೀಡುತ್ತದೆ. ಧಾರಾವಾಹಿಗಳು ಸಹ ಈ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಏಕೆಂದರೆ ಸಮಾಜದ ಮನುಷ್ಯ ಸಂಬಂಧಗಳ ನಡುವಿನ ವಿಕೃತಗಳನ್ನೇ ದೃಶ್ಯಗಳಾಗಿ ಜೋಡಿಸಿ ಹಣ ಮಾಡುವುದು, ಮಾಡುತ್ತಿರುವುದು ಅಂತಹ ಒಳ್ಳೆಯ ಬೆಳವಣಿಗೆ ಏನೂ ಅಲ್ಲ. ಯುವಕರು ದಾರಿ ತಪ್ಪುತ್ತಿರುವ ಇಂದಿನ ಸನ್ನಿವೇಶಕ್ಕೆ ಚಲನಚಿತ್ರ ಮತ್ತು ಧಾರವಾಹಿಗಳ ಕೊಡುಗೆ ಸಹ ಇದೆ.

ಭಾರತದ ಮಟ್ಟಿಗೆ ರಾಜಕೀಯ, ಧರ್ಮ, ಸಿನಿಮಾ ಮತ್ತು ಕ್ರಿಕೆಟ್ ಒಂದು ರೀತಿಯಲ್ಲಿ ತೀವ್ರ ಭಾವೋತ್ಕರ್ಷ ಅಥವಾ ಭಾವನೆಗಳ ಉತ್ತುಂಗ ಅಥವಾ ಅತಿರೇಕಕ್ಕೆ ಕೊಂಡೊಯ್ಯುವ ಕ್ಷೇತ್ರಗಳಾಗಿವೆ. ಸಾಮಾನ್ಯ ಜನರ ಭಾವೋದ್ವೇಗವನ್ನು ಈ ವಿಷಯಗಳಲ್ಲಿ ತಡೆಯುವುದು ತುಂಬಾ ಕಷ್ಟ…..

ಸ್ವಾತಂತ್ರ್ಯ ಬಂದ ಪ್ರಾರಂಭದಲ್ಲಿ ಸೇವೆಯಾಗಿದ್ದ ರಾಜಕೀಯ, ಮೌಲ್ಯವಾಗಿದ್ದ ಧರ್ಮ, ಕ್ರಿಯಾತ್ಮಕ ಮತ್ತು ಮಾನವೀಯ ಸಂಬಂಧಗಳಾಗಿದ್ದ ಸಿನಿಮಾ ಹಾಗು ಸ್ಪರ್ಧಾತ್ಮಕವಾಗಿದ್ದ ಕ್ರಿಕೆಟ್ ಇತ್ತೀಚಿನ ದಶಕಗಳಲ್ಲಿ ಸಂಪೂರ್ಣ ವ್ಯಾಪಾರೀಕರಣವಾಗಿದೆ. ಹಣ ಕೇಂದ್ರೀಕೃತವಾಗಿಯೇ ಎಲ್ಲವನ್ನು ನೋಡಲಾಗುತ್ತಿದೆ…..

ರಾಜಕೀಯ ಜಾತಿ ಮತ್ತು ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದ್ದರೆ, ಧರ್ಮ ಅಸಹಿಷ್ಣುತೆಯ, ಗಲಭೆಗಳ ಗೂಡಾಗಿದ್ದರೆ, ಕ್ರಿಕೆಟ್ ಹರಾಜಿಗೆ ನಿಂತು ಬುಕ್ಕಿಗಳ ಜೂಜಾಟವಾಗಿದ್ದರೆ, ಸಿನಿಮಾ ದ್ವೇಷ, ಹಿಂಸೆ, ಕೊಲೆ ಮತ್ತು ಸಂಪೂರ್ಣ ವಿರುದ್ಧ ಮೌಲ್ಯಗಳ ಪ್ರತಿಪಾದನೆಗೆ ಇಳಿದಿದೆ…….

