ಉಡುಪಿ: ದಿನಾಂಕ:09-06-2026 (ಹಾಯ್ ಉಡುಪಿ ನ್ಯೂಸ್) ಅಂತರ್-ರಾಜ್ಯ ಮನೆ ಕಳ್ಳತನದ ಮುಸುಕುಧಾರಿ TATTO-313 ಗ್ಯಾಂಗ್ ಭೇದಿಸಿದ ಮಣಿಪಾಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು ರೂ.7,90,000 ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಮಂಚಿಕೋಡಿ ಮನೆಯಲ್ಲಿ ಅಮಿತ್ ಡ್ಯಾನಿಯಲ್ ಎಂಬವರು ಮಕ್ಕಳೊಂದಿಗೆ ವಾಸವಾಗಿದ್ದರು.
ದಿನಾಂಕ 03.02.2026 ರಂದು ರಾತ್ರಿ 01:45 ಗಂಟೆಗೆ ಮನೆಯ ಬಾಗಿಲು ಹಾಗೂ ಹೊರಗಿನ ಗೇಟಿಗೆ ಬೀಗ ಹಾಕಿ ತಾಯಿ ಮನೆಗೆ ಹೋಗಿದ್ದು, ದಿನಾಂಕ 04.02.2026 ರಂದು ಮಧ್ಯಾಹ್ನ 01:30 ಗಂಟೆಗೆ ಪಕ್ಕದ ಮನೆಯವರು ಬಾಗಿಲು ತೆರೆದಿರುವುದಾಗಿ ತಿಳಿಸಿದ್ದರು. ಪರಿಶೀಲಿಸಿದಾಗ ದಿನಾಂಕ 03.02.2026 ರ 03:45 ಗಂಟೆಯಿಂದ ದಿನಾಂಕ 04.02.2026 ರ ಮಧ್ಯಾಹ್ನ 02:00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಮನೆಯಲ್ಲಿದ್ದ ಸುಮಾರು 75 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಪತ್ತೆಯಾಯಿತು.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 15/2026, ಕಲಂ 331(3),(4), 305 BNS ಅಡಿ ಪ್ರಕರಣ ದಾಖಲಾಗಿತ್ತು.
ಮಣಿಪಾಲ ಪೊಲೀಸ್ ಠಾಣೆಗೆ ಕರೆತಂದ ಸಂಶಯಾಸ್ಪದ ವ್ಯಕ್ತಿಗಳನ್ನು ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ಅವರು ವಿಚಾರಣೆ ನಡೆಸಿದಾಗ, ಅವರು ಮೇಲ್ಕಂಡ ಪ್ರಕರಣದ ಆರೋಪಿಗಳೇ ಎಂಬುದು ದೃಢಪಟ್ಟಿತು ಎನ್ನಲಾಗಿದೆ .ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಆರೋಪಿಗಳು ಶಿವಮೊಗ್ಗದ ಒಂದು ಲಾಡ್ಜ್‌ನಲ್ಲಿ ಚಿನ್ನಾಭರಣಗಳನ್ನು ಇಟ್ಟಿರುವುದಾಗಿ ತಿಳಿಸಿದ ಮೇರೆಗೆ, ಮಣಿಪಾಲ ಪೊಲೀಸರು ಅಲ್ಲಿಂದ ಕೆಳಕಂಡ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ
- 39.70 ಗ್ರಾಂ ಚಿನ್ನದ ಕರಿಮಣಿ ಸರ – ಅಂದಾಜು ಮೌಲ್ಯ ₹5,06,000/-
- 13.30 ಗ್ರಾಂ ಚಿನ್ನದ ನೆಕ್ಲೆಸ್ – ಅಂದಾಜು ಮೌಲ್ಯ ₹1,86,000/-
- 3.15 ಗ್ರಾಂ ಚಿನ್ನದ ಕಿವಿಯೋಲೆ – ಅಂದಾಜು ಮೌಲ್ಯ ₹44,000/-
- 3.87 ಗ್ರಾಂ ಚಿನ್ನದ ಚೈನ್ – ಅಂದಾಜು ಮೌಲ್ಯ ₹54,000/-
ಒಟ್ಟು ಸುಮಾರು 60 ಗ್ರಾಂ ಚಿನ್ನಾಭರಣಗಳು (₹7,90,000 ಮೌಲ್ಯ) ಹಾಗೂ 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ತಮ್ಮ ಕೈಗಳಲ್ಲಿ “TATTO 313” ಎಂಬ ಹಚ್ಚೆ (ಟ್ಯಾಟೂ) ಹಾಕಿಸಿಕೊಂಡಿದ್ದು, TATTO 313 ಗ್ಯಾಂಗ್ ಎಂದು ಗುರುತಿಸಿಕೊಂಡಿದ್ದರು. ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ರೈಲು ನಿಲ್ದಾಣಗಳ ಸಮೀಪದ ಮನೆಗಳನ್ನು ಗುರಿಯಾಗಿಸಿಕೊಂಡು, ರಾತ್ರಿ ವೇಳೆ ಮುಖಕ್ಕೆ ಮಾಸ್ಕ್, ಕೈಗಳಿಗೆ ಗ್ಲೌಸ್, ಕಾಲಿಗೆ ಸಾಕ್ಸ್ ಧರಿಸಿ, ಕಬ್ಬಿಣದ ಉಪಕರಣಗಳ ಸಹಾಯದಿಂದ ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿಸಿದ್ದಾರೆ.
ಆರೋಪಿತರ ವಿರುದ್ಧ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ತನಿಖೆಯ ವೇಳೆ ಅವರು 2025ರ ಸೆಪ್ಟೆಂಬರ್ ತಿಂಗಳಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ.
