ಬೆಂಗಳೂರು: ದಿನಾಂಕ:29-06-2026(ಹಾಯ್ ಉಡುಪಿ ನ್ಯೂಸ್)
ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆದ ನೀಚ ಕೃತ್ಯವು ವಿರೋಧ ಪಕ್ಷದವರ ಹತಾಶೆಯ ಪರಮಾವಧಿ. ಒಬ್ಬ ಯುವ ನಾಯಕನ ಜನಪ್ರಿಯತೆ ಹಾಗೂ ಮಾತುಗಳನ್ನು ಜೀರ್ಣಿಸಿಕೊಳ್ಳಲಾಗದೆ, ತರ್ಕದ ವೇದಿಕೆಯಿಂದ ತರಗೆಲೆ ರಾಜಕಾರಣಕ್ಕೆ ಇಳಿದಿರುವುದು ನಿಮ್ಮ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಪ್ರಜಾಪ್ರಭುತ್ವದ ಆಶಯಗಳನ್ನು ಬೀದಿಗೆ ತಂದು ಹರಾಜಿಗಿಟ್ಟಿರುವ ನೀವು, ನಿಮ್ಮ ಕಾರ್ಯಕರ್ತರಿಗೆ ಕಲಿಸುತ್ತಿರುವ ಸಂಸ್ಕಾರವಾದರೂ ಇಂತಹುದೇನಾ? ನೆನಪಿರಲಿ, ಇಂತಹ ಹಿಂಸಾತ್ಮಕ ದಾಳಿಗಳು ನಮ್ಮ ನಾಯಕರ ಹೋರಾಟದ ಹಾದಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆಯೇ ಹೊರತು ಎಂದಿಗೂ ಧೃತಿಗೆಡಿಸುವುದಿಲ್ಲ.
ಇದು ಬಸವಣ್ಣನವರ, ಕುವೆಂಪು ಅವರ ಶಾಂತಿಪ್ರಿಯ ಕರ್ನಾಟಕ. ಇಲ್ಲಿ ಇಂತಹ ವಿಕೃತ, ಹಿಂಸಾತ್ಮಕ ಪುಂಡಾಟಿಕೆಗಳಿಗೆ ಜಾಗವಿಲ್ಲ. ಸಾರ್ವಜನಿಕ ಸಭ್ಯತೆಯ ಗಡಿ ದಾಟಿದ ಪ್ರತಿಯೊಬ್ಬರ ವಿರುದ್ಧವೂ ನಾವು ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಪ್ರದೀಪ್ ಈಶ್ವರ್ ಅವರು ಧೃತಿಗೆಡಬೇಕಿಲ್ಲ; ಅವರ ಜೊತೆ ನಾವೆಲ್ಲರೂ ಇದ್ದೇವೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘಟನೆಯನ್ನು ಖಂಡಿಸಿ ಹೇಳಿದರು..
