ಬ್ರಹ್ಮಾವರ: ದಿನಾಂಕ : 22/07/2026 (ಹಾಯ್ ಉಡುಪಿ ನ್ಯೂಸ್ ) ಬೈಕಾಡಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ಮೂವರು ವ್ಯಕ್ತಿಗಳನ್ನು ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಶೋಕ್ ಮಾಳಾಬಗಿ ಅವರು ಬಂಧಿಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಶೋಕ್ ಮಾಳಾಬಗಿ ಅವರು ದಿನಾಂಕ:21-07-2026 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೈಕಾಡಿ ಗ್ರಾಮದ ಬೈಕಾಡ್ತಿ ಅಮ್ಮನವರ ದೇವಸ್ಥಾನದ ಎದುರು ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಸೇರಿಕೊಂಡು ಕೋಳಿಗಳನ್ನು ಹಿಂಸಾತ್ಮಕವಾಗಿ, ಅವುಗಳ ಕಾಲಿಗೆ ಕತ್ತಿಯನ್ನು ಕಟ್ಟಿ ಮನೋರಂಜನೆಗಾಗಿ ಹಾಗೂ ಹಣವನ್ನು ಪಣವಾಗಿ ಕಟ್ಟಿ ಜೂಜಾಟಕ್ಕಾಗಿ ಕೋಳಿ ಅಂಕವನ್ನು ಆಡುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿದ್ದಾರೆ.
ಪೊಲೀಸರು ದಾಳಿ ನಡೆಸಿದಾಗ ಅಲ್ಲಿ ಸೇರಿದ್ದ ಜನರು ಕಾದಾಟ ಮಾಡುತ್ತಿದ್ದ ಕೋಳಿಗಳನ್ನು, ಮರಕ್ಕೆ ಕಟ್ಟಿದ್ದ ಮತ್ತು ಅವರ ಬಳಿ ಇದ್ದ ಕೋಳಿಗಳನ್ನು ಹಿಡಿದುಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದು, ಅವರುಗಳನ್ನು ಸುತ್ತುವರೆದು ಹಿಡಿದು ಹೆಸರು ವಿಳಾಸ ವಿಚಾರಿಸಿದಾಗ 1) ವಿಜಯ್(50), ಬನ್ನಂಜೆ, ಉಡುಪಿ, 2) ಸ್ಟೀವನ್ (35), ಬೈಕಾಡಿ ಗ್ರಾಮ , ಬ್ರಹ್ಮಾವರ, 3) ದಿವಾಕರ ಶೆಟ್ಟಿ(50), ಬೈಕಾಡಿ ಗ್ರಾಮ, ಬ್ರಹ್ಮಾವರ ಎಂದು ತಿಳಿಸಿರುತ್ತಾರೆ. ಸ್ಥಳದಲ್ಲಿದ್ದ ಕೋಳಿ-6, ಬಾಳ್-1, ಬಾಳ್ ಕಟ್ಟಲು ಉಪಯೋಗಿಸಿದ ಹಗ್ಗದ ತುಂಡು-1 ಮತ್ತು ಕೋಳಿ ಅಂಕ ಆಟಕ್ಕೆ ಉಪಯೋಗಿಸಿದ 1,500/- ರೂಪಾಯಿ ಹಣವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 87, 93 ಕೆ.ಪಿ. ಆಕ್ಟ್ ಮತ್ತು ಕಲಂ 11 Prevention of cruelty of animal act ರಂತೆ ಪ್ರಕರಣ ದಾಖಲಾಗಿದೆ.
