images-5.jpeg
Spread the love

ದೇಶ ಸೇವೆ – ದೇಶಭಕ್ತಿ….
°°°°°°°°°°°°°°°°°°°°°°°°°

ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬರು ಸ್ವಾತಂತ್ರ್ಯ ದಿನದ ಪ್ರಯುಕ್ತ ಅವರ ಶಾಲೆಯ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಲು
” ದೇಶ ಸೇವೆ – ದೇಶಭಕ್ತಿ ” ಎಂಬ ವಿಷಯದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಮನವಿ ಮಾಡಿಕೊಂಡರು. ಆ ಮಗುವಿಗೆ ನಾನು ಹೇಳಿದ ವಿಷಯಗಳು…………

ದೇಶ ಸೇವೆ


” ದೇಶ ನಿನಗೇನು ಕೊಟ್ಟಿದೆ ಎಂಬುದನ್ನು ಕೇಳುವುದಕ್ಕೆ ಮೊದಲು, ನೀನು ದೇಶಕ್ಕಾಗಿ ಏನು ಕೊಟ್ಟಿರುವೆ ಎಂದು ನಿನ್ನನ್ನೇ ಕೇಳಿಕೋ ” ಎಂದು ಅಮೆರಿಕಾದ ಅಧ್ಯಕ್ಷರಾಗಿದ್ದ ಜಾನ್. ಎಫ್. ಕೆನಡಿ ಅವರು ಒಮ್ಮೆ ಹೇಳುತ್ತಾರೆ.

ಈ ಸಂಧರ್ಭದಲ್ಲಿ ಭಾರತೀಯರಾದ ನಮ್ಮೆಲ್ಲರಿಗೂ ಇದು ಅತ್ಯಂತ ಮಹತ್ವವಾದುದು.

ದೇಶ ಸೇವೆ ಎಂದರೆ ಸೈನ್ಯ ಸೇರಿ ದೇಶದ ರಕ್ಷಣೆ ಮಾಡುವುದು ಮಾತ್ರವಲ್ಲ ದೇಶ ಸೇವೆ ಬಹಳ ವಿಶಾಲವಾದ ಅರ್ಥವನ್ನು ಹೊಂದಿದೆ.

ದೇಶ ಸೇವೆಯ ಮೊಟ್ಟಮೊದಲ ಮತ್ತು ಬಹುಮುಖ್ಯ ಅಂಶವೆಂದರೆ ನಮ್ಮ ‌ಸಂವಿಧಾನವನ್ನು ಗೌರವಿಸುವುದು ಮತ್ತು ಪಾಲಿಸುವುದು. ಅದಕ್ಕೆ ನಮ್ಮಿಂದ ಯಾವುದೇ ಚ್ಯುತಿ ಬಾರದಂತೆ ವರ್ತಿಸುವುದು. ಆ ಮುಖಾಂತರ ನಮ್ಮ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವುದು.

ಎರಡನೆಯ ಪ್ರಮುಖ ಸೇವೆಯೆಂದರೆ,
ದೇಶದ ಆಂತರಿಕ, ಬಾಹ್ಯ, ನೈಸರ್ಗಿಕ ಅಥವಾ ಬೇರೆ ಯಾವುದೇ ಸಂಕಷ್ಟದ ಸಮಯದಲ್ಲಿ ಕಾಯಾ ವಾಚಾ ಮನಸಾ ಅದರ ಜೊತೆಗಿರುವುದು. ಇಂತಹ ಸನ್ನಿವೇಶದಲ್ಲಿ ದೇಶದ್ರೋಹಿಗಳು ಪರಿಸ್ಥಿತಿಯ ಲಾಭ ಪಡೆದು ದೇಶವನ್ನು ನಾಶ ಮಾಡಲು ಪ್ರಯತ್ನಿಸುತ್ತಾರೆ. ಅದಕ್ಕೆ ನಾವು ಯಾವುದೇ ಅವಕಾಶ ನೀಡಬಾರದು.

