images-17.jpeg
Spread the love

ಕನ್ನಡದ ಖ್ಯಾತ, ಪ್ರತಿಭಾವಂತ ಚಲನಚಿತ್ರ ನಟ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ಅನಂತನಾಗ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ದೆಹಲಿಯ ಜಂತರ್ ಮಂಥರ್ ನಲ್ಲಿ ನಡೆದ ಜನ್ ಝೀ ಹೋರಾಟವನ್ನು ಪ್ರಸ್ತಾಪಿಸಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಅವರ ಕ್ಷಮೆ ಕೇಳಬಾರದಿತ್ತು ಎಂಬರ್ಥದ ಮಾತು ಹೇಳುತ್ತಾರೆ.

ಅದನ್ನು ಸಾಮಾಜಿಕ ಜಾಲತಾಣದಲ್ಲಿ ಕೇಳಿದಾಗ ಮನುಷ್ಯನ ನಾಗರಿಕ ಸಂಸ್ಕೃತಿ ಈಗ ವಿಶ್ವದಲ್ಲಿ ಯಾವ ಅಂಶಗಳ ಆಧಾರದ ಮೇಲೆ ಚಲಾವಣೆಯಲ್ಲಿದೆ ಎಂದು ಮನಸ್ಸು ಹುಡುಕಾಡತೊಡಗಿತು..

ಪಾಶ್ಚಾತ್ಯ ಸಂಸ್ಕೃತಿ ಬಹುತೇಕ
ಸಾರಿ, ಥ್ಯಾಂಕ್ಸ್, ಇಟ್ಸ್ ಓಕೆ ( Sorry, Thanks, it’s okay )ಎಂಬ ಪದಗಳು, ಭಾವಗಳು, ಸಂಪ್ರದಾಯಗಳ ಮೇಲೆಯೇ ತನ್ನ ಇಡೀ ಚಟುವಟಿಕೆಗಳನ್ನು ವ್ಯವಹಾರಗಳನ್ನು, ಬದುಕನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಅವರ ನಾಗರೀಕತೆಯ ಬಹು ಮುಖ್ಯ ಆಧಾರ ಸ್ಥಂಭಗಳೇ, ಜೀವನಾಡಿಯೇ ಈ ಪ್ರತಿಕ್ರಿಯೆಗಳು.

ಎಲ್ಲೆಂದರಲ್ಲಿ, ಹೇಗೆಂದರಾಗೆ, ಯಾವುದೇ ಮಿತಿ ಇಲ್ಲದೆ, ಪ್ರತಿಕ್ಷಣ, ಪ್ರತಿ ಕ್ರಿಯೆಗೆ ಅತ್ಯಂತ ಸಹಜವಾಗಿ, ಸ್ವಾಭಾವಿಕವಾಗಿ ಈ ಸಾರಿ ಮತ್ತು ಥ್ಯಾಂಕ್ಸ್ ಪದಗಳನ್ನು ಉಪಯೋಗಿಸಿಕೊಳ್ಳುತ್ತಾರೆ. ಅದರಿಂದಾಗಿಯೇ ಪಾಶ್ಚಾತ್ಯ ನಾಗರಿಕತೆ ಹೆಚ್ಚು ಶಿಷ್ಟಾಚಾರದಿಂದ, ಸಾಮಾನ್ಯವಾಗಿ ನಮ್ಮಂತೆ ಸಣ್ಣ ವಿಷಯಗಳಿಗೂ ಘರ್ಷಣೆಗಳಿಲ್ಲದೆ ಮುಗಿದು ಹೋಗುತ್ತದೆ. ಇದರೊಂದಿಗೆ ಎಂದಿನಂತೆ ನಗುಮುಖ ಸಹ ಸೇರಿರುತ್ತದೆ. ತಪ್ಪು ನನ್ನದಿರಲಿ, ನಿಮ್ಮದಿರಲಿ, ಅವರದಿರಲಿ, ಇವರದಿರಲಿ, ಸಹಾಯ ಅವರು ಮಾಡಿರಲಿ, ನಾವು ಮಾಡಿರಲಿ, ನೀವು ಮಾಡಿರಲಿ ಈ ಪದಗಳು ಮಾತ್ರ ಅತ್ಯಂತ ವೇಗವಾಗಿ ಉಚ್ಚಾರಣೆ ಮಾಡಲ್ಪಡುತ್ತದೆ. ಇದು ಔಪಚಾರಿಕವೂ ಅಲ್ಲ, ತೋರಿಕೆಯು ಅಲ್ಲ. ಇಡೀ ಪಾಶ್ಚಾತ್ಯ ಸಂಸ್ಕೃತಿಯ ಎಲ್ಲ ಕ್ಷೇತ್ರಗಳ ಮಾನವೀಯ ನಡುವಳಿಕೆಯಾಗಿಯೇ ಸ್ಥಿರವಾಗಿದೆ.

