ದಿನಾಂಕ:23-09-2026(ಹಾಯ್ ಉಡುಪಿ ನ್ಯೂಸ್)
ಉಡುಪಿ/ಯಲ್ಲಾಪುರ: ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಎಂಬವರ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯಲ್ಲಿ ಗೂಂಡಾವರ್ತನೆ ಹಾಗೂ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು ಸಾರ್ವಜನಿಕರಿಂದ ಭರ್ಜರಿ ಧರ್ಮದೇಟು ತಿಂದ ಸುದ್ದಿ ಬಂದಿದೆ.

ಅಜಯ್ ಭಂಡಾರ್ಕರ್ ಅವರು ಯಲ್ಲಾಪುರ ತಾಲೂಕಿನ ಮಂಚಿಕೇರಿಯಲ್ಲಿ ಪರ್ಮನೆಂಟಾಗಿ ವಾಸವಾಗಿದ್ದು, ತಮ್ಮ ಮನೆಗೆ ತೆರಳುವ ಮಾರ್ಗದಲ್ಲಿ ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯರಿಗೆ ವ್ಯಾಪಾರ ತೆರವುಗೊಳಿಸುವಂತೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ, ಸ್ಥಳೀಯ ಮೀನು ಮಾರಾಟ ಮಹಿಳೆಯರು ಹಲವು ವರ್ಷಗಳಿಂದ ಇದೇ ಸ್ಥಳದಲ್ಲಿ ವ್ಯಾಪಾರ ನಡೆಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಹಿಳೆಯರು ತೆರವುಗೊಳಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅಜಯ್ ಭಂಡಾರ್ಕರ್ ಅವರು ಸ್ಥಳಕ್ಕೆ ತೆರಳಿ, ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯರೊಂದಿಗೆ ವಾಗ್ವಾದ ನಡೆಸಿ, ಅವರ ಬುಟ್ಟಿಯಲ್ಲಿದ್ದ ಮೀನುಗಳನ್ನು ಚೆಲ್ಲಿಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಯನ್ನು ಪ್ರಶ್ನಿಸಿದ ಸ್ಥಳೀಯರೊಂದಿಗೂ ಮಾತಿನ ಚಕಮಕಿ ನಡೆದಿದ್ದು, ಅವರ ಮೇಲೂ ಹಲ್ಲೆಗೆ ಮುಂದಾದರು ಎನ್ನಲಾಗಿದೆ. ಈ ವೇಳೆ ಸ್ಥಳೀಯರು ಅಜಯ್ ಭಂಡಾರ್ಕರ್ ಹಾಗೂ ಅವರ ಸ್ನೇಹಿತನನ್ನು ತಡೆದು ಭರ್ಜರಿ ಒದೆ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇಬ್ಬರೂ ಮದ್ಯದ ಅಮಲಿನಲ್ಲಿದ್ದರು ಎಂದು ಸ್ಥಳೀಯರು ಆರೋಪಿಸಿದ್ದು, ಘಟನೆಯ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಸಾರ್ವಜನಿಕರೊಂದಿಗೆ, ಅದರಲ್ಲೂ ಮಹಿಳೆಯರೊಂದಿಗೆ ಅಧಿಕಾರಿಯೊಬ್ಬರು ಈ ರೀತಿಯಾಗಿ ವರ್ತಿಸಿರುವ ಆರೋಪಕ್ಕೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣದ ನಿಖರ ವಿವರಗಳು ತನಿಖೆಯ ಬಳಿಕ ತಿಳಿದುಬರಬೇಕಿದೆ.
