ಕುಂದಾಪುರ: ದಿನಾಂಕ:21-05-2026(ಹಾಯ್ ಉಡುಪಿ ನ್ಯೂಸ್)
ಮೇ 27 ರಂದು ಕುಂದಾಪುರ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ವಿನೂತನ ‘ ಒಲೆ ಹೂಡಿ ಅಡುಗೆ ಮಾಡುವ’ ಧರಣಿ ಸತ್ಯಾಗ್ರಹಕ್ಕೆ ಕರೆ
ಕುಂದಾಪುರ: ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಸರ್ಕಾರಿ ಜಾಗವನ್ನು ಸಂರಕ್ಷಿಸಬೇಕಾದ ಕಂದಾಯ ಇಲಾಖೆಯ ಅಧಿಕಾರಿಗಳೇ ಭೂಕಬಳಿಕೆದಾರರ ಜೊತೆ ಕೈಜೋಡಿಸಿ, ಬೃಹತ್ ಬಂಗಲೆ ನಿರ್ಮಾಣಕ್ಕೆ ಕುಮ್ಮಕ್ಕು ನೀಡಿರುವ ಆಘಾತಕಾರಿ ಘಟನೆ ಕುಂದಾಪುರ ತಾಲೂಕಿನ ಹೊಸೂರು ಗ್ರಾಮದ ಮರ್ಡಿಯಲ್ಲಿ ಬೆಳಕಿಗೆ ಬಂದಿದೆ. ಉಳ್ಳವರ ಎಂಜಲು ಕಾಸಿಗೆ ಆಸೆ ಬಿದ್ದು ಸರ್ಕಾರಿ ಭೂಮಿ ಒತ್ತುವರಿಗೆ ಮುಕ್ತ ಅವಕಾಶ ಮಾಡಿಕೊಟ್ಟ ವಂಡ್ಸೆ ಹೋಬಳಿಯ ಕಂದಾಯ ನಿರೀಕ್ಷಕ (FDA) ರಾಘವೇಂದ್ರ ಹಾಗೂ ಇದಕ್ಕೆ ಸಾಥ್ ನೀಡಿದ ತಹಶೀಲ್ದಾರ್ ವಿರುದ್ಧ ದಲಿತ ಪರ ಹೋರಾಟಗಾರ್ತಿ ನಾಗರತ್ನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೃಹತ್ ಹೋರಾಟಕ್ಕೆ ಧುಮುಕಿದ್ದಾರೆ.
ಪ್ರಕರಣದ ಹಿನ್ನೆಲೆ
ಹೊಸೂರು ಗ್ರಾಮದ ಮರ್ಡಿ ಎಂಬಲ್ಲಿನ ಸರ್ವೆ ನಂಬರ್ 141 ರ ಸರ್ಕಾರಿ ಭೂಮಿಯನ್ನು ಸರ್ಕಾರದ ವಿವಿಧ ಯೋಜನೆಗಳಿಗೆ ಹಾಗೂ ಹಿಂದೂ ರುದ್ರಭೂಮಿಗೆ (ಸ್ಮಶಾನ) ಕಾಯ್ದಿರಿಸುವಂತೆ ಸ್ಥಳೀಯ ನಿವಾಸಿಗಳು ಹಾಗೂ ದಲಿತಪರ ಹೋರಾಟಗಾರ್ತಿ ನಾಗರತ್ನ ಸಂಬಂಧಪಟ್ಟ ಇಲಾಖೆಗೆ ಲಿಖಿತ ಮನವಿ ಸಲ್ಲಿಸಿದ್ದರು. ಆದರೆ, ಇದೇ ಜಾಗವನ್ನು ಸ್ಥಳೀಯ ಪ್ರಭಾವಿಗಳಾದ ಗಣಪು ಶೆಡ್ತಿ ಮತ್ತು ಮಂಜುಳಾ ಶೆಡ್ತಿ ಎಂಬುವವರು ಒತ್ತುವರಿ ಮಾಡಿಕೊಂಡು ಅನಧಿಕೃತ ಕಟ್ಟಡಕ್ಕೆ ಅಡಿಪಾಯ ಹಾಕಿದ್ದರು.