ಸಿನಿಮಾ, ಅಭಿನಯ ಮತ್ತು ಸಮಾಜದ ಬಗ್ಗೆ ಸಣ್ಣ ಅನಿಸಿಕೆ….

ಭಾರತೀಯ ಚಿತ್ರರಂಗದ ಚಿತ್ರಕಥೆ ಮತ್ತು ಅಭಿನಯ ಶೈಲಿಯಲ್ಲಿ ಸ್ವಾತಂತ್ರ್ಯ ನಂತರದಿಂದ ಇಲ್ಲಿಯವರೆಗೂ ಆದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಮ್ಮ ಸಮಾಜದ ಸಾಮಾಜಿಕ ವ್ಯವಸ್ಥೆ ಮತ್ತು ವೀಕ್ಷಕರ ಮಾನಸಿಕ ಸ್ಥಿತಿಯು ಹೇಗೆ ಪರಿವರ್ತನೆ ಹೊಂದಿದೆ ಮತ್ತು ಯಾವ ದಿಕ್ಕಿನತ್ತ ಸಾಗಿದೆ ಎಂಬುದರ ಒಳನೋಟ ಗೋಚರಿಸುತ್ತದೆ…..
ತೀರಾ ಆಳಕ್ಕೆ ಇಳಿಯದೆ ಸರಳವಾಗಿ ಕೆಲವೇ ವಾಕ್ಯಗಳಲ್ಲಿ ಅದನ್ನು ಹಿಡಿದಿಡುವ ಒಂದು ಸಣ್ಣ ಪ್ರಯತ್ನ…….

ಪ್ರಾರಂಭದ ಪೌರಾಣಿಕ, ಐತಿಹಾಸಿಕ, ಕೌಟುಂಬಿಕ, ಗ್ರಾಮೀಣ ಹಿನ್ನೆಲೆಯ ಚಿತ್ರಕಥೆಗಳಿಂದ ಇಂದಿನ ತಾಂತ್ರಿಕ ಪ್ರಾವಿಣ್ಯತೆಯ ಆಧುನಿಕ ಚಿತ್ರಗಳವರೆಗೆ ಪ್ರೀತಿ, ಪ್ರೇಮ, ಪ್ರಣಯ, ರಾಜಕೀಯ, ಹಾಸ್ಯ, ನಿಗೂಢ, ಫ್ಯಾಂಟಸಿ, ವಿಡಂಬನೆ, ಮಕ್ಕಳು, ಪ್ರಕೃತಿ, ಪರಿಸರ, ಭಯಾನಕ ಮುಂತಾದ ಎಲ್ಲಾ ಪ್ರಕಾರದ ಚಿತ್ರಗಳು ಆಯಾ ಕಾಲದ ಜನರ ಜೀವನಶೈಲಿಯನ್ನು ಪ್ರತಿನಿಧಿಸುತ್ತದೆ……

ಎರಡು ಮೂರು ಗಂಟೆ ಸಮಯದ ಚಲನಚಿತ್ರ ಸಂಪೂರ್ಣ ಕಾಲ್ಪನಿಕತೆಯನ್ನು ಸಾಂಕೇತಿಕವಾಗಿ ಹೊಂದಿದ್ದರೂ ವಾಸ್ತವದ ನೆಲೆಯ ಮೇಲೆಯೇ ನಿಂತಿರುತ್ತದೆ. ಸಾಹಿತ್ಯದಂತೆ ನಿರ್ದೇಶಕನ ಕಲ್ಪನೆಗೆ ತಕ್ಕಂತೆ ಚಿತ್ರಕಥೆ ವಿಜೃಂಭಿಸಿದರೂ, ಹಾಡು, ಸಂಗೀತ, ಸಂಕಲನ, ಹೊಡೆದಾಟಗಳಿದ್ದರೂ, ಒಟ್ಟು ಆಶಯ ಸಾಮಾಜಿಕ ವ್ಯವಸ್ಥೆಯ ಪ್ರತಿಫಲನವೇ ಆಗಿರುತ್ತದೆ….

