images-1.jpeg
Spread the love

ಬ್ರಹ್ಮಾವರ: ದಿನಾಂಕ :09-06-2026(ಹಾಯ್ ಉಡುಪಿ ನ್ಯೂಸ್) ಗೂಡ್ಸ್ ರಿಕ್ಷಾ ವಾಹನದಲ್ಲಿ ಅಕ್ರಮವಾಗಿ ಅನ್ನಭಾಗ್ಯ ಯೋಜನೆಯ ಅಕ್ಕಿ ಯನ್ನು ‌ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಯನ್ನು ಆಹಾರ ನಿರೀಕ್ಷಕರ ದೂರಿನ ಮೇರೆಗೆ ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಬ್ರಹ್ಮಾವರ ತಾಲೂಕು ಆಹಾರ ನಿರೀಕ್ಷಕರಾದ ವಸಂತ ಕುಮಾರ್ ಅವರಿಗೆ ದಿನಾಂಕ 08/06/2026 ರಂದು ರಾತ್ರಿ ಬ್ರಹ್ಮಾವರ ಪೊಲೀಸ್ ಠಾಣೆಯ ಪಿ.ಎಸ್.ಐ ರವರು ಫೋನ್‌ ಮಾಡಿ ಬ್ರಹ್ಮಾವರ ವಾರಂಬಳ್ಳಿ ಗ್ರಾಮದ ಆಕಾಶವಾಣಿ ಬಳಿ ವಾಹನ ತಪಾಸಣೆ ನಡೆಸುತ್ತಿರುವ ಸಮಯದಲ್ಲಿ KA-20-AA-9700 ಗೂಡ್ಸ್‌ ವಾಹನದಲ್ಲಿ ಯಾವುದೇ ದಾಖಲೆ ಇಲ್ಲದೇ ಅಕ್ಕಿಯನ್ನು ಸಾಗಿಸುತ್ತಿರುವುದು ಕಂಡು ಬಂದಿರುತ್ತದೆ. ಈ ಅಕ್ಕಿಯ ಬಗ್ಗೆ ಅನುಮಾನವಿದ್ದು, ಅಕ್ಕಿಯನ್ನು ಪರಿಶೀಲಿಸಿ ವರದಿ ನೀಡುವಂತೆ ಕೋರಿಕೊಂಡಿದ್ದು, ವಸಂತ ಕುಮಾರ್ ರವರು ಗೂಡ್ಸ್‌ ವಾಹನವನ್ನು ಪರಿಶೀಲಿಸಿದಾಗ KA-20-AA-9700 ಗೂಡ್ಸ್‌ ರಿಕ್ಷಾವಾಗಿದ್ದು, ರಿಕ್ಷಾದ ಹಿಂಬದಿ ಬಾಡಿಯಲ್ಲಿ ಪರಿಶೀಲಿಸಿದಾಗ 39 ಚೀಲಗಳಲ್ಲಿ ಒಟ್ಟು 13 ಕ್ವಿಂಟಲ್‌ 92 ಕೆ.ಜಿ 300 ಗ್ರಾಮ್‌ ಅಕ್ಕಿ ಇದ್ದು, ಅಕ್ಕಿಯು ಸಾರ್ವಜನಿಕ ವಿತರಣಾ ಪದ್ದತಿಯಲ್ಲಿ ಅನ್ನ ಭಾಗ್ಯ ಯೋಜನೆಯಡಿ ಸರಕಾರ ಉಚಿತವಾಗಿ ಪಡಿತರ ಚೀಟಿದಾರರಿಗೆ ವಿತರಿಸುವ ಪಡಿತರ ಅಕ್ಕಿ ಇರುವುದು ಕಂಡು ಬಂದಿದ್ದು ಅಕ್ಕಿಯ ಅಂದಾಜು ಬೆಲೆ 47,300 ರೂಪಾಯಿ ಆಗಿರುತ್ತದೆ.

ಆಹಾರ ನಿರೀಕ್ಷಕರು ಈ ಅಕ್ಕಿಯನ್ನು ಸಾಗಾಟ ಮಾಡಲು ಅಗತ್ಯ ದಾಖಲಾತಿ ಇದೆಯೇ ಎಂದು ಆರೋಪಿ ಜೀಪನ್‌ ಯಾನೆ ಯಾಸಿನ್‌ ನಲ್ಲಿ ವಿಚಾರಿಸಿದಾಗ ಯಾವುದೇ ದಾಖಲಾತಿಗಳು ಇರುವುದಿಲ್ಲವಾಗಿ ತಿಳಿಸಿರುತ್ತಾನೆ.

ಅಕ್ಕಿ ಇರುವ ಚೀಲಗಳನ್ನು KA-20-AA-9700 ಗೂಡ್ಸ್‌ ರಿಕ್ಷಾವನ್ನು ಹಾಗೂ ತೂಕದ ಮೆಶೀನ್‌ ನನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಅಕ್ಕಿಯನ್ನು ಅಕ್ರಮವಾಗಿ ಎಲ್ಲಿಯೋ ಖರೀದಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಯಾವುದೇ ದಾಖಲಾತಿಗಳು ಹಾಗೂ ಪರವಾನಿಗೆ ಇಲ್ಲದೇ ಗೂಡ್ಸ್‌ ವಾಹನದಲ್ಲಿ ಸಾಗಿಸುತ್ತಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ: 3 ಮತ್ತು 7 ಅಗತ್ಯ ವಸ್ತುಗಳ ಕಾಯ್ದೆ- 1955 ಹಾಗೂ ಕಲಂ: ಕ್ಲಾಸ್‌ 3 (2). 18(1) ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ (ನಿಯಂತ್ರಣ) ಆದೇಶ 2016 ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

error: No Copying!