ಕ್ಷಮಿಸು ರಾಮ ಎಂಬ ದೇವರೇ,
ಕ್ಷಮಿಸು ಅಲ್ಲಾ ಎಂಬ ದೇವರೇ,
ಕ್ಷಮಿಸು ಯೇಸು ಎಂಬ ದೇವರೇ,….
ಕ್ಷಮಿಸು ಕೃಷ್ಣಾ, ಪೈಗಂಬರ್, ಜೀಸಸ್…..
ನೀವು ಸೃಷ್ಟಿಸಿದ್ದು ಅಥವಾ ನಿಮ್ಮನ್ನು ಸೃಷ್ಟಿಸಿದ್ದು ಮನುಷ್ಯರಲ್ಲ ರಾಕ್ಷಸರು….
ಗಾಂಧಿ ಎಂಬ ಅಹಿಂಸಾವಾದಿ,
ಅಂಬೇಡ್ಕರ್ ಎಂಬ ಮಾನವತಾವಾದಿ,
ಬಸವಣ್ಣನೆಂಬ ಸಮಾನತಾವಾದಿ,
ಹುಟ್ಟಿದ ನೆಲದಲ್ಲಿ ನಾವು ಬೆತ್ತಲಾಗುತ್ತಿದ್ದೇವೆ…..
ಯಾವುದೇ ರೀತಿಯ ಹಿಂಸೆಯನ್ನು ನೇರವಾಗಿ ಖಂಡಿಸಲೇಬೇಕು. ಹಾಗೆಯೇ ಹಿಂಸೆಗೆ ಪ್ರಚೋದಿಸುವವರನ್ನು ಸಹ……..
ಭಾರತೀಯ ಸಮಾಜದಲ್ಲಿ ಧಾರ್ಮಿಕ ವಿಷ ಬೀಜ ಬಿತ್ತಿಯಾಗಿದೆ. ಇನ್ನು ಅದರ ಫಲವನ್ನು ಅನುಭವಿಸಲು ಸಿದ್ದರಾಗಬೇಕಿದೆ.
ಒಂದು ಸಮೂಹ ವಿವೇಚನೆ ಇಲ್ಲದೇ ಉದ್ದೇಶ ಪೂರ್ವಕವಾಗಿ ಮತ್ತೊಂದು ಸಮೂಹವನ್ನು ಪ್ರಚೋದಿಸುತ್ತದೆ, ಇನ್ನೊಂದು ಸಮೂಹ ವಿವೇಚನೆ ಇಲ್ಲದೇ ಅದನ್ನು ಪ್ರತಿಭಟಿಸುತ್ತದೆ. ಎರಡೂ ಸಮೂಹಗಳಿಗೆ ತಾಳ್ಮೆ ಮತ್ತು ಜವಾಬ್ದಾರಿ ಇಲ್ಲವಾಗಿದೆ.
ವಾಸ್ತವ ತುಂಬಾ ಕಠೋರವಾಗಿದೆ. ಸಾಮಾನ್ಯ ಜನರಾದ ನಾವು ಹೆಚ್ಚು ಮುಕ್ತವಾಗಿ ತುಂಬಾ ಪ್ರಾಮಾಣಿಕವಾಗಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತೇವೆ. ಆದರೆ ರಾಜಕೀಯ ಮತ್ತು ಧಾರ್ಮಿಕ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಅತ್ಯಂತ ತಂತ್ರಗಾರಿಕೆಯಿಂದ ಮಾತನಾಡುತ್ತಾರೆ. ಮೇಲ್ನೋಟಕ್ಕೆ ಅವರು ನಮ್ಮ ಧರ್ಮ ಮತ್ತು ದೇಶದ ರಕ್ಷಕರಂತೆ ಕಾಣುತ್ತಾರೆ. ಆದರೆ ವಾಸ್ತವವಾಗಿ ಅವರ ಮನಸ್ಸುಗಳು ವಿಷವಾಗಿರುತ್ತವೆ. ಪ್ರೀತಿಯ ಹೆಸರಲ್ಲಿ ದ್ವೇಷ, ಶಾಂತಿಯ ಹೆಸರಲ್ಲಿ ಹಿಂಸೆ, ಧರ್ಮದ ಹೆಸರಲ್ಲಿ ಕೊಲೆಗಳನ್ನು ಸಮರ್ಥಿಸುತ್ತಾರೆ ಮತ್ತು ಪ್ರಚೋದಿಸುತ್ತಾರೆ.
