ಕಾಮ್ರೇಡ್ಗಳ ಕಾಠಿಣ್ಯ,
ಕಾರ್ಪೊರೇಟ್ಗಳ ವಿಜೃಂಭಣೆ,
ಕಾಕ್ರೋಚ್ ಗಳ ಸೃಷ್ಟಿ,
ಸಂಯಮ, ಸಮನ್ವಯ, ದೂರದೃಷ್ಟಿ, ಸಮಗ್ರ ಚಿಂತನೆಯ ಅವಶ್ಯಕತೆ……
ಭಾರತ ಸ್ವಾತಂತ್ರ್ಯಾ ನಂತರದ ಪ್ರಾರಂಭದ ದಿನಗಳಲ್ಲಿ ಕಾಮ್ರೆಡ್ ಗಳೆಂಬ ಕಮ್ಯುನಿಸ್ಟ್ ಚಿಂತಕರು, ಹೋರಾಟಗಾರರು ಎಲ್ಲಾ ರೀತಿಯ ಶೋಷಣೆಗಳ ವಿರುದ್ಧ, ಮುಖ್ಯವಾಗಿ ಆರ್ಥಿಕ ಶೋಷಣೆಗಳ ವಿರುದ್ಧ ಧ್ವನಿ ಎತ್ತಿ ಸಾಮಾನ್ಯ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದರು. ಆ ಕಮ್ಯುನಿಸ್ಟ್ ಚಳವಳಿ ಸಮಾಜವಾದಿ ರೂಪದಲ್ಲಿಯೂ ಬದಲಾವಣೆ ಹೊಂದಿ ಕೆಲವು ಸೌಮ್ಯವಾದಿ ಹೋರಾಟಗಾರರ ನೇತೃತ್ವದಲ್ಲಿಯೂ ಚಲಾವಣೆಯಲ್ಲಿತ್ತು. ಮುಂದೆ ಈ ಎರಡು ಮಿಳಿತವಾಗಿ, ಪ್ರಗತಿಪರ, ಬಂಡಾಯ ರೂಪದೊಂದಿಗೆ, ಮೂಲ ಜನಸಂಘದಿಂದ ರೂಪಾಂತರ ಹೊಂದಿದ ಬಿಜೆಪಿ ಎಂಬ ಹಿಂದುತ್ವದ ಪಕ್ಷವೂ ಜೊತೆಯಾಗಿ ಜಯಪ್ರಕಾಶ್ ನಾರಾಯಣ್ ಅವರ ಸಂಪೂರ್ಣ ಕ್ರಾಂತಿ ಒಂದು ಚಳುವಳಿಯ ರೂಪ ಪಡೆದು ಶೋಷಣೆ, ಭ್ರಷ್ಟಾಚಾರ, ಸರ್ವಾಧಿಕಾರದ ವಿರುದ್ಧದ ಜನರ ಧ್ವನಿಯಾಯಿತು.
ತದನಂತರ ರಾಮ ಜನ್ಮಭೂಮಿಯ ಅಯೋಧ್ಯೆ ವಿವಾದದೊಂದಿಗೆ ಬಲಪಂಥೀಯ ಚಳುವಳಿ ಇವರನ್ನೆಲ್ಲಾ ಹಿಂದೆ ತಳ್ಳಿ ಮುನ್ನಲೆಗೆ ಬಂದಿತು. ಮುಂದೆ ಅದು ಪ್ರಬಲವಾಗುತ್ತಾ ಭಾರತ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಎಡಪಂಥೀಯ ಚಳುವಳಿಗಳಿಗೆ ಹಿನ್ನಡೆಯಾಗುತ್ತಾ, ಬಹುತೇಕ ಬಲಪಂಥೀಯ ಆಡಳಿತವೇ ದೇಶವನ್ನು ಆಕ್ರಮಿಸಿಕೊಂಡಿತು. ಕಾರ್ಪೊರೇಟ್ ಜಗತ್ತು ಅದರೊಂದಿಗೆ ಸೇರಿಕೊಂಡು ಹುಸಿ ಅಭಿವೃದ್ಧಿ, ಹುಸಿ ರಾಷ್ಟ್ರೀಯತೆ, ಹುಸಿ ಧಾರ್ಮಿಕತೆ ಎಂಬ ಪರಿಕಲ್ಪನೆ ದೇಶವನ್ನು ಮುನ್ನಡೆಸುತ್ತಿದೆ.
