IMG-20251107-WA0003.jpg
Spread the love

ಆತ್ಮೀಯರೆ,……‌‌…..

ಜನಪ್ರಿಯತೆಯೇ ಸತ್ಯ ಎಂಬ ಒಂದು ಅಘೋಷಿತ ಮನೋಭಾವ ಇಂದಿನ ಆಧುನಿಕ ಸಮಾಜದಲ್ಲಿ ಬೆಳೆಯುತ್ತಿದೆ.

ಸಿನಿಮಾ, ಸಂಗೀತ, ಸಾಹಿತ್ಯ, ರಾಜಕೀಯ, ಸಂಘಟನೆ, ಸಮಾಜ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಇದು ವ್ಯಾಪಕವಾಗಿ ಹರಡಿದೆ.

ಜನಪ್ರಿಯತೆಗೂ – ಸತ್ಯ ಮತ್ತು ವಾಸ್ತವತೆಗೂ ಬಹಳಷ್ಟು ವ್ಯತ್ಯಾಸವಿದೆ.

ಎಳನೀರು ಮತ್ತು ಪೆಪ್ಸಿ – ಕೋಲಾ ಪಾನೀಯಗಳ ಉದಾಹರಣೆಗಳೊಂದಿಗೆ ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು.

ಎಳನೀರು ಅತ್ಯಂತ ಪೌಷ್ಟಿಕಾಂಶದ ಅತ್ಯುತ್ತಮ ಪಾನೀಯ. ಆದರೆ ಇಂದಿನ ಯುವ ಜನಾಂಗ ಅದನ್ನು ಅನಾರೋಗ್ಯ ಸಮಯದಲ್ಲಿ ಅಥವಾ ತೀರಾ ಅಪರೂಪಕ್ಕೆ ಕುಡಿಯುತ್ತಾರೆ.

ಆದರೆ, ಅನಾರೋಗ್ಯಕಾರಿ ವಿಷಕಾರಕ ಅಂಶಗಳುಳ್ಳ ಪೆಪ್ಸಿ ಕೋಲಾಗಳನ್ನು ಎಲ್ಲಾ ಸಂಧರ್ಭದಲ್ಲಿಯೂ ಯಥೇಚ್ಛವಾಗಿ ಕುಡಿಯುತ್ತಾರೆ.
ಜನಪ್ರಿಯತೆಯ ಮಾನದಂಡದಲ್ಲಿ ಪೆಪ್ಸಿ ಕೋಲಾಗಳೇ ಉತ್ತಮ ಪಾನೀಯ ಎಂದು ಪರಿಗಣಿಸಬೇಕಾಗುತ್ತದೆ.

ಇದೇ ಆಧಾರದಲ್ಲಿ ದೇವರು, ಧರ್ಮ ಸಿನಿಮಾ ನಟರು, ರಾಜಕಾರಣಿಗಳು, ಪತ್ರಕರ್ತರು, ಸಾಹಿತಿಗಳು, ಧಾರ್ಮಿಕ ಮುಖಂಡರು ಇತ್ಯಾದಿಗಳು ಗಿಮಿಕ್ ಗಳನ್ನು ಮಾಡುತ್ತಾ ಪ್ರಚಾರ ಪಡೆದು ಜನಪ್ರಿಯರಾಗುತ್ತಾರೆ.

ನಿಜವಾದ ಅತ್ಯುತ್ತಮ ವ್ಯಕ್ತಿತ್ವದ ಸಾಧಕರು ಇವರ ಮುಂದೆ ಸ್ಪರ್ಧಿಸಲಾರದೆ ಹಿನ್ನೆಲೆಯಲ್ಲಿ ಉಳಿಯುತ್ತಾರೆ. ಸತ್ಯ ಮತ್ತು ವಾಸ್ತವ ಮುಸುಕಾಗುತ್ತಾ ಸಾಗಿ ಕೇವಲ ಮುಖವಾಡಗಳು ಸಮಾಜದ ಮುಖ್ಯವಾಹಿನಿಗೆ ಬರುತ್ತವೆ.

