The_Deputy_Chief_Minister_of_Karnataka_Shri_D._K._Shivkumar.jpg
Spread the love

ಬಿಡದಿ ಟೌನ್ ಶಿಪ್ ಬಿಡಿ,
ಶಾಲೆ, ಆಸ್ಪತ್ರೆ, ಪರಿಸರ, ಕೃಷಿ ಹಿಡಿ,
ಎರಡು ವರ್ಷ ಮುನ್ನಡಿ,
ಮುಂದಿನ ಐದು ವರ್ಷಕ್ಕೆ ಅವಕಾಶ ಪಡಿ…….

ಯಾವುದೇ ದೃಷ್ಟಿಕೋನದಿಂದ ನೋಡಿದರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕನಿಷ್ಠವೆಂದರೂ ಈ ಎರಡು ವರ್ಷಗಳ ಅವಧಿಗೆ ಕೈಬಿಡಬೇಕು ಅಥವಾ ಮುಂದೂಡಬೇಕು. ಮುಂದೆ ಏನಾದರೂ ಗೆದ್ದರೆ, ಆಗ ಇವರೇ ಮುಖ್ಯಮಂತ್ರಿಯಾದರೆ ಮತ್ತೊಮ್ಮೆ ಪರಿಶೀಲಿಸಬಹುದು. ಒಂದು ವೇಳೆ ಇದೇ ಅವಧಿಯಲ್ಲಿ ಬಿಡದಿ ಟೌನ್ಶಿಪ್ ನಿರ್ಮಾಣ ಮಾಡುವ ಹಠ ತೊಟ್ಟರೆ ಚುನಾವಣೆ ಸಂದರ್ಭದಲ್ಲಿ ಅವರಿಗೆ ರೈತ ವಿರೋಧಿ ಎಂಬ ಹಣೆಪಟ್ಟಿ ಸಿಕ್ಕಿ ಅವರಿಗೆ ಅನಾನುಕೂಲವಾಗುವ ಸಾಧ್ಯತೆಯೇ ಹೆಚ್ಚು. ಪಶ್ಚಿಮ ಬಂಗಾಳದ ನಂದಿ ಗ್ರಾಮ ಮತ್ತು ಸಿಂಗೂರಿನಲ್ಲಿ ಇದೇ ರೀತಿಯ ಆದರೆ ಇದಕ್ಕಿಂತ ಭಿನ್ನರೂಪದ ರೈತ ಹೋರಾಟದ ಮುಂಚೂಣಿಯಲ್ಲಿ ನಿಂತು ಹೋರಾಡಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಲ್ಲಿನ ಕಮ್ಯುನಿಸ್ಟ್ ಆಡಳಿತವನ್ನು ಧೂಳಿಪಟ ಮಾಡಿ ಅಧಿಕಾರಕ್ಕೇರಿದ ಉದಾಹರಣೆ ನಮ್ಮ ಮುಂದಿದೆ.

ವಿಶೇಷ ಆರ್ಥಿಕ ವಲಯಕ್ಕೆ ಈ ರೀತಿಯ ಜಮೀನು ವಶಪಡಿಸಿಕೊಂಡಾಗ ಆಗಲೂ ರೈತರ, ಭೂಮಿ ಕಳೆದುಕೊಂಡವರ ಪ್ರತಿಭಟನೆ ನಡೆಯುತ್ತದೆ. ಆದರೆ ಆರ್ಥಿಕ ವಲಯದಿಂದ ಒಂದಷ್ಟು ಜನರಿಗೆ ಉದ್ಯೋಗ ದೊರೆತು ಅಭಿವೃದ್ಧಿಯಾಗಬಹುದು ಎನ್ನುವ ಒಂದು ವಾದವಾದರೂ ಇರುತ್ತದೆ. ಆದರೆ ಈ ಅತ್ಯಾಧುನಿಕ ಟೌನ್ಶಿಪ್ ಒಂದು ರೀತಿಯ ರಿಯಲ್ ಎಸ್ಟೇಟ್ ವ್ಯವಹಾರವಾಗುತ್ತದೆ. ಅದನ್ನು ಸರ್ಕಾರ ನಿರ್ವಹಿಸುವುದು ಅಷ್ಟು ಉತ್ತಮ ನಡೆಯಲ್ಲ.