ಮೂರನೆಯ ಮುಖ್ಯ ಅಂಶವೆಂದರೆ,
ದೇಶದ ಸಾರ್ವಜನಿಕ ಆಸ್ತಿ ಪಾಸ್ತಿಗಳಾದ ಶಾಲೆ, ರಸ್ತೆ, ಕಚೇರಿ ವಾಹನ, ಆಸ್ಪತ್ರೆ ಯಾವುದೇ ಇರಲಿ ಅದಕ್ಕೆ ನಮ್ಮಿಂದ ಯಾವುದೇ ಹಾನಿಯಾಗದಂತೆ ಎಚ್ಚರವಹಿಸುವುದು ಮತ್ತು ಪ್ರಾಕೃತಿಕ ಸಂಪನ್ಮೂಲಗಳಾದ ಗಾಳಿ, ನೀರು, ಬೆಳಕು, ಕಾಡು, ಬೆಟ್ಟ ಗುಡ್ಡಗಳ ಪ್ರದೇಶವನ್ನು ನಾಶ ಮಾಡದೆ, ಮಲಿನ ಮಾಡದೆ, ದುರುಪಯೋಗ ಪಡಿಸಿಕೊಳ್ಳದೆ ಅದನ್ನು ರಕ್ಷಿಸುವುದು ದೇಶಕ್ಕೆ ನಾವು ಮಾಡಬಹುದಾದ ಸೇವೆಗಳಲ್ಲಿ ಮಹತ್ವದ್ದಾಗಿರುತ್ತದೆ.

ನಾಲ್ಕನೆಯದಾಗಿ,
ವೈಯಕ್ತಿಕ ಬದುಕಿನಲ್ಲಿ ನಾವು ಭ್ರಷ್ಟರಾಗದೆ, ದುಶ್ಚಟಗಳ ದಾಸರಾಗದೆ, ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡದೆ, ಗಲಭೆಯಲ್ಲಿ ಭಾಗವಹಿಸದೆ, ಗುರು ಹಿರಿಯರು, ಮಾತಾ ಪಿತೃಗಳು ಮುಂತಾದ ಎಲ್ಲರನ್ನೂ ಗೌರವಿಸಿ – ಪ್ರೀತಿಸಿ ನಮ್ಮಿಂದ ಯಾವುದೇ ಅಪಚಾರವಾಗದಂತೆ ನಡವಳಿಕೆ ರೂಪಿಸಿಕೊಳ್ಳುವುದು ದೇಶಕ್ಕೆ ನಾವು ಮಾಡುವ ಸಹಾಯವಾಗುತ್ತದೆ.

ಐದನೆಯದಾಗಿ,
ನಾವು ನಮ್ಮಲ್ಲಿರುವ ಕ್ರೀಡೆ, ಸಾಹಿತ್ಯ, ಸಂಗೀತ, ಕಲೆ, ವಿಜ್ಞಾನ, ವ್ಯಾಪಾರ, ಉದ್ಯಮ ಮುಂತಾದ ಯಾವುದೇ ಕ್ಷೇತ್ರದಲ್ಲೂ ಅತ್ಯಂತ ಪ್ರಾಮಾಣಿಕ ಮತ್ತು ಶ್ರಮದಿಂದ ದೊಡ್ಡ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದರೆ ಅಥವಾ ಅದಕ್ಕೆ ಪ್ರಯತ್ನಿಸಿದರೆ ಅದು ನಮ್ಮ ದೇಶಕ್ಕೆ ನಾವು ಕೊಡಬಹುದಾದ ಬಹುದೊಡ್ಡ ಕೊಡುಗೆಯಾಗುತ್ತದೆ.

ಹೀಗೆ ಹೇಳುತ್ತಾ ಹೋದರೆ ಇನ್ನೂ ಸಾಕಷ್ಟು ವಿಷಯಗಳು ದೇಶ ಸೇವೆಯ ವ್ಯಾಪ್ತಿಯಲ್ಲಿ ಬರುತ್ತದೆ.

