n7155379171781083540196cee98f3da54dfc1a5e98642b9a2f003e6d9e9e81359e8d607492786b3733d022.jpg
Spread the love

ದಿನಾಂಕ:10-06-2026(ಹಾಯ್ ಉಡುಪಿ ನ್ಯೂಸ್)

ಕಲಬುರಗಿ: ಪೋಕ್ಸೊ ಪ್ರಕರಣದ ತನಿಖೆಗೆ ಸಹಕರಿಸಲು ದೂರುದಾರರಿಂದ ಲಂಚಕ್ಕೆ ಬೇಡಿಕೆಯಿಟ್ಟು ಹಣ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದ ಇಲ್ಲಿನ ಸ್ಟೇಷನ್ ಬಜಾರ್ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿ ಕಲಬುರಗಿ ‌ನಗರ‌ ಪೊಲೀಸ್‌ ಕಮಿಷನರ್‌ ಡಾ.ಶರಣಪ್ಪ ಎಸ್.ಡಿ ಅವರು ಆದೇಶ ಹೊರಡಿಸಿದ್ದಾರೆ.

ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರೈನಂ. 61/2026ರ, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 64(2)(ಎಂ) ಹಾಗೂ ಪೋಕ್ಸೊ ಕಾಯ್ದೆಯ ಕಲಂ 4 ಮತ್ತು 6ರಡಿ ದಾಖಲಾದ ಪ್ರಕರಣದಲ್ಲಿ ನೊಂದ ಬಾಲಕಿಯ ಹೇಳಿಕೆ ಪಡೆದುಕೊಳ್ಳುವ ಸಂಬಂಧ ತನಿಖಾ ಸಹಾಯಕ ಸಿಬ್ಬಂದಿಯಾಗಿದ್ದ ಜ್ಯೋತಿ ಹಾಗೂ ಎಎಸ್‌ಐ ಶಿವಶರಣಪ್ಪ ಅವರು ದೂರುದಾರರನ್ನು ಪೊಲೀಸ್ ಠಾಣೆಗೆ ಕರೆಯಿಸಿಕೊಂಡಿದ್ದರು.

ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ಹೇಳಿ ದೂರುದಾರರಿಂದ ₹10 ಸಾವಿರ ಲಂಚದ ಬೇಡಿಕೆ ಇಟ್ಟಿದ್ದು, ಅದರ ಭಾಗವಾಗಿ ₹9 ಸಾವಿರ ಹಣವನ್ನು ಪಡೆಯುವಾಗ ಜೂನ್ 7ರಂದು ಕರ್ನಾಟಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.

ಗೃಹ ಸಚಿವರ ತವರಿನಲ್ಲೇ ಪೊಲೀಸರು ಲಂಚಕ್ಕೆ ಬೇಡಿಕೆಯಿಟ್ಟು ಸಿಕ್ಕಿ ಬಿದ್ದ ಸುದ್ದಿ ಎಲ್ಲೆಡೆ ಸದ್ದು‌ಮಾಡಿತ್ತು.

ಪೋಕ್ಸೊದಂತಹ ಗಂಭೀರ ಪ್ರಕರಣದಲ್ಲಿ ದೂರುದಾರರಿಗೆ ನೆರವು ನೀಡುವ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿರುವುದು ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ಅತೀವ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ತೋರಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತಿನ ನಡಾವಳಿ) ನಿಯಮಾವಳಿ-1965/89ರ ನಿಯಮ 5ರ ಅನ್ವಯ ಇಲಾಖಾ ಶಿಸ್ತು ಕ್ರಮ ಬಾಕಿ ಇರಿಸಿ ಇಬ್ಬರೂ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ  ಸ್ಪಷ್ಟಪಡಿಸಿದ್ದಾರೆ.

error: No Copying!