Screenshot_2026-07-16-23-04-58-87_6012fa4d4ddec268fc5c7112cbb265e7.jpg
Spread the love

ದಿನಾಂಕ:16-07-2026(ಹಾಯ್ ಉಡುಪಿ ನ್ಯೂಸ್)

ಬಂಟ್ವಾಳ: ಇಲ್ಲಿನ ಬಿಸಿ ರೋಡ್‌ನ ಕೆಎಸ್‌ಆರ್‌ಟಿಸಿ (KSRTC) ಹೊಸ ಬಸ್ ನಿಲ್ದಾಣದ ಬಳಿ ಬಸ್‌ಗಾಗಿ ಕಾಯುತ್ತಿದ್ದ ಯುವತಿಯ ಮೇಲೆ ಹರಿತವಾದ ಆಯುಧದಿಂದ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಏಕಪಕ್ಷೀಯ ಪ್ರೀತಿಯ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.

ಗುರುವಾರ (ಜುಲೈ 16) ಸಂಜೆ ಸುಮಾರು 6:00 ಗಂಟೆಯ ವೇಳೆಗೆ 21 ರಿಂದ 25 ವರ್ಷ ಪ್ರಾಯದ ಯುವತಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಈ ಘಟನೆ ನಡೆದಿತ್ತು. ಏಕಾಏಕಿ ನುಗ್ಗಿದ ದುಷ್ಕರ್ಮಿ ಹರಿತವಾದ ಆಯುಧದಿಂದ ಯುವತಿಯ ಕುತ್ತಿಗೆ ಹಾಗೂ ದೇಹದ ಭಾಗಕ್ಕೆ ತೀವ್ರವಾಗಿ ಇರಿದು ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ತಕ್ಷಣವೇ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ತೀವ್ರ ರಕ್ತಸ್ರಾವದಿಂದಾಗಿ ಯುವತಿ ಮೃತಪಟ್ಟಿದ್ದಾರೆ.

ಘಟನೆ ನಡೆದ ತಕ್ಷಣ ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದು, ಆರೋಪಿಯ ಗುರುತು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
“ಪ್ರಾಥಮಿಕ ತನಿಖೆಯ ಪ್ರಕಾರ ಕೃತ್ಯ ಎಸಗಿದ ಆರೋಪಿಯನ್ನು ಚೇತನ್ ಎಂದು ಗುರುತಿಸಲಾಗಿದೆ. ಈತ ಮೃತ ಯುವತಿಯ ದೂರದ ಸಂಬಂಧಿಯಾಗಿದ್ದು, ಆಕೆಯನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಪ್ರೀತಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಘೋರ ಕೃತ್ಯ ಎಸಗಿರುವ ಶಂಕೆ ಇದೆ. ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ” ಎಂದು ದಕ್ಷಿಣ ಕನ್ನಡ ಎಸ್ಪಿ ತಿಳಿಸಿದ್ದಾರೆ.

error: No Copying!