ಇಲ್ಲಿ ಇನ್ನೂ ಒಂದು ಮುಖ್ಯ ವಿಷಯವೆಂದರೆ, ಈ ಅಂಶಗಳು ಕೇವಲ ಹೇಳಿಕೆಗಳು, ಭಾಷಣಗಳು, ಪ್ರಬಂಧಗಳು, ಬರಹಗಳು, ಅಂಕಣಗಳು ಅಥವಾ ಇನ್ಯಾವುದೇ ಕಲಾ ಪ್ರಕಾರದ ರೂಪದಲ್ಲಿ ಇರದೆ ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅದು ನಿಜವಾದ ‌ದೇಶಸೇವೆಯಾಗುತ್ತದೆ. ಕೇವಲ ನಮ್ಮ ದೇಶದ ರಾಷ್ಟ್ರೀಯ ಹಬ್ಬಗಳಾದ ಗಣರಾಜ್ಯೋತ್ಸವ ಅಥವಾ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಗೀತೆ ಹಾಡಿ, ತ್ರಿವರ್ಣ ಧ್ವಜವನ್ನು ಹಾರಿಸಿ ದೇಶದ ಮಹಾನ್ ವ್ಯಕ್ತಿಗಳನ್ನು ಸ್ಮರಿಸಿಕೊಂಡ ಮಾತ್ರಕ್ಕೆ ಅದು ದೇಶ ಸೇವೆಯಾಗುವುದಿಲ್ಲ. ಆ ದಿನಗಳು ಕೇವಲ ಸಾಂಕೇತಿಕ ಆಚರಣೆಗಳು.

ಗೆಳೆಯ – ಗೆಳತಿಯರೆ ಇನ್ನು ಮುಂದೆ ನಾವು ಈ ಅಂಶಗಳನ್ನು ನಮ್ಮ ಜೀವನದಲ್ಲಿ ಪಾಲಿಸುವ ಮುಖಾಂತರ ದೇಶ ಸೇವೆ ಸಲ್ಲಿಸುವ ಸಂಕಲ್ಪ ಮಾಡೋಣ.

ಈ ಸಂದರ್ಭದಲ್ಲಿ ಅಮೆರಿಕಾದಲ್ಲಿ ನಡೆದ ಒಂದು ಘಟನೆ ನೆನಪಾಗುತ್ತಿದೆ……

ದೇಶಭಕ್ತಿ……
•••••••••••••••

ಅಮೆರಿಕಾದ ನ್ಯಾಯಾಂಗ ಇತಿಹಾಸದಲ್ಲಿ ದಾಖಲಾದ ಒಂದು ಮಹತ್ವದ ತೀರ್ಪು ಪತ್ರಿಕೆಯೊಂದರಲ್ಲಿ ಬಹಳ ಹಿಂದೆ ಪ್ರಕಟವಾಗಿತ್ತು. ಬರೆದವರ ಹೆಸರು ನೆನಪಿಲ್ಲ. ಕ್ಷಮಿಸಿ. ಅದರ ಸಾರಾಂಶ ಹೀಗಿದೆ…..

ಅಮೆರಿಕಾದ ಒಂದು ನಗರದಲ್ಲಿ ಒಬ್ಬ ಶ್ರೀಮಂತನ ಮನೆಗೆ ಕಳ್ಳನೊಬ್ಬ ಕದಿಯಲು ಮನೆಯ ಹಿಂಬಾಗಿಲನ್ನು ಮುರಿದು ಒಳ ನುಗ್ಗುತ್ತಾನೆ. ಕೈಗೆ ಸಿಕ್ಕ ಹಣ ಒಡವೆಗಳನ್ನು ದೋಚಿಕೊಂಡು ಚೀಲದಲ್ಲಿ ತುಂಬಿಸಿಕೊಳ್ಳುತ್ತಾನೆ. ಆಗ ಆದ ಸಣ್ಣ ಶಬ್ಧದಿಂದಾಗಿ ಬೇರೆ ಒಂದು ಕೋಣೆಯಲ್ಲಿದ್ದ ಮನೆಯ ಯಜಮಾನನಿಗೆ ಎಚ್ಚರವಾಗುತ್ತದೆ….

