ದಿನಾಂಕ:07-08-2026(ಹಾಯ್ ಉಡುಪಿ ನ್ಯೂಸ್)
ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಾಡಿಯಲ್ಲಿ 27 ವರ್ಷದ ಯುವ ಮಾಡೆಲ್ ಕೃತಿ ಬಂಗೇರ ಎಂಬವರು ತಮ್ಮ ನಿವಾಸದ ಬೆಡ್‌ರೂಮ್‌ನಲ್ಲಿ ವೇಲ್‌ನಿಂದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಇವರು, ಕಡಿಯಾಳಿಯ ಖಾಸಗಿ ಹೋಟೆಲೊಂದರಲ್ಲಿ ಉದ್ಯೋಗದಲ್ಲಿದ್ದು, ಕಳೆದ ಐದು ತಿಂಗಳುಗಳಿಂದ ಕೆಲಸಕ್ಕೆ ತೆರಳದೆ ತಾಯಿ ಮತ್ತು ಸಹೋದರಿಯೊಂದಿಗೆ ಕಲ್ಮಾಡಿಯ ಮನೆಯಲ್ಲೇ ನೆಲೆಸಿದ್ದರು
ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದ ಕೃತಿ, ಆಗಸ್ಟ್ 6ರ ಮಧ್ಯಾಹ್ನ ತಮ್ಮ ತಾಯಿಯನ್ನು ಮನೆಯಿಂದ ಹೊರಕಳುಹಿಸಿ ಒಳಗಿನಿಂದ ಬಾಗಿಲು ಭದ್ರಪಡಿಸಿಕೊಂಡು ಈ ದುರಂತ ನಿರ್ಧಾರ ತಳೆದಿದ್ದಾರೆ ಎನ್ನಲಾಗಿದೆ. ಘಟನೆಯ ಸಂದರ್ಭದಲ್ಲಿ ಕೃತಿ ಅವರ ತಾಯಿ ರತ್ನಾ ಅವರು ಕೆಲಸದ ನಿಮಿತ್ತ ಮಲ್ಪೆಗೆ ತೆರಳಿದ್ದರೆ, ಸಹೋದರಿ ಕೂಡ ತನ್ನ ಕೆಲಸಕ್ಕಾಗಿ ಉಡುಪಿಗೆ ತೆರಳಿದ್ದರು.
ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ತಾಯಿ ರತ್ನಾ ಅವರು ಮನೆಗೆ ಹಿಂತಿರುಗಿದಾಗ, ಕೃತಿ ತಮ್ಮ ತಾಯಿಯನ್ನು ಮನೆಯಿಂದ ಹೊರಗೆ ಕಳುಹಿಸಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾರೆ. ತಾಯಿ ಎಷ್ಟು ಬಾಗಿಲು ತಟ್ಟಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ಆತಂಕಗೊಂಡ ರತ್ನಾ ಅವರು ತಕ್ಷಣವೇ ತಮ್ಮ ಸಹೋದರ ಚಂದ್ರ ಅವರಿಗೆ ಕರೆ ಮಾಡಿ ವಿಷಯ ತಿಳಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಬಳಿಕ ಬಾಗಿಲನ್ನು ಒಡೆದು ಮನೆಯೊಳಗೆ ಪ್ರವೇಶಿಸಿ ನೋಡಿದಾಗ, ಬೆಡ್‌ರೂಮ್‌ನ ಫ್ಯಾನ್‌ಗೆ ವೇಲ್‌ನಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕೃತಿಯ ಶವ ಪತ್ತೆಯಾಗಿದೆ.
ಕೃತಿ ಅವರ ಈ ಹಠಾತ್ ಆತ್ಮಹತ್ಯೆಗೆ ನಿಖರವಾದ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಆದಾಗ್ಯೂ, ಅವರು ಕಳೆದ ಹಲವಾರು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎಂದು ಹೇಳಲಾಗಿದ್ದು, ಇದೇ ಕಾರಣಕ್ಕೆ ಮನನೊಂದು ಈ ಕಠಿಣ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು (UDR) ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆಯನ್ನು ಮುಂದುವರೆಸಿದ್ದಾರೆ.
