ಒಂದು ಸಣ್ಣ ಕುತೂಹಲಕ್ಕಾಗಿ ನಿಮ್ಮ ಮುಂದೆ ಕನಸಿನ ರಾಷ್ಟ್ರಗಳ ಪಟ್ಟಿ………
ವಿಶ್ವದಲ್ಲಿ ಸುಮಾರು 200 ದೇಶಗಳಿವೆ. ಅತ್ಯಂತ ಕಡುಬಡತನದ, ಅತ್ಯಂತ ಹೆಚ್ಚು ಹಿಂಸೆಯ, ಅತ್ಯಂತ ಹೆಚ್ಚು ಭ್ರಷ್ಟಾಚಾರದ, ಅತ್ಯಂತ ಹೆಚ್ಚು ಧಾರ್ಮಿಕ ಅಂಧತ್ವದ, ಅತ್ಯಂತ ಹೆಚ್ಚು ಅಸಮಾನತೆಯ, ಅತ್ಯಂತ ಹೆಚ್ಚು ಗುಲಾಮಿತನದ, ಅತ್ಯಂತ ಮಲಿನ ವಾತಾವರಣದ ದೇಶಗಳ ಜೊತೆಗೆ ಅತ್ಯಂತ ಶ್ರೀಮಂತ, ಅತ್ಯಂತ ಪ್ರಾಮಾಣಿಕತೆಯ, ಅತ್ಯಂತ ಸುರಕ್ಷತೆಯ, ಅತ್ಯಂತ ಸ್ವತಂತ್ರದ, ಅತ್ಯಂತ ಶುದ್ಧ ಪರಿಸರದ ಅತ್ಯಂತ ನೆಮ್ಮದಿಯ ದೇಶಗಳು ಸಹ ಇವೆ.
ಆಫ್ರಿಕಾದ ಕೆಲವು ದೇಶಗಳು ಅತ್ಯಂತ ಬಡತನದ, ಮಧ್ಯಪ್ರಾಚ್ಯದ ಕೆಲವು ದೇಶಗಳು ಅತ್ಯಂತ ಹಿಂಸಾತ್ಮಕವಾದ, ಏಷ್ಯಾದ ಕೆಲವು ದೇಶಗಳು ಅತ್ಯಂತ ಅಸಮಾನತೆಯ – ಭ್ರಷ್ಟತೆಯ, ದಕ್ಷಿಣ ಅಮೆರಿಕದ ಕೆಲವು ದೇಶಗಳು ಅತ್ಯಂತ ಮಾದಕ ವ್ಯಸನಗಳ ಬಲೆಯೊಳಗೆ ಸಿಲುಕಿ ನರಳುತ್ತಿವೆ.
ಹಾಗೆಯೇ ಇನ್ನೂ ಕೆಲವು ದೇಶಗಳು ಅತ್ಯಂತ ಆದರ್ಶ ಅಥವಾ ಮಾದರಿಯ ದೇಶಗಳಾಗಿ ನಮ್ಮ ಕಣ್ಣ ಮುಂದಿವೆ. ಅದೇ ಸ್ಕ್ಯಾನ್ಡಿನೋವಿಯಾ ದೇಶಗಳು (Scandinavian country’s )
ನಾರ್ವೆ – ಡೆನ್ಮಾರ್ಕ್ – ಸ್ವೀಡನ್ – ಫಿನ್ಲ್ಯಾಂಡ್ – ಐಸ್ಲ್ಯಾಂಡ್ – ಗ್ರೀನ್ಲೆಂಡ್ – ಫೆರೋರ್ ಐಲ್ಯಾಂಡ್ಸ್ – ಅಲ್ಯಾಂಡ್…. ಜೊತೆಗೆ ಯುರೋಪಿನ ಸ್ವಿಟ್ಜರ್ಲೆಂಡ್, ಆಸ್ಟ್ರಿಯ ಬೆಲ್ಜಿಯಂ ಮುಂತಾದ ಕೆಲವೇ ದೇಶಗಳು.
