ಕೊಪ್ಪಳ: ದಿನಾಂಕ:25-06-2026(ಹಾಯ್ ಉಡುಪಿ ನ್ಯೂಸ್) ಜಲಸಂಪನ್ಮೂಲ ಇಲಾಖೆ ಹಾಗೂ ತುಂಗಭದ್ರಾ ಮಂಡಳಿಯ ಜಂಟಿ ಸಹಯೋಗದೊಂದಿಗೆ ತುಂಗಭದ್ರಾ ಜಲಾಶಯಕ್ಕೆ ನೂತನವಾಗಿ ಅಳವಡಿಸಿದ 33 ಸ್ಪಿಲ್‌ವೇ ಗೇಟುಗಳನ್ನು ಇಂದು ಲೋಕಾರ್ಪಣೆ ಮಾಡಲಾಯಿತು.
ಆ ನಂತರ ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ. ಆರ್. ಪಾಟೀಲ್, ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ ಎನ್. ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳಾದ ಶ್ರೀ ಎ. ರೇವಂತ್ ರೆಡ್ಡಿ ಅವರೊಂದಿಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.
ಶಾರದಾ ದೇವಿ, ಹುಲಿಗೆಮ್ಮ ಹಾಗೂ ಹುಚ್ಚರಾಯಸ್ವಾಮಿಯ ಆಶೀರ್ವಾದ, ಅಜ್ಜಯ್ಯ ಅವರ ಪವಾಡ, ಹಂಪಿ ವಿರೂಪಾಕ್ಷನ ಕೃಪೆ, ರಾಘವೇಂದ್ರ ಸ್ವಾಮಿಯ ಶಕ್ತಿಯಿಂದಾಗಿ ಇಂತಹ ಮಹತ್ವದ ಕಾರ್ಯಕ್ರಮ ಮಾಡಲು ಸಾಧ್ಯವಾಯಿತು. ನಮ್ಮ ಸರ್ಕಾರ 33 ಗೇಟ್ ಬದಲಾಯಿಸಲು ತೀರ್ಮಾನಿಸಿ ಈ ಮೂರು ರಾಜ್ಯಗಳ ರೈತರ ರಕ್ಷಣೆಗೆ ಭಗವಂತ ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನಾನು ಇಂದು ಮುಖ್ಯಮಂತ್ರಿಯಾಗಿದ್ದರೂ, ನಿಮ್ಮ ಸೇವಕ ಹಾಗೂ ನಿಮ್ಮ ಬಂಧು ಎಂಬ ಜವಾಬ್ದಾರಿಯನ್ನು ನಾನೆಂದಿಗೂ ಮರೆಯಲು ಸಾಧ್ಯವಿಲ್ಲ .
ಈ ಅಣೆಕಟ್ಟಿನ 33 ಟಿಎಂಸಿ ನೀರನ್ನು ಉಳಿಸುವ ಬಗ್ಗೆ ರೈತ ಮುಖಂಡರು ಸಲ್ಲಿಸಿರುವ ಮನವಿ ಸೇರಿದಂತೆ ಯಾವ ರೀತಿ ರಕ್ಷಿಸಿ, ರೈತ ಕುಟುಂಬಗಳನ್ನು ಕಾಪಾಡಬೇಕು ಎಂದು ನಾವು ಮೂವರು ಮುಖ್ಯಮಂತ್ರಿಗಳು ಹಾಗೂ ಜಲಶಕ್ತಿ ಸಚಿವರು ಚರ್ಚೆ ಮಾಡಿದ್ದೇವೆ. ನವಲಿ ಸಮನಾಂತರ ಜಲಾಶಯ, ಹೂಳೆತ್ತುವ ವಿಚಾರ ಸೇರಿದಂತೆ ಎಲ್ಲಾ ಅವಕಾಶಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಿ ನಾವೆಲ್ಲರೂ ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದೇವೆ. ಈ ತೀರ್ಮಾನವನ್ನು ಕೇಂದ್ರ ಸಚಿವರೇ ಪ್ರಕಟಿಸಲಿದ್ದಾರೆ.
ಇಂದು ನಾವು ಒಂದು ತಾಸಿನ ಕಾಲ ಮಾಡಿರುವ ಚರ್ಚೆ ದೇಶದ ನೀರಾವರಿ ಹಾಗೂ ಒಕ್ಕೂಟ ವ್ಯವಸ್ಥೆಯಲ್ಲಿ ಇತಿಹಾಸದ ಪುಟಕ್ಕೆ ಸೇರಲಿದೆ. ನಮ್ಮ ನೀರು, ನಮ್ಮ ಹಕ್ಕು ಆಶಯದಡಿ ಮೂರು ರಾಜ್ಯಗಳ ರೈತರ ರಕ್ಷಣೆಗೆ ನಾವು ಐತಿಹಾಸಿಕ ತೀರ್ಮಾನ ಕೈಗೊಂಡಿದ್ದೇವೆ.
ನಾನು ಸಿಎಂ ಆದ ಬಳಿಕ ಇದು ಎರಡನೇ ಸಾರ್ವಜನಿಕ ಕಾರ್ಯಕ್ರಮ. ರೈತನಿಗೆ ಸಂಬಳವಿಲ್ಲ, ಬಡ್ತಿ ಇಲ್ಲ, ಪಿಂಚಣಿ ಇಲ್ಲ, ರಜೆಯೂ ಇಲ್ಲ ಹಾಗೂ ನಿವೃತ್ತಿಯೂ ಇಲ್ಲ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ದೇಶಕ್ಕೆ ಅನ್ನ ನೀಡುವ ರೈತನ ಬದುಕನ್ನು ಉಳಿಸಬೇಕು ಮತ್ತು ಈ ಭಾಗದ ಭತ್ತದ ಕಣಜವನ್ನು ಕಾಪಾಡಬೇಕು ಎಂಬ ದೃಢ ತೀರ್ಮಾನವನ್ನು ನಿಮ್ಮೆಲ್ಲರ ಆಶೀರ್ವಾದದೊಂದಿಗೆ ನಾವು ತೆಗೆದುಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.



