Spread the love

ತೀರಾ ಕೆಳಹಂತದ ಕೋಮು ದ್ವೇಷದ ಚರ್ಚೆಗಳಿಗೆ ವೇದಿಕೆ ಕಲ್ಪಿಸಿ ರಾಷ್ಟ್ರೀಯ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜು ಹಾಕುತ್ತಿರುವ ಎಲೆಕ್ಟ್ರಾನಿಕ್ ಟಿವಿ ಸುದ್ದಿ ಮಾಧ್ಯಮಗಳು….

ತಮ್ಮ ಸ್ವಾರ್ಥ ಮತ್ತು ಹಣದ ಲಾಭಕ್ಕಾಗಿ ವಿವೇಚನೆ ಇಲ್ಲದೇ ಯಾರು ಯಾರನ್ನೋ ಚರ್ಚೆಗಳಿಗೆ ಆಹ್ವಾನಿಸಿ ಪರಿಸ್ಥಿತಿಯನ್ನು ಉದ್ವೇಗ ಗೊಳಿಸಿ ಮಾತಿನ ಭರದಲ್ಲಿ ಯಾರನ್ನೋ ಯಾವುದನ್ನೋ ನಿಂದಿಸಿ ಅದರಿಂದ ಹಚ್ಚುವ ಬೆಂಕಿಯ ಕಿಡಿಯಲ್ಲಿ ತಾವು ಹೊಟ್ಟೆ ತುಂಬಿಸಿಕೊಳ್ಳುವ ಹೇಯ ಕೆಲಸ ಮಾಡುತ್ತಿವೆ ಈ ಮಾಧ್ಯಮಗಳು. ಅದಕ್ಕೆ ಇತ್ತೀಚಿನ ಉದಾಹರಣೆ ಅಂತರರಾಷ್ಟ್ರೀಯವಾಗಿ ಅನೇಕ ಇಸ್ಲಾಮಿಕ್ ರಾಷ್ಟ್ರಗಳು ಭಾರತದ ವಿರುದ್ಧ ಪ್ರತಿಭಟನೆಗೆ ಇಳಿಯಲು ಕಾರಣವಾದ ಅಂಶಗಳು.

ಇಲ್ಲಿ ಸರಿ ತಪ್ಪು ಸೈದ್ಧಾಂತಿಕ ಭಿನ್ನಾಭಿಪ್ರಾಯ ಒಂದು ಕಡೆ, ವ್ಯಕ್ತಿಯ ವೈಯಕ್ತಿಕ ಬುದ್ಧಿಶಕ್ತಿ ಮತ್ತು ಮನೋ ನಿಯಂತ್ರಣ ಇನ್ನೊಂದು ಕಡೆ, ಅದಕ್ಕೆ ಪ್ರಚೋದನಾತ್ಮಕ ಸನ್ನಿವೇಶ ಸೃಷ್ಟಿಸಿ ಎರಡೂ ಕಡೆ ಅತಿರೇಕದ ಭಾವೋನ್ಮಾದ ಉಂಟುಮಾಡಿ ಅಸಹಿಷ್ಣತೆಯ ಅಂತರ್ಯದ ಮಾತುಗಳು ಹೊರಬರುವಂತೆ ಮಾಡುವುದು. ಈಗ ಅದರ ಪರಿಣಾಮ ದೇಶ ಮತ್ತು ಸಮಾಜ ಎದುರಿಸಬೇಕಾಗಿದೆ.

ಇತ್ತೀಚೆಗೆ ಒಬ್ಬರು ಟ್ವೀಟ್ ಮಾಡಿದ್ದರು. ಕೊರೋನಾ ವೈರಸ್ ಮೂಗು ಬಾಯಿ ಕಣ್ಣುಗಳ ಮೂಲಕ ಗಂಟಲು ಪ್ರವೇಶಿಸುವುದಕ್ಕಿಂತ ಟಿವಿ ಸುದ್ದಿ ಮಾಧ್ಯಮಗಳ ಮೂಲಕ ಮೆದಳು ಪ್ರವೇಶಿಸುವುದೇ ಹೆಚ್ಚು ಅಪಾಯಕಾರಿ. ಎಷ್ಟೊಂದು ನಿಜ ಅಲ್ಲವೇ. ಹಾಗೆಯೇ ಕೋಮು ದ್ವೇಷದ ನಿಜವಾದ ಕಿಡಿಗಳು ಅಗ್ನಿ ಜ್ವಾಲೆಯಾಗಿ ವ್ಯಾಪಿಸಲು ಟಿವಿ ವಾಹಿನಿಗಳೇ ಬಹುಮುಖ್ಯ ಕಾರಣ.

ಚರ್ಚೆಗಳನ್ನು ತುಂಬಾ ತಾಳ್ಮೆಯಿಂದ ಅಳೆದು ತೂಗಿ ಮಾಡಬೇಕು. ಅದು ಧ್ವನಿ ಮುದ್ರಣ ಆದರೆ ಉತ್ತಮ. ಏಕೆಂದರೆ ತಪ್ಪು ಮಾತುಗಳು, ಅಪಾಯಕಾರಿ ನುಡಿಗಳು ಇದ್ದರೆ ಎಡಿಟ್ ಮಾಡಬಹುದು. ಒಂದು ವೇಳೆ ನೇರ ಪ್ರಸಾರ ಇದ್ದರೆ ಆಕಸ್ಮಿಕವಾಗಿ ಹೊರ ಬೀಳುವ ಮಾತುಗಳಿಗೆ ಅಲ್ಲಿಯೇ ಕ್ಷಮೆ ಕೇಳಬೇಕು. ದ್ವೇಷ ಅಸೂಯೆ ಕೋಪ‌ ರೋಷದ ಮಾತುಗಳನ್ನು ಆಡುವ ವ್ಯಕ್ತಿಗಳನ್ನು ಸಾರ್ವಜನಿಕ ಚರ್ಚೆಗಳಿಂದ‌ ದೂರ ಇಡಬೇಕು.