ತಕ್ಷಣ ತನ್ನ ರೂಮಿನಲ್ಲಿಯೇ ಇದ್ದ ಸಿಸಿಟಿವಿ ನೋಡಿದಾಗ ಇಡೀ ಪರಿಸ್ಥಿತಿ ಅರ್ಥವಾಗುತ್ತದೆ. ಕಳ್ಳನ ಬಳಿ ಬಂದೂಕು ಇರುವುದನ್ನೂ ಗಮನಿಸುತ್ತಾನೆ. ಇವನ ಬಳಿ ಗನ್ ಇದ್ದರೂ ಆ ಸಂಧರ್ಭದಲ್ಲಿ ಅದನ್ನು ಉಪಯೋಗಿಸುವುದು ಅಪಾಯಕಾರಿ ಎಂದು ನಿರ್ಧರಿಸುತ್ತಾನೆ…..

ಕಳ್ಳ ತನ್ನ ಕೆಲಸ ಮುಗಿಸಿ ಇನ್ನೇನು ಮನೆಯಿಂದ ಹೊರ ಹೋಗಬೇಕೆನ್ನುವಷ್ಟರಲ್ಲಿ ಮನೆ ಒಡೆಯನಿಗೆ ಕೊನೆಯ ಹಂತದಲ್ಲಿ ಒಂದು ಉಪಾಯ ಹೊಳೆಯುತ್ತದೆ. ಆತ ತಕ್ಷಣ ತನ್ನ ಬಳಿ ಇದ್ದ Audio System ನಿಂದ ಅಮೆರಿಕಾದ ರಾಷ್ಟ್ರಗೀತೆಯ ಧ್ವನಿ ಮುದ್ರಣ ಪ್ರಸಾರ ಮಾಡುತ್ತಾನೆ.

ಓಡಿ ಹೋಗಲು ಸಿದ್ಧನಾಗಿದ್ದ ಕಳ್ಳ ರಾಷ್ಟ್ರಗೀತೆ ಕೇಳಿದ ತಕ್ಷಣ ಅದಕ್ಕೆ ಗೌರವ ಸೂಚಿಸಲು ಸ್ಥಬ್ಧವಾಗಿ ನಿಲ್ಲುತ್ತಾನೆ. ಆ ಒಂದೇ ನಿಮಿಷದಲ್ಲಿ ಮನೆ ಒಡೆಯ ಅವನ ಸ್ಥಭ್ಧತೆಯನ್ನು ಉಪಯೋಗಿಸಿಕೊಂಡು ಓಡಿ ಬಂದು ಕಳ್ಳನನ್ನು ಕಟ್ಟಿಹಾಕಿ ದರದರನೆ ಎಳೆದು ಒಂದು ಕೋಣೆಯಲ್ಲಿ ಕೂಡಿಹಾಕಿ ಪೋಲೀಸರಿಗೆ ಫೋನ್ ಮಾಡುತ್ತಾನೆ ಮತ್ತು Emergency ಸೈರನ್ ಕೂಗಿಸುತ್ತಾನೆ.
ಕೆಲವೇ ನಿಮಿಷಗಳಲ್ಲಿ ಅಲ್ಲಿಗೆ ಬಂದ ಪೋಲೀಸರು ಕಳ್ಳನನ್ನು ಬಂಧಿಸಿ, ಇಡೀ ಘಟನೆಯ ವರದಿಯನ್ನು ಚಾರ್ಜ್ ಷೀಟ್ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ.

ಕೆಲವು ದಿನಗಳ ವಿಚಾರಣೆಯ ನಂತರ ತೀರ್ಪು ಹೊರಬೀಳುತ್ತವೆ. ಅದರ ಪ್ರಕಾರ…..

