ಬೆಂಗಳೂರು ಮಹದೇವಪುರದಲ್ಲಿ ನಡೆದ ಮಂಜುಳಾ ಹತ್ಯೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಇಬ್ಬರು ಮಕ್ಕಳ ಕಣ್ಣೆದುರೇ ಪತ್ನಿಯನ್ನು ಸುಮಾರು 20 ಬಾರಿ ಚಾಕುವಿನಿಂದ ಇರಿದು ಕೊಂದ ಪತಿ ಪ್ರದೀಪ್, ತನ್ನ ಸೆಲ್ಫಿ ವಿಡಿಯೋದಲ್ಲಿ
“ಆನ್‌ಲೈನ್ ಗೇಮಿಂಗ್‌ನಿಂದ ನನ್ನ ಕುಟುಂಬ ಹಾಳಾಯಿತು” ಎಂದು ಹೇಳಿರುವುದು ಈ ಘಟನೆಯ ಅತ್ಯಂತ ಆತಂಕಕಾರಿ ಅಂಶವಾಗಿದೆ.
ಮಂಜುಳಾ ಅವರ ವೃತ್ತಿ ಹೋಂ ಗಾರ್ಡ್ ಆಗಿತ್ತು. ಅವರು ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಗೆ ನಿಯೋಜಿತರಾಗಿದ್ದರು . ಅವರು ಸುಮಾರು 32 ವರ್ಷದವರು ಆಗಿದ್ದು, ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮನೆಗೆ ತಡವಾಗಿ ಬರುತ್ತಿದ್ದ ಕಾರಣ ಪತಿ ಪ್ರದೀಪ್ ಅನುಮಾನ ಪಡುತ್ತಿದ್ದನೆಂದು ಕುಟುಂಬದವರು ಆರೋಪಿಸಿದ್ದಾರೆ.
ಒಬ್ಬ ಮಹಿಳೆ, ಇಬ್ಬರು ಮಕ್ಕಳು, ಒಂದು ಕುಟುಂಬ… ಎಲ್ಲವೂ ಕ್ಷಣಾರ್ಧದಲ್ಲಿ ಚೂರುಚೂರಾಯಿತು. ಕಾರಣ ಕೇವಲ ಕೋಪವಲ್ಲ. ವರ್ಷಗಳಿಂದ ಬೆಳೆದ ಅನುಮಾನ, ಆರ್ಥಿಕ ನಷ್ಟ, ಜೂಜಾಟದ ವ್ಯಸನ ಮತ್ತು ಮಾನಸಿಕ ಅಸ್ಥಿರತೆ. ಕುಟುಂಬದವರ ಮಾಹಿತಿ ಪ್ರಕಾರ ಪ್ರದೀಪ್ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಸುಮಾರು 7 ರಿಂದ 8 ಲಕ್ಷ ರೂಪಾಯಿಗಳವರೆಗೆ ಕಳೆದುಕೊಂಡಿದ್ದ. ಹಣ ಕಳೆದುಕೊಂಡಂತೆ ಕುಟುಂಬದ ಮೇಲಿನ ಜವಾಬ್ದಾರಿಯೂ ಕಳೆದುಹೋಯಿತು.
ದುರದೃಷ್ಟವಶಾತ್ ಇದು ಒಂದೇ ಘಟನೆ ಅಲ್ಲ. ಕರ್ನಾಟಕದ ಅನೇಕ ಭಾಗಗಳಲ್ಲಿ ಇದೇ ಮಾದರಿಯ ಕಥೆಗಳು ಕೇಳಿಬರುತ್ತಿವೆ. ಪತಿ ಅಥವಾ ಕುಟುಂಬದ ಸದಸ್ಯರು ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್‌ಗೆ ಅಂಟಿಕೊಂಡು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಮನೆ ಖರ್ಚು, ಮಕ್ಕಳ ಶಿಕ್ಷಣ, ಸಾಲದ ಹೊರೆ, ಕುಟುಂಬದ ಭವಿಷ್ಯ ಎಲ್ಲವೂ ಕಡೆಗಣಿಸಲ್ಪಡುತ್ತಿದೆ. ಹಣ ಕಳೆದುಹೋದ ನಂತರ ಮಾನಸಿಕ ಒತ್ತಡ, ಕೊನೆಗೆ ಮನೆಯಲ್ಲೇ ಜಗಳ,ಕೋಪ, ಅನುಮಾನ, ಗೃಹಹಿಂಸೆ ಮತ್ತು ಕೆಲವೊಮ್ಮೆ ಆತ್ಮಹತ್ಯೆ ಅಥವಾ ಕೊಲೆಯಂತಹ ದುರಂತಗಳಿಗೆ ದಾರಿ ಮಾಡಿಕೊಡುತ್ತಿದೆ.