ದುರಂತವೆಂದರೆ ಅಂತಹವರನ್ನೇ ಹುಡುಕಿ ಅವರಿಗೆ ವೇದಿಕೆ ಮತ್ತು ಅವಕಾಶ ಕಲ್ಪಿಸುವ ದುಷ್ಟತನ ಮಾಧ್ಯಮಗಳಿಗೆ ಸಾಂಕ್ರಾಮಿಕ ರೋಗಗಳಾಗಿ ಅಂಟಿದೆ. ಮಾಧ್ಯಮಗಳು ತಮ್ಮ ಎಲ್ಲಾ ಮಿತಿಗಳನ್ನು ಮೀರಿ ಅಹಂಕಾರ ಮೆರೆಯುತ್ತಿವೆ. ಕನಿಷ್ಠ ಪಕ್ಷಗಳ ಮತ್ತು ಧರ್ಮಗಳ ವಕ್ತಾರರು ಈ ರೀತಿಯ ಚರ್ಚೆಗಳಲ್ಲಿ ಭಾಗವಹಿಸುವಾಗ ಅತ್ಯಂತ ಜವಾಬ್ದಾರಿಯಿಂದ ಮತ್ತು ವಿವೇಚನೆಯಿಂದ ಮಾತನಾಡಬೇಕು. ಆವೇಶದ ಭರದಲ್ಲಿ ಏನನ್ನೋ ಮಾತನಾಡಬಾರದು.

ಒಂದು ವೇಳೆ ಇತರರಿಗೆ ನೋವಾದರೆ ಕ್ಷಮೆ ಕೇಳಬೇಕು. ಹಾಗೆಯೇ ಉದ್ದೇಶ ಪೂರ್ವಕವಲ್ಲದ ಮಾತುಗಳನ್ನು ವಿರೋಧಿಗಳು ಸಹ ಕ್ಷಮಿಸಬೇಕು. ಆದರೆ ಈಗ ಯಾರಿಗೆ ಬೇಕಿದೆ ಒಳ್ಳೆಯತನ. ಸೇಡಿಗೆ ಸೇಡು ಮುಯ್ಯಿಗೆ ಮುಯ್ಯಿ ಎಂಬಂತೆ ಇಡೀ ಧಾರ್ಮಿಕ ವಲಯ ತನ್ನ ವಿನಾಶಕ್ಕೆ ತಾನೇ ಮುನ್ನುಡಿ ಬರೆಯುತ್ತದೆ. ಮಾಧ್ಯಮಗಳು ಅದಕ್ಕೆ ಘೋರಿ ತೋಡುತ್ತಿವೆ. ಸಾಮಾನ್ಯ ಜನ ಅದಕ್ಕೆ ಬಲಿಯಾಗುತ್ತಿದ್ದಾರೆ.

ಸಾಮಾನ್ಯ ಜನರಾದ ನಮ್ಮ ಮುಂದೆ ಹೆಚ್ಚಿನ ಆಯ್ಕೆಗಳು ಇಲ್ಲ. ಆದರೆ ಮಾನವೀಯ ಮೌಲ್ಯಗಳ ಅತ್ಯುತ್ತಮ ಮಾರ್ಗ ನಮ್ಮ ಮುಂದಿದೆ. ದಯವೇ ಧರ್ಮದ ಮೂಲ ಮತ್ತು ಕ್ಷಮೆಯೇ ಧರ್ಮದ ತಳಹದಿ ಎಂಬುದನ್ನು ಅರ್ಥಮಾಡಿಕೊಂಡು ಅದನ್ನು ಪಾಲಿಸಬೇಕು. ಈ ಧಾರ್ಮಿಕ ಆಧಾರದ ಬಹಿಷ್ಕಾರ ಚಳವಳಿಯನ್ನು ನಾವುಗಳೇ ಬಹಿಷ್ಕರಿಸಬೇಕು.

ಕೆಟ್ಟವರನ್ನು ನಿರ್ಲಕ್ಷಿಸುವ ಒಳ್ಳೆಯವರನ್ನು ಪುರಸ್ಕರಿಸುವ ಮನೋಭಾವ ನಮ್ಮದಾದರೆ ಸಮಾಜ ಸಹಜವಾಗಿ ಉತ್ತಮ ಗುಣಮಟ್ಟ ಹೊಂದುತ್ತದೆ. ಈ ಮಾಧ್ಯಮಗಳು, ಅದರಲ್ಲಿ ಭಾಗವಹಿಸುವ ವಕ್ತಾರರು, ಅವರ ಚರ್ಚೆಗಳು ಅರ್ಥ ಕಳೆದುಕೊಳ್ಳುತ್ತವೆ.
ಇಲ್ಲದಿದ್ದರೆ ನಾವು ನೆಮ್ಮದಿ ಕಳೆದುಕೊಳ್ಳ ಬೇಕಾಗುತ್ತದೆ ಎಚ್ಚರ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……

error: No Copying!