ಬಡವರಿಗೆ ಮನೆ ಕಟ್ಟಿಸಿಕೊಡಲು ಒಂದಷ್ಟು ಜಮೀನು ಸರ್ಕಾರ ವಶಪಡಿಸಿಕೊಂಡರೆ ಸಹಿಸಿಕೊಳ್ಳಬಹುದು. ಆದರೆ ಈ ಜಮೀನು ವಶಪಡಿಸಿಕೊಳ್ಳುತ್ತಿರುವುದು ಶ್ರೀಮಂತರಿಗಾಗಿ ಮತ್ತು ಅತ್ಯಾಧುನಿಕ ವ್ಯವಸ್ಥೆ ಇರುವ ಮನೆಗಳನ್ನು ನಿರ್ಮಿಸಲು. ಅದನ್ನು ಈ ಕ್ಷಣದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಭಾರತ ಮತ್ತು ಕರ್ನಾಟಕ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳೇ ಹೊರತು ಶ್ರೀಮಂತ ರಾಜ್ಯ ಅಥವಾ ದೇಶವಲ್ಲ.

ಹೌದು, ಬೆಂಗಳೂರಿನ ಮೇಲೆ ಇರುವ ಒತ್ತಡವನ್ನು ನಿವಾರಿಸಲು ಬೆಂಗಳೂರು ಸುತ್ತಮುತ್ತ ಉಪನಗರಗಳನ್ನು ನಿರ್ಮಿಸಬೇಕು ಎಂಬ ಯೋಜನೆ ಬಹಳ ಹಿಂದಿನಿಂದಲೂ ಇದೆ. ಆ ನಿಟ್ಟಿನಲ್ಲಿ ಈ ಟೌನ್ ಶಿಪ್ ನಿರ್ಮಾಣ ಒಪ್ಪಬಹುದಾದರೂ, ಈ ಯೋಜನೆ ಮುಖ್ಯವಾಗಿ ಶ್ರೀಮಂತರಿಗೆ ರೂಪಿತವಾಗಿರುವುದರಿಂದ ಇದನ್ನು ಒಪ್ಪಿಕೊಳ್ಳುವುದು ಕಷ್ಟ. ಅಲ್ಲದೆ ಈಗ ಮುಖ್ಯಮಂತ್ರಿ ಆಗಿರುವ ಶ್ರೀ ಶಿವಕುಮಾರ್ ಅವರಿಗೆ ಇನ್ನು ಸುಮಾರು ಎರಡು ವರ್ಷಕ್ಕೂ ಕಡಿಮೆ ಅವಧಿಯ ಸಮಯದಲ್ಲಿ ಮಾಡಲಿಕ್ಕೆ ಸಾಕಷ್ಟು ಒಳ್ಳೆಯ ಕೆಲಸಗಳು ಬಾಕಿ ಇವೆ. ಜನರನ್ನು ಮೆಚ್ಚಿಸಲು, ಮತದಾರರನ್ನು ಒಲಿಸಿಕೊಳ್ಳಲು ಇದಕ್ಕಿಂತ ಉತ್ತಮ ಯೋಜನೆಗಳಿವೆ. ಅನಾವಶ್ಯಕವಾಗಿ ಈ ಬಿಡದಿ ಟೌನ್ ಶಿಪ್ ವಿಷಯದಲ್ಲಿ ಹಠ ಮಾಡಿ, ಅವರನ್ನು ಈಗಾಗಲೇ ದುರಹಂಕಾರಿ, ಭ್ರಷ್ಟಾಚಾರಿ, ರಿಯಲ್ ಎಸ್ಟೇಟ್ ಬ್ರೋಕರ್ ಎಂದು ಬಿಂಬಿಸುತ್ತಿರುವ ಜನರ ಬಾಯಿಗೆ ಆಹಾರವಾಗುವುದು ಒಳ್ಳೆಯದಲ್ಲ.