ಅಡಿಪಾಯದ (ಪಂಚಾಂಗ) ಸಮಯದಲ್ಲೇ ನಾಗರತ್ನ ಅವರು ಕಂದಾಯ ಇಲಾಖೆಗೆ ದೂರು ನೀಡಿದ್ದರು. ಆರಂಭದಲ್ಲಿ ತರಾತುರಿಯಲ್ಲಿ ಓಡೋಡಿ ಬಂದ ಕಂದಾಯ ಅಧಿಕಾರಿಗಳು, ನಂತರದ ದಿನಗಳಲ್ಲಿ ಪ್ರಭಾವಿಗಳ ಹಣದ ಆಮಿಷಕ್ಕೆ ಒಳಗಾಗಿ ದೂರುದಾರರ ಅರ್ಜಿಯನ್ನೇ ಕಡೆಗಣಿಸಿದರು. ಪರಿಣಾಮ, ಇಂದು ಸರ್ಕಾರಿ ಜಾಗದಲ್ಲಿ ಕೋಟಿ ರೂಪಾಯಿ ಮೌಲ್ಯದ ಬೃಹತ್ ಬಂಗಲೆ ತಲೆಎತ್ತಿ ನಿಂತಿದ್ದು, ಅದರ ಗೃಹಪ್ರವೇಶವೂ ಮುಗಿದುಹೋಗಿದೆ!
ಮೇಲಾಧಿಕಾರಿಗಳ ದಿಕ್ಕು ತಪ್ಪಿಸುತ್ತ ಬಂದ ಸುಳ್ಳು ಕಂದಾಯ ನಿರೀಕ್ಷಕ: ಈ ಇಡೀ ಭೂ ಹಗರಣದ ಸೂತ್ರಧಾರ ವಂಡ್ಸೆ ಹೋಬಳಿಯ ಕಂದಾಯ ನಿರೀಕ್ಷಕ ರಾಘವೇಂದ್ರ ಎನ್ನಲಾಗಿದೆ. ಇವರು ಮೇಲಾಧಿಕಾರಿಗಳಿಗೆ ತಪ್ಪು ಹಾಗೂ ಸುಳ್ಳು ಮಾಹಿತಿಗಳನ್ನು ರವಾನಿಸಿ, ಹಗರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಅಕ್ರಮವನ್ನು ಪ್ರಶ್ನಿಸಿದ ಹೋರಾಟಗಾರರ ವಿರುದ್ಧವೇ ಅಪಪ್ರಚಾರ ನಡೆಸಿ, ಒತ್ತುವರಿದಾರರಿಗೆ ಪೂರ್ಣ ರಕ್ಷಣೆ ನೀಡಿದ್ದಾರೆ ಎಂದು ನಾಗರತ್ನ ನೇರ ಆರೋಪ ಮಾಡಿದ್ದಾರೆ. ಇದರ ಎಲ್ಲಾ ಪೂರಕ ದಾಖಲೆಗಳು ಸದ್ಯ ಹೋರಾಟಗಾರರ ಬಳಿ ಲಭ್ಯವಿದೆ.
ನ್ಯಾಯಾಲಯದ ಮಧ್ಯಂತರ ಆದೇಶವನ್ನು ಕೇವಲ ಭೂ ಅತಿಕ್ರಮಣದಾರರ ರಕ್ಷಣೆಗೆ ಬಳಸಿಕೊಂಡ ಕುಂದಾಪುರ ತಹಶೀಲ್ದಾರರ ನಡೆ ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇತ್ತೀಚೆಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆಯಲ್ಲಿ, ನ್ಯಾಯ ಕೇಳಲು ಹೋದ ನಾಗರತ್ನ ಅವರಿಗೆ ಕಿಂಚಿತ್ತೂ ಬೆಂಬಲ ನೀಡದ ತಹಶೀಲ್ದಾರ್, ಎಲ್ಲರ ಸಮ್ಮುಖದಲ್ಲೇ ಅಮಾನವೀಯ ಮತ್ತು ಅವಮಾನಕಾರಿಯಾಗಿ ಗದರಿಸಿದ್ದಾರೆ. ಇದು ಈ ಭೂ ವಂಚನೆ ಪ್ರಕರಣದಲ್ಲಿ ತಹಶೀಲ್ದಾರ್ ಅವರ ಪಾಲೂ ಇದೆ ಎಂಬುದಕ್ಕೆ ಪುಷ್