HNQQgY2agAAbIQu.jpg
Spread the love

ಬೆಂಗಳೂರು: ದಿನಾಂಕ:16-07-2026(ಹಾಯ್ ಉಡುಪಿ ನ್ಯೂಸ್)ಇಂದು ಬೆಂಗಳೂರಿನ ನೆಹರೂ ತಾರಾಲಯದ ಆವರಣದ ಪ್ರೊ. ಯು.ಆರ್. ರಾವ್ ಭವನದಲ್ಲಿ ಅಪಾರ್ಟ್‌ಮೆಂಟ್ ಮಾಲೀಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ವಿವಿಧ ಪಾಲುದಾರರೊಂದಿಗೆ ಮಹತ್ವದ ಸಮಾಲೋಚನಾ ಸಭೆ ನಡೆಯಿತು.ಸಭೆಯನ್ನುದ್ದೇಶಿಸಿ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಮಾತನಾಡಿದರು –

-ಜೀವನದಲ್ಲಿ ಕಷ್ಟಪಟ್ಟು, ಒಂದೊಂದೇ ರೂಪಾಯಿ ಉಳಿಸಿ ಸ್ವಂತ ಆಸ್ತಿ ಮಾಡಿಕೊಳ್ಳುವುದು ಪ್ರತಿಯೊಬ್ಬರ ದೊಡ್ಡ ಕನಸು. ತಲೆ ಮೇಲೊಂದು ಸೂರು ಕಟ್ಟುವುದು ಅಷ್ಟೊಂದು ಸುಲಭದ ಮಾತಲ್ಲ. ಹಾಗೆ ಅಪಾರ್ಟ್‌ಮೆಂಟ್ ಖರೀದಿಸಿದ ಮೇಲೆ ಅದರ ಮೇಲಿನ ಸಂಪೂರ್ಣ ಹಕ್ಕು ನಿಮಗೇ ಇರಬೇಕು, ನೀವೇ ಅದರ ನಿಜವಾದ ಮಾಲೀಕರಾಗಬೇಕು. ಈ ವಿಷಯದಲ್ಲಿ ನಮ್ಮ ಸರ್ಕಾರದ ನಿಲುವು ಅತ್ಯಂತ ಸ್ಪಷ್ಟ ಮತ್ತು ದೃಢವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು .

ಈಗಾಗಲೇ 6ನೇ ಗ್ಯಾರಂಟಿ ಮೂಲಕ ನಾಗರಿಕರಿಗೆ ತಮ್ಮ ಆಸ್ತಿ ಹಕ್ಕನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಲಕ್ಷಾಂತರ ಜನರಿಗೆ ಈಗಾಗಲೇ ಈ ಯೋಜನೆಯಿಂದ ಲಾಭ ಕೂಡ ಸಿಕ್ಕಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಅಪಾರ್ಟ್‌ಮೆಂಟ್ ನಿವಾಸಿಗಳು ಹಾಗೂ ಮಾಲೀಕರ ಹಿತರಕ್ಷಣೆಗಾಗಿ ನಾವು ತರುತ್ತಿರುವ ‘ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ’ ಕೇವಲ ಕಾನೂನಲ್ಲ, ಇದು ಮಧ್ಯಮ ವರ್ಗದ ಜನರ ಹಿತ ಕಾಯುವ ನಮ್ಮ ಸರ್ಕಾರದ ಆದ್ಯತೆ ಆಗಿದೆ.

ಇಂದು ಬೆಂಗಳೂರಿನ ನೆಹರೂ ತಾರಾಲಯದ ಆವರಣದ ಪ್ರೊ. ಯು.ಆರ್. ರಾವ್ ಭವನದಲ್ಲಿ ಅಪಾರ್ಟ್‌ಮೆಂಟ್ ಮಾಲೀಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ವಿವಿಧ ಪಾಲುದಾರರೊಂದಿಗೆ ಮಹತ್ವದ ಸಮಾಲೋಚನಾ ಸಭೆ ನಡೆಸಿ ಈ ಪ್ರಸ್ತಾವಿತ ಕಾನೂನನ್ನು ಮತ್ತಷ್ಟು ಬಲಪಡಿಸಲು ಸಾರ್ವಜನಿಕರ ಅನಿಸಿಕೆ ಹಾಗೂ ಸಲಹೆಗಳನ್ನು  ಕೇಳುತ್ತಿದ್ದೇವೆ.

ಅಪಾರ್ಟ್‌ಮೆಂಟ್ ಖರೀದಿದಾರರಿಗೆ ಯಾವುದೇ ಹಂತದಲ್ಲಿ ಯಾವುದೇ ರೀತಿಯ ತೊಂದರೆ, ಗೊಂದಲಗಳಾಗದಂತೆ ತಡೆಯಲು ಸರ್ಕಾರ ಬದ್ಧವಾಗಿದೆ. ನಿವಾಸಿಗಳ ಹಿತ ಕಾಯುವ ನಿಟ್ಟಿನಲ್ಲಿ ನಿಮ್ಮ ಎಲ್ಲಾ ಸೂಕ್ತ ಸಲಹೆಗಳನ್ನು ಸ್ವೀಕರಿಸಿ, ಕಾನೂನನ್ನು ಇನ್ನಷ್ಟು ಜನಸ್ನೇಹಿಯಾಗಿ ರೂಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ, ಸಚಿವರಾದ ಶ್ರೀ ಕೆ.ಜೆ. ಜಾರ್ಜ್, ಶ್ರೀ ಬೈರತಿ ಸುರೇಶ್, ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್, ಬಿಡಿಎ ಅಧ್ಯಕ್ಷರಾದ ಶ್ರೀ ಎನ್.ಎ. ಹ್ಯಾರಿಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

error: No Copying!