ಹಿಂದುಗಳು ಎನ್ನುವ ಅಭಿಮಾನಿ ಬಳಗದವರಲ್ಲಿ ಒಂದು ವಿನಯ ಪೂರ್ವಕ ಮನವಿ…………
ಈಗಿನ ಭಾರತದಲ್ಲಿ ವಾಸಿಸುತ್ತಿರುವ ಸುಮಾರು 20 ಕೋಟಿ ಮುಸ್ಲಿಂ ಬಾಂಧವರು ಸ್ವಂತ ನಮ್ಮ ಒಡಹುಟ್ಟಿದವರು – ರಕ್ತ ಸಂಬಂಧಿಗಳು. ಯಾವುದೋ ಕಾರಣದಿಂದ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದಾರೆ. ಅದರಲ್ಲಿ ಗಾಢವಾದ ನಂಬಿಕೆಯುಳ್ಳವರಾಗಿದ್ದಾರೆ. ಅವರನ್ನು ಯಾವ ಕಾರಣಕ್ಕೂ ಎರಡನೇ ದರ್ಜೆಯ ಪ್ರಜೆಗಳು ಎಂದು ಭಾವಿಸಬಾರದು. ಈ ನೆಲದ ಮೇಲೆ ಅವರಿಗೂ ಸಮಾನ ಹಕ್ಕಿದೆ. ಹಿಂದೆ ರಾಜಪ್ರಭುತ್ವದ ಕಾಲದಲ್ಲಿ ಒಂದು ವೇಳೆ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದರೆ ಪುನಃ ಅದನ್ನು ಕೆಡವಿ ಮಂದಿರ ನಿರ್ಮಿಸಲು ಪ್ರಯತ್ನಿಸಬಾರದು. ದೇವನೊಬ್ಬ ನಾಮ ಹಲವು ಎಂಬುದು ನಿಮ್ಮ ನಂಬಿಕೆಯಾಗಿದ್ದರೆ ಅದಕ್ಕೂ ಒಂದು ನಮಸ್ಕಾರ ಹಾಕಿ.
ಹೌದು ಮುಸ್ಲಿಮರಲ್ಲಿ ಅತಿ ಎನಿಸುವಷ್ಟು ಧಾರ್ಮಿಕ ಅಂಧ ಶ್ರದ್ಧೆ ಇದೆ. ಅದನ್ನು ನಿಧಾನವಾಗಿ ಹೋಗಲಾಡಿಸಲು ಪ್ರಯತ್ನಿಸಬೇಕು. ನಾವು ಪ್ರೀತಿ ತೋರಿಸಿದರೆ ಖಂಡಿತ ಪ್ರತಿ ಪ್ರೀತಿ ಸಿಗುತ್ತದೆ. ಆದರೆ ಆ ಪ್ರೀತಿ ಪ್ರಾಮಾಣಿಕವಾಗಿರಬೇಕು. ಬಹಳ ಹಿಂದೆ ನಮ್ಮಲ್ಲಿಯೂ ಸತಿಸಹಗಮನ ಬಾಲ್ಯವಿವಾಹ ಅಸ್ಪೃಶ್ಯತೆ ಮುಂತಾದ ಆಚರಣೆಗಳು ಜಾರಿಯಲ್ಲಿದ್ದವು. ಈಗ ಅವು ತುಂಬಾ ಕಡಿಮೆಯಾಗಿವೆ ಮತ್ತು ಕೆಲವು ನಶಿಸಿ ಹೋಗಿವೆ. ಹಾಗೆಯೇ ವಿಶ್ವದ ಅತಿಹೆಚ್ಚು ಹಿಂಸೆ ನಡೆದಿರುವುದು ಕ್ರಿಶ್ಚಿಯನ್ ಧರ್ಮದ ಯುರೋಪಿಯನ್ ದೇಶಗಳಲ್ಲಿ. ಆದರೆ ಈಗ ಆ ದೇಶಗಳು ಸ್ವಲ್ಪ ನೆಮ್ಮದಿಯಿಂದ ಇವೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಹ ಹಿಂಸೆ ನಡೆಯತ್ತಲೇ ಇದೆ. ಮುಂದೆ ಅಲ್ಲಿಯೂ ಶಾಂತಿ ನೆಲೆಸಬಹುದು.