ಇಂದಿನ ದಿನಮಾನದ ಮೌಲ್ಯಗಳ ಕುಸಿತ, ಆಧುನಿಕತೆಯಿಂದಾದ ಮಾನಸಿಕ ತಳಮಳ, ಸಂಬಂಧಗಳ ಹುಡುಕಾಟ, ಎಲ್ಲವನ್ನೂ ತಮ್ಮ ತಿಳುವಳಿಕೆ ಮತ್ತು ಸ್ವಾರ್ಥದಿಂದ ಸಮರ್ಥಿಸಿಕೊಳ್ಳುವ ಜಾಣತನ ಎಲ್ಲವೂ ಹೇಗೆ 80 ವರ್ಷಗಳಷ್ಟು ಸಮಯದಲ್ಲಿ ಸೂಕ್ಷ್ಮವಾಗಿ ಬದಲಾಗುತ್ತಾ ಸಾಗುತ್ತಿದೆ ಎಂಬುದನ್ನು ಗಮನಿಸಿಬಹುದು…..

ಹಾಗೆಯೇ ನಟರ ಅಭಿನಯ ಶೈಲಿಯೂ, ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಲ್ಲಿಯೂ ತೀವ್ರ ಸ್ವರೂಪದ ಬದಲಾವಣೆಗಳನ್ನು ಗುರುತಿಸಬಹುದು.
ಉದಾಹರಣೆಗೆ ತಮಿಳಿನ ಶಿವಾಜಿ ಗಣೇಶನ್, ಕನ್ನಡದ ಕಲ್ಯಾಣ್ ಕುಮಾರ್, ಉದಯ್ ಕುಮಾರ್, ತೆಲುಗಿನ ನಾಗೇಶ್ವರರಾವ್, ಮಲೆಯಾಳಂ ಪ್ರೇಮ್ ನಜೀರ್, ಹಿಂದಿಯ ದಿಲೀಪ್ ಕುಮಾರ್ ಮುಂತಾದವರು ತೀವ್ರ ಭಾವನಾತ್ಮಕ ಸನ್ನಿವೇಶಗಳಲ್ಲಿ ಅದರಲ್ಲೂ ತನ್ನ ತಾಯಿ ಅಥವಾ ತಂದೆಯ ಅಥವಾ ಪ್ರೇಯಸಿಯ ಸಾವಿನ ದೃಶ್ಯಗಳಲ್ಲಿ ಆಕಾಶದೆತ್ತರಕ್ಕೆ ಧ್ವನಿ ಕೇಳುವಂತೆ ಕಿರುಚುತ್ತಾ ಗೋಳಾಡುತ್ತಿದ್ದರು…..

ಮುಂದೆ ಕಮಲಹಾಸನ್, ಮಮ್ಮೂಟಿ, ಚಿರಂಜೀವಿ, ವಿಷ್ಣುವರ್ಧನ್, ಅಮಿತಾಭ್ ಬಚ್ಚನ್ ಮುತಾಂದವರು ಕೆಲವು ಸಿನಿಮಾಗಳಲ್ಲಿ ಒಂದು ಪರಿವರ್ತನೆಯಾಗಿ ಕಣ್ಣ ಹನಿಯನ್ನು ಜಾರಿಸುವ ಮುಖಾಂತರ ಮೌನ ರೋದನೆಯನ್ನು ಮುಖಭಾವದಲ್ಲಿ ವ್ಯಕ್ತಪಡಿಸಿದರು. ಇದೀಗ ಸುದೀಪ್, ಮಹೇಶ್ ಬಾಬು, ಅಲ್ಲು ಅರ್ಜುನ್, ತಮಿಳು ವಿಜಯ್, ರಣಧೀರ್ ಕಪೂರ್ ಮುಂತಾದವರು ಸಾವು ಸಹಜ ಕ್ರಿಯೆ , ಸಾವಿನ ನಂತರದ ನೋವನ್ನು ಹೆಚ್ಚು ತೋರ್ಪಡಿಸುವುದಕ್ಕಿಂತ ಬದುಕಿರುವಾಗ ತಾವು ತಮ್ಮ ಪ್ರೀತಿ ಪಾತ್ರರಿಗೆ ತೋರಿಸುವ ನಮ್ಮ ಜವಾಬ್ದಾರಿ ಮುಖ್ಯವಾಗಿರುತ್ತದೆ. ಅದು ಸರಿಯಾಗಿದ್ದಲ್ಲಿ ಸಾವಿನ ತೀವ್ರತೆ ನಮಗೆ ಅಷ್ಟಾಗಿ ಕಾಡುವುದಿಲ್ಲ ಎಂಬ ಅರ್ಥದಲ್ಲಿ ಭಾವನೆಗಳನ್ನು ನಿಯಂತ್ರಿಸುವುದನ್ನು ಕಾಣಬಹುದು…….