ಅದರ ಪರಿಣಾಮ ಕಾಮ್ರೆಡ್ ಗಳ ಕಮ್ಯುನಿಸ್ಟ್ ಪಕ್ಷ ತೀರಾ ಕೆಳಹಂತಕ್ಕೆ ಜಾರಿತು. ಕಾಂಗ್ರೆಸ್ ಕಷ್ಟಪಟ್ಟು ಉಸಿರಾಡುತ್ತಿದೆ. ಇಂತಹ ಸಂದರ್ಭದಲ್ಲಿ ಶೋಷಿತರ ಧ್ವನಿಯಾಗಿ ಪ್ರಬಲ ವಿರೋಧ ಪಕ್ಷಗಳೇ ಇರಲಿಲ್ಲ. ಬಹುತೇಕ ಪ್ರಾದೇಶಿಕ ಪಕ್ಷಗಳು ನೆಲಕಚ್ಚಿದವು. ಕೆಲವು ಮಾತ್ರ ರಾಷ್ಟ್ರೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜೀವಂತವಾಗಿವೆ. ಸ್ವಲ್ಪಮಟ್ಟಿಗೆ ಆಮ್ ಆದ್ಮಿ ಪಕ್ಷ ಅಣ್ಣಾ ಹಜಾರೆಯವರ ಚಳುವಳಿಯ ನಂತರ ಒಂದಷ್ಟು ಮುಖ್ಯವಾಹಿನಿಗೆ ಬಂದಿತು. ಈಗ ಅದರ ತೀವ್ರತೆ ಉಳಿದಿಲ್ಲ. ತಮಿಳುನಾಡಿನಲ್ಲಿ ವಿಜಯ್ ಎಂಬ ಚಲನಚಿತ್ರ ನಟನ ಪಕ್ಷ ಅಧಿಕಾರಕ್ಕೇರಿದೆ.
ಇಂಥಹ ಸಂದರ್ಭದಲ್ಲಿ ಅಸಂಘಟಿತವಾದ, ಸಾಮಾಜಿಕ ಜಾಲತಾಣದ ಶಿಶುವಾಗಿ ಕಾಕ್ರೋಚ್ ಜನತಾ ಪಕ್ಷ ಸದ್ಯಕ್ಕೆ ಒಂದು ಹೋರಾಟವನ್ನು ರೂಪಿಸಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದೆ. ಒಂದಷ್ಟು ಭರವಸೆ ಮೂಡಿಸಿದೆ. ಇದರ ಆಯಸ್ಸನ್ನು ಸಹ ಕಾಲವೇ ನಿರ್ಧರಿಸಬೇಕು.
ನಿಜಕ್ಕೂ ಶೋಷಿತರ ನಿಜವಾದ ಧ್ವನಿಯಾಗಿ, ಜನಪ್ರಿಯವಾಗಿ ಆಡಳಿತ ಅಥವಾ ಪ್ರಬಲ ವಿರೋಧ ಪಕ್ಷವಾಗಿರಬೇಕಾಗಿದ್ದ ಕಾಮ್ರೇಡ್ಗಳ ನಾಯಕತ್ವ ಹಿನ್ನೆಲೆಗೆ ಸರಿಯಲು ಕಾರಣವೇನು ?. ಎಡಬಲಗಳ ಸಂಘರ್ಷದಲ್ಲಿ ಅತ್ಯಂತ ಪ್ರಬಲ ವೈಚಾರಿಕ ಪ್ರಜ್ಞೆಯ ಎಡಪಂಥೀಯ ಚಳವಳಿ ಕುಸಿದು ಸಾಂಪ್ರದಾಯಿಕ ಬಲಪಂಥೀಯ ಚಳುವಳಿ ಪ್ರಾಬಲ್ಯಗೊಳ್ಳಲು ಕಾರಣವೇನು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಮತ್ತು ಸಂದರ್ಭ ಸೃಷ್ಟಿಯಾಗಿದೆ.
