ಬೆಂಗಳೂರು: ದಿನಾಂಕ:27-06-2026 (ಹಾಯ್ ಉಡುಪಿ ನ್ಯೂಸ್) ಚಲ್ಲಘಟ್ಟದಲ್ಲಿ ಇಂದು ನಾಡ ಪ್ರಭು ಕೆಂಪೇಗೌಡರ 517 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಮಾತನಾಡಿದರು.
ಕೆಂಪೇಗೌಡರು ದೂರದೃಷ್ಟಿಯ ಮಹಾನ್ ಚೇತನ, ಕೆರೆಗಳನ್ನು ಕಟ್ಟಿದ ಭಗೀರಥ, ದೇವಸ್ಥಾನಗಳನ್ನು ನಿರ್ಮಿಸಿದ ದೈವ ಭಕ್ತ, ಪೇಟೆಗಳನ್ನು ನಿರ್ಮಿಸಿ ಎಲ್ಲಾ ಜಾತಿ – ಧರ್ಮದ ಜನತೆಗೆ ಸಮವಾಗಿ ಕಂಡು ಆರ್ಥಿಕ ಶಕ್ತಿಯನ್ನು ನೀಡಿದವರು. ಬೆಂಗಳೂರಿನ ಪ್ರತಿ ಗಲ್ಲಿಯ ಇತಿಹಾಸದಲ್ಲೂ ನಾಡಪ್ರಭು ಕೆಂಪೇಗೌಡರ ಹೆಸರಿದೆ,
ಇಲ್ಲಿ ಅರಳುವ ಪ್ರತಿ ತಂತ್ರಜ್ಞಾನದ ಕನಸಿನಲ್ಲೂ ಅವರ ದೂರದೃಷ್ಟಿಯ ಬೆಳಕಿದೆ. ವ್ಯಾಪಾರ, ಕಲೆ ಮತ್ತು ಸಂಸ್ಕೃತಿಯ ನೆಲೆವೀಡಾಗಿ ಅಂದು ಅಡಿಪಾಯ ಕಂಡ ಮಹಾನಗರಿ, ಇಂದು ಗಡಿಗಳನ್ನು ದಾಟಿ ಜಾಗತಿಕ ಆರ್ಥಿಕತೆಯ ನಾಡಿಮಿಡಿತವಾಗಿದೆ. ವೈವಿಧ್ಯತೆಯನ್ನೇ ಶಕ್ತಿಯಾಗಿಸಿಕೊಂಡು, ಜಗತ್ತಿನ ಮೂಲೆ ಮೂಲೆಗಳಿಂದ ಬಂದ ಪ್ರತಿಭೆಗಳಿಗೆ ತಾಯಿಯಂತೆ ಆಸರೆಯಾಗಿರುವ ಬೆಂಗಳೂರು, ಕೆಂಪೇಗೌಡರ ಅಪ್ರತಿಮ ಆಡಳಿತ ಕೌಶಲ್ಯಕ್ಕೆ ಹಿಡಿದ ಕನ್ನಡಿ ಎಂದ ಮುಖ್ಯಮಂತ್ರಿಗಳು ನಾಡಿನ ಸಮಸ್ತ ಜನತೆಗೆ ಯುಗಪುರುಷ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಶುಭಾಶಯಗಳನ್ನು ಕೋರಿದ್ದಾರೆ.
ಈ ಸಂದರ್ಭದಲ್ಲಿ ಪೂಜ್ಯರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ನಂಜಾವಧೂತ ಸ್ವಾಮೀಜಿ, ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಮತ್ತು ಪ್ರಮುಖ ಗಣ್ಯರು ಉಪಸ್ಥಿತರಿದ್ದರು.