ಹಾಗೆಯೇ ಪ್ರೀತಿ, ಪ್ರೇಮ ರಸಿಕತೆಯ ದೃಶ್ಯಗಳಲ್ಲಿ ರಾಜ್ ಕುಮಾರ್, ಎನ್ ಟಿ ಆರ್, ಎಂ ಜಿ ಆರ್, ಮೋಹನ್ ಲಾಲ್, ರಾಜೇಶ್ ಖನ್ನ ಮುಂತಾದವರು ವ್ಯಕ್ತಪಡಿಸುವ ಭಾವನೆಗಳಿಗೂ ಶಾರುಕ್ ಖಾನ್, ಅಜಿತ್, ವಿಕ್ರಂ, ಪ್ರಭಾಸ್ ಮುಂತಾದ ನಟರ ಕಿಲ್ಲಿಂಗ್ ದೃಷ್ಟಿಗೂ ಬಹಳಷ್ಟು ವ್ಯತ್ಯಾಸ ಗಮನಿಸಬಹುದು….

ಇನ್ನೂ ಮುಂದುವರಿದು ಯಶ್, ವಿಜಯ್, ದುಲ್ಷನ್, ನಾಗ ಚೈತನ್ಯ ಮುಂತಾದವರು ಹಾಸ್ಯ ಮತ್ತು ತಿರಸ್ಕಾರದಿಂದಲೇ ತೀವ್ರ ಪ್ರೀತಿ ವ್ಯಕ್ತಪಡಿಸುವ ರೀತಿ ನಮ್ಮ ಯುವ ಪ್ರೇಮಿಗಳ ಭಾವನೆಯ ಪ್ರತಿಬಿಂಬದಂತೆಯೇ ಇದೆ….

ಇನ್ನು ಸಂಪೂರ್ಣ ತಲೆಗೆ ಸೆರಗು ಹೊದ್ದು, ಕಾಸಿನಗಲ ಕುಂಕುಮವಿಟ್ಟು ಗಂಡಸನ್ನು ನೇರವಾಗಿ ದೃಷ್ಟಿಸಿಯೂ ನೋಡದ ಅಂದಿನ ಕಾಲದ ಮಹಿಳಾ ಪಾತ್ರಧಾರಿಗಳಿಗೂ – ಒಳ ಉಡುಪು ಕಾಣುವ ಮತ್ತು ಅದನ್ನು ಉದ್ದೇಶಪೂರ್ವಕವಾಗಿ ಪ್ರದರ್ಶಿಸಲೇ ಹೊಸ ಹೊಸ ಫ್ಯಾಷನ್ ಟೆಕ್ನಾಲಜಿಯ ಮೊರೆ ಹೋಗಿ ಅದನ್ನೇ ಅಭಿನಯವೆಂದು ಭಾವಿಸುವ ಮಟ್ಟದ ಬದಲಾವಣೆ ಇಂದಿನ ನಟಿಯರಲ್ಲಿ ಕಾಣಬಹುದು…..