ಗುಜರಾತಿನಲ್ಲಿ ನರೇಂದ್ರ ಮೋದಿಯವರು ಸಹ ಮುಖ್ಯಮಂತ್ರಿಯಾಗಿದ್ದಾಗ ಇದೇ ರೀತಿಯ ಏಳೆಂಟು ಟೌನ್ ಶಿಪ್ ನಿರ್ಮಿಸಿದ್ದಾರೆ ಎಂಬ ಮಾಹಿತಿ ಇದೆ. ಅದನ್ನು ಸಮರ್ಥಿಸಿ, ಇದನ್ನು ವಿರೋಧಿಸುವ ನಿಲುವುಗಳು ಕೂಡ ಸರಿಯಲ್ಲ. ಯಾವುದೇ ಕೃಷಿ ಭೂಮಿಯನ್ನು ನಾಶಪಡಿಸಿ ಸಿಮೆಂಟ್ ಕಾಂಕ್ರೀಟ್ ನಿರ್ಮಿಸುವುದು ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ನಡೆಯಾಗುತ್ತದೆ. ಈ ಕ್ಷಣಕ್ಕೆ ಕೃಷಿ ಭೂಮಿ ಕಡಿಮೆಯಾದರೂ ಆಹಾರದ ಧವಸ ಧಾನ್ಯಗಳ ಉತ್ಪಾದನೆ ಹೆಚ್ಚಾಗುತ್ತಿದೆ. ಅದು ಒಳ್ಳೆಯ ಬೆಳವಣಿಗೆಯಾದರೂ, ಈ ಆಹಾರ ಬೆಳೆಗಳು ಹೆಚ್ಚಾಗಲು ಅದಕ್ಕೆ ಉಪಯೋಗಿಸುತ್ತಿರುವ ವಿಷಕಾರಕ ರಸಾಯನಿಕ ಮತ್ತು ಕ್ರಿಮಿನಾಶಕಗಳೇ ಕಾರಣಗಳಾಗಿವೆ. ಮುಂದೊಂದು ದಿನ ಅದಕ್ಕೆ ಪರ್ಯಾಯವಾಗಿ ಮತ್ತೆ ರಾಸಾಯನಿಕ ಮುಕ್ತ ಕೃಷಿ, ಸಹಜ ಕೃಷಿಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರತರೆ, ಅದರಿಂದ ದಿಢೀರನೆ ಇಳುವರಿ ಕಡಿಮೆಯಾಗಿ ಆಹಾರ ಪದಾರ್ಥಗಳ ಅಭಾವ ಕಾಣಿಸಿಕೊಳ್ಳಬಹುದು. ಆಗ ಕೃಷಿ ಮಾಡಲು ಸರಿಯಾದ ಭೂಮಿಯು ಇಲ್ಲದೆ, ಆಹಾರವನ್ನು ಬೆಳೆಯಲು ಸಾಧ್ಯವಾಗದೆ ಅಪಾಯಕ್ಕೆ ಸಿಲುಕಬಹುದು.

ವಿರೋಧ ಪಕ್ಷಗಳ ಪ್ರತಿಭಟನೆ ಅಥವಾ ರಾಜಕೀಯ ಏನೇ ಇರಲಿ, ರೈತರುಗಳಲ್ಲಿ ಒಂದಷ್ಟು ಜನರ ಪರ ವಿರೋಧದ ನಿಲುವುಗಳು ಏನೇ ಇರಲಿ ಒಟ್ಟು ಈಗಿನ ರಾಜಕೀಯ ಮತ್ತು ಮಾಧ್ಯಮಗಳ ಅಭಿಪ್ರಾಯದ ಆಧಾರದಲ್ಲಿ ಹೇಳುವುದಾದರೆ ಹೊಸ ಮುಖ್ಯಮಂತ್ರಿಗಳಿಗೆ ಈ ಯೋಜನೆ ಒಳ್ಳೆಯ ಹೆಸರು ತರುವ ಯಾವುದೇ ಲಕ್ಷಣಗಳಿಲ್ಲ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಈ ವಿಷಯವನ್ನು ಪುನಃ ಪರಿಶೀಲಿಸಿ ಅದು ಇನ್ನಷ್ಟು ದೊಡ್ಡದಾಗಿ ಅವರಿಗೆ ತೊಂದರೆಯಾಗುವ ಮೊದಲು ಈ ಯೋಜನೆಯನ್ನು ವಿನಯಪೂರ್ವಕವಾಗಿ ಮುಂದೂಡಿ ಬೇರೆ ಕೆಲಸಗಳ ಕಡೆ ಗಮನ ಕೊಡುವುದು ಉತ್ತಮ.

ಇಲ್ಲದಿದ್ದರೆ ರೈತರೇ ಅನ್ನದಾತರು, ರೈತರೇ ಈ ದೇಶದ ಬೆನ್ನೆಲುಬು ಎಂಬ ಭಾವನಾತ್ಮಕ ವಿಷಯಗಳು ಮುಂದೆ ಮಾಡಿ ಶ್ರೀ ಶಿವಕುಮಾರ ಅವರನ್ನು ಖಳನಾಯಕನನ್ನಾಗಿ ಮಾಡುವುದು ಶತಸಿದ್ಧ. ಅವರ ಬಳಿ ಇರುವ ಸಲಹೆಗಾರರು ಅಥವಾ ಚಿಂತಕರ ಚಾವಡಿಯ ಸದಸ್ಯರು ಅವರಿಗೆ ಉತ್ತಮ ಸಲಹೆ ನೀಡಬೇಕು. ಅಂತಹ ಬಲಿಷ್ಠ ಪ್ರಧಾನಿ ನರೇಂದ್ರ ಮೋದಿಯವರೇ ಕೃಷಿ ಕಾಯ್ದೆಗಳನ್ನು ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೈಬಿಟ್ಟರು. ಆದರೆ ಅಷ್ಟರ ನಡುವೆ ಪ್ರತಿಭಟನಾ ನಿರತ ಸುಮಾರು 750ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದರು. ಆ ಕಪ್ಪು ಚುಕ್ಕೆ ಅವರಿಗೆ ಇನ್ನೂ ಹಾಗೆ ಇದೆ. ಏನೋ ಅಭಿವೃದ್ಧಿ ಮತ್ತು ಧರ್ಮದ ಹೆಸರಿನ ಮೇಲೆ ಚುನಾವಣೆಗಳನ್ನು ಗೆಲ್ಲುತ್ತಿದ್ದಾರೆ ಅಷ್ಟೇ. ಆದರೆ ರೈತರಿಗೆ ಅವರ ಕೊಡುಗೆ ಅಂತಹ ಹೇಳಿಕೊಳ್ಳುವಂತೆ ಏನು ಇಲ್ಲ.

ಮಾನ್ಯ ಮುಖ್ಯಮಂತ್ರಿಗಳೇ, ಅಧಿಕಾರದ ಪ್ರಾರಂಭದಲ್ಲಿ ಅತ್ಯುತ್ಸಾಹ ತೋರಿಸುತ್ತಿದ್ದೀರಿ, ತುಂಬಾ ಸಂತೋಷ. ಭ್ರಷ್ಟಾಚಾರ ಮುಕ್ತ ಕರ್ನಾಟಕವನ್ನು ನಿರ್ಮಿಸಬೇಕೆಂದು ಕರೆ ಕೊಟ್ಟಿದ್ದೀರಿ, ತುಂಬಾ ಸಂತೋಷ. ಆಡಳಿತದಲ್ಲಿ ಬಿಗಿ ನಿಲುವು ತರುವ ಮಾತುಗಳನ್ನಾಡಿದ್ದೀರಿ, ತುಂಬಾ ಸಂತೋಷ. ಅತ್ಯಂತ ಚಟುವಟಿಕೆಯಿಂದ ಬೇರೆ ಬೇರೆ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೀರಿ, ತುಂಬಾ ಸಂತೋಷ. ಅದನ್ನು ಮುಂದುವರಿಸಿ.

ಆದರೆ, ಎಚ್ಚರ ಅದು ಕಪಟ ನಾಟಕವಾಗಬಾರದು, ತೋರಿಕೆಯಾಗಬಾರದು, ಜನರೇನು ದಡ್ಡರಲ್ಲ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಅದನ್ನು ನೀವು ಯಾವ ರೀತಿ ಗ್ರಹಿಸುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ಮುಂದಿನ ಯಶಸ್ಸು ಅಡಗಿದೆ. ಹಣ ಅಥವಾ ಜಾತಿಯಿಂದ ಮಾತ್ರ ಅಥವಾ ತಂತ್ರಗಾರಿಕೆಯಿಂದ ಮಾತ್ರ ಚುನಾವಣೆ ಗೆಲ್ಲಬಹುದು ಎಂಬ ಭ್ರಮೆ ಬೇಡ. ಉಳಿದದ್ದು ನಿಮ್ಮ ವಿವೇಚನೆಗೆ ಬಿಡುತ್ತಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!