IMG_20260610_174846.jpg
Spread the love

ದಿನಾಂಕ:10-06-2026 (ಹಾಯ್ ಉಡುಪಿ ನ್ಯೂಸ್)

ಉಡುಪಿ: ನಗರದ ಶ್ರೀಕೃಷ್ಣ ಮಠದ ಪಾರ್ಕಿಂಗ್ ಬಳಿ ಕಾರು ಚಾಲಕರ ನಡುವೆ ನಡೆದ ವಾಗ್ವಾದದಿಂದ ಪರಸ್ಪರ ಹಲ್ಲೆ ನಡೆಸಿ ಕೊಂಡಿರುವ  ಘಟನೆ ನಡೆದಿದೆ.

ತೆಲಂಗಾಣ ರಾಜ್ಯದ ಹೈದರಾಬಾದ್ ನಿವಾಸಿ ರಂಗ ರಾವ್ ಅವರು ಜೂನ್ 9ರಂದು ಸಂಜೆ ಕುಟುಂಬದೊಂದಿಗೆ ಶ್ರೀಕೃಷ್ಣ ದೇವರ ದರ್ಶನಕ್ಕೆ ಉಡುಪಿಗೆ ಬಂದಿದ್ದರು. ಕಾರು ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿ ರಸ್ತೆ ದಾಟುತ್ತಿದ್ದ ವೇಳೆ, KA20MD7543 ಸಂಖ್ಯೆಯ ಕಾರನ್ನು ಚಲಾಯಿಸಿಕೊಂಡು ಬಂದ ಸುಪ್ರೀತ್ ಕುಮಾರ್ ಎಂಬಾತ ಅಜಾಗರೂಕವಾಗಿ ವಾಹನ ಚಲಾಯಿಸಿದ್ದಾನೆ ಎಂದು ದೂರಲಾಗಿದೆ. ಇದನ್ನು ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಳಿಕ ಕಾರಿನಲ್ಲಿದ್ದ ಕೋಲಿನಿಂದ ಹಲ್ಲೆ ನಡೆಸಿದ ಪರಿಣಾಮ ರಂಗ ರಾವ್ ಅವರ ತಲೆಗೆ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ  ಕಲಂ 74, 118(1), 351(2), 352 ಕಲಂ 75 ಅಡಿ ಪ್ರಕರಣ ದಾಖಲಾಗಿದೆ.

ಇದೇ ಘಟನೆಯ ಕುರಿತು ಸುಪ್ರೀತ್ ಕುಮಾರ್ (40) ಅವರು  ಪ್ರತಿದೂರು ದಾಖಲಿಸಿದ್ದಾರೆ. ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ TS12EB9043 ಸಂಖ್ಯೆಯ ಕಾರು ಡಿಕ್ಕಿ ಹೊಡೆಯುವ ರೀತಿಯಲ್ಲಿ ಬಂದಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ಎದುರಿನ ವಾಹನದಲ್ಲಿದ್ದವರು ಫೋಟೋ ಸ್ಟ್ಯಾಂಡ್, ಕುರ್ಚಿ ಹಾಗೂ ಇತರೆ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಯಲ್ಲಿ ತಮ್ಮ ನಾಲಿಗೆಯಿಂದ ರಕ್ತಸ್ರಾವವಾಗಿದ್ದು, ಕಾರಿನ ಗಾಜುಗಳನ್ನು ಸಹ ಒಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ .
ಈ ಸಂಬಂಧ  ಕಲಂ 74, 118(1) ಮತ್ತು 324 ಅಡಿ ಪ್ರಕರಣ ದಾಖಲಾಗಿದೆ.

ಪೊಲೀಸರು ಎರಡೂ ಪ್ರಕರಣಗಳನ್ನು ದಾಖಲಿಸಿ ಆರೋಪಿ ಸುಪ್ರೀತ್ ಕುಮಾರ್ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

error: No Copying!