ಪ್ರಕೃತಿ,
ಪರಿಸರ,
ಜನಸಂಖ್ಯೆ,
ಜೀವ ವೈವಿಧ್ಯ,
ಪಶ್ಚಿಮ ಘಟ್ಟಗಳು,
ಅಭಿವೃದ್ಧಿ,
ಆಡಳಿತ ವ್ಯವಸ್ಥೆ,
ಭ್ರಷ್ಟಾಚಾರ,
ಜನರ ಮಾನಸಿಕತೆ,
ವಿನಾಶ………
ಈ ಒಂದಕ್ಕೊಂದು ವಿಷಯಗಳನ್ನು ಜೋಡಿಸುತ್ತಾ ಹೋದರೆ ಶ್ರೀಯುತ ಮಾಧವ್ ಗಾಡ್ಗಿಲ್ ವರದಿ, ತದನಂತರದ ಪರಿಷ್ಕೃತ
ಶ್ರೀ ಕೆ. ಕಸ್ತೂರಿ ರಂಗನ್ ವರದಿ, ಇದೀಗ ಕರ್ನಾಟಕದ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಕಸ್ತೂರಿರಂಗನ್ ವರದಿಯನ್ನು ಭಾಗಶ: ತಿರಸ್ಕರಿಸುವ ಸರ್ವಾನುಮತದ ಮಸೂದೆ ಅಂಗೀಕಾರ ಎಲ್ಲಕ್ಕೂ ಒಂದು ಅರ್ಥ ಸಿಗಬಹುದು.
ವಿಧಾನ ಮಂಡಲದಲ್ಲೇ ಆಗಲಿ, ಸಂಸತ್ತಿನ ಉಭಯ ಸದನಗಳಲ್ಲೇ ಆಗಲಿ, ಮಾಧ್ಯಮಗಳಲ್ಲಿಯೇ ಆಗಲಿ ಯಾರು, ಎಷ್ಟು, ಏನೇ ಚರ್ಚೆ ಮಾಡಿದರು ಸದ್ಯಕ್ಕೆ ನಾವೆಲ್ಲರೂ ಒಂದು ರೀತಿಯ ವಿಷ ವರ್ತುಲಕ್ಕೆ ಬಂದು ಸಿಲುಕಿದ್ದೇವೆ. ಈ ವಿಷ ವರ್ತಲದಿಂದ ಬಿಡುಗಡೆ ಹೊಂದುವುದು ಅಷ್ಟು ಸುಲಭವಲ್ಲ. ಇದು ಕೇವಲ ಅಭಿವೃದ್ಧಿ ಮತ್ತು ಪರಿಸರದ ಉಳಿವಿನ ಪ್ರಶ್ನೆಯಾಗಿ ಮಾತ್ರ ಉಳಿದಿಲ್ಲ. ಒಟ್ಟಾರೆ ವ್ಯವಸ್ಥೆಯೇ ಒಂದು ರೀತಿ ಡೋಲಾಯಮಾನ ಸ್ಥಿತಿಗೆ ಬಂದು ತಲುಪಿದೆ.
ಇದು ಎಲ್ಲಿಂದ ಪ್ರಾರಂಭವಾಯಿತು ಎಂಬುದನ್ನು ಹುಡುಕಬಹುದು. ಆದರೆ ಎಲ್ಲಿ ಮುಕ್ತಾಯವಾಗಬಹುದು ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ.
ಹಿರಿತಲೆಗಳು ಪರಿಸರ ಉಳಿಸುವ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ, ಹೊಸ ತಲೆಮಾರಿನ ಝೆನ್ ಜೀ ಕಿರುತಲೆಗಳು ಪರಿಸರಕ್ಕಿಂತ ತಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಹಣಕೇಂದ್ರಿತ ಅಭಿವೃದ್ಧಿ ಮುಖ್ಯ ಎಂಬುದಾಗಿ ಹೇಳುತ್ತಿದ್ದರೆ, ಉದ್ಯಮಿಗಳು ಪ್ರಕೃತಿಯ ಮೇಲೆ ನಿಯಂತ್ರಣ ಹೊಂದಿ ಹಣ ಮಾಡುವ ದಂದೆಯಲ್ಲಿದ್ದರೆ, ರಾಜಕಾರಣಿಗಳು ತಮಗೆ ಸಿಗುವ ಅಧಿಕಾರ, ಜನಪ್ರಿಯತೆ ಲಾಭ ಪಡೆಯುವ ಹುನ್ನಾರದಲ್ಲಿದ್ದಾರೆ. ಸಾಮಾನ್ಯ ಜನ ತಮ್ಮ ಬದುಕು ಕಟ್ಟಿಕೊಳ್ಳುವ ದಾವಂತದಲ್ಲಿದ್ದಾರೆ.
