Untitled-16-July-2026-at-22.49.09-1.jpg
Spread the love

ದಿನಾಂಕ 16-07-2026(ಹಾಯ್ ಉಡುಪಿ ನ್ಯೂಸ್)

ಕುಂದಾಪುರ: ಕೊಲೆಯತ್ನ, ಕಳ್ಳತನ ಹಾಗೂ ಮಾದಕ ದ್ರವ್ಯ ಮಾರಾಟ (NDPS) ಸೇರಿದಂತೆ ಒಟ್ಟು 7 ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ 6 ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಕುಂದಾಪುರ ಮೂಲದ ವಾರೆಂಟ್‌ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಭಟ್ಕಳದಲ್ಲಿ ಬಂಧಿಸಿದ್ದಾರೆ.

ಹಟ್ಟಿಯಂಗಡಿ ಗ್ರಾಮದ ಕರ್ಕಿಗುಡ್ಡೆ ನಿವಾಸಿ ಪ್ರಸಾದ್‌ ಅಲಿಯಾಸ್‌ ರಬಡ (22) ಬಂಧಿತ ಆರೋಪಿ.

7 ಪ್ರಕರಣಗಳು ದಾಖಲು:
ಬಂಧಿತ ಪ್ರಸಾದ್‌ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 4, ಕುಂದಾಪುರ ನಗರ ಠಾಣೆಯಲ್ಲಿ 2 ಹಾಗೂ ಮಣಿಪಾಲ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 7 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ (SC No: 504/2025 ಮತ್ತು SC No: 527/2025) ಜಾಮೀನು ರಹಿತ ವಾರೆಂಟ್ (NBW) ಕೂಡ ಜಾರಿಯಾಗಿತ್ತು.

ಜೊತೆಗೆ 2026ರ ಫೆಬ್ರವರಿ ತಿಂಗಳಲ್ಲಿ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಈತನ ವಿರುದ್ಧ ಕೊಲೆಯತ್ನ ಸೇರಿದಂತೆ ಬಿ.ಎನ್.ಎಸ್ (BNS) ಕಾಯ್ದೆಯ ವಿವಿಧ ಕಲಂ ಅಡಿಯಲ್ಲಿ (ಅಪರಾಧ ಕ್ರಮಾಂಕ: 07/2026) ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಬಳಿಕ ಆರೋಪಿ ಕಳೆದ 6 ತಿಂಗಳಿನಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದನು.

ಭಟ್ಕಳದಲ್ಲಿ ಜಂಟಿ ಕಾರ್ಯಾಚರಣೆ:
ಆರೋಪಿ ಪ್ರಸಾದ್ ಭಟ್ಕಳದಲ್ಲಿ ಇರುವ ಬಗ್ಗೆ ಜುಲೈ 16ರ ಮುಂಜಾನೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ (CPI) ಸಂತೋಷ್ ಎ. ಕಾಯ್ಕಿಣಿ ಅವರ ಮಾರ್ಗದರ್ಶನದಲ್ಲಿ, ಗ್ರಾಮಾಂತರ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪನಿರೀಕ್ಷಕ (PSI) ನಿರಂಜನ್ ಗೌಡ ಹಾಗೂ ತನಿಖಾ ವಿಭಾಗದ ಉಪನಿರೀಕ್ಷಕಿ ಚಂದ್ರಕಲಾ ಎಂ. ಪತ್ತಾರ್ ಅವರ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ಹಮ್ಮಿಕೊಳ್ಳಲಾಯಿತು.

ಠಾಣಾ ಸಿಬ್ಬಂದಿಗಳಾದ ಶ್ರೀಧರ್ ಪಾಟೀಲ್ ಮತ್ತು ಕಿರಣ್ ಬಿ. ಪಾಟೀಲ್ ಅವರನ್ನೊಳಗೊಂಡ ಪೊಲೀಸ್ ತಂಡ ಭಟ್ಕಳಕ್ಕೆ ತೆರಳಿ ಆರೋಪಿಯನ್ನು ಯಶಸ್ವಿಯಾಗಿ ವಶಕ್ಕೆ ಪಡೆದಿದೆ.

ಬಂಧಿತ ಆರೋಪಿಯನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

error: No Copying!