IMG_20260719_162109-1536x1536.jpg
Spread the love

ದಿನಾಂಕ:19-07-2026(ಹಾಯ್ ಉಡುಪಿ ನ್ಯೂಸ್)

ಉಡುಪಿ: ನಗರದ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಹೊಂದಿದ್ದು, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉಡುಪಿ ಪೊಲೀಸರ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಬಂಧಿತರಿಂದ ಒಟ್ಟು 3,31,500/- ರೂ. ಮೊತ್ತದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು 1. ವಿಜಯ ಪೂಜಾರಿ (36) 2.ಪಿ. ಎ. ಮೊಹಮ್ಮದ್‌ ಸಮ್ಮಾಸ್‌ (24), 3. ಆಕಾಶ್‌ ಶೆಟ್ಟಿ (20) ಎಂದು ಗುರುತಿಸಲಾಗಿದೆ.
ಈ ಮೂವರು ಆರೋಪಿಗಳು ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಬುಡ್ನಾರು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕ ವಸ್ತುಗಳಾದ ಎಂ.ಡಿ.ಎಂ.ಎ ಪೌಡರ್‌, ಹೈಡ್ರೋಗಾಂಜಾ ಮತ್ತು ಎಂ.ಡಿ.ಎಂ.ಎ ಟ್ಯಾಬ್ಲೆಟ್‌ಗಳನ್ನು ಇಟ್ಟುಕೊಂಡು ಕಾಪು, ಉಡುಪಿ, ಮಣಿಪಾಲ ಹಾಗೂ ಕಾರ್ಕಳ ಪರಿಸರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.


ಬಂಧಿತರಿಂದ 04 ಗ್ರಾಂ ತೂಕದ ಎಂ.ಡಿ.ಎಂ.ಎ ಪೌಡರ್‌, 2.5 ಗ್ರಾಂ ಹೈಡ್ರೋಗಾಂಜಾ, 3.65 ಗ್ರಾಂ ಎಂ.ಡಿ.ಎಂ.ಎ ಟ್ಯಾಬ್ಲೆಟ್‌, 3 ಗ್ರಾಂ ತೂಕದ ಗಾಂಜಾ ಹಾಗೂ ಮಾದಕ ವಸ್ತುಗಳ ಸಾಗಾಟಕ್ಕೆ ಬಳಸಿದ್ದ 1 ಕಾರು ಮತ್ತು ಇತರೇ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 95/2026 ಕಲಂ 8(C), 20(C), 22(A) NDPS ACT 1985 ರಂತೆ ಪ್ರಕರಣ ದಾಖಲಾಗಿದೆ.
ಉಡುಪಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಕೆ.ಯು ರವರ ಮಾರ್ಗದರ್ಶನದಲ್ಲಿ, ಮಲ್ಪೆ ಪೊಲೀಸ್‌ ನಿರೀಕ್ಷಕರಾದ ರಾಮಚಂದ್ರ ನಾಯಕ್ ರವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಉಡುಪಿ ಸಂಚಾರ ಠಾಣೆಯ ಪಿ.ಎಸ್.‌ಐ ಮಹೇಶ್‌ ಟಿ.ಎಂ, ಸೈಬರ್‌ ಅಪರಾಧ ಪೊಲೀಸ್ ಠಾಣೆಯ ಪ್ರವೀಣ್ ಕುಮಾರ್‌, ಹಿರಿಯಡ್ಕ ಠಾಣೆಯ ಪ್ರವೀಣ್‌ ಶೆಟ್ಟಿಗಾರ್‌, ಮಲ್ಪೆ ವೃತ್ತ ಕಛೇರಿಯ ಇಂದ್ರೇಶ್, ಹನುಮಂತ ಅಸ್ಕಿ, ಮನು ಕುಮಾರ್‌, ರಶ್ಮೀ ಹೆಗಡೆ, ರವಿ ಕುಮಾರ್‌ ಹಾಗೂ ಉಡುಪಿ ಸಂಚಾರ ಠಾಣೆಯ ಶ್ರೀನಿವಾಸ, ಸಂತೋಷ ಮತ್ತು ದಿನೇಶ್‌ ರವರು ಪಾಲ್ಗೊಂಡಿದ್ದರು.

error: No Copying!