Screenshot_2026-07-16-20-23-24-126_com.whatsapp-edit.jpg
Spread the love

ದಿನಾಂಕ:16-07-2026(ಹಾಯ್ ಉಡುಪಿ ನ್ಯೂಸ್)

ಬ್ರಹ್ಮಾವರ: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸರು ಆರೋಪಿತ ರೌಡಿ ಶೀಟರ್ ಒಬ್ಬನನ್ನು ಬಂಧಿಸಿದ್ದಾರೆ.

ಆರೋಪಿಯ ವಿವರ:

ದಸ್ತಗಿರಿ ಆದ ಆರೋಪಿಯನ್ನು ಹಂದಾಡಿ ಗ್ರಾಮದ ಬೇಳೂರು ಜೆಡ್ಡು ನಿವಾಸಿ  ನಿಖಿಲ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಈಗಾಗಲೇ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಒಂದು ಸುಲಿಗೆ ಹಾಗೂ ಒಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದ್ದು, ಈತ ರೌಡಿ ಅಸಾಮಿಯಾಗಿದ್ದಾನೆ.

ಪ್ರಕರಣದ ಹಿನ್ನೆಲೆ:
ದಿನಾಂಕ 13/07/2026 ರಂದು ಬೆಳಿಗ್ಗೆ 11ನೇ ಹಂದಾಡಿ ಮಟಪಾಡಿ ಹಗಲು ಗ್ರಾಮ ಗಸ್ತು ಕರ್ತವ್ಯದಲ್ಲಿದ್ದ ಬ್ರಹ್ಮಾವರ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಕಿಶನ್ ಅವರು, ಪೊಲೀಸ್ ಉಪನಿರೀಕ್ಷಕರ ಆದೇಶದಂತೆ ಸಂಜೆ 07:00 ಗಂಟೆಗೆ ರೌಡಿ ಅಸಾಮಿ ನಿಖಿಲ್‌ನನ್ನು ಚೆಕ್ ಮಾಡಲು ಆತನ ಮನೆ ಬಳಿ ತೆರಳಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ, ಕಿಶನ್ ಅವರು ತಮ್ಮ ಮೊಬೈಲ್‌ನಿಂದ ನಿಖಿಲ್‌ನ ಮೊಬೈಲ್‌ಗೆ ಕರೆ ಮಾಡಿ ತಾನು ಬೀಟ್ ಪೊಲೀಸ್ ಬಂದಿರುವುದಾಗಿ ತಿಳಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ನಿಖಿಲ್, “ನಾನು ಎಲ್ಲಿದ್ದರೆ ನಿನಗೇಕೆ? ನನಗೆ ಬೇರೆ ಕೆಲಸವಿಲ್ಲವೇ? ನೀನು ಯಾಕೆ ನನ್ನ ಮನೆಗೆ ಬಂದಿದ್ದೀಯಾ? ನೀನು ಅಲ್ಲೇ ಇರು, ನಾನು ಬಂದು ನಿನ್ನನ್ನು ಕೊಂದು ಹಾಕುತ್ತೇನೆ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾನೆ.

ಇದಾದ ನಂತರ ಕಾನ್ಸ್‌ಟೇಬಲ್ ಕಿಶನ್ ಅವರು ವಾಪಸ್ ಠಾಣೆಗೆ ಬಂದು ವಿಶ್ರಾಂತಿಯಲ್ಲಿದ್ದಾಗ, ರಾತ್ರಿ 08:30ರ ಸುಮಾರಿಗೆ ಆರೋಪಿ ನಿಖಿಲ್ ಮತ್ತೆ ಕರೆ ಮಾಡಿ, “ನೀನು ಬಚ್ಚಾ ಬೀಟ್ ಪೊಲೀಸ್, ಈಗ ಬಾ ನೋಡೋಣ” ಎನ್ನುತ್ತಾ ಪುನಃ ಅಸಭ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಪ್ರಕರಣ ದಾಖಲು ಮತ್ತು ಬಂಧನ:
ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಸಾರ್ವಜನಿಕ ಸೇವೆ ಒದಗಿಸಲು ತಡೆಯೊಡ್ಡಿ, ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಆರೋಪಿ ನಿಖಿಲ್ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕದಡಿ, ಭಾರತೀಯ ನ್ಯಾಯ ಸಂಹಿತೆ (BNS) ಯ ಕಲಂ 132, 351(2), 352 ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಗಾಂಭೀರ್ಯತೆಯನ್ನು ಪರಿಗಣಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

error: No Copying!