ಮುಸ್ಲಿಮರಲ್ಲಿ ಕೂಡಾ ಆಧುನಿಕತೆ ಬೆಳೆದಂತೆ ಖಂಡಿತ ವೈಜ್ಞಾನಿಕ ಮತ್ತು ವೈಚಾರಿಕ ಪ್ರಜ್ಞೆ ಜಾಗೃತವಾಗಿ ಸಾಕಷ್ಟು ಸುಧಾರಣೆ ಆಗುತ್ತದೆ. ಆದರೆ ಅದಕ್ಕೆ ಪೂರಕವಾಗಿ ತಾಳ್ಮೆಯಿಂದ ಅವಕಾಶ ಕೊಡಬೇಕು. ಇಲ್ಲ ಸಲ್ಲದ ತಪ್ಪು ಮಾಹಿತಿ ಮತ್ತು ಭವಿಷ್ಯದ ಭಯದಿಂದ ಮತ್ತು ರಾಜಕಾರಣಿಗಳ ಚಿತಾವಣೆಯಿಂದ ಅವರ ಮೇಲೆ ಅಪನಂಬಿಕೆ ಬೆಳೆಸಿಕೊಳ್ಳಬಾರದು. ಮುಸ್ಲಿಂ ಮುಖಂಡರೇ ಒಪ್ಪಿಕೊಳ್ಳುವಂತೆ ಅವರಲ್ಲಿ ಸುಧಾರಣೆ ಸ್ವಲ್ಪ ನಿಧಾನ. ಈಗ ನಾವು ತಾಳ್ಮೆಯಿಂದ ಇಲ್ಲದಿದ್ದರೆ ಭಾರತ ದೇಶದ ಸಮಗ್ರತೆಗೆ ಖಂಡಿತ ಅಪಾಯವಿದೆ. ದೇಶ ಕಟ್ಟುವ ಕ್ರಿಯೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳೋಣ. ಮುಸ್ಲಿಂ ದ್ವೇಷ ಭಾರತದ ಸಮಗ್ರ ಅಭಿವೃದ್ಧಿಗೆ ಮತ್ತು ಅಸ್ತಿತ್ವಕ್ಕೆ ಮಾರಕ ಎಂಬುದನ್ನು ಮರೆಯದಿರೋಣ. ಮುಸ್ಲಿಮರಲ್ಲಿಯೂ ಕೆಲವರನ್ನು ಹೊರತುಪಡಿಸಿ ಬಹುತೇಕ ಜನ ಅತ್ಯಂತ ಒಳ್ಳೆಯವರು ದೇಶ ಪ್ರೇಮಿಗಳು ಮಾನವೀಯ ಗುಣದವರು ಪ್ರಗತಿಪರರು ಇದ್ದಾರೆ. ಒಮ್ಮೆ ಬದಲಾವಣೆ ಪ್ರಾರಂಭವಾದರೆ ಅವರು ಮುನ್ನಲೆಗೆ ಬರುತ್ತಾರೆ. ಇಲ್ಲಿ ನಮಗೆ ಸಂಯಮ ಬಹಳ ಮುಖ್ಯ.
ಮುಸ್ಲಿಮರಲ್ಲಿ ಬದಲಾವಣೆ ಬೇಕು ಎಂದು ಭಾವಿಸುವವರು ದಯವಿಟ್ಟು ಪ್ರಾಮಾಣಿಕವಾಗಿ ಪ್ರೀತಿಯಿಂದ ಪ್ರಯತ್ನಿಸಿ.
