ಬಾಬಾ ಸಾಹೇಬ್
ಡಾ. ಬಿಆರ್ ಅಂಬೇಡ್ಕರ್ ಅವರ
” ಸಾಮಾಜಿಕ ಹೋರಾಟಗಳ ಒಳನೋಟ…. “
ಎಂಬ ನನ್ನ ಪುಸ್ತಕ……
ಈ ಇಡೀ ಪುಸ್ತಕದ ಅಕ್ಷರಗಳು, ಪದಗಳು, ವಾಕ್ಯಗಳು ಕೇವಲ ಭಾಷೆ, ಭಾವ, ಮಾಹಿತಿಗಳ ಬರಹವಲ್ಲ. ಸಾಮಾನ್ಯ ಓದುಗರೆದೆಯೊಳಗೆ ಒಂದು ಕೃತಜ್ಞತಾ ಭಾವ ಮೂಡಿ ತನ್ನ ತಾನರಿಯುವ, ಆ ಮೂಲಕ ಸಾಮಾಜಿಕ ಪರಿವರ್ತನೆಗೆ, ಪ್ರಗತಿಪರತೆಗೆ, ತಾನು ನಿರ್ವಹಿಸಬಹುದಾದ ಪಾತ್ರದ ಪ್ರೇರಣೆಗೆ ದಾರಿ ದೀಪವಾಗುವ ಬರಹವಾಗಬೇಕು ಎಂಬ ಆಶಯದೊಂದಿಗೆ….
ಏಕೆಂದರೆ ಪುಸ್ತಕಗಳು, ಭಾಷಣಗಳು, ಉಪನ್ಯಾಸಗಳು ಕೇವಲ ತಿಳುವಳಿಕೆಗಾಗಿ ಮಾತ್ರ ಉಪಯೋಗವಾಗದೆ ಅದು ನಡವಳಿಕೆಯಾಗಿ ಪರಿವರ್ತನೆಯಾದಾಗ ಮಾತ್ರ ಅವು ಸಾರ್ಥಕತೆ ಪಡೆಯುತ್ತವೆ. ಅದರಲ್ಲೂ ಪ್ರಾಕೃತಿಕ ಸಂಪನ್ಮೂಲಗಳು, ಮಾನವೀಯ ಮೌಲ್ಯಗಳು, ಜೀವನ ವಿಧಾನಗಳು ತಲೆಮಾರುಗಳಿಗೆ ವರ್ಗಾವಣೆಯಾಗುವುದೇ ಆಧುನಿಕ ಕಾಲದ ಶಿಕ್ಷಣ ವ್ಯವಸ್ಥೆಯ ಮಹತ್ವದ ಭಾಗ.
ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವಾಗ, ಭಾರತೀಯರ ಜನ ಜೀವನದ ಮೇಲೆ ಅತ್ಯಂತ ಪರಿಣಾಮಕಾರಿ ಪ್ರಭಾವ ಬೀರಿದ ಐತಿಹಾಸಿಕ ವ್ಯಕ್ತಿಯೊಬ್ಬರ ಸಮಾಜಮುಖಿ ಹೋರಾಟದ ಬಗ್ಗೆ ಬರೆಯುವಾಗ, ಲೇಖಕರ ತಳಮಳಕ್ಕೆ ಒಂದಷ್ಟು ಕಾರಣವಾಗುತ್ತದೆ. ಏಕೆಂದರೆ ಇದು ಕಾಲ್ಪನಿಕವೂ ಅಲ್ಲ, ಪುರಾಣವೂ ಅಲ್ಲ, ಅತಿಮಾನುಷ ಶಕ್ತಿಯೂ ಅಲ್ಲ. ಕ್ರಿಯಾತ್ಮಕವಾದ ಹೊಸ ಸೃಷ್ಟಿಯೂ ಅಲ್ಲ, ಇದೊಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಮಾನವ ಘನತೆಯ ಬದುಕಿಗಾಗಿ ಹೋರಾಡಿದ ಅತ್ಯದ್ಭುತ ಮಾನವೀಯ ವ್ಯಕ್ತಿಯೊಬ್ಬರ ಜೀವನ ಪಯಣ. ಸಾವಿರಾರು ಬರಹಗಾರರು, ಕೋಟ್ಯಂತರ ಓದುಗರು, ಸಾಮಾನ್ಯ ಜನರು ಪ್ರತಿನಿತ್ಯ ತಮ್ಮ ಜೀವನಶೈಲಿಯಲ್ಲಿ ಅನುಸರಿಸುತ್ತಿರುವ ಬಹುತೇಕ ನೀತಿನಿಯಮಗಳ ಸಂವಿಧಾನ ರಚನಾ ಶಿಲ್ಪಿಯ ಹೋರಾಟಗಳನ್ನು ವಿಮರ್ಶಾತ್ಮಕವಾಗಿ ದಾಖಲಿಸುವುದು, ಅಧ್ಯಯನ ಯೋಗ್ಯ ಮಾಡುವುದು, ಓದುಗರಿಗೆ ಮನವರಿಕೆ ಮಾಡಿಕೊಡುವುದು ಒಂದು ಸವಾಲು.
ಪ್ರಜ್ಞಾ ಪೂರ್ವಕವಾಗಿ ಸೃಷ್ಠಿಯ ಮೂಲದಿಂದ ನನ್ನೆಲ್ಲಾ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಮತ್ತು ಗ್ರಹಿಸಬೇಕು, ಅದರ ನಂತರ ಸೃಷ್ಠಿಯಾದ ಯಾವುದೇ ಜಾತಿ, ಧರ್ಮ, ಭಾಷೆ, ಪ್ರದೇಶ ಎಲ್ಲವನ್ನೂ ಮೀರಿ ವಿಶಾಲ ಮನೋಭಾವದಿಂದ ಈ ಜಗತ್ತನ್ನು ನೋಡಬೇಕು ಎಂದು ಸದಾ ಚಿಂತಿಸುವ ನನಗೆ, ಅದಕ್ಕಾಗಿ ತಮ್ಮ ಇಡೀ ಬದುಕನ್ನು ಸವೆಸಿದ ಬಾಬಾ ಸಾಹೇಬರ ಬಗ್ಗೆಯೇ ಬರೆಯಲು ಸಿಕ್ಕ ಅವಕಾಶ ಮತ್ತಷ್ಟು ಪ್ರೇರಣೆಯಾಯಿತು.
ಅವಶ್ಯಕತೆ ಮತ್ತು ಅನಿವಾರ್ಯತೆಗಳೇ ಎಲ್ಲಾ ಸಂಶೋಧನೆಗಳ ಮೂಲತಾಯಿ ಎಂಬ ಮಾತಿನಂತೆ ಇಂದು ಮನುಷ್ಯ ತನ್ನ ಅವಶ್ಯಕತೆ ಮತ್ತು ಅನಿವಾರ್ಯತೆಗಳನ್ನು ಮೀರಿ ತನ್ನ ಜೀವನದ ಸುಖಲೋಲುಪತೆಗಾಗಿ ಆಧುನಿಕ ತಂತ್ರಜ್ಞಾನದ ಮೂಲಕ ಬಹುತೇಕ ಎಲ್ಲವನ್ನೂ ಪಡೆದಿದ್ದಾನೆ ಮತ್ತು ಇನ್ನೂ ಸಾಕಷ್ಟು ಪಡೆಯಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾನೆ. ಈ ನಡುವೆ ಅವನ ಪಡೆಯುವಿಕೆಯ ವೇಗ ಮತ್ತು ಸ್ಪರ್ಧೆ ವಸ್ತು ಸಂಸ್ಕೃತಿಗೆ ಸೀಮಿತವಾಗಿ, ಮಾನವೀಯ ಮೌಲ್ಯಗಳು, ನಾಗರಿಕ ಸಮಾಜದ ಗುಣಲಕ್ಷಣಗಳು ಮರೆಯಾಗುತ್ತಿವೆ. ಅದನ್ನು ಗಳಿಸಲು ಮತ್ತು ಉಳಿಸಲು ಹೋರಾಡಿದ ಮಹಾತ್ಮರ ಶ್ರಮವನ್ನು ಆತ ನಿರ್ಲಕ್ಷಿಸುತ್ತಿದ್ದಾನೆ.
ಈಗ ಆಧುನಿಕ ಕಾಲದಲ್ಲಿ ನಾವಿರುವಂತಹ ಸಂದರ್ಭ, ಸನ್ನಿವೇಶದಲ್ಲಿ ಈ ನೆಲದಲ್ಲಿಯೇ ಹುಟ್ಟಿ ಬೆಳೆದ ಅಂಬೇಡ್ಕರ್ ಎಂಬ ಮಹಾನ್ ಮಾವನತಾವಾದಿಯ ವ್ಯಕ್ತಿತ್ವ ಮತ್ತು ಹೋರಾಟಗಳ ಮರುನೆನಪು ಮತ್ತು ಮರು ಚಿಂತನೆ ಇಂದಿನ ಅತ್ಯಗತ್ಯತೆಗಳಲ್ಲಿ ಒಂದು.
ಬಾರ್ ಸಂಸ್ಕೃತಿ, ಮಾಲ್ ಸಂಸ್ಕೃತಿ, ಡಾಬಾ ಸಂಸ್ಕೃತಿ, ಕೃತಕ ಬುದ್ಧಿಮತ್ತೆಯ ಸಂಸ್ಕೃತಿಗಳ ನಡುವೆ ಮರೆಯಾಗುತ್ತಿರುವ ಗ್ರಂಥಾಲಯ ಸಂಸ್ಕೃತಿ ಅರ್ಥಾತ್ ಓದುವ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ, ಅದರಲ್ಲೂ ಮೌಲ್ಯಯುತ ಮಾನವೀಯ ಸಂಬಂಧಗಳ, ಶೋಷಣಾ ಮುಕ್ತ ನಾಗರಿಕತೆಯ, ಸಮಸಮಾಜಕ್ಕಾಗಿ ನಡೆದ ಹೋರಾಟಗಳನ್ನು ಯುವ ಪೀಳಿಗೆಗೆ ಸತ್ವಯುತವಾಗಿ ಮತ್ತು ಸರಳವಾಗಿ ಮನವರಿಕೆ ಮಾಡಿಕೊಡುವ ಜವಾಬ್ದಾರಿ ನಮಗಿದೆ.
ನನ್ನ ಮತ್ತೊಂದು ಪುಸ್ತಕ
” ಕರುಳ ಬಳ್ಳಿಯ ತಡವುತ್ತಾ….” ಮಾನವೀಯ ಮೌಲ್ಯಗಳ ಹುಡುಕಾಟದಲ್ಲಿ ಪ್ರಕಟಣೆಯ ಸಲುವಾಗಿ ಚರ್ಚಿಸುತ್ತಿದ್ದಾಗ ನಾನು ಹಿಂದೆ ಬರೆದ ಡಾಕ್ಟರ್ ಬಾಬಾ ಸಾಹೇಬರ ಸಾಮಾಜಿಕ ಹೋರಾಟಗಳ ಅಭಿವ್ಯಕ್ತಿಯ ಈ ಪುಸ್ತಕವನ್ನೂ ಪ್ರಕಟಿಸುವುದಾಗಿ ತುಂಬಾ ಅಭಿಮಾನ ಮತ್ತು ಪ್ರೀತಿಯಿಂದ ಒಪ್ಪಿಕೊಂಡು ಪ್ರಕಟಿಸುತ್ತಿರುವ ಸ್ನೇಹ ಪಬ್ಲಿಕೇಷನ್ ಮಾಲೀಕರಾದ ಶ್ರೀ ಕೆ.ಬಿ. ಪರಶಿವಪ್ಪ ಅವರಿಗೆ ಮತ್ತು ಅಚ್ಚುಕಟ್ಟಾಗಿ ಪುಟ ವಿನ್ಯಾಸ ಮಾಡಿದ
ಶ್ರೀ ಜೈಕುಮಾರ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತಾ,
ನಾನು ಇಲ್ಲಿ ಮಾತನಾಡುವುದಕ್ಕಿಂತ ನನ್ನ ಈ ಅಭಿಪ್ರಾಯಗಳೇ ಮಾತನಾಡಲಿ. ಈ ಬಗ್ಗೆ ಮತ್ತೊಬ್ಬರು ಹಿನ್ನುಡಿ, ಮುನ್ನುಡಿ, ಬೆನ್ನುಡಿ ಬರೆದು ಅಭಿಪ್ರಾಯ ವ್ಯಕ್ತಪಡಿಸಿ ಪೂರ್ವ ನಿರ್ಣಯ ಆಗದಿರಲೆಂದು ಯಾರಿಂದಲೂ ಏನನ್ನೂ ಬರೆಸಿಲ್ಲ. ನೇರವಾಗಿ ನಿಮ್ಮ ಅಭಿಪ್ರಾಯಕ್ಕಾಗಿ ಕಾಯುತ್ತಿರುತ್ತೇನೆ. ಓದಿದ ನಂತರ ಅವಶ್ಯವೆನಿಸಿದರೆ ದಯವಿಟ್ಟು ಈ ಕೆಳಗಿನ ನನ್ನ ನಂಬರಿಗೆ ಸಂಪರ್ಕಿಸಿ ನನ್ನೊಂದಿಗೆ ಮಾತನಾಡಬಹುದು. ಪುಸ್ತಕ ಬೇಕಾದಲ್ಲಿ ಸ್ನೇಹ ಬುಕ್ ಹೌಸ್‌ನ ಶ್ರೀ ಕೆ.ಬಿ. ಪರಶಿವಪ್ಪ ಅವರನ್ನು ಸಂಪರ್ಕಿಸಿಬಹುದು.
ನನ್ನ ಬದುಕು ರೂಪುಗೊಳ್ಳಲು ಅನೇಕ ಆತ್ಮೀಯರ ಕೊಡುಗೆ ಸಾಕಷ್ಟು ಇದೆ. ಅವರನ್ನು ಮನದಲ್ಲೇ ಸ್ಮರಿಸುತ್ತಾ…..
ಎಲ್ಲರಿಗೂ ತುಂಬು ಹೃದಯದಿಂದ ಧನ್ಯವಾದಗಳು.
ಗೌತಮ ಬುದ್ಧರು ಒಮ್ಮೆ ಹೇಳಿದಂತೆ
” ನಾನು ಇದುವರೆಗಿನ ನನ್ನ ಅನುಭವದಲ್ಲಿ ಕಂಡುಕೊಂಡ ಸತ್ಯವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇದೇ ಅಂತಿಮವಲ್ಲ. ಇದಕ್ಕಿಂತ ಉತ್ತಮ ಅನುಭವ ಮತ್ತು ಗ್ರಹಿಕೆ ನಿಮ್ಮದಾಗಿದ್ದರೆ ಅದನ್ನು ನೀವು ಒಪ್ಪಿಕೊಳ್ಳಬಹುದು “
ಎಂಬ ವಿನಮ್ರ ಮಾತುಗಳನ್ನು ವೈಯಕ್ತಿಕವಾಗಿ ನಾನೂ ಸಹ ಇಲ್ಲಿ ನೆನಪಿಸಿಕೊಳ್ಳುತ್ತಾ, ದಯವಿಟ್ಟು ಸ್ವಲ್ಪ ಏಕಾಗ್ರತೆಯಿಂದ, ಜವಾಬ್ದಾರಿಯುತ ಪ್ರಬುದ್ಧತೆಯಿಂದ ಈ ಪುಸ್ತಕವನ್ನು ಓದಬೇಕು ಎಂದು ಮನವಿ ಮಾಡಿಕೊಳ್ಳುತ್ತಾ….
ಸ್ನೇಹ ಬುಕ್ ಹೌಸ್,
ಶ್ರೀ ಕೆ ಬಿ ಪರಶಿವಪ್ಪ,
9845031335.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
