HLz4FTTa0AAB-7N.jpg
Spread the love

ಬೆಂಗಳೂರು: ದಿನಾಂಕ:27-06-2026(ಹಾಯ್ ಉಡುಪಿ ನ್ಯೂಸ್) ನಾಡಪ್ರಭು ಕೆಂಪೇಗೌಡರ ಜಯಂತಿಯ ಈ ಪವಿತ್ರ ಸಂದರ್ಭದಲ್ಲಿ, ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ಎಸ್‌. ಎಂ. ಕೃಷ್ಣ ಅವರ ಹೆಸರಿನ ನೂತನ ದಶಪಥ ರಸ್ತೆಯನ್ನು ಇಂದು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಶತಮಾನಗಳ ಹಿಂದೆ ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿ ಬೆಳೆಸಿದರೆ, ಮಾಜಿ ಸಿಎಂ ಶ್ರೀ ಎಸ್.ಎಂ. ಕೃಷ್ಣ ಅವರು ಆ ದೂರದೃಷ್ಟಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದರು. ಬೆಂಗಳೂರನ್ನು ಭಾರತದ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ರಾಜಧಾನಿಯನ್ನಾಗಿ ರೂಪಿಸುವಲ್ಲಿ ಅವರು ಭದ್ರ ಬುನಾದಿ ಹಾಕಿದರು. ಇಂದು ಇಡೀ ಜಗತ್ತು ಭಾರತವನ್ನು ಬೆಂಗಳೂರಿನ ಮೂಲಕವೇ ನೋಡುವಂತಾಗಲು ಅವರ ಕೊಡುಗೆ ಅಪಾರ.

ಅವರ ಈ ಮಹತ್ತರ ಸಾಧನೆಗೆ ಗೌರವಾರ್ಥವಾಗಿ ನಿರ್ಮಿಸಲಾದ 10.7 ಕಿ.ಮೀ ಉದ್ದದ ಈ ಸಿಗ್ನಲ್ ಮುಕ್ತ ದಶಪಥ ರಸ್ತೆ, ಕಡಬಗೆರೆ ಕ್ರಾಸ್‌ನಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಭವ್ಯ ರಸ್ತೆಯು ಸಂಪೂರ್ಣವಾಗಿ ಟೋಲ್‌ ಮುಕ್ತವಾಗಿದ್ದು, ಸಂಚಾರದ ಸಮಯವನ್ನು ಸುಮಾರು 1 ಗಂಟೆಯಿಂದ ಕೇವಲ 15 ರಿಂದ 20 ನಿಮಿಷಗಳಿಗೆ ಕಡಿತಗೊಳಿಸಲಿದೆ. ಇದು ಲಕ್ಷಾಂತರ ಪ್ರಯಾಣಿಕರ ದೈನಂದಿನ ಸಂಚಾರವನ್ನು ಸುಗಮಗೊಳಿಸಲಿದ್ದು, ಬೆಂಗಳೂರಿನ ಮೂಲಸೌಕರ್ಯಕ್ಕೆ ದೊಡ್ಡ ಕೊಡುಗೆಯಾಗಿದೆ.

ಬೆಂಗಳೂರಿನ ನಿರ್ಮಾತೃ ಹಾಗೂ ಆಧುನಿಕ ಬೆಂಗಳೂರಿನ ಶಿಲ್ಪಿಗೆ ಗೌರವ ಸಲ್ಲಿಸುತ್ತಾ, ಅವರ ದೂರದೃಷ್ಟಿಗೆ ತಕ್ಕಂತೆ ವೇಗದ ಮತ್ತು ಭವಿಷ್ಯಕ್ಕೆ ಸಜ್ಜಾದ ನಗರವನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ ಎಂದು ಉದ್ಘಾಟನೆ ನೆರವೇರಿಸಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿದರು.

ಈ ಐತಿಹಾಸಿಕ ಸಂದರ್ಭದಲ್ಲಿ ಶ್ರೀ ಎಸ್‌.ಎಂ. ಕೃಷ್ಣ ಅವರ ಧರ್ಮಪತ್ನಿ ಶ್ರೀಮತಿ ಪ್ರೇಮಾ ಕೃಷ್ಣ, ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್, ಸಚಿವರಾದ ಕೆ. ಹೆಚ್.‌ ಮುನಿಯಪ್ಪ, ಕೃಷ್ಣಬೈರೇಗೌಡ, ಬಿಡಿಎ ಅಧ್ಯಕ್ಷರಾದ ಎನ್.‌ ಎ. ಹ್ಯಾರಿಸ್, ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಹೆಚ್.‌ ಎಂ. ರೇವಣ್ಣ, ಶಾಸಕರಾದ ಎಸ್‌. ಟಿ. ಸೋಮಶೇಖರ್, ಪರಿಷತ್ ಸದಸ್ಯರಾದ ಗೋವಿಂದರಾಜು ಹಾಗೂ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಸೇರಿದಂತೆ ಪ್ರಮುಖ ನಾಯಕರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

error: No Copying!