ಕಳ್ಳ ಕಳ್ಳತನಕ್ಕಾಗಿ ಇನ್ನೊಬ್ಬರ ಮನೆಗೆ ಅಕ್ರಮವಾಗಿ ಪ್ರವೇಶಿಸಿದ್ದು ಅಪರಾಧ. ಅದಕ್ಕಾಗಿ ಅವನಿಗೆ ಎರಡು ವರ್ಷದ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಆತ ಕಳ್ಳನಾದರೂ, ತನ್ನ ಜೀವಕ್ಕೇ ಅಪಾಯವಿದ್ದರೂ, ತಪ್ಪಿಸಿಕೊಳ್ಳುವ ಸಾಧ್ಯತೆಯಿದ್ದರೂ, ಆ ಸಂದರ್ಭದಲ್ಲಿ ರಾಷ್ಟ್ರಗೀತೆಗೆ ಆತ ನೀಡಿದ ಗೌರವವನ್ನು ನ್ಯಾಯಾಲಯ ಅಭಿನಂದಿಸುತ್ತದೆ ಮತ್ತು ಆತನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಆತನಿಗೆ ಎಚ್ಚರಿಕೆ ಕೊಟ್ಟು ಮುಂದೆ ಸರಿ ದಾರಿಯಲ್ಲಿ ಹೋಗಬೇಕೆಂದು ಸೂಚಿಸಿ, ಸರ್ಕಾರದಿಂದ ಆತನ ಮುಂದಿನ ಭವಿಷ್ಯಕ್ಕೆ ಏನಾದರೂ ನೆರವು ದೊರಕಿಸಿಕೊಡಬೇಕೆಂದು ಸೂಚಿಸಿ ಆತನ ಶಿಕ್ಷೆಯನ್ನು ರದ್ದುಪಡಿಸಿ ಬಿಡುಗಡೆಗೊಳಿಸಲಾಗುತ್ತದೆ.

ನ್ಯಾಯಾಲಯ ತೀರ್ಪನ್ನು ಮತ್ತೂ ಮುಂದುವರಿಸಿ, ಅದೇ ಸಂದರ್ಭದಲ್ಲಿ ಮನೆಯ ಒಡೆಯ ತನ್ನ ಜೀವಕ್ಕೆ ಅಪಾಯವಿಲ್ಲದಿದ್ದರೂ, ತನ್ನ ವೈಯಕ್ತಿಕ ಸಂಪತ್ತಿನ ರಕ್ಷಣೆಗಾಗಿ ಬೇರೆ ಮಾರ್ಗ ಅನುಸರಿಸದೆ ರಾಷ್ಟ್ರಗೀತೆಯನ್ನು ದುರುಪಯೋಗ ಪಡಿಸಿಕೊಂಡಿದ್ದನ್ನು ಗಂಭೀರವಾಗಿ ಪರಿಗಣಿಸಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸುತ್ತದೆ. ಇದೊಂದು ಅಪರೂಪದ ಪ್ರಕರಣವಾಗಿರುವುದರಿಂದ ಜನರಲ್ಲಿ ರಾಷ್ಟ್ರಗೀತೆಯ ಜಾಗೃತಿ ಮೂಡಿಸಲು ಮತ್ತು ಅದರ ಬಗ್ಗೆ ಹೆಚ್ಚಿನ ಗೌರವ ಸೂಚಿಸುವಂತಾಗಲು ಮನೆಯ ಒಡೆಯನಿಗೆ ಸಾಂಕೇತಿಕವಾಗಿ ಒಂದು ದಿನದ ಸಾಧಾರಣ ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಭಾರತೀಯರಾದ ನಾವು ಇಡೀ ಘಟನೆಯನ್ನು ಹಸಿಹಸಿಯಾಗಿ ನೋಡದೆ, ಇಲ್ಲಿ ಅಡಗಿರುವ ಆಳವಾದ ಒಳ ಅರ್ಥವನ್ನು ಗ್ರಹಿಸಿ ಆತ್ಮಾವಲೋಕನ ಮಾಡಿಕೊಂಡರೆ ನಮ್ಮ ವ್ಯಕ್ತಿತ್ವಗಳಿಗೆ ಒಂದು ಮೆರುಗು ಬರುತ್ತದೆ. ವ್ಯಕ್ತಿ ಸ್ವಾತಂತ್ರ್ಯ ಮತ್ತು ದೇಶಭಕ್ತಿಯ ನಡುವಿನ ಅಂತರ ಗುರುತಿಸಬಹುದು ಎನಿಸುತ್ತದೆ. ಇದನ್ನೂ ಮೀರಿದ ಒಳ ಅರ್ಥ ನಿಮಗೆ ಗೋಚರಿಸಿದರೆ ದಯವಿಟ್ಡು ಹಂಚಿಕೊಳ್ಳಿ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!