ಕ್ರಿಶ್ಚಿಯನ್ ಸಮುದಾಯದಲ್ಲಿ ಏನೇ ತಪ್ಪು ಮಾಡಿದರೂ ಒಂದು ದಿನ ಚರ್ಚೆಂಬ ಅವರ ಪರಿಕಲ್ಪನೆಯ ದೇವಮಂದಿರದಲ್ಲಿ ಮೌನವಾಗಿ ಕುಳಿತು ಕ್ಷಮೆಯಾಚಿಸುತ್ತಾರೆ. ಅಲ್ಲಿ ಕ್ಷಮೆಗೆ ಅಷ್ಟು ಮಹತ್ವವಿದೆ.

ಹಾಗೆಯೇ ಇಸ್ಲಾಂ ಸಂಸ್ಕೃತಿಯಲ್ಲಿ ಅಲೆಕುಂ ಸಲಾಂ, ಒಬ್ಬರಿಗೊಬ್ಬರು ತಬ್ಬಿಕೊಳ್ಳುವುದು, ಅವರದೇ ರೀತಿಯಲ್ಲಿ ಶುಭ ಕೋರುವುದು ಅವರ ಸಂಸ್ಕೃತಿಯ ಮೂಲ ಬೇರಾಗಿದೆ ಮತ್ತು ಆಧಾರ ಸ್ತಂಭವೂ ಆಗಿದೆ. ಅದರೊಂದಿಗೆ ಎಂದಿನಂತೆ ನಗು ಸಹ ಇರುತ್ತದೆ. ಜೊತೆಗೆ ದೇವರಿಗೆ ಸದಾ ಕೃತಜ್ಞತೆ ಮತ್ತು ದೇವರೇ ಎಲ್ಲಕ್ಕಿಂತ ದೊಡ್ಡವನು ಎಂಬುದು ಸಹ ಅವರ ಸಾಂಕೇತಿಕ ಭಾಷೆಯಾಗಿದೆ.

ಬೌದ್ಧ ಸಂಸ್ಕೃತಿಯಲ್ಲಿಯೂ ಸಹ ನಗು ಮತ್ತು ಆತ್ಮೀಯತೆಯೊಂದಿಗೆ, ಪ್ರೀತಿ ಬೆರೆತ ಕಣ್ಣಿನ ನೋಟ, ಬೌದ್ಧ ತತ್ವದ ಮೂಲ ಆಶಯವಾಗಿದೆ. ಅತ್ಯಂತ ಪ್ರಶಾಂತತೆಯಿಂದ, ಕರುಣೆಯಿಂದ ಅವರ ಕಣ್ಣಿನಲ್ಲಿ ಸೂಸುವ ಪ್ರೀತಿಯ ಭಾವತೀವ್ರತೆ ಎಂತಹವರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಬೌದ್ಧ ಶಿಬಿರದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಶ್ರೀ ದಲೈಲಾಮ ಅವರನ್ನು ಭೇಟಿ ಮಾಡಿದಾಗ, ಅವರು ನಮ್ಮನ್ನು ಸ್ಪರ್ಶಿಸಿ ಪ್ರೀತಿಯ ಕಣ್ಣಿನ ನೋಟ ಹರಿಸಿದ್ದು ಈಗಲೂ ಅಚ್ಚಳಿಯದ ನೆನಪಾಗಿ ಉಳಿದಿದೆ.

ಇನ್ನು ಭಾರತೀಯ ಹಿಂದೂ ಜೀವನಶೈಲಿಯಲ್ಲಿ ಕೈ ಮುಗಿದು, ನಮಸ್ಕಾರ, ಬನ್ನಿ, ಕುಳಿತುಕೊಳ್ಳಿ, ಹೇಗಿದ್ದೀರಿ, ಊಟ ಮಾಡಿ ಎನ್ನುವ ನಗು ಬೆರೆತ ಆತ್ಮೀಯ ಸ್ವಾಗತ ಇಲ್ಲಿನ ಮೂಲ ಸಂಸ್ಕೃತಿಯ ತಾಯಿಬೇರಾಗಿದೆ. 12ನೆಯ ಶತಮಾನದ ವಚನ ಸಾಹಿತ್ಯದ
” ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ,
ಸಕಲ ಜೀವರಾಶಿಗಳಿಗೆ ಲೇಸನೇ ಬಯಸು, ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ, ಎಂಬ ಸಾಲುಗಳು, ಮಹಾಭಾರತದ
” ವಸುದೈವ ಕುಟುಂಬಕಂ “ಎನ್ನುವ ಎಲ್ಲರೂ ನಮ್ಮವರೇ ಎಂಬ ಮಾತುಗಳು, ” ಸರ್ವೆ ಜನೋ ಸುಖಿನೋ ಭವಂತು, ಆಯುಷ್ಮಾನ್ ಭವ, ದೀರ್ಘ ಸುಮಂಗಲಿ ಭವ ” ಎಂಬ ಆಶೀರ್ವಾದೀಯ ಸಾಲುಗಳು ಭಾರತೀಯ ಜೀವನ ಶೈಲಿಯ ದಿನನಿತ್ಯದ ಚಟುವಟಿಕೆಗಳ ಆಧಾರ ಸ್ಥಂಭಗಳು. ನಮ್ಮ ಇಡೀ ಜೀವನ ಒಂದಷ್ಟು ನೆಮ್ಮದಿಯಿಂದ, ಕ್ರಮಬದ್ಧವಾಗಿ ಎಷ್ಟು ಶತಮಾನ ಕಳೆದರೂ, ಈ ಆಧುನಿಕ ಕಾಲದಲ್ಲೂ, ಒಂದಷ್ಟು ಸಮಾಧಾನಕರವಾಗಿ ಮುಂದುವರೆಯಲು ಈ ಅಂಶಗಳೇ ಮುಖ್ಯ ಕಾರಣ.

ಆದ ಕಾರಣ ಯಾರು, ಯಾರಿಗೆ, ಯಾವಾಗ ಬೇಕಾದರೂ ಕ್ಷಮೆ ಕೇಳುವ ಪ್ರತಿಕ್ರಿಯೆ ಅತ್ಯಂತ ಸಹಜವಾದ ಜೀವನ ವಿಧಾನ. ಕ್ಷಮೆ ಕೇಳಿದ ಮಾತ್ರಕ್ಕೆ ಯಾರು ಅಪರಾಧಿಯೂ ಆಗುವುದಿಲ್ಲ. ಕ್ಷಮೆ ಕೇಳಿದ ಮಾತ್ರಕ್ಕೆ ಅದು ತಪ್ಪೂ ಆಗುವುದಿಲ್ಲ. ಕ್ಷಮೆ ಎಂಬುದು ಇನ್ನೊಬ್ಬರ ಮನಸ್ಥಿತಿಯೊಂದಿಗೆ ಪ್ರೀತಿಯನ್ನು, ಮನುಷ್ಯ ಸಂಬಂಧವನ್ನು ಬೆಸೆಯುವ ಅದ್ಭುತ ಸಾಧನ.

ಮಕ್ಕಳಿಂದ ಮುದುಕರವರೆಗೆ, ಎಲ್ಲಾ ವ್ಯಕ್ತಿಗಳು, ಯಾವುದೇ ಸಂದರ್ಭದಲ್ಲಿ ಕ್ಷಮೆ ಎಂಬ ಪದವನ್ನು, ಯಾವುದೇ ಹಮ್ಮುಬಿಮ್ಮಿಲ್ಲದೆ ಅತ್ಯಂತ ಸಹಜವಾಗಿ ಉಪಯೋಗಿಸಬಹುದು. ಅದು ಅವಮಾನಕರ ವಿಷಯವಲ್ಲ. ಅದು ಪ್ರೀತಿ ನಂತರದ ಅತ್ಯಂತ ಮುಖ್ಯ ಮಾನವೀಯ ಗುಣ.

ಅನಂತನಾಗ್ ಅವರಂತಹ ಹಿರಿಯ ಕಲಾವಿದರು ಸಮಾಜದಲ್ಲಿ ಬಿತ್ತ ಬೇಕಾಗಿರುವುದು ಪ್ರೀತಿಯನ್ನು, ಕ್ಷಮೆಯನ್ನು, ತ್ಯಾಗವನ್ನೇ ಹೊರತು ದ್ವೇಷ, ಅಸೂಯೇ, ಸೇಡು ಅಲ್ಲ. ವ್ಯಕ್ತಿಗಳು, ಪಕ್ಷಗಳು, ಧರ್ಮಗಳು ಸಿದ್ಧಾಂತಗಳು ಮನುಷ್ಯ ಸೃಷ್ಟಿಯಷ್ಟೆ. ಎಲ್ಲಾ ಕಾಲದಲ್ಲೂ ಅಗ್ನಿಪರೀಕ್ಷೆಯಲ್ಲಿ ಪಾಸಾದ ಭಾವಗಳೇನಲ್ಲ. ಅವು ತಾತ್ಕಾಲಿಕ ಭಾವನೆಗಳು. ಶಾಶ್ವತವಾದುದೆಂದರೆ ಪ್ರೀತಿ, ಕ್ಷಮೆ, ತ್ಯಾಗ ಮುಂತಾದ ಮಾನವೀಯ ಮೌಲ್ಯಗಳು ಮಾತ್ರ.

ಆದ್ದರಿಂದ ಪ್ರಶಸ್ತಿಗಳು, ಅಭಿಮಾನಗಳು, ಅಧಿಕಾರಗಳು, ಗೌರವಗಳು, ಆರ್ಥಿಕ ವ್ಯವಹಾರಗಳು, ಶ್ರೀಮಂತಿಕೆ ಏನೇ ಇರಲಿ, ಎಲ್ಲರಲ್ಲೂ ಕ್ಷಮಿಸು ಎನ್ನುವ ಗುಣ ಮಾತ್ರ ಚಿರಸ್ಥಾಯಿಯಾಗಿ ಉಳಿಯಲಿ ಎಂದು ಆಶಿಸುತ್ತಾ, ಈ ಬರಹದಲ್ಲಿ ಏನಾದರೂ ತಪ್ಪುಗಳಿದ್ದಲ್ಲಿ ಕ್ಷಮೆ ಇರಲಿ ಎಂದು ಕೋರುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!