ಬೆಂಗಳೂರು: ದಿನಾಂಕ:23-09-2026(ಹಾಯ್ ಉಡುಪಿ ನ್ಯೂಸ್) ರಾಜ್ಯ ಸರ್ಕಾರದ ಬೊಕ್ಕಸ ಈಗಾಗಲೇ ಖಾಲಿಯಾಗಿದೆ ಇನ್ನಾದರೂ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ಬಿ.ವೈ.ವಿಜಯೇಂದ್ರ ಅವರು ಇಂದು ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಹೇಳಿದರು.

ರಾಜ್ಯ ಸರ್ಕಾರದ ಹಣಕಾಸು ಇಲಾಖೆಯೇ ಈ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ ಎನ್ನುವುದನ್ನು ಬಹಿರಂಗಪಡಿಸಿದೆ. ಕೇವಲ ಪ್ರಚಾರಕ್ಕಾಗಿ, ಜನರಿಗೆ ಸುಳ್ಳು ಆಶ್ವಾಸನೆ ನೀಡಿ ವಂಚಿಸುತ್ತಿರುವ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ನೈತಿಕವಾಗಿಯೂ ದಿವಾಳಿಯಾಗಿದೆ.
ಇದರ ವಿರುದ್ಧ ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿರುವ ಶ್ರೀ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಎದುರಿಗೆ ಇಂದು ಬಿ.ವೈ.ವಿಜಯೇಂದ್ರ ಮುಂದಾಳತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ರಾಜ್ಯವನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿರುವ, ಸುಳ್ಳುಗಳನ್ನೇ ಬಂಡವಾಳ ಮಾಡಿಕೊಂಡಿರುವ ಈ ಭ್ರಷ್ಟ, ಅನೈತಿಕ ಕಾಂಗ್ರೆಸ್ ಸರ್ಕಾರದ ದಿವಾಳಿತನದ ಪ್ರತೀಕವಾಗಿ ‘ಖಾಲಿ ಚೊಂಬು’ ಪ್ರದರ್ಶಿಸಿ, ಪ್ರತಿಭಟನೆ ನಡೆಸಲಾಯಿತು.

ಶೂನ್ಯ ಅಭಿವೃದ್ಧಿ, ಖಾಲಿ ಬೊಕ್ಕಸ, ಭ್ರಷ್ಟಾಚಾರದಲ್ಲಿ ಮಾತ್ರ ಅಪರಿಮಿತ ವೇಗದಲ್ಲಿ ರಾಜ್ಯವನ್ನು ಲೂಟಿ ಮಾಡುತ್ತಿರುವ ಈ ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಶ್ರೀ ಆರ್ .ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಮಿ,ಜೆಡಿಎಸ್ ಮುಖಂಡರಾದ ಶ್ರೀ ಬೋಜೇಗೌಡರು ಸೇರಿದಂತೆ ಉಭಯ ಪಕ್ಷಗಳ ಶಾಸಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
