ಅಯೋಧ್ಯೆ ಕರ್ಮಕಾಂಡ…….
ದರಿದ್ರ ದೇವೋಭವ,
ದರಿದ್ರ ನಾರಾಯಣೋ ಹರಿ, ಬಡವರಲ್ಲಿ ದೇವರನ್ನು ಕಾಣಿ…..
ಹೀಗೆ ಈ ದೇಶದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರೂ ಸೇರಿ ಅನೇಕ ದಾರ್ಶನಿಕರು, ಚಿಂತಕರು, ಮಹರ್ಷಿಗಳು, ಧರ್ಮ ಗ್ರಂಥಗಳು ದೇವರ ಸೇವೆ ಎಂದರೆ ಅದು ಬಡವರ ಸೇವೆ ಎಂಬುದಾಗಿ ಹೇಳಿದ್ದಾರೆ.
ಇದನ್ನು ಇಲ್ಲಿ ಪ್ರಸ್ತಾಪಿಸಲು ಮುಖ್ಯ ಕಾರಣ ಅಯೋಧ್ಯೆಯ ಹೊಸ ಬಾಲರಾಮ ಮಂದಿರದಲ್ಲಿ ನೂರಾರು ಕೋಟಿ ರೂಪಾಯಿಗಳು ಕಳ್ಳತನವಾಗಿರುವ ವಿಷಯ ದೇಶದಾದ್ಯಂತ ಚರ್ಚಿತವಾಗುತ್ತಿದೆ. ಹಾಗೆಯೇ ಅನೇಕ ಉತ್ತರಿಸಲಾಗದ ಪ್ರಶ್ನೆಗಳು ಹಲವಾರು ಜನರಲ್ಲಿ ಏಳುತ್ತಿದೆ.
ನೂರಾರು ವರ್ಷಗಳ ಹೋರಾಟದ ನಂತರ ಭಾರತದ ಧಾರ್ಮಿಕತೆಯ ಪುನರುಜ್ಜೀವನ ಎನ್ನುವ ಭಾವದೊಂದಿಗೆ ರಾಮಮಂದಿರ ಪ್ರತಿಷ್ಠಾಪಿಸಲಾಯಿತು. ಆದರೂ ಶ್ರೀರಾಮ ತನಗೆ ಕಾಣಿಕೆ ಅರ್ಪಿಸಿದ ಹಣವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲವೇ ಎಂದು ಹೇಳಲಾಗುತ್ತಿದೆ. ದೇಶದ ಎಲ್ಲಾ ಮೂಲೆಗಳಿಂದ ಭಕ್ತಿಪೂರ್ವಕವಾಗಿ ಅಯೋಧ್ಯೆಗೆ ಬಂದು ಸಲ್ಲಿಸಿದ ಕಾಣಿಕೆಗಳು, ಹಿಂದೆ ರಾಮಮಂದಿರ ನಿರ್ಮಿಸಲು ನೀಡಿದ ಅನೇಕ ರೀತಿಯ ದೇಣಿಗೆ ರೂಪದ ಚಿನ್ನ, ವಜ್ರ, ವೈಡೂರ್ಯಗಳು ಕಾಣೆಯಾದ ಬಗ್ಗೆಯೂ ಬಹಳಷ್ಟು ಜನರಿಗೆ ಬೇಸರವಿದೆ. ಇದನ್ನು ಕೇವಲ ಒಂದು ಕಳ್ಳತನ ಎಂಬುದಾಗಿ ಮಾತ್ರ ನೋಡಲಾಗದು. ಇಲ್ಲಿ ಭಾರತದ ಜನರ ಮೌಲ್ಯಗಳ ಕುಸಿತ ಹಾಗೂ ವ್ಯವಸ್ಥೆಯ ವೈಫಲ್ಯ ಎದ್ದು ಕಾಣುತ್ತಿದೆ.
ಇದು ಕೇವಲ ಅಯೋಧ್ಯೆಯ ರಾಮಮಂದಿರ ಮಾತ್ರವಲ್ಲ, ದೇಶದ ಅನೇಕ ದೇವಾಲಯಗಳಲ್ಲಿ ಹಣ ದುರುಪಯೋಗದ, ಹಣ ಕಳ್ಳತನದ, ಹಣ, ಆಸ್ತಿ ವಂಚನೆಯ ಅನೇಕ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತದೆ. ಜೊತೆಗೆ ಮಸೀದಿ, ಚರ್ಚು, ಇತರ ದೇವಮಂದಿರಗಳಲ್ಲಿ ಆಸ್ತಿ ವಿವಾದಗಳು, ಕೆಲವು ಅಪರಾಧಗಳು ಸೇರಿ ಒಟ್ಟಾರೆಯಾಗಿ ಹಣದ ಬಲೆಯಲ್ಲಿ ದೇವಮಂದಿರಗಳು ಸಿಕ್ಕಿಹಾಕಿಕೊಳ್ಳುತ್ತಿವೆ.
ನಾವು ಸಾಮಾನ್ಯವಾಗಿ ಮತ್ತು ಸಹಜವಾಗಿ ನಮ್ಮನ್ನೇ ಕೇಳಿಕೊಳ್ಳಬೇಕಿರುವುದು, ದೇವರಿಗೆ ದುಡ್ಡಿನ ಅವಶ್ಯಕತೆ ಇದೆಯೇ? ನಾವು ಭಕ್ತಿಯಿಂದ ದೇವರಿಗೆ ನಮಿಸುವಾಗ ಅಥವಾ ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಬೇಡಿಕೆ ಇಡುವಾಗ ದೇವರಿಗೆ ಏನಾದರೂ ಕಾಣಿಕೆ ಕೊಡಬೇಕೇ? ಅದರ ಅವಶ್ಯಕತೆ ಇದೆಯೇ? ಅದರಿಂದ ದೇವರಿಗೆ ಏನಾದರೂ ಉಪಯೋಗವಾಗುತ್ತದೆಯೇ? ಎಂಬ ಮೂಲಭೂತ ಪ್ರಶ್ನೆ ಏಳುತ್ತದೆ. ಸರ್ವಾಂತರ್ಯಾಮಿ, ಸರ್ವಶಕ್ತ ದೇವರೇ ನಮ್ಮನ್ನು ಸೃಷ್ಟಿಸಿರುವುದು ಮತ್ತು ಈ ಜಗತ್ತನ್ನು ನಿಯಂತ್ರಿಸುತ್ತಿರುವುದು ಎಂದ ಮೇಲೆ ದೇವರಿಗಾಗಿ ಹುಲು ಮಾನವರಾದ ನಾವು ಹಣ ನೀಡುವುದು ಸರಿಯೇ?
ಏನೋ ದೇವ ಮಂದಿರಗಳ ನಿರ್ವಹಣೆಗೆ ಭಕ್ತಿ ಪೂರ್ವಕವಾಗಿ ಸಣ್ಣ ಕಾಣಿಕೆ ನೀಡುವುದು ಅವರವರ ನಂಬಿಕೆ ಆಧಾರದ ಮೇಲೆ ಸಹನೀಯ. ಆದರೆ ಕೋಟಿಗಟ್ಟಲೆ ಹಣ, ಚಿನ್ನ ಹರಿದು ಬರುವಂತೆ ಮಾಡಿ ದೇವಸ್ಥಾನಗಳು ವಾಣಿಜ್ಯ ಕೇಂದ್ರಗಳ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವುದು ಎಷ್ಟು ಸರಿ? ಈ ಕಾಲಘಟ್ಟದಲ್ಲಿ ಹಣ ಒಂದೆಡೆ ಕೇಂದ್ರೀಕೃತವಾದಾಗ ಸಹಜವಾಗಿಯೇ ಸಮಸ್ಯೆಗಳು ಉದ್ಭವಿಸುತ್ತದೆ.
ಅದಕ್ಕೆ ಬದಲಾಗಿ ನಿಜವಾಗಲೂ ಬಡವರಿಗೆ, ಶೋಷಿತರಿಗೆ, ಹಣದ ಅವಶ್ಯಕತೆ ಇರುವವರಿಗೆ, ಕಟ್ಟಕಡೆಯ ವ್ಯಕ್ತಿಗಳಿಗೆ ಒಂದಷ್ಟು ಸಹಾಯ ಮಾಡಿದರೆ ಸಮಾಜಕ್ಕೆ, ದೇಶಕ್ಕೆ, ವ್ಯಕ್ತಿಗೆ ಅನುಕೂಲ ಮಾಡಿಕೊಟ್ಟಂತಾಗುವುದಿಲ್ಲವೇ. ದೇವಸ್ಥಾನಗಳಿಗೆ ನೀಡುವ ಹಣ ಒಂದೇ ಕಡೆ ಶೇಖರಣೆಯಾಗಿ, ವ್ಯರ್ಥವಾಗಿ, ಸ್ಥಿರವಾಗಿ ಈ ಹಣವೇ ದೇವಸ್ಥಾನದ ಮೂಲ ಆಶಯದ ಧಾರ್ಮಿಕ ಚಿಂತನೆಗೆ, ನಿಷ್ಕಲ್ಮಶ ಆಧ್ಯಾತ್ಮಿಕತೆಗೆ ಧಕ್ಕೆಯಾಗುವುದಿಲ್ಲವೇ.
ನಿಜವಾಗಲೂ ನಾವು ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ದೇವರ ಅನುಗ್ರಹಕ್ಕೆ ಪಾತ್ರವಾಗುವ ನಂಬಿಕೆ ಉಳ್ಳವರೇ ಆಗಿದ್ದರೆ, ಅದೇ ಹಣವನ್ನು ಆಸ್ಪತ್ರೆಯಲ್ಲಿರುವ ಬಡ ರೋಗಿಗಳ ಸಹಾಯಕ್ಕಾಗಿ, ಶಾಲೆಯ ವಿದ್ಯಾಭ್ಯಾಸದ ಹಣ ಕಟ್ಟಲು ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳಿಗಾಗಿ, ಅನಾಥಾಶ್ರಮದ ಮಕ್ಕಳಿಗಾಗಿ, ವೃದ್ಧಾಶ್ರಮದ ಹಿರಿಯರಿಗಾಗಿ ಅಥವಾ ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಕಡು ಬಡವರಿಗಾಗಿ ಸಹಾಯ ಮಾಡುವ ಮೂಲಕ ದೈವಕೃಪೆಗೆ, ನಂಬಿಕೆಗೆ ಪಾತ್ರವಾಗಬಹುದಲ್ಲವೇ. ದೇವರ ಹೆಸರಿನಲ್ಲಿ ಕೊಡುವ ಹಣ ದೇವರಿಗೇ ತಲುಪುವುದಿದ್ದರೆ ಏನೋ ಕೊಡಬಹುದಿತ್ತು. ಅದು ಮಧ್ಯವರ್ತಿಗಳ ಪಾಲಾಗುತ್ತದೆ ಎಂಬ ಅರಿವಿನ ನಂತರವೂ ದೊಡ್ಡ ಮೊತ್ತದ ಕಾಣಿಕೆ ನೀಡುವುದು ಒಳ್ಳೆಯದಲ್ಲ.
ಆದ್ದರಿಂದ ಯಾವುದೇ ಧಾರ್ಮಿಕ ಸ್ಥಳಗಳಿಗೆ ಹಣ ನೀಡುವ ಮುನ್ನ ಮತ್ತೊಮ್ಮೆ ಯೋಚಿಸಿ. ಏನೋ ದೇವಮಂದಿರಗಳ ನಿರ್ವಹಣೆಗಾಗಿ ಸ್ವಲ್ಪ ಹಣ ಕಾಣಿಕೆ ರೂಪದಲ್ಲಿ ಕೊಡಬಹುದೇ ಹೊರತು ಸಾವಿರಾರು, ಲಕ್ಷಾಂತರ, ಕೋಟಿಗಟ್ಟಲೆ ಹಣ ದೇವಮಂದಿರಗಳಿಗೆ ನೀಡುವುದು ಅಷ್ಟೇನೂ ಒಳ್ಳೆಯ ನಿರ್ಧಾರವಲ್ಲ.
ಅಯೋಧ್ಯೆಯ ದರ್ಶನದ ಹೆಸರಿನಲ್ಲಿ ದೇಶದಲ್ಲಿ ಒಂದು ಪ್ರವಾಸೋದ್ಯಮ ಕ್ರಾಂತಿಯೇ ಉಂಟಾಗಿತ್ತು. ಈಗ ಆ ಭಾವನೆಗೆ ಸ್ವಲ್ಪಮಟ್ಟಿಗೆ ಧಕ್ಕೆಯಾಗಿದೆ.
ಇದು ಹೊಟ್ಟೆಪಾಡಿನ ಕಳ್ಳತನವಾಗಿದ್ದರೆ ಕ್ಷಮಿಸಬಹುದಿತ್ತು. ಆದರೆ ಇದು ಭ್ರಷ್ಟತೆಯ, ಆತ್ಮ ವಂಚನೆಯ, ವಿಶ್ವಾಸದ್ರೋಹದ ಹಗಲು ದರೋಡೆ.
ದೇವರ ಅಸ್ತಿತ್ವದಲ್ಲಿ ನಂಬಿಕೆ ಇರುವವರು, ದೇವರ ಸಾಮರ್ಥ್ಯದಲ್ಲಿ ಭಕ್ತಿ ಇರುವವರು ದಯವಿಟ್ಟು ಸ್ವಲ್ಪಮಟ್ಟಿಗೆ ವಿವೇಚನೆಯಿಂದ ವರ್ತಿಸಿ. ಮೂಢನಂಬಿಕೆಗೆ ಬಲಿಯಾಗದಿರಿ. ನಮ್ಮ ತಿಳುವಳಿಕೆ ನಮ್ಮ ನಡವಳಿಕೆಯಾಗಲಿ. ಒಳ್ಳೆಯದು, ಕೆಟ್ಟದ್ದರ ಅರಿವಿರಲಿ. ಅರಿವೇ ಗುರು. ಭಕ್ತಿಯ ಹೆಸರಿನಲ್ಲಿ ಮೋಸ ಹೋಗದಿರಿ. ಈಶ ಸೇವೆ ದೇಶ ಸೇವೆ ಆಗಲಿ. ನಮ್ಮ ಕಾಣಿಕೆಗಳು ಅನರ್ಹ, ಅಯೋಗ್ಯರ ಪಾಲಾಗದಿರಲಿ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
