ಬೆಂಗಳೂರು: ದಿನಾಂಕ:19-07-2026(ಹಾಯ್ ಉಡುಪಿ ನ್ಯೂಸ್) ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ರಾಜ್ಯದ “ಬರ ಪರಿಸ್ಥಿತಿ, ಕುಡಿಯುವ ನೀರು, ಜಾನುವಾರು ಮೇವು, ಕೃಷಿ ಚಟುವಟಿಕೆ ಹಾಗೂ ಉದ್ಯೋಗ” ವಿಷಯಗಳ ಕುರಿತು ವಿಧಾನ ಸೌಧದಲ್ಲಿ ಇಂದು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ಸಮಾಲೋಚನೆ ನಡೆಸಿ ಮಾತನಾಡಿದರು –
ಸಣ್ಣ ಮತ್ತು ಅತಿ ಸಣ್ಣ ರೈತರ ಸಂಪೂರ್ಣ ವಿವರಗಳನ್ನು ‘ಫ್ರೂಟ್ಸ್’ (FRUITS) ತಂತ್ರಾಂಶದ ಮೂಲಕ ಸಿದ್ಧವಾಗಿಟ್ಟುಕೊಂಡು, ಪ್ರತಿಯೊಂದು ಪರಿಹಾರವೂ ತಳಮಟ್ಟದ ಅರ್ಹ ಫಲಾನುಭವಿಗೆ ತಲುಪುವಂತೆ ನೋಡಿಕೊಳ್ಳಬೇಕು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಅಥವಾ ತಾಂತ್ರಿಕ ಲೋಪದಿಂದ ಯಾವುದೇ ಒಬ್ಬ ರೈತನಿಗೆ ಬೆಳೆವಿಮೆ ಸಿಗದೆ ಇರುವುದು ಅಥವಾ ಪರಿಹಾರ ವಂಚಿತವಾಗುವ ಸ್ಥಿತಿ ಉದ್ಭವಿಸಲೇಬಾರದು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆವಿಮೆ ಮಾಡಿಸುವಂತೆ ಪ್ರೇರೇಪಿಸಿ ಹಾಗೂ ಬೆಳೆಹಾನಿ ಸಮೀಕ್ಷೆಯನ್ನು ನಿಯಮಾನುಸಾರ ತಕ್ಷಣವೇ ಪೂರ್ಣಗೊಳಿಸ ಬೇಕು
ನಮ್ಮ ಮೊದಲ ಮತ್ತು ಪ್ರಧಾನ ಆದ್ಯತೆ ಕುಡಿಯುವ ನೀರು. ರಾಜ್ಯದ ಯಾವುದೇ ಹಳ್ಳಿ ಅಥವಾ ನಗರದ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ತೊಂದರೆ ಕಾಣಿಸಿಕೊಳ್ಳಬಾರದು. ಸ್ಥಳೀಯ ನೀರಿನ ಮೂಲಗಳಿಲ್ಲದಿದ್ದರೆ, ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ಅಥವಾ ಟ್ಯಾಂಕರ್‌ಗಳ ಮೂಲಕ ತಕ್ಷಣವೇ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಿ. ಆದರೆ, ನೀರು ವಿತರಿಸುವ ಮುನ್ನ ಕಡ್ಡಾಯವಾಗಿ ಅದರ ಗುಣಮಟ್ಟ ತಪಾಸಣೆ ನಡೆಸಬೇಕು. ಯಾವುದೇ ಕಾರಣಕ್ಕೂ ಕಲುಷಿತ ನೀರು ಪೂರೈಕೆಯಾಗಿ ಸಾಂಕ್ರಾಮಿಕ ರೋಗಗಳು ಹರಡದಂತೆ ತೀವ್ರ ಮುನ್ನೆಚ್ಚರಿಕೆ ವಹಿಸಿ. ಅಸ್ತಿತ್ವದಲ್ಲಿರುವ ಜಲಮೂಲಗಳು ಕಲುಷಿತವಾಗದಂತೆ ರಕ್ಷಿಸಿ ಮತ್ತು ಮಳೆನೀರು ಎಲ್ಲೂ ಪೋಲಾಗದಂತೆ ತಡೆಯಲು ಸಾರ್ವಜನಿಕರಲ್ಲಿ ಮಳೆನೀರು ಕೊಯ್ಲಿನ ಕುರಿತು ಜಾಗೃತಿ ಮೂಡಿಸಿ.
ಮಾನವರಷ್ಟೇ ಅಲ್ಲದೆ, ಜಾನುವಾರುಗಳ ಸಂರಕ್ಷಣೆಯೂ ಅಷ್ಟೇ ಮುಖ್ಯ. ಅಗತ್ಯವಿರುವ ಕಡೆಗಳಲ್ಲೆಲ್ಲ ತಕ್ಷಣವೇ ಮೇವಿನ ಬ್ಯಾಂಕ್‌ಗಳು ಹಾಗೂ ಗೋಶಾಲೆಗಳನ್ನು ತೆರೆಯಿರಿ. ಹಸಿವು ಮತ್ತು ನೀರಡಿಕೆಯಿಂದ ರಾಜ್ಯದಲ್ಲಿ ಒಂದೇ ಒಂದು ಜಾನುವಾರು ಕೂಡ ಸಾಯಬಾರದು.
ಸರ್ಕಾರದ ಎಲ್ಲಾ ಪರಿಹಾರ ಕ್ರಮಗಳು ಜನರನ್ನು ನೇರವಾಗಿ ತಲುಪಬೇಕು. ಬರದ ತೀವ್ರತೆಯ ಬಿಸಿ ಸಾಮಾನ್ಯ ಜನರಿಗೆ ತಟ್ಟದ ಹಾಗೆ ಅವರನ್ನು ಆಡಳಿತ ಯಂತ್ರವು ಕೈಹಿಡಿಯಬೇಕು. ತಳಮಟ್ಟದಲ್ಲಿ ಆಡಳಿತ ಕಾರ್ಯವೈಖರಿ ಚುರುಕಾಗಬೇಕು ಎಂದು ಸೂಚಿಸಿದರು.