ಹೀಗೆ ಪ್ರಾರಂಭವಾಗುವ ಮೌಲ್ಯಗಳ ಕುಸಿತ ನಮಗರಿವಿಲ್ಲದೇ ನಮ್ಮ ನೆಮ್ಮದಿಯನ್ನು ಕಸಿಯುತ್ತಾ ಸಾಗುತ್ತದೆ. ಉಡಾಫೆ ವ್ಯಕ್ತಿತ್ವವೇ ನೈಜ ಎಂದು ತಪ್ಪಾಗಿ ಭಾವಿಸಿ ಸಹಜತೆಯಿಂದ ದೂರ ಸರಿಯುತ್ತಿದ್ದೇವೆ.

ಯಾರೋ ಒಬ್ಬ ರಾಜಕಾರಣಿ, ನಟ ಅಥವಾ ನಟಿ, ಧರ್ಮಾಧಿಕಾರಿ, ಪತ್ರಕರ್ತ, ಬರಹಗಾರ, ಸಂಘಟಕ ಮುಂತಾದವರು ಸತ್ಯ ಮತ್ತು ವಾಸ್ತವವನ್ನು ಇದ್ದಂತೆ ಹೇಳುವ ಬದಲು ಜನಪ್ರಿಯತೆಯ ಚುಂಗು ಹಿಡಿದು ಜನರನ್ನು ಮೆಚ್ಚಿಸಲು ಸುಳ್ಳುಗಳ ಸರಮಾಲೆಯನ್ನೇ ಕಟ್ಟುತ್ತಾನೆ. ಜನರು ಸಹ ಅದನ್ನೇ ನಿಜ ಎಂದು ನಂಬುವ ಪರಿಸ್ಥಿತಿ ನಿರ್ಮಾಣವಾಗಿದೆ.

ಭ್ರಷ್ಟರು, ಹಣವಂತರು, ಜಾತಿವಾದಿಗಳು, ದಡ್ಡರು ಚುನಾವಣೆಯಲ್ಲಿ ಗೆಲ್ಲುವುದು, ವಿವಾದಾಸ್ಪದ ಸುಳ್ಳು ಹೇಳಿಕೆಯ ಮುಖಾಂತರ ಬರಹಗಾರನೊಬ್ಬ ಅಧಿಕಾರ ಪ್ರಶಸ್ತಿ ಗಳಿಸುವುದು, ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಾ, ಕೂಗಾಡುತ್ತಾ ಯಾರೋ ಒಬ್ಬ ನಾಯಕನಾಗುವುದು ಎಲ್ಲವೂ ಇದರ ಪರಿಣಾಮವೇ.

ಸತ್ಯ ಮತ್ತು ವಾಸ್ತವವನ್ನು ಸರಿಯಾಗಿ ಗ್ರಹಿಸುವ ಬುದ್ಧಿಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದೇವೆ.

ಅದರ ಪರಿಣಾಮವಾಗಿ,

ಮಳೆ ಸುರಿಯುವುದು ಕಡಿಮೆಯಾಗುತ್ತಿದೆ,
ರಕ್ತ ಹರಿಯುವುದು ಜಾಸ್ತಿಯಾಗುತ್ತಿದೆ…..

ಶುಧ್ಧ ಗಾಳಿ ಬೀಸುವುದು ಅಪರೂಪವಾಗುತ್ತಿದೆ,
ಗಾಳಿ ಸುದ್ದಿ ಹಬ್ಬುವುದು ಸರಾಗವಾಗುತ್ತಿದೆ…..

ಮೌಲ್ಯಗಳು ಅಧಃಪತನವಾಗುತ್ತಿವೆ,
ಕ್ರೌರ್ಯಗಳು ವಿಜೃಂಭಿಸುತ್ತಿವೆ…..

ಅಪನಂಬಿಕೆಗಳು ಸಾಮ್ರಾಜ್ಯ ಸ್ಥಾಪಿಸುತ್ತಿವೆ,
ವಾಸ್ತವಗಳು ಗೂಡು ಸೇರುತ್ತಿವೆ…..