ಇದು ಮಹಿಳಾ ಪಾತ್ರಗಳ ಒಂದು ಮುಖವಾದರೆ ಪುರುಷ ಸಾಮ್ರಾಜ್ಯದ ಒಳನುಗ್ಗಿ ಅದನ್ನು ತನ್ನ ಪ್ರತಿಭೆ, ಧೈರ್ಯ, ಚಾಕಚಕ್ಯತೆಯಿಂದ ಗಂಡಸನ್ನೇ ತನ್ನ ಅಡಿಯಾಳಾಗಿ ಮಾಡಿಕೊಳ್ಳುವ ಕೆಚ್ಚೆದೆಯ ಪಾತ್ರಗಳ ಇನ್ನೊಂದು ಮುಖ ಕೂಡ ಅನಾವರಣಗೊಳ್ಳುತ್ತಿದೆ.
ಅಂದಿನ ಪಂಡರೀಬಾಯಿಗೂ – ಇಂದಿನ ರಶ್ಮಿಕಾ ಮಂದಣ್ಣವರೆಗೂ – ಅಂದಿನ ವಹಿದಾ ರೆಹಮಾನ್ ಗೂ – ಇಂದಿನ ಶ್ರದ್ಧಾ ಕಪೂರ್ ಗೂ ಇರಬಹುದಾದ ಅಜಗಜಾಂತರ ವ್ಯತ್ಯಾಸ ಸ್ಪಷ್ಟವಾಗಿ ಗುರುತಿಸಬಹುದು…….

ಹೀಗೆ ಸಿನಿಮಾ ನಮ್ಮ ವ್ಯವಸ್ಥೆಯ ಭಾಗವಾಗಿ ನಮ್ಮೊಂದಿಗೆ ಚಲಿಸುತ್ತಿರುವುದು ಮನರಂಜನೆಯನ್ನೂ ಮೀರಿದ ಅರ್ಥ ಮೂಡಿಸುತ್ತದೆ.
ಚಿತ್ರರಂಗವೆಂಬ ಸಾಗರದಲ್ಲಿ ಒಂದು ಬೊಗಸೆ ನೀರನ್ನು ಕೈಯಲ್ಲಿ ಹಿಡಿದು ಅದರ ರೂಪ ವರ್ಣಿಸಿದ್ದೇನೆ. ಇನ್ನೂ ಅರಿಯಲಾಗದ ಅಸಂಖ್ಯ ವಿಷಯಗಳನ್ನು ನಿಮ್ಮ ಆಯ್ಕೆ, ವಿವೇಚನೆಗೆ ಬಿಡುತ್ತಾ….

ಮಾನವೀಯ ಮೌಲ್ಯಗಳ ಪುನರುತ್ಥಾನದ ಮನಸ್ಸುಗಳ ಅಂತರಂಗದ ಚಳುವಳಿ ಕೇವಲ ಸಾಹಿತ್ಯ, ಸಂಗೀತ, ವಿಜ್ಞಾನ, ಕ್ರೀಡೆ, ರಾಜಕೀಯ, ಸಮಾಜ, ಆಡಳಿತ, ಧರ್ಮ, ಉದ್ಯಮ, ಸೈದಾಂತಿಕ ನಿಲುವುಗಳು ಇಷ್ಟಕ್ಕೇ ಸೀಮಿತವಾಗಬಾರದು. ವಾಸ್ತವದಲ್ಲಿ ಸಿನಿಮಾ, ಧಾರವಾಹಿ, ರಿಯಾಲಿಟಿ ಶೋಗಳ ಪ್ರಪಂಚ ಕೂಡ ಜನರ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ತೀರಾ ಸಂಪ್ರದಾಯವಾದಿಗಳು ಅಥವಾ ಬುದ್ಧಿಜೀವಿಗಳು ಇದನ್ನು ನಿರ್ಲಕ್ಷಿಸಿದರೆ ವಾಸ್ತವದಿಂದ ದೂರ ಸರಿದಂತೆ ಆಗುತ್ತದೆ. ಈ ಬಗ್ಗೆಯೂ ನಾವು ಆಗಾಗ ಒಂದಷ್ಟು ಆತ್ಮಾವಲೋಕನ ಮಾಡಿಕೊಂಡು ವಾಸ್ತವದ ಬಗ್ಗೆ ಗಮನಹರಿಸಬೇಕಾಗುತ್ತದೆ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!