Spread the love

ಸಾವಿರಾರು ಸೈನಿಕರ ಶವಗಳನ್ನು ಉಕ್ರೇನ್ ಗೆ ಒಪ್ಪಿಸುತ್ತಿರುವ ರಷ್ಯಾ ಸೈನಿಕರು,

ಸಾವಿರಾರು ರಷ್ಯಾ ಸೈನಿಕರನ್ನು ಕೊಂದಿರುವುದಾಗಿ ಹೇಳುತ್ತಿರುವ ಉಕ್ರೇನ್ ಸೈನಿಕರು,

ಮತ್ತಷ್ಟು ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಉಕ್ರೇನ್ ಗೆ ನೀಡಿ ಯುದ್ದಕ್ಕೆ ಪ್ರಚೋದಿಸುತ್ತಿರುವ ಅಮೆರಿಕ
ನೇತೃತ್ವದ ನ್ಯಾಟೋ,

ನಮ್ಮ ತಂಟೆಗೆ ಬಂದರೆ ಅಣುಯುದ್ದಕ್ಕೂ ಸಿದ್ದ ಎಂದು ಬೆದರಿಸುತ್ತಿರುವ ರಷ್ಯಾ,

ವಿಶ್ವಸಂಸ್ಥೆಯ ಅಧ್ಯಕ್ಷ, ವ್ಯಾಟಿಕನ್ ಸಿಟಿಯ ಪೋಪ್,
ಇಸ್ರೇಲ್ ಭಾರತ ನಾರ್ವೆ ಇಟಲಿ ಚೀನಾ ಕೊರಿಯಾ ಜಪಾನ್‌ ಮುಂತಾದ ದೇಶಗಳ ಕಣ್ಣೊರೆಸುವ ತಂತ್ರ…….

ಉಕ್ರೇನ್ ನ ಬೀದಿ ಬೀದಿಗಳಲ್ಲಿ ಹೆಣದ ರಾಶಿ, ಗಾಯಾಳುಗಳ ನರಳಾಟ, ಹಸಿವಿನಿಂದ ಪರದಾಟ, ವಲಸೆಯಿಂದ ಭವಿಷ್ಯದ ಆತಂಕ…

ಮತ್ತಷ್ಟು ಕ್ರೌರ್ಯ ಮೆರೆಯುತ್ತಿರುವ ರಷ್ಯಾ, ಹಠ ಬಿಡದ ಉಕ್ರೇನ್, ಬೆಂಕಿಗೆ ತುಪ್ಪ ಸುರಿಯುತ್ತಿರುವ ಅಮೆರಿಕ……..

ಒಂದೇ ಎರಡೇ ಇವರೇನು ಮನುಷ್ಯರೋ ರಾಕ್ಷಸರೋ. ನೂರು ದಿನಗಳ ನಂತರವೂ ಸಹ ಇಡೀ ವಿಶ್ವದ ನಾಯಕರು ಈ ವಿನಾಶವನ್ನು ತಡೆಯಲು‌ ಸಾಧ್ಯವಾಗುತ್ತಿಲ್ಲ.

ಸೈನಿಕರೆಂದರೆ ಅತ್ಯಂತ ಆರೋಗ್ಯವಂತ ಮನುಷ್ಯರು. ತಾಯಿ ಒಡಲಿನ ಕುಡಿಗಳು. ಕುರಿ ಕೋಳಿಗಳಂತೆ ಮಾರಾಟದ ಪ್ರಾಣಿಗಳು ಅಲ್ಲ ಅಥವಾ ಅವುಗಳಂತೆ ಹಸಿವು ನೀಗಿಸುವ ಆಹಾರವಾಗುವ ಜೀವಿಗಳು ಅಲ್ಲ. ಸುಮ್ಮನೆ ಯಾವುದೋ ಪ್ರತಿಷ್ಟೆಗಾಗಿ ಅಥವಾ ಭವಿಷ್ಯದ ಭಯದಿಂದ ಅಥವಾ ಸಂಪರ್ಕದ ಕೊರತೆಯಿಂದ ಅಥವಾ ಮತ್ಯಾರದೋ ಚಿತಾವಣೆಯಿಂದ ಸಾವಿರ ಸಾವಿರ ಬಲಿಷ್ಠ ಜನರು ನಮ್ಮ ಮುಂದೆಯೇ ಸಾಯುತ್ತಿದ್ದಾರೆ.

ಇರುವುದೊಂದೇ ಭೂಮಿ. ಸುಮಾರು 750 ಕೋಟಿ ಜನ ವಾಸ ಮಾಡಬೇಕು. ಜೊತೆಗೆ ಗಾಳಿ ನೀರು ಆಹಾರ ಶುದ್ಧವಾಗಿ ಇಟ್ಟುಕೊಳ್ಳಬೇಕು. ಈಗ ನೋಡಿದರೆ ಅತ್ಯಂತ ಅಪಾಯಕಾರಿ ವಿಷಯುಕ್ತ ವಿನಾಶಕಾರಿ ಆಯುಧಗಳಿಂದ ಭೂಮಿಯ ಫಲವತ್ತತೆಯನ್ನೇ ನಾಶ ಮಾಡುತ್ತಿದ್ದಾರೆ. ಸಮುದ್ರಕ್ಕೆ, ಭೂಮಿಗೆ, ಗಾಳಿಗೆ ರಾಸಾಯನಿಕಗಳನ್ನು ಬೆರೆಸಿದರೆ ಮುಂದೆ ಅದನ್ನು ಶುದ್ಧ ಮಾಡುವುದು ಸಾಧ್ಯವೇ,…