ಬ್ರಾಹ್ಮಣ್ಯದ ಕೆಲವು ಆಚರಣೆಗಳನ್ನು ಕರ್ಮಠರು ಎಂಬುದಾಗಿ ಹೇಗೆ ಕರೆಯುತ್ತೇವೆಯೋ, ಹಾಗೆಯೇ ಕಮ್ಯುನಿಸ್ಟ್ ಕಾಮ್ರೇಡ್ಗಳ ಕರ್ಮಠ ಗುಣಗಳು, ಅದು ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆಗೆ ಅಡ್ಡಿಯಂಟುಮಾಡಿದೆ. ಮಾನವೀಯತೆಯಲ್ಲಿ ಒಂದು ಹೆಜ್ಜೆ ಮುಂದೆ ಇದ್ದ ಕಮ್ಯುನಿಸಂ ಪ್ರೀತಿಯ ವಿಷಯದಲ್ಲಿ ತುಂಬಾ ಹಿನ್ನಡೆಗೆ ಸರಿಯಿತು. ಮಾನವೀಯತೆಯನ್ನು ಮುನ್ನಲೆಗೆ ತರುವ ಕೆಲಸಕ್ಕಿಂತ ಸೈದ್ಧಾಂತಿಕ ಕರ್ಮಠತನವನ್ನೇ ತನ್ನ ಉದ್ದೇಶವಾಗಿಸಿಕೊಂಡಿತು. ಇದರ ಲಾಭವನ್ನು ಬಂಡವಾಳಶಾಹಿ ವ್ಯವಸ್ಥೆ ಉಪಯೋಗಿಸಿಕೊಂಡಿತು.
ಆಧುನಿಕ ಜಗತ್ತು ತಂತ್ರಜ್ಞಾನ, ಸ್ಪರ್ಧೆ, ವೇಗ, ಹಣಕೇಂದ್ರಿತ ಸಮಾಜದ ನಿರ್ಮಾಣದಲ್ಲಿ ಮುನ್ನಡೆಯುತ್ತಿರಬೇಕಾದರೆ, ಶೋಷಣೆಯ ವಿವಿಧ ರೂಪಗಳು ಬದಲಾಗುತ್ತಿರಬೇಕಾದರೆ, ಕಾಮ್ರೆಡ್ ಗಳು ಹಳೆಯ ಸೈದ್ಧಾಂತಿಕ ನಿಲುವುಗಳಿಗೆ ಅಂಟಿಕೊಂಡ ಕಾರಣವೂ ಇರಬಹುದು. ಅಲ್ಲದೆ ಕಮ್ಯುನಿಸಂ ಹೊರತುಪಡಿಸಿದ ಎಲ್ಲವನ್ನೂ ಅನುಮಾನದ ದೃಷ್ಟಿಯಿಂದ ನೋಡುವ, ಮದ್ಯಮ ಮಾರ್ಗಗಳನ್ನು ಸಹ ಕಠಿಣವಾಗಿ ತಿರಸ್ಕರಿಸುವ, ಸ್ವಲ್ಪ ಮಟ್ಟಿಗೆ ಪರಿವರ್ತನೆ ಸಾಧ್ಯತೆ ಇರುವ ವ್ಯಕ್ತಿಗಳನ್ನು ಸಹ ಕಠಿಣ ಮನಸ್ಸಿನಿಂದ ನಿಂದಿಸುವ ಮೂಲಕ ಹಿನ್ನೆಡೆಗೆ ಸರಿಯತೊಡಗಿತು. ಆ ಜಾಗವನ್ನು ಜೆನ್ ಜಿಗಳು ಆಕ್ರಮಿಸಿಕೊಳ್ಳತೊಡಗಿದ್ದಾರೆ.