ಇಂದು ಮೊಬೈಲ್‌ನಲ್ಲಿ ನಡೆಯುತ್ತಿರುವ ಕೆಲವು ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟದ ಆ್ಯಪ್‌ಗಳು ಅನೇಕ ಕುಟುಂಬಗಳಿಗೆ ಕಾಣದ ಶತ್ರುವಾಗಿವೆ. ಆರಂಭದಲ್ಲಿ “ಸಣ್ಣ ಹಣ ಗೆಲ್ಲಬಹುದು” ಎಂಬ ಆಸೆ ಹುಟ್ಟಿಸುತ್ತವೆ. ನಂತರ ಅದು ವ್ಯಸನವಾಗಿ ಬದಲಾಗುತ್ತದೆ. ವ್ಯಸನ ಬೆಳೆದಂತೆ ವ್ಯಕ್ತಿ ತನ್ನ ಸಮಯ, ಹಣ, ಸಂಬಂಧಗಳು ಮತ್ತು ಕೊನೆಗೆ ತನ್ನ ಜೀವನವನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಾನೆ.
ಅಂತಹ ಸಂದರ್ಭಗಳಲ್ಲಿ ಅತ್ಯಂತ ಹೆಚ್ಚು ನೋವು ಅನುಭವಿಸುವವರು ಹೆಂಡತಿ ಮತ್ತು ಮಕ್ಕಳು. ಇಬ್ಬರು ಅಥವಾ ಮೂವರು ಪುಟ್ಟ ಮಕ್ಕಳನ್ನು ನೋಡಿಕೊಳ್ಳುವುದು, ಶಾಲಾ ಶುಲ್ಕ ಪಾವತಿಸುವುದು, ಮನೆ ಬಾಡಿಗೆ, ದಿನನಿತ್ಯದ ಖರ್ಚು, ವೃದ್ಧ ತಂದೆ-ತಾಯಿಯ ಜವಾಬ್ದಾರಿ — ಎಲ್ಲವೂ ಮಹಿಳೆಯ ಹೆಗಲಿನ ಮೇಲೆ ಬೀಳುತ್ತದೆ. ಪತಿ ಸಂಪಾದಿಸಿದ ಹಣವನ್ನು ಕುಟುಂಬಕ್ಕೆ ಬಳಸುವ ಬದಲು ಮೊಬೈಲ್ ಪರದೆಯೊಳಗೆ ಕಳೆದುಕೊಳ್ಳುತ್ತಿರುವಾಗ, ಮನೆಯ ಮಹಿಳೆ ಕಣ್ಣೀರಿನೊಳಗೆ ಬದುಕು ಸಾಗಿಸುತ್ತಾಳೆ.
ಅನೇಕ ಮಹಿಳೆಯರು ಸಮಾಜದ ಭಯಕ್ಕೆ, ಮಕ್ಕಳ ಭವಿಷ್ಯಕ್ಕಾಗಿ ಅಥವಾ ಕುಟುಂಬ ಉಳಿಯಲಿ ಎಂಬ ಆಶೆಯಿಂದ ಈ ನೋವನ್ನು ಯಾರಿಗೂ ಹೇಳದೆ ಸಹಿಸಿಕೊಳ್ಳುತ್ತಾರೆ. ಗಂಡ ಹಣ ಕಳೆದುಕೊಂಡರೂ, ಸಾಲ ಮಾಡಿದರೂ, ಮನೆಯ ವಸ್ತುಗಳನ್ನು ಮಾರಿದರೂ, ಬಂಧುಗಳ ಮುಂದೆ ಅವಮಾನ ಮಾಡಿದರೂ, ಕೊನೆಗೆ ಮನೆ ನಡೆಸಲು ಮಹಿಳೆಯೇ ಹೋರಾಡಬೇಕಾಗುತ್ತದೆ. ಮಕ್ಕಳಿಗೆ ಊಟ ಕೊಡಲು, ಶಾಲೆಗೆ ಕಳುಹಿಸಲು, ಭವಿಷ್ಯ ಕಟ್ಟಲು ಅವಳು ಒಬ್ಬಳೇ ಯುದ್ಧ ಮಾಡುತ್ತಾಳೆ.
ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಸಮಾಜ ತಕ್ಷಣ ಎಚ್ಚೆತ್ತುಕೊಳ್ಳಬೇಕಾಗಿದೆ. ಆನ್‌ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ಆ್ಯಪ್‌ಗಳ ಮೇಲೆ ಕಠಿಣ ನಿಯಂತ್ರಣ ಅಗತ್ಯ. ಅಕ್ರಮ ವೇದಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಬಗ್ಗೆ ಗಂಭೀರ ಚಿಂತನೆ ನಡೆಯಬೇಕು.
ಬ್ಯಾಂಕ್ ಖಾತೆಗಳಿಂದ ನಿರಂತರವಾಗಿ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿರುವವರನ್ನು ಗುರುತಿಸಿ ಅವರಿಗೆ ಕಡ್ಡಾಯ ಕೌನ್ಸೆಲಿಂಗ್ ವ್ಯವಸ್ಥೆ ಮಾಡಬೇಕು.
ಪೊಲೀಸ್ ಇಲಾಖೆ, ಶಾಲೆಗಳು, ಕಾಲೇಜುಗಳು ಮತ್ತು ಸ್ಥಳೀಯ ಸಂಸ್ಥೆಗಳು ಸೇರಿ ಜಾಗೃತಿ ಅಭಿಯಾನಗಳನ್ನು ನಡೆಸಬೇಕು. ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನದಂತೆ ಆನ್‌ಲೈನ್ ಜೂಜಾಟವನ್ನೂ ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಪರಿಗಣಿಸುವ ಸಮಯ ಬಂದಿದೆ. ಕುಟುಂಬಗಳು ಕೂಡ ಸದಸ್ಯರ ಆರ್ಥಿಕ ಚಟುವಟಿಕೆಗಳು ಮತ್ತು ವರ್ತನೆಯಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು.
ಒಬ್ಬ ವ್ಯಕ್ತಿ ಹಣ ಕಳೆದುಕೊಳ್ಳುವುದಕ್ಕಿಂತ ದೊಡ್ಡ ನಷ್ಟವೆಂದರೆ ಒಂದು ಕುಟುಂಬದ ನಾಶ. ಮಕ್ಕಳ ಭವಿಷ್ಯ ಕತ್ತಲಾಗುವುದು. ತಾಯಿಯನ್ನು ಕಳೆದುಕೊಂಡ ಮಕ್ಕಳು, ತಂದೆಯನ್ನು ಜೈಲಿಗೆ ಕಳುಹಿಸಿದ ಪರಿಸ್ಥಿತಿ, ಅಳಿದುಹೋದ ಕುಟುಂಬದ ಕನಸುಗಳು — ಇವೆಲ್ಲಕ್ಕೂ ಸಮಾಜವಾಗಿ ನಾವು ಬೆಲೆ ತೆರುತ್ತಿದ್ದೇವೆ.
ಪ್ರಶ್ನೆ ಒಂದೇ…
ಇನ್ನೆಷ್ಟು ಹೆಣ್ಣು ಬಲಿಯಾಗಬೇಕು?
ಇನ್ನೆಷ್ಟು ಮಕ್ಕಳು ಅನಾಥರಾಗಬೇಕು?
ಇನ್ನೆಷ್ಟು ಕುಟುಂಬಗಳು ಆನ್‌ಲೈನ್ ಜೂಜಾಟದ ಬಲೆಗೆ ಬೀಳಬೇಕು?
ಇದೀಗ ಕೇವಲ ಒಂದು ಕುಟುಂಬದ ದುಃಖದ ಕಥೆಯಲ್ಲ. ಇದು ಸಮಾಜಕ್ಕೆ ಮೊಳಗುತ್ತಿರುವ ಅಪಾಯದ ಗಂಟೆ. ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಸೋಲುವುದು ಕೇವಲ ಹಣವಲ್ಲ… ಒಬ್ಬ ಹೆಂಡತಿಯ ನೆಮ್ಮದಿ, ಇಬ್ಬರು–ಮೂರು ಪುಟ್ಟ ಮಕ್ಕಳ ಭವಿಷ್ಯ, ಮತ್ತು ಇಡೀ ಕುಟುಂಬದ ಕನಸು. ಬೆಂಗಳೂರಿನ ಮಂಜುಳಾ ಪ್ರಕರಣ ಎಚ್ಚರಿಕೆಯ ಗಂಟೆಯಾಗಬೇಕು.
ಇಂತಹ ಘಟನೆಗಳು ಮತ್ತೆ ಮತ್ತೇ ಮರುಕಳಿಸುವ ಮೊದಲು ಸರ್ಕಾರ, ಪೊಲೀಸ್ ಇಲಾಖೆ, ಸೈಬರ್ ಕ್ರೈಂ ವಿಭಾಗ ಮತ್ತು ಸಮಾಜ ಒಟ್ಟಾಗಿ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಮುಂದಿನ ಬಲಿಪಶು ಮತ್ತೊಂದು ಕುಟುಂಬವಾಗಬಹುದು.
