20260619_002724.jpg
Spread the love

ಬೆಂಗಳೂರು:19-06-2026(ಹಾಯ್ ಉಡುಪಿ ನ್ಯೂಸ್) ರಾಜ್ಯದ ಹಿತಕ್ಕಾಗಿ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾತೀತ ಬೆಂಬಲ ದೊರೆತಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಿನ್ನೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳಾದ ಶ್ರೀ ಬಿ.ಕೆ. ಹರಿಪ್ರಸಾದ್, ಶ್ರೀ ಮಳವಳ್ಳಿ ಶಿವಣ್ಣ, ಶ್ರೀ ಪಿ.ವಿ. ಮೋಹನ್, ಶ್ರೀ ವಿನಯ್ ಕಾರ್ತಿಕ್ ಹಾಗೂ ಶ್ರೀ ತಿಪ್ಪಣ್ಣಪ್ಪ ಕಮಕನೂರ ಅವರನ್ನು ವಿಧಾನಸೌಧದಲ್ಲಿ ಅಭಿನಂದಿಸಿ, ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಉಪಸ್ಥಿತರಿದ್ದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಸರ್ಕಾರಕ್ಕೆ ಶಾಸಕರ ಬೆಂಬಲ ನೋಡಿ ನನಗೆ ಆಶ್ಚರ್ಯವಾಗಿದೆ. ಇದು ನಮ್ಮ ಸರ್ಕಾರಕ್ಕೆ ಮಾತ್ರ ನೀಡಿರುವ ಬೆಂಬಲವಲ್ಲ. ರಾಜ್ಯದ ಜನತೆಯ ಹಿತಕ್ಕಾಗಿ ನಿಮ್ಮ ಜೊತೆ ಇದ್ದೇವೆ ಎಂದು ನೀಡಿರುವ ಬೆಂಬಲ.

ನಾವು ಯಾವ ಹೆಜ್ಜೆಯನ್ನಿಟ್ಟು ಮುಂದುವರಿಯುತ್ತಿದ್ದೇವೆಯೋ ಅದಕ್ಕೆ ನಾವೂ ಜೊತೆಗಿದ್ದೇವೆ ಎಂದು ಪಕ್ಷಾತೀತವಾಗಿ ಬೆಂಬಲ ನೀಡಿದ್ದಾರೆ. ನಮ್ಮ ಪಕ್ಷದ ಶಾಸಕರೂ ಒಗ್ಗಟ್ಟಾಗಿ ಬೆಂಬಲಿಸಿದ್ದಾರೆ. ನಮಗೆ ಹೆಚ್ಚಿನ ಮತ ನೀಡಿದ ಬೇರೆ ಬೇರೆ ಪಕ್ಷದ ವಿಶ್ವಾಸವನ್ನು ನಾವು ಉಳಿಸಿಕೊಳ್ಳುತ್ತೇವೆ.‌ ನೀವು ನಮಗೆ ನೀಡಿದ ವಿಶ್ವಾಸ ಜನರಿಗೆ ನೀಡಿದ ಶಕ್ತಿ.

ನಮ್ಮ ಪಕ್ಷದ ಶಾಸಕರ ಒಂದು ಮತವೂ ತಿರಸ್ಕೃತವಾಗಬಾರದು ಎಂದು ತರಬೇತಿ ನೀಡಲಾಗಿತ್ತು.‌ ಇದಕ್ಕೆ ಸಹಕರಿಸಿದ ಎಲ್ಲಾ ಪದಾಧಿಕಾರಿಗಳಿಗೆ ನಾನು ವಿಶೇಷವಾಗಿ ಧನ್ಯವಾದ ಹೇಳುತ್ತೇನೆ. ಇದಕ್ಕೆ ದುಡಿದಂತಹ ಪಕ್ಷದ ಎಲ್ಲಾ ಶಾಸಕರು, ನಾಯಕರು, ಎಐಸಿಸಿ ಪ್ರಧಾನ ಕಾರ್ಯದರ್ಶಿಯವರಾದ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹಾಗೂ ಇತರೇ ಕಾರ್ಯದರ್ಶಿಗಳನ್ನು ನಾನು ಅಭಿನಂದಿಸುತ್ತೇನೆ ಎಂದರು.

ಕಾಂಗ್ರೆಸ್ ಪಕ್ಷದಿಂದ ಐದು ಅಭ್ಯರ್ಥಿಗಳು ನಿಂತಿದ್ದರು. ನಮ್ಮ ಶಾಸಕರ ಸಂಖ್ಯಾಬಲ ಎಷ್ಟಿತ್ತು ಎಂಬುದು ಮಾಧ್ಯಮಗಳಿಗೆ ತಿಳಿದಿತ್ತು. ಐದು ಜನ ಗೆಲ್ಲುತ್ತಾರೆ ಎನ್ನುವ ವಿಶ್ವಾಸವಿತ್ತು – ಅವರು ಗೆದ್ದಿದ್ದಾರೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಭ್ಯರ್ಥಿಗಳನ್ನು ಅಭಿನಂದಿಸುತ್ತಾ ಹೇಳಿದರು.

error: No Copying!