ಮುಸ್ಲಿಂ ಸಮುದಾಯದವರಲ್ಲಿ ಒಂದು ಆತ್ಮೀಯ ಮನವಿ……
ನೀವು ಭಾವಿಸಿದಂತೆ ಹಿಂದೂಗಳೆಲ್ಲಾ ನಿಮ್ಮ ವಿರೋಧಿಗಳಲ್ಲ. ಬಹುಶಃ ಸುಮಾರು ಅರ್ಧಕ್ಕೂ ಹೆಚ್ಚು ಜನ ನಿಮ್ಮ ಪರವಾಗಿ ಧ್ವನಿ ಎತ್ತುವುದನ್ನು ನೀವು ಗಮನಿಸಿರಬಹುದು. ಈ ಎಪ್ಪತ್ತೈದು ವರ್ಷಗಳಲ್ಲಿ ಕೆಲವು ರಾಜಕೀಯ ಕಾರಣದ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಬಹುತೇಕ ಮುಸ್ಲಿಂ ಸಮುದಾಯದವರು ಭಾರತ ಸಂವಿಧಾನದ ಎಲ್ಲಾ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಪಡೆದಿದ್ದಾರೆ..
ವಿಶ್ವದ ಇತರೆ ರಾಷ್ಟ್ರಗಳಿಗಿಂತ ಹೆಚ್ಚು ರಕ್ಷಣೆಯಲ್ಲಿದ್ದಾರೆ.
ಆದರೆ ಬಹುಮುಖ್ಯವಾಗಿ ಧಾರ್ಮಿಕ ನಂಬಿಕೆಗಳ ವಿಷಯದಲ್ಲಿ ಬಹುಬೇಗ ಪ್ರಚೋದನೆಗೆ ಒಳಗಾಗುವ ಸಾಮುದಾಯಿಕ ವರ್ತನೆಯ ಬಗ್ಗೆ ಸಾಕಷ್ಟು ಜನರಿಗೆ ಅಸಮಾಧಾನವಿದೆ. ಖುರಾನ್ ಮತ್ತು ಪ್ರವಾದಿಯವರ ಬಗ್ಗೆ ಯಾವುದೇ ಚರ್ಚೆ ಅಥವಾ ಟೀಕೆಗಳನ್ನು ಸಹಿಸುವುದೇ ಇಲ್ಲ. ಇದು ಅಷ್ಟು ಒಳ್ಳೆಯ ನಡೆಯಲ್ಲ. ಕರ್ಮಠ ಪುರೋಹಿತ ಶಾಹಿ ಆಚರಣೆಗಳನ್ನು ವಿರೋಧಿಸುವ ಮನಸ್ಸುಗಳು ಕರ್ಮಠ ಇಸ್ಲಾಂ ಆಚರಣೆಗಳನ್ನು ವಿರೋಧಿಸಲೇ ಬೇಕಾಗುತ್ತದೆ. ಸಮಾಜ ಸಾಕಷ್ಟು ಮುಂದುವರಿದಿದೆ. ಕೆಲವು ನಾಗರಿಕ ಬದಲಾವಣೆಗಳನ್ನು ಒಪ್ಪಿಕೊಳ್ಳಲೇಬೇಕು.
ಗೆಳೆಯರೆ ಒಂದು ವೇಳೆ ವ್ಯಕ್ತಿಯೊಬ್ಬ ಉದ್ದೇಶ ಪೂರ್ವಕವಾಗಿ ಪ್ರವಾದಿಯನ್ನು ಅಥವಾ ಇಸ್ಲಾಂ ಧರ್ಮವನ್ನು ಅವಹೇಳನ ಮಾಡಿದರೆ ಅದು ಆ ವ್ಯಕ್ತಿಯ ಯೋಗ್ಯತೆಯನ್ನು ತೋರಿಸುತ್ತದೆಯೇ ಹೊರತು ಪ್ರವಾದಿಯವರ ಸಾಮರ್ಥ್ಯವನ್ನಲ್ಲ. ನಿಮಗೆ ನಿಮ್ಮ ದೇವರ ಮೇಲೆ ಸಂಪೂರ್ಣ ನಂಬಿಕೆ ಇದ್ದರೆ ಆ ದೇವರೇ ಅವರನ್ನು ಶಿಕ್ಷಿಸಲಿ ಅಥವಾ ಕಾನೂನು ತನ್ನ ಕ್ರಮ ಕೈಗೊಳ್ಳಲಿ. ಮನುಷ್ಯರಾದ ನಾವು ಈ ಭಾರತದ ನೆಲದಲ್ಲಿ ಶಿಕ್ಷಿಸುವುದು ದೊಡ್ಡ ತಪ್ಪು
ಭಾರತ ಧರ್ಮದ ಆಧಾರದಲ್ಲಿ ವಿಭಜನೆಯಾದಾಗ, ಪಾಕಿಸ್ತಾನದಲ್ಲಿ ಹಿಂದೂಗಳ ಮಾರಣಹೋಮವಾದಾಗಲೂ ಇಲ್ಲಿನ ಮುಸ್ಲಿಮರು ಇಚ್ವಿಸಿದರೆ ಅವರು ಇಲ್ಲೇ ಇರಲಿ. ಅವರಿಗೆ ಸಂಪೂರ್ಣ ರಕ್ಷಣೆ ಮತ್ತು ಸಮಾನ ಹಕ್ಕುಗಳನ್ನು ನೀಡುತ್ತೇವೆ ಎಂದು ಸಾರಿ ಹಾಗೆಯೇ ನಡೆದುಕೊಂಡ ದೇವಮಾನವ ಮಹಾತ್ಮ ಗಾಂಧಿ ಹುಟ್ಟಿದ ನಾಡು ಇದು. ಎಲ್ಲಾ ಧರ್ಮಗಳಿಗೆ ಸಂವಿಧಾನಾತ್ಮಕವಾಗಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ನೀಡಿದ ಮಹಾ ಮಾನವತಾವಾದಿ ಅಂಬೇಡ್ಕರ್ ಜನ್ಮ ನೀಡಿದ ನೆಲವಿದು.
ಮುಸ್ಲಿಂ ಸಹೋದರರೆ ನಿಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ಈ ದೇಶದ ಬಹುಸಂಖ್ಯಾತ ಮಾನವೀಯ ಮನಸ್ಸುಗಳು ನಿಮ್ಮ ಪರವಾಗಿ ನಿಲ್ಲುತ್ತವೆ ಎಂಬುದನ್ನು ಮರೆಯದಿರಿ. ಯಾವ ಕಾರಣಕ್ಕೂ ನಿಮ್ಮನ್ನು ಬಿಟ್ಟುಕೊಡುವುದಿಲ್ಲ.
ಯಾವುದೋ ಒಂದು ಮಾಧ್ಯಮದ ಅಥವಾ ಸಾಮಾಜಿಕ ಜಾಲತಾಣಗಳ ಯಾವುದೋ ಒಂದು ಪ್ರಚೋದನಾತ್ಮಕ ಮಾತು ಅಥವಾ ದೃಶ್ಯಗಳಿಗೆ ಇಷ್ಟೊಂದು ದೊಡ್ಡ ಪ್ರತಿಕ್ರಿಯೆಯ ಅವಶ್ಯಕತೆ ಇಲ್ಲ.
ಹಿಂದೂಗಳ ಮನಸ್ಸನ್ನು ಪ್ರೀತಿಯಿಂದ ಗೆಲ್ಲಲು ಪ್ರಯತ್ನಿಸಿ. ಅವರಲ್ಲಿ ಮತ್ತಷ್ಟು ವಿಶ್ವಾಸ ಮೂಡಿಸಲು ಕಾರ್ಯಯೋಜನೆ ರೂಪಿಸಿ.
ಹಿಂದೂ ಮುಸ್ಲಿಂ ಎರಡೂ ಸಮುದಾಯಗಳ ಅತಿರೇಕದ ವರ್ತನೆಯ ಜನರೇ ದಯವಿಟ್ಟು ಅರ್ಥಮಾಡಿಕೊಳ್ಳಿ ದೇವರು ಧರ್ಮಗಳಿಗಿಂತ ನಮ್ಮ ನಿಮ್ಮ ನಡುವೆ ಇರುವ ಮನುಷ್ಯರಿಗೆ ಹೆಚ್ಚು ಮಹತ್ವ ಕೊಡುವುದೇ ನಿಜವಾದ ದೈವಿಕ ಪ್ರಜ್ಞೆ ಮತ್ತು ಧಾರ್ಮಿಕ ಆಚರಣೆ. ದೇವರಿಗಾಗಿ ಮನುಷ್ಯರನ್ನು ಬಲಿಕೊಡಬೇಡಿ. ದಯವೇ ಧರ್ಮದ ಮೂಲ ಎಂಬ ಬಸವಣ್ಣನವರನ್ನು ಸದಾ ಮನಸ್ಸಿನಲ್ಲಿ ಇಟ್ಟುಕೊಳ್ಳಿ.
ಇದು ಆಧುನಿಕ ಭಾರತ. ಇಲ್ಲಿ ಗಣರಾಜ್ಯೋತ್ಸವ, ಯುಗಾದಿ, ರಂಜಾನ್, ಸ್ವಾತಂತ್ರ್ಯೋತ್ಸವ, ಕ್ರಿಸ್ಮಸ್, ಬಕ್ರೀದ್, ದೀಪಾವಳಿ ರಾಷ್ಟ್ರೀಯ ಹಬ್ಬಗಳು. ಎಲ್ಲರೂ ಸೇರಿ ಒಟ್ಟಾಗಿ ಸಂಭ್ರಮದಿಂದ ಆಚರಿಸೋಣ. ಒಬ್ಬರಿಗೊಬ್ಬರು ಹಂಚಿ ತಿನ್ನೋಣ. ಒಂದು ವೇಳೆ ರಾಮ ಅಲ್ಲಾ ಇದ್ದರೆ ಇದನ್ನು ನೋಡಿ ಸಂತೋಷ ಪಡಲಿ. ಅದು ಬಿಟ್ಟು ಒಬ್ಬರಿಗೊಬ್ಬರು ಕಚ್ಚಾಡಿ ಕೊಂದುಕೊಂಡರೆ ಅಲ್ಲಾ ರಾಮರಿಗೆ ನಿಜವಾಗಿಯೂ ನೋವಾಗುತ್ತದೆ. ನಿಮ್ಮ ಯಾವ ಪೂಜೆ ಪ್ರಾರ್ಥನೆ ನಮಾಜುಗಳಿಗೂ ಬೆಲೆಯೇ ಇರುವುದಿಲ್ಲ.
ದೇವರು ಮೆಚ್ಚುವುದೇ ಆದರೆ ಅದು ಮಾನವೀಯ ಮೌಲ್ಯಗಳಿಗೇ ಹೊರತು ರಾಕ್ಷಸ ಗುಣಗಳಿಗಲ್ಲ. ದಯವಿಟ್ಟು ಕ್ಷಮಾಗುಣಗಳಿಗೆ ಮೊದಲು ಆದ್ಯತೆ ನೀಡಿ. ಶಿಕ್ಷೆಗೆ ಬೇಡ.
ಇದೇ ರಾಮ, ಜೀಸಸ್ ಮತ್ತು ಅಲ್ಲಾರ ಆಶಯ.
ಇದರ ಮೇಲೆ ನಿಮ್ಮಿಷ್ಟ…..
ಬುದ್ದಿ ಇದ್ದವರು ಅನ್ನ ತಿನ್ನುತ್ತಾರೆ, ಇಲ್ಲದಿದ್ದವರು ——+—— ತಿನ್ನುತ್ತಾರೆ. ಕ್ಷಮಿಸಿ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……