ದ್ವೇಷ ಭಾವನೆಗಳು ಉಕ್ಕುತ್ತಿವೆ,
ಪ್ರೀತಿಯ ಸೆಳೆತಗಳು ಬರಡಾಗುತ್ತಿವೆ…..

ಅಕ್ಷರಗಳು ಕತ್ತಿಯಂತೆ ಮೊನಚಾಗುತ್ತಿವೆ,
ಅದೇ ಅಕ್ಷರಗಳು ಮನಸ್ಸುಗಳನ್ನು ಇರಿಯುತ್ತಿವೆ…..

ವಿದ್ಯೆ – ಬುದ್ದಿಗಳು ಬೆಳೆಯುತ್ತಿವೆ,
ಸತ್ಯ – ಪ್ರಾಮಾಣಿಕತೆಗಳು ನಶಿಸುತ್ತಿವೆ…..

ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ,
ಮಾನಸಿಕ ಸ್ಥಿತಿ ಕುಸಿಯುತ್ತಿದೆ…..

ಎಲ್ಲವೂ ಫಳಫಳ ಹೊಳೆಯುತ್ತಿವೆ,
ಮನಸ್ಸುಗಳು ಕೊಳೆಯುತ್ತಿವೆ……

ಆದರೂ……

ನಿಜಕ್ಕೂ ಮನುಷ್ಯ ಮೂಲಭೂತವಾಗಿ ಅಷ್ಟು ಕೆಡುಕನಲ್ಲ. ಪ್ರಕೃತಿಯ ಸವಾಲಿಗೆ ಎದೆಯೊಡ್ಡಿ ಇಡೀ ಸೃಷ್ಟಿಯನ್ನೇ ತನ್ನ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವಷ್ಟು ಮಹತ್ವಾಕಾಂಕ್ಷಿ ಮತ್ತು ಚಾಣಾಕ್ಷ.

ಆದರೆ ಯಾಕೋ ಬರಬರುತ್ತಾ ತನ್ನ ಮನಸ್ಸಿನ ಮೇಲೆಯೇ ನಿಯಂತ್ರಣ ಕಳೆದುಕೊಳ್ಳುತ್ತಿದ್ದಾನೆ.
ದುರಾಸೆಗೆ ಬಿದ್ದು, ಅಜ್ಞಾನಕ್ಕೆ ಶರಣಾಗಿ ಮುಖವಾಡದ ಮರೆಯಲ್ಲಿದ್ದಾನೆ ಮತ್ತು ಅದೇ ನಾನು ಎಂದೇ ಒಪ್ಪಿಕೊಂಡಿದ್ದಾನೆ…..

ಅದು ಸುಳ್ಳು ಮನುಜ.
ನಿನ್ನ ನಿಜ ರೂಪವೇ,
ಅದ್ಭುತ – ಅಮೋಘ – ಅಪ್ರತಿಮ – ಅತ್ಯುತ್ತಮ – ಅಗಾಧ –
ಅದನ್ನೇ ಉಳಿಸಿಕೋ – ಅದನ್ನೇ ಬೆಳೆಸಿಕೋ – ಅದನ್ನೇ ಗಳಿಸಿಕೋ – ಅದನ್ನೇ – ಒಪ್ಪಿಕೋ – ಅದನ್ನೇ ಅಪ್ಪಿಕೋ…..

ಸೃಷ್ಟಿಯ ಅತ್ಯದ್ಭುತ ಪ್ರಾಣಿ ನೀನೇ,
ನಿನಗೊಂದು ಸಲಾಂ.

ಒಣ ಮಾತುಗಳಿಗಿಂತ ನಿಜ ವ್ಯಕ್ತಿತ್ವ ನಮ್ಮ ಸಮಾಜದ ಆದರ್ಶವಾಗುವ ಜಾಗೃತ ಸ್ಥಿತಿ ಬೇಗ ಬರಲಿ,
ಎಲ್ಲರೂ ಎಚ್ಚೆತ್ತುಕೊಳ್ಳೋಣ ಎಂದು
ಆಶಿಸುತ್ತಾ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!