ಇಲ್ಲಿ ಅತ್ಯಂತ ಕಡಿಮೆ ಭ್ರಷ್ಟಾಚಾರ, ದರೋಡೆ, ಅತ್ಯಾಚಾರ, ಅಸಮಾನತೆ, ಮೋಸ ವಂಚನೆ, ಪ್ರಾಕೃತಿಕ ಸಂಪನ್ಮೂಲಗಳ ದುರುಪಯೋಗ, ಪರಿಸರ ನಾಶ, ಭಯೋತ್ಪಾದನೆ, ಮತಾಂಧತೆ ನಮಗೆ ಮಾದರಿಯಾಗಬೇಕಿದೆ.
ಈ ವ್ಯತ್ಯಾಸಗಳಿಗೆ ಕಾರಣವೇನೆ ಇರಲಿ ಅಂತಿಮವಾಗಿ ಫಲಿತಾಂಶಗಳ ಮೇಲೆಯೇ ನಾವು ಗಮನ ಕೇಂದ್ರೀಕರಿಸಬೇಕು…..
ಅಂದರೆ ಒಂದು ನಾಗರಿಕ ಸಮಾಜದ ಜನರ ಬದುಕಿನಲ್ಲಿ ಸಂತೋಷದ ದಿನಗಳು ಹೆಚ್ಚಾಗಿರಬೇಕು. ದಿನನಿತ್ಯದ ಅವಶ್ಯಕತೆಗಳ ಪೂರೈಕೆ, ದೈಹಿಕ ಮತ್ತು ಮಾನಸಿಕ ದೃಢತೆ, ಶಿಕ್ಷಣ ಆರೋಗ್ಯ ಮತ್ತು ರಕ್ಷಣೆ, ದೇಶ ಮತ್ತು ದೇಶದ ಜನಗಳ ಬಗ್ಗೆ ನಂಬಿಕೆ ಮತ್ತು ಪ್ರೀತಿ ಇವು ಸಾಮಾನ್ಯ ರೀತಿಯಲ್ಲಿ ಇದ್ದರೆ ಅಷ್ಟೇ ಸಾಕು ಬದುಕು ಎಲ್ಲಾ ಏರಿಳಿತಗಳ ನಡುವೆಯೂ ಸಹಜವಾಗಿರುತ್ತದೆ.
ಆದರೆ ಭಾರತದಂತ ನಮ್ಮ ದೇಶದಲ್ಲಿ ಬದುಕೇ ಒಂದು ಸಂಘರ್ಷಮಯ ವಾತಾವರಣದಲ್ಲಿ ಸಾಗುತ್ತದೆ. ಕೆಲವು ಜನರನ್ನು ಹೊರತುಪಡಿಸಿ ಬಹುತೇಕರು ಜೀವನದ ಕೊನೆಯವರೆಗೂ ಹೋರಾಡುತ್ತಲೇ ಇರುತ್ತಾರೆ. ಹಣ ಅಧಿಕಾರ ಆಸ್ತಿ ಇಲ್ಲದವರನ್ನು ಬಿಡಿ ದಿನವೂ ಗೋಳೇ. ಒಂದು ವೇಳೆ ನಿಮ್ಮ ಬಳಿ ಒಂದಷ್ಟು ಉತ್ತಮ ಸೌಕರ್ಯಗಳು ಇದ್ದರು ಆಗಲೂ ನೆಮ್ಮದಿ ಇರುವುದಿಲ್ಲ. ಇನ್ನೇನೋ ಸಮಸ್ಯೆಗಳು ಕಾಡುತ್ತಿರುತ್ತವೆ.
ಮನುಷ್ಯ ಸಂಬಂಧಗಳ ಮುಖವಾಡಗಳು, ವ್ಯಾವಹಾರಿಕ ಜಗತ್ತಿನ ಮೋಸ ಅಥವಾ ಅಪನಂಬಿಕೆಗಳು, ಸಾರ್ವಜನಿಕ ಬದುಕಿನ ಅಸಮಾನತೆ ಮತ್ತು ಭ್ರಷ್ಟಾಚಾರ, ಜಾತಿ ಮತ್ತು ಧಾರ್ಮಿಕ ಶೋಷಣೆಗಳು, ಒಟ್ಟು ತಿಳಿವಳಿಕೆಯ ಕೊರತೆ, ದುಷ್ಟರ ವಿಜೃಂಭಣೆ – ಒಳ್ಳೆಯವರ ಅಸಹಾಯಕತೆ ಎಲ್ಲವೂ ಸೇರಿ ಜೀವನ ಭಾರ ಎನಿಸುತ್ತದೆ.
ಭಾರತದ ಮಟ್ಟಿಗೆ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳು ನಮ್ಮನ್ನು ಬಹುವಾಗಿ ಕಾಡುತ್ತವೆ. ಅದು ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ. ಅದಕ್ಕೆ ಒಂದು ಪರಿಹಾರ…….
ಮಾನವೀಯ ಮೌಲ್ಯಗಳ ಪುನರುತ್ಥಾನ.
ಏಕೆಂದರೆ ಸ್ವಾತಂತ್ರ್ಯ ನಂತರ ಇಲ್ಲಿಯವರೆಗೆ ಭಾರತದ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಆಡಳಿತಾತ್ಮಕ ಸುಧಾರಣೆ ಸಮಾಧಾನಕರವಾಗಿದೆ. ಅನೇಕ ಕೊರತೆಗಳ ನಡುವೆಯೂ ಹೇಗೋ ಬದುಕಬಹುದು. ಆದರೆ ಮಾನವೀಯ ಮೌಲ್ಯಗಳು ಎಲ್ಲಾ ಉತ್ತಮ ಸುಧಾರಣೆಗಳನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಹಣದ ಮುಂದೆ ಇಡೀ ಮನುಷ್ಯ ಸಂಬಂಧಗಳು ಶಿಥಿಲವಾಗಿದೆ. ಅಪನಂಬಿಕೆಗಳು ಪ್ರತಿ ಹೆಜ್ಜೆಯಲ್ಲೂ ಕಾಡುತ್ತಿದೆ. ನೀರು ಆಹಾರ ಗಾಳಿ ಮಲಿನವಾಗಿದೆ.
ಇವುಗಳಲ್ಲಿ ಸುಧಾರಣೆಯಾದಾಗ ಮಾತ್ರ ಭಾರತೀಯರ ನೆಮ್ಮದಿಯ ಮಟ್ಟ ಹೆಚ್ಚಾಗಬಹುದು. ಕೇವಲ ರಸ್ತೆಗಳ ಅಭಿವೃದ್ಧಿ, ಪೋಲೀಸ್, ಆಸ್ಪತ್ರೆಗಳ ಹೆಚ್ಚಳ, ಸಂಬಳ ಸಾರಿಗೆ ಹೆಚ್ಚಳ, ಶಾಲಾ ಕಟ್ಟಡಗಳ ಭವ್ಯತೆ, ಟಿವಿ ಮೊಬೈಲುಗಳ ಹೆಚ್ಚಳ, ಬುಲೆಟ್ ಟ್ರೈನ್, ಸ್ಮಾರ್ಟ್ ಸಿಟಿಗಳ ನಿರ್ಮಾಣ ಮುಂತಾದ ಯಾವುದೇ ಅಭಿವೃದ್ಧಿ ಜನರ ನೆಮ್ಮದಿಯ ಮಟ್ಟ ಹೆಚ್ಚಿಸುವುದಿಲ್ಲ. ನಮ್ಮ ಕನಸಿನ ನಾಗರಿಕ ಸಮಾಜ ನಿರ್ಮಾಣ ಆಗುವುದಿಲ್ಲ.
ಈ ಎಲ್ಲಾ ಅಭಿವೃದ್ಧಿಗಳ ಜೊತೆಗೆ ಅದಕ್ಕೆ ಪೂರಕವಾಗಿ ಮಾನವೀಯ ಮೌಲ್ಯಗಳ ಮರು ಸ್ಥಾಪನೆ ಮಾಡಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಶಾಲೆ, ಆಸ್ಪತ್ರೆ, ಆಹಾರ, ಮಕ್ಕಳು ಎಲ್ಲವೂ ನೆಮ್ಮದಿ ಕಾಣಲು ಸಾಧ್ಯ.
ಆ ನಿಟ್ಟಿನಲ್ಲಿ ಪ್ರಯತ್ನಗಳು ಆರಂಭವಾಗಲಿ ಮತ್ತು ನಮ್ಮ ನಮ್ಮ ವೈಯಕ್ತಿಕ ನೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಬದಲಾಗೋಣ ಎಂದು ಮನವಿ ಮಾಡಿಕೊಳ್ಳುತ್ತಾ……..
ರಾಜ್ಯ ಪೌರ ಕಾರ್ಮಿಕರ ದಿನ ಸೆಪ್ಟೆಂಬರ್ 23…..
ಏಕೆಂದರೆ ಪೌರ ಕಾರ್ಮಿಕರ ಇನ್ನೊಂದು ಹೆಸರೇ ಆರೋಗ್ಯ ರಕ್ಷಕರು. ರೋಗ ಬಂದ ನಂತರ ನಮ್ಮ ಪಾಲಿನ ರಕ್ಷಕರು ವೈದ್ಯರು. ಆದರೆ ರೋಗ ಬರದಂತೆ ತಡೆಯುವ ಎಲ್ಲಾ ಪ್ರಯತ್ನ ಮಾಡುವವರು ಈ ಪೌರ ಕಾರ್ಮಿಕರು.
ಪ್ರೇಮಿಗಳ ದಿನವೂ ಸೇರಿ ಅನೇಕ ದಿನಗಳನ್ನು ನಾವು ಭರ್ಜರಿಯಾಗಿ ಮತ್ತು ಕೆಲವೊಮ್ಮೆ ಅಭಿಮಾನ ಪೂರ್ವಕವಾಗಿ ಆಚರಿಸುತ್ತೇವೆ. ಆದರೆ ಈ ಪೌರ ಕಾರ್ಮಿಕರ ದಿನ ಸಾಮಾನ್ಯರು ಬಿಡಿ ಅತ್ಯಂತ ಜವಾಬ್ದಾರಿ ಸ್ಥಾನದಲ್ಲಿರುವ ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು ಮುಂತಾದ ಮುಖ್ಯವಾಹಿನಿಯ ಸುದ್ದಿಗಳ ಸೃಷ್ಟಿಕರ್ತರೇ ಬಹುತೇಕ ಮರೆತದ್ದು ನಮ್ಮ ಮನಸ್ಸುಗಳ ಮಾನವೀಯ ಮೌಲ್ಯಗಳನ್ನೇ ಪ್ರಶ್ನಿಸುವಂತೆ ಮಾಡಿದೆ.
ಪೌರ ಕಾರ್ಮಿಕ ವೃತ್ತಿಯ ಮುಖ್ಯ ಉದ್ದೇಶವೇ ಜನರಿಗೆ ಬೇಡವಾದ, ಜನರಿಂದ ತಿರಸ್ಕರಿಸಲಾದ, ಅದನ್ನು ಎಲ್ಲಿಯೂ ಸಂಗ್ರಹಿಸಲಾರದ ಅತ್ಯಂತ ಕೊಳಕು, ಅಸಹ್ಯ, ದುರ್ವಾಸನೆಯ ವಸ್ತುಗಳನ್ನು ತಾವು ಸಂಗ್ರಹಿಸಿ ವಿಲೇವಾರಿ ಮಾಡುವುದು.
ನೆನಪಿರಲಿ ಇದು ಶ್ರೀಮಂತ ಅಥವಾ ಗೌರವಾನ್ವಿತ ಅಥವಾ ಆಸಕ್ತಿದಾಯಕ ಅಥವಾ ಸಾಧನೆಗೆ ಅವಕಾಶವಿರುವ ವೃತ್ತಿಯಲ್ಲ. ಬಹುಶಃ ಬದುಕಲು ಪರ್ಯಾಯ ಮಾರ್ಗವಿಲ್ಲದ ಅತಿ ಅನಿವಾರ್ಯ ಹೊಟ್ಟೆ ಪಾಡಿನ ಕೆಲಸ.
ಕೆಲವೊಮ್ಮೆ ಆ ದುರ್ನಾತ ನೆನಪಾದಲ್ಲಿ ಊಟ ಮಾಡುವುದು ಕಷ್ಟ. ಅದಕ್ಕಾಗಿಯೇ ಈ ವೃತ್ತಿಯಲ್ಲಿ ಇರುವವರು ಹೆಣ್ಣು ಗಂಡು ಭೇದವಿಲ್ಲದೆ ಸಾಕಷ್ಟು ಜನ ಸಂಪೂರ್ಣ ಮದ್ಯಪಾನದ ದಾಸರಾಗಿರುತ್ತಾರೆ. ಬಹುಶಃ ಆ ಅಸಹ್ಯ ಮತ್ತು ನೋವನ್ನು ಮರೆಯಲು ಅವರೇ ಕಂಡುಕೊಂಡಿರುವ ಒಂದು ಮಾರ್ಗ ಇರಬಹುದು. ಅದೇ ಕಾರಣದಿಂದ ಅವರು ಬಹುಬೇಗ ರೋಗಗಳಿಗೆ ತುತ್ತಾಗಿ ಅಕಾಲ ಮೃತ್ಯುವಿಗೆ ಒಳಗಾಗುತ್ತಾರೆ.
ಕೋವಿಡ್ ಸಮಯದಲ್ಲಿ ಸಹ ಇವರು ನಿರಂತರವಾಗಿ ತಮ್ಮ ಕೆಲಸ ಮಾಡಿದ್ದಾರೆ ಮತ್ತು ಸಾಕಷ್ಟು ಜನ ಜೀವ ತೆತ್ತಿದ್ದಾರೆ.
ಮಾಧ್ಯಮಗಳಿಗೆ ದಿನದ 24 ಗಂಟೆಯಲ್ಲಿ ಕೆಲವು ನಿಮಿಷಗಳು ಸಹ ಇವರನ್ನು ನೆನಪಿಸಿಕೊಂಡು ಕೃತಜ್ಞತೆ ಹೇಳಲು ಸಮಯವಿರಲಿಲ್ಲ. ನಾನು ಗಮನಿಸಿದಂತೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಈ ಬಗ್ಗೆ ಪ್ರಸ್ತಾಪ ಆಗಲೇ ಇಲ್ಲ. ಸ್ಥಳೀಯವಾಗಿ ಕೆಲವು ಅಧಿಕಾರಿಗಳು ಮತ್ತು ವಿಧಾನ ಪರಿಷತ್ ಸದಸ್ಯರು ಒಂದು ಕಾರ್ಯಕ್ರಮ ಮಾಡಿರಬಹುದು.
ಎಲ್ಲಾ ಕೆಲಸಗಳು ಪವಿತ್ರವೇ ಎಂಬುದು ಆತ್ಮ ವಂಚನೆಯ ಮಾತಾಗಬಹುದು. ಏಕೆಂದರೆ ಪೌರ ಕಾರ್ಮಿಕ ವೃತ್ತಿಯು ಕಡು ಬಡವರ ಅನಿವಾರ್ಯ ಆಯ್ಕೆಯೇ ಹೊರತು ಅದು ಇಷ್ಟ ಪಟ್ಟು ಮಾಡುವ ಕೆಲಸವಲ್ಲ. ಆದರೆ ಕೆಲಸಕ್ಕೆ ಸೇರಿದ ನಂತರ ಪರಿಶ್ರಮ ಪಡಲೇಬೇಕು. ಹಣಕ್ಕಾಗಿ ಮತ್ತು ಅದನ್ನು ನಿರ್ವಹಿಸುವ ಮೇಲ್ವಿಚಾರಕರ ಒತ್ತಡದಿಂದಾಗಿ.
ನಮ್ಮ ಮನೋಭಾವ ಸಹ ಈ ವಿಷಯದಲ್ಲಿ ಸ್ವಲ್ಪ ವಿಚಿತ್ರವಾಗಿಯೇ ಇದೆ. ಕಸ ಗುಡಿಸುವವರು ಇದ್ದಾರೆ ಎಂಬ ಕಾರಣದಿಂದಾಗಿಯೇ ಹೆಚ್ಚು ಕಸವನ್ನು ಎಲ್ಲೆಂದರಲ್ಲಿ ಬೇಜವಾಬ್ದಾರಿಯಿಂದ ಬಿಸಾಡುತ್ತೇವೆ. ಕಾರಣ ಅವರಿಗೆ ಸ್ವಚ್ಛ ಗೊಳಿಸಲು ಸಂಬಳ ಕೊಡಲಾಗುತ್ತದೆ ಎಂದು.
ಇದು ಎಷ್ಟು ತಪ್ಪು ಗೊತ್ತಾ. ಸ್ವಲ್ಪ ಊಹಿಸಿಕೊಳ್ಳಿ. ನಾವು ಅಥವಾ ನಮ್ಮ ಹತ್ತಿರದವರು ಅಥವಾ ನಮ್ಮ ಪ್ರೀತಿ ಪಾತ್ರರು ಬಡತನದ ಕಾರಣಕ್ಕಾಗಿ ಇನ್ನೊಬ್ಬರ ಮಲ ಮೂತ್ರಗಳನ್ನು ಮತ್ತು ಅತ್ಯಂತ ಕೊಳೆತ ವಸ್ತುಗಳನ್ನು ಶುಚಿ ಮಾಡುತ್ತಾರೆ ಎಂದರೆ ನಮಗೆ ಆಗಬಹುದಾದ ನೋವು ಮತ್ತು ಅವಮಾನ.
ಸುಲಭವಾಗಿ ಹೇಳಬಹುದು ಅವರಿಗೆ ಎಲ್ಲಾ ರೀತಿಯ ಆಧುನಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು. ಆದರೆ ಅದು ಬಹುತೇಕ ಕಾಗದದಲ್ಲಿ ಮಾತ್ರ. ವಾಸ್ತವ ಪರಿಸ್ಥಿತಿ ಬೇರೆಯದೇ ಆಗಿರುತ್ತದೆ. ಸುರಕ್ಷತೆ ಒದಗಿಸಿದರು ಆ ಕೆಲಸ ಅತ್ಯಂತ ಮಾನಸಿಕ ಹಿಂಸಾತ್ಮಕ ಎಂದು ನನ್ನ ವೈಯಕ್ತಿಕ ಅಭಿಪ್ರಾಯ.
ಇರಲಿ ಈಗ ಇತರರನ್ನು ದೂಷಿಸುವುದು ಒಂದು ಕಡೆಯಾದರೆ ನಮ್ಮ ಸ್ವತಃ ಜವಾಬ್ದಾರಿ ಏನು ಎಂಬುದನ್ನು ಯೋಚಿಸಿ ಸ್ವಲ್ಪ ಮಟ್ಟಿಗೆ ಕಾರ್ಯರೂಪಕ್ಕೆ ತರೋಣ.
ಮೊಟ್ಟಮೊದಲನೆಯದಾಗಿ,
ಬೇರೆ ಎಲ್ಲಾ ವೃತ್ತಿ ನಿರತ ವ್ಯಕ್ತಿಗಳಂತೆ ಅಂದರೆ ಶಿಕ್ಷಕರು, ವೈದ್ಯರು, ಪೋಲೀಸರು, ಶಾಸಕರು, ಸಿನಿಮಾ ನಟರು, ಸ್ವಾಮೀಜಿಗಳು, ಸಾಹಿತಿಗಳು, ಸಮಾಜ ಸೇವಕರು, ಸೈನಿಕರು ಮುಂತಾದ ಎಲ್ಲರಂತೆ ಇವರಿಗೂ ಗೌರವ ನೀಡಿ ಬಹುವಚನದಲ್ಲಿ ಬನ್ನಿ ಹೋಗಿ ಎಂದು ಮಾತನಾಡಿಸೋಣ. ಇದು ಯಾವುದೇ ಶ್ರಮವಿಲ್ಲದ ಅತ್ಯಂತ ಸರಳ ಮಾನವೀಯ ಪ್ರತಿಕ್ರಿಯೆ.
ಎರಡನೆಯದಾಗಿ,
ಅವರ ಮೇಲಿನ ಒತ್ತಡ ಕಡಿಮೆ ಮಾಡಬೇಕೆಂದರೆ ನಾವುಗಳು ಎಷ್ಟು ಸಾಧ್ಯವೋ ಅಷ್ಟು ಕಸ ಉತ್ಪಾದನೆ ಕಡಿಮೆ ಮಾಡುವುದು ಮತ್ತು ಅದನ್ನು ಕ್ರಮಬದ್ಧ ಗೊಳಿಸಲು ನಮ್ಮ ನಿಯಂತ್ರಣದ ಸಂಬಂಧಪಟ್ಟವರಲ್ಲಿ ಮನವಿ ಮಾಡೋಣ ಮತ್ತು ಜಾಗೃತ ಗೊಳಿಸೋಣ. ಕನಿಷ್ಠ ಇಷ್ಟಾದರೂ ನಾವು ಪ್ರಯತ್ನಿಸೋಣ.
ಮೂರನೆಯದಾಗಿ, ಅವರಿಗೆ ಸ್ವಲ್ಪ ಹಣದ ರೂಪದ ಟಿಪ್ಸ್ ಕೊಡುವುದೇ ಒಂದು ಸಾಧನೆ ಎಂಬ ಅಹಂಕಾರ ಬಿಟ್ಟು ಅದು ನಮ್ಮ ಗೌರವಪೂರ್ವಕ ಕಾಣಿಕೆ. ಇವರು ಅದಕ್ಕಿಂತ ಹೆಚ್ಚು ಅರ್ಹರು ಎಂಬ ವಿನಮ್ರತೆ ಇರಲಿ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶ ಇದ್ದಲ್ಲಿ ಆತ್ಮಸಾಕ್ಷಿಯಾಗಿ ಸ್ವಲ್ಪ ಸಹಾಯ ಅಥವಾ ಮಾರ್ಗದರ್ಶನ ಮಾಡೋಣ.
ಇದನ್ನು ಕೇವಲ ಓದಿ ನಿರ್ಲಕ್ಷಿಸದೆ ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಆರಂಭಿಸಿದರೆ ಸಾಮಾಜಿಕ ಬದಲಾವಣೆ ಹೆಚ್ಚು ನಾಗರಿಕವಾಗುತ್ತಾ ಸಾಗುತ್ತದೆ. ಸಣ್ಣ ಸಣ್ಣ ಬದಲಾವಣೆಗಳೇ ಮುಂದೆ ನಮ್ಮನ್ನು ಹೆಚ್ಚು ಆರೋಗ್ಯ ಪೂರ್ಣವಾಗಿ ಇರುವಂತೆ ಮಾಡುತ್ತದೆ.
ಕಳೆದ ವರ್ಷ ರಾಜ್ಯ ಸರ್ಕಾರ ದಿನಗೂಲಿ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಆದೇಶ ಹೊರಡಿಸಿದೆ. ಅದನ್ನು ಹೃದಯ ಪೂರ್ವಕವಾಗಿ ಅಭಿನಂದಿಸುತ್ತಾ,
ಇದನ್ನು ರಾಜ್ಯಾದ್ಯಂತ ವಿಸ್ತರಿಸಿ ಎಂದು ಮನವಿ ಮಾಡಿಕೊಳ್ಳುತ್ತಾ…
ಖಂಡಿತ ಈ ಆದೇಶ ಅವರ ಬದುಕುಗಳಲ್ಲಿ ಒಂದಷ್ಟು ಉತ್ತಮ ಬದಲಾವಣೆಗೆ ಕಾರಣವಾಗಬಹುದು….
ಹಾಗೆಯೇ ಮುಂದಿನ ವರ್ಷ ನೆನಪು ಮಾಡಿಕೊಂಡು ಸಾರ್ವಜನಿಕರು ಪೌರ ಕಾರ್ಮಿಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಪ್ರಯತ್ನಿಸೋಣ…..
ಒಳ್ಳೆಯದನ್ನು ಮಾಡುತ್ತಾ ಒಳ್ಳೆಯವರಾಗೋಣ………
ದುಡ್ಡಿಗಿಂತ ಮಾನವೀಯತೆ ಮುಖ್ಯವಾಗಲಿ………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