ನಾವು ಸಾಕಷ್ಟು ಮುಂದೆ ಬಂದಾಗಿದೆ. ಜನಸಂಖ್ಯೆ ಸ್ಪೋಟವಾಗಿದೆ. ಸುಮಾರು ಮೂರು ಸಾವಿರ ವರ್ಷಗಳಲ್ಲಿ 32 ಕೋಟಿ ಬೆಳೆದ ಜನಸಂಖ್ಯೆ ಮುಂದಿನ 80 ವರ್ಷದಲ್ಲಿ ಸುಮಾರು 120 ಕೋಟಿಯಷ್ಟು ಹೆಚ್ಚುವರಿಯಾಗಿ ಬೆಳೆದು 150 ಕೋಟಿಯಾಗಿದೆ. ಭೌಗೋಳಿಕ ಪ್ರದೇಶ ಮಾತ್ರ ಅಷ್ಟೇ ಇದೆ. ವಾಹನಗಳು, ಕಾರ್ಖಾನೆಗಳು, ಆಹಾರ ಉತ್ಪಾದನೆ, ಅದರ ಬಳಕೆ ಎಲ್ಲವೂ ಮಿತಿಮೀರಿಯಾಗಿದೆ.
ಇದನ್ನು ಮನಗಂಡೇ ಭಾರತ ಸರ್ಕಾರ ಪಶ್ಚಿಮ ಘಟ್ಟಗಳ ಉಳಿವಿಗಾಗಿ ಶ್ರೀಯುತ ಮಾಧವ ಗಾಡ್ಗಿಲ್ ಅವರ ನೇತೃತ್ವದ ಸಮಿತಿ ರಚಿಸಿತು. ಅದರ ವರದಿ ಕೈ ಸೇರಿದ ಮೇಲೆ ಅದು ತುಂಬಾ ಕಠಿಣವಾಗಬಹುದು. ಪರಿಸರ ರಕ್ಷಣೆಯ ಜೊತೆಗೆ ಅಭಿವೃದ್ಧಿಯೂ ಮುಖ್ಯ ಎಂಬ ಕಾರಣದಿಂದ ಅದನ್ನು ಪರಿಷ್ಕರಿಸಲು ಡಾಕ್ಟರ್ ಕೆ. ಕಸ್ತೂರಿರಂಗನ್ ಅವರ ನೇತೃತ್ವದ ಸಮಿತಿ ರಚಿಸಿತು. ಅದು ಸ್ವಲ್ಪ ಉದಾರವಾದಿಯಾಗಿ ತನ್ನ ವರದಿ ಸಲ್ಲಿಸಿತು. ಇದೀಗ ಆ ಉದಾರವಾದವೂ ಕಠಿಣವಾಗಿ ಆಡಳಿತ ವ್ಯವಸ್ಥೆಗೆ ಕಂಡು ಬರುತ್ತಿದೆ. ಪರಿಸರದ ಜೊತೆಗೆ ಅಲ್ಲಿ ವಾಸಿಸುವ ಆದಿವಾಸಿಗಳ ಬಗ್ಗೆಯೂ ಯೋಚಿಸಬೇಕಿದೆ.
ಎಲ್ಲವನ್ನು ಧ್ವಂಸ ಮಾಡಿಕೊಂಡೆ ಸಾಗುತ್ತಿರುವ ಮಾನವನನ್ನು ನಿಯಂತ್ರಣ ಮಾಡುವುದಾದರೂ ಹೇಗೆ. ಒಂದು ಕಾನೂನು ಮಾಡಿದರೆ ಇನ್ನೊಂದಿಷ್ಟು ಜನರಿಗೆ ತೊಂದರೆ, ಇನ್ನೊಂದು ಕಾನೂನು ಮಾಡಿದರೆ ಮತ್ತೊಂದಿಷ್ಟು ಜನರಿಗೆ ತೊಂದರೆ. ಇವುಗಳ ಮಧ್ಯೆ ಹೊಂಚು ಹಾಕಿಕೊಂಡು ಕುಳಿತಿರುವ ಲಾಭಕೋರರು ಮತ್ತು ಭ್ರಷ್ಟಾಚಾರಿಗಳು. ಈ ವಿಷಚಕ್ರದಲ್ಲಿ ಕುಳಿತು ರಕ್ಷಣೆಗೆ ಕೂಗಾಡುತ್ತಿರುವ ದೈನೇಸಿ ಸ್ಥಿತಿಯಲ್ಲಿ ಮನುಷ್ಯ ಪ್ರಾಣಿ ಕಂಡು ಬರುತ್ತಿದ್ದಾನೆ.
ಜಾಗತಿಕವಾಗಿ ನೋಡಿದರೆ ಒಂದೊಂದೇ ದೇಶಗಳು ಯುದ್ದೋತ್ಸಾಹದಿಂದ ಅನಿಲ, ತೈಲ ಕಾರ್ಖಾನೆಗಳನ್ನೇ ಉಡಾಯಿಸಿ ದಟ್ಟ ಹೊಗೆ ಆಕಾಶ ತುಂಬುವಂತೆ ಮಾಡುತ್ತಿವೆ. ಹಬ್ಬಕ್ಕೆ ಪಟಾಕಿ ಹೊಡೆದಂತೆ ಇಡೀ ಜಗತ್ತಿನಲ್ಲಿ ಆಗಾಗ ದ್ರೋಣ್ಗಳು, ಮಿಸ್ಯೆಲ್ ಗಳು ಘರ್ಜಿಸುತ್ತಲೇ ಇವೆ. ತಾಪಮಾನ ಹೆಚ್ಚಳವಾಗಿ ಹಿಮ ಶಿಖರಗಳು ಕರಗಿ, ವಿನಾಶಕಾರಿ ಅನಾಹುತ ಸೃಷ್ಟಿ ಮಾಡುತ್ತಿವೆ.
ಇಂತಹ ಸಮಯದಲ್ಲಿ ನಮ್ಮ ರಕ್ಷಣೆಗೆ ನಿಂತಿರುವ ಹಿಮಾಲಯ ಪರ್ವತ ಶ್ರೇಣಿಗಳು, ಸಹ್ಯಾದ್ರಿ, ವಿಂಧ್ಯಗಿರಿ ಶಿಖರಗಳು, ಪಶ್ಚಿಮ ಘಟ್ಟಗಳು, ನೀಲಗಿರಿ ಬೆಟ್ಟಗಳು ಇವುಗಳನ್ನಾದರೂ ಉಳಿಸಿಕೊಳ್ಳುವ ಸ್ಪಷ್ಟ ಪ್ರಯತ್ನಗಳು ಆಗಬೇಕಿದೆ.
ಪ್ರಕೃತಿ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಎಂಬುದೇನೊ ನಿಜ. ಆದರೆ ಅದರ ವಿರುದ್ಧ ನಡೆಯುತ್ತಿರುವ ಸಂಘರ್ಷದಲ್ಲಿ ತನ್ನ ಉಳಿವಿಗಾಗಿ ಅದು ಎಲ್ಲಾ ಜೀವರಾಶಿಗಳನ್ನು ಸಹ ಬಲಿ ತೆಗೆದುಕೊಳ್ಳಬಹುದು. ಆ ಕಾರಣಕ್ಕೆ ಪರಿಸರದ ಉಳಿವಿಗಾಗಿ ಮನುಷ್ಯ ಪ್ರಾಣಿ ಸಹ ಕಾರ್ಯೊನ್ಮುಖನಾಗಬೇಕು.
ಭಾವನಾತ್ಮಕವಾಗಿ ಮಾತನಾಡುವುದನ್ನು ಬಿಟ್ಟು ವಾಸ್ತವ ನೆಲದಲ್ಲಿ ಕಾಡು ಉಳಿಯಲಿ, ನಾಡು ಉಳಿಯಲಿ, ಜನರು ಉಳಿಯಲಿ, ಮೌಲ್ಯಗಳು ಉಳಿಯಲಿ ಎಂಬ ಆಶಯವನ್ನು ವ್ಯಕ್ತಪಡಿಸಬಹುದು. ಹೇಗೆ ಎಂದರೆ ಮತ್ತದೇ ವರದಿಗಳ ಮೇಲೆ, ರಾಜಕಾರಣಿಗಳ ಮೇಲೆ, ಆಡಳಿತದ ಮೇಲೆ ಅವಲಂಬನೆ. ಇದೊಂದು ವಿಷಯ ವರ್ತುಲ. ಮೊದಲೇ ಹೇಳಿದಂತೆ ಇದರಲ್ಲಿ ಸಿಕ್ಕಿ ಒದ್ದಾಡುತ್ತಾ ಬದುಕುವುದೇ ನಮ್ಮ ಪರಿಸ್ಥಿತಿ.
ಪ್ರಕೃತಿ, ಪರಿಸರ, ಅಭಿವೃದ್ಧಿಯ ನಡುವೆ ಸಮನ್ವಯ ಸಾಧಿಸಬೇಕು. ಅಷ್ಟು ತಾಳ್ಮೆ ಭ್ರಷ್ಟ ಆಡಳಿತ ವ್ಯವಸ್ಥೆಗೆ ಇಲ್ಲ. ಮುಂದೆ ನೋಡೋಣ. ಮಾಡಿದ್ದುಣ್ಣೋ ಮಹಾರಾಯ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