ಮೂಲತಹ ಶೋಷಿತರ ಪರವಾಗಿ ಅತ್ಯಂತ ಪ್ರಬಲವಾಗಿ ಧ್ವನಿಯೆತ್ತುವುದು ಕಮ್ಯುನಿಸಂ ಸಿದ್ದಾಂತಗಳು. ವ್ಯಕ್ತಿ ಸ್ವಾತಂತ್ರ್ಯವನ್ನು ಹೊರತುಪಡಿಸಿ, ಸಾಕಷ್ಟು ವೈಚಾರಿಕ ಪ್ರಜ್ಞೆಯ ಜೀವಪರ ನಿಲುವಿನ ಸಿದ್ದಾಂತಗಳು ಕಮ್ಯುನಿಸಂನಲ್ಲಿವೆ. ಸದಾಕಾಲ ಜನಪರ ಚಳುವಳಿಗಳನ್ನು ಸಂಘಟಿಸುವ ಮೌಲ್ಯಯುತ ಅಂಶಗಳು ಅದರಲ್ಲಿವೆ. ಆದರೆ ಅದಕ್ಕೆ ಜೀವ ತುಂಬಬಹುದಾದ ಪ್ರೀತಿಯ ಗುಣಲಕ್ಷಣಗಳು ಮಾಯವಾಗಿವೆ. . ನಿಂದನೆಯನ್ನೇ ಒಂದು ಪ್ರಮುಖ ಅಸ್ತ್ರವಾಗಿ ಉಪಯೋಗಿಸುತ್ತಾ, ಪರಿವರ್ತನೆಯ ಹಾದಿಯನ್ನು, ಪರ್ಯಾಯ ಮಾರ್ಗಗಳನ್ನು ಹುಡುಕುವ ಪ್ರಯತ್ನ ಮಾಡದಿರುವುದು ಕಾಮ್ರೆಡ್ ಗಳ ವೈಯಕ್ತಿಕ ವಿಫಲತೆ.
ಮುಂದೊಂದು ದಿನ ಮತ್ತೆ ಕಾಮ್ರೆಡ್ ಹೋರಾಟಗಳು ಮುನ್ನಲೆಗೆ ಬರಬಹುದು. ಬದಲಾವಣೆ ಜಗದ ನಿಯಮ. ಆದರೆ ಅದರ ಸ್ವರೂಪ ಮಾತ್ರ ಬದಲಾಗಲೇಬೇಕಿದೆ.
ಇವತ್ತಿನ ಸಂದರ್ಭದಲ್ಲಿ ಝಂಜಿಗಳೇ ಕಾಮ್ರೆಡ್ ಗಳಂತೆ ಮುಸುಕು ಮುಸುಕಾಗಿ ಕಾಣುತ್ತಿದ್ದಾರೆ. ವ್ಯವಸ್ಥೆಯ ವಿರುದ್ಧ ಅಸಂಘಟಿತ ಹೋರಾಟ ನಡೆಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಏನೋ ನಿಜ. ಆದರೆ ಅದಕ್ಕೊಂದು ಬಲವಾದ ವಿಚಾರ ಕ್ರಾಂತಿಯ ಅವಶ್ಯಕತೆ ಇದೆ.
ನೀಟ್ ಪರೀಕ್ಷೆಯ ಹೋರಾಟ ಒಂದು ಸಣ್ಣ ಕ್ರಾಂತಿಯಷ್ಟೇ. ಇಲ್ಲಿ ಸೋಲು ಗೆಲುವಿನ ಪ್ರಶ್ನೆ ಇಲ್ಲ. ಪ್ರಜಾಪ್ರಭುತ್ವದ ಯಶಸ್ಸು ಮಾತ್ರ.
ಪ್ರಾಕೃತಿಕ ಮೌಲ್ಯಗಳು,
ಮಾನವೀಯ ಮೌಲ್ಯಗಳು, ಭಾರತೀಯ ಮೌಲ್ಯಗಳು,
ನಾಗರೀಕ ಮೌಲ್ಯಗಳು, ಸಂವಿಧಾನಾತ್ಮಕ ಮೌಲ್ಯಗಳು,
ಹಣ ಅಧಿಕಾರದ ಮುಂದೆ ಕೊಚ್ಚಿ ಹೋಗುವ ಮೊದಲು ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ.
ಜೆನ್ ಜೀಗಳೇ ಕಾಮ್ರೇಡ್ ಗಳಾಗಿ, ಸದಾಕಾಲ ಪ್ರಶ್ನಿಸುವ, ವ್ಯವಸ್ಥೆಯ ವಿರುದ್ಧ ಹೋರಾಡುವ, ಒಂದು ನೂತನ ಯುವ ವರ್ಗ, ಯಾವುದೇ ಸರ್ಕಾರದ ಆಡಳಿತದ ವಿರುದ್ಧ ನಿರಂತರವಾಗಿ ಪ್ರವಾಹದಂತೆ ಹರಿಯುತ್ತಿದ್ದರೆ ಅದೇ ಒಂದು ಸಮಾಜದ, ಒಂದು ದೇಶದ ಸಾಕ್ಷಿ ಪ್ರಜ್ಞೆ. ಒಳ್ಳೆಯದಾಗಲಿ ಯುವ ಮಿತ್ರರೇ……….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