ಈಗಾಗಲೇ ಅನೇಕ ರೀತಿಯ ಕೆಟ್ಟ ವೈರಸ್ ಗಳು ಬೇರೆ ಬೇರೆ ರೂಪದಲ್ಲಿ ದಾಳಿ ಮಾಡುತ್ತಿವೆ. ಅದರ ನಡುವೆ ಈ ಸ್ವಯಂಕೃತ ಅಪರಾಧ ಬೇರೆ. ನಾನೇನಾದರೂ ಸೂಪರ್ ಮ್ಯಾನ್ ಆಗಿದ್ದರೆ ಪುಟಿನ್ ಬೈಡೆನ್ ಝಲೋನ್ಸ್ಕಿಯನ್ನು ಅಪಹರಿಸಿ ನಮ್ಮ ಬಳ್ಳಾರಿಯ ಕಬ್ಬಿಣದ ಅದಿರಿನ ಗಣಿಗಳಲ್ಲಿ ಬೇಸಿಗೆಯ ಸಮಯದಲ್ಲಿ ಕೂಲಿ ಕೆಲಸ ಮಾಡಲು ಬಿಡುತ್ತಿದ್ದೆ. ಆಗ ಅವರಿಗೆ ಬದುಕಿನ ಮಹತ್ವ ಅರ್ಥವಾಗುತ್ತಿತ್ತು.

ನಾವೆಲ್ಲರೂ ವಿಶ್ವ ಪರಿಸರ ದಿನ ಆಚರಿಸುವ ದುಸ್ಥಿತಿಯಲ್ಲಿ ಇರುವಾಗ ಈ ಪಾಪಿಗಳು ಕೆಮಿಕಲ್ ವಾರ್ ಮಾಡುತ್ತಿದ್ದಾರೆ. ಈಗಾಗಲೇ ಪರಿಸರದ ಪರಿಣಾಮದಿಂದಾಗಿ……

ತಲೆ ತಿರುಗುತ್ತಿದೆ ಕೆಟ್ಟ ಬಿಸಿಲಿನ ಝಳಕ್ಕೆ ಸಿಲುಕಿ,

ಕಣ್ಣು ಉರಿಯುತ್ತಿದೆ ಧೂಳು ತುಂಬಿದ ಗಾಳಿಗೆ ಸಿಲುಕಿ,

ಉಸಿರಾಡುವುದೂ ಕಷ್ಟವಾಗುತ್ತಿದೆ ವಿಷಪೂರಿತ ಗಾಳಿಗೆ ಸಿಲುಕಿ,

ಕಿವಿ ನೋಯುತ್ತಿದೆ ಕರ್ಕಶ ಶಬ್ದಕ್ಕೆ ಸಿಲುಕಿ,

ಬಾಯಿ ಹುಣ್ಣಾಗಿದೆ ಕಲುಷಿತ ನೀರಿಗೆ ಸಿಲುಕಿ,

ನಾಲಿಗೆ ಹೆಪ್ಪುಗಟ್ಟಿದೆ ರಾಸಾಯನಿಕ ಬೆರೆಸಿದ ತಂಪು ಪಾನೀಯಕ್ಕೆ ಸಿಲುಕಿ,

ಗಂಟಲು ಕೆಟ್ಟಿದೆ ಮಲಿನ ನೀರಿಗೆ ಸಿಲುಕಿ,

ಹೊಟ್ಟೆ ನೋಯುತ್ತಿದೆ ಕಲಬೆರಕೆ ಆಹಾರಕ್ಕೆ ಸಿಲುಕಿ,

ಪ್ರಕೃತಿ ಪರಿಸರಗಳನ್ನೇ ದೇವರೆಂದು ಹೇಳಿ ಅದರ ಹೃದಯಕ್ಕೆ ಬೆನ್ನಿಗೆ ಚೂರಿ ಹಾಕಿ ಈಗ ಅದಕ್ಕೇ ಹೋಮ ಹವನಗಳನ್ನು ಮಾಡುವ ಈ ಮನುಷ್ಯ ಪ್ರಾಣಿಗೆ ಏನು ಮಾಡುವುದು.

ಪರಿಸರ ನಾಶ ಮಾಡುತ್ತಾ ಪರಿಸರದ ದಿನ ಆಚರಿಸುವ ಆತ್ಮವಂಚಕ ಮನಸ್ಥಿತಿ ನಮ್ಮದು.

ಸಾಮಾನ್ಯ ಜನರಾದ ನಾವು ಅಸಹಾಯಕರಾಗಿದ್ದೇವೆ. ಆದರೆ ವಿಶ್ವದ ಶಾಂತಿ ಪ್ರಿಯ ಮನಸ್ಸುಗಳು ದೊಡ್ಡ ಮಟ್ಟದಲ್ಲಿ ಧ್ವನಿ ಗೂಡಿಸಿದರೆ ಯುದ್ದಕ್ಕೆ ಮುಕ್ತಾಯ ಹಾಡಬಹುದು. ಆ ದಿನಗಳ ನಿರೀಕ್ಷೆಯಲ್ಲಿ………

ಯುದ್ದದ ಭೀಕರತೆಯನ್ನು ಮತ್ತೆ ಮತ್ತೆ ನೆನಪಿಸುತ್ತಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……

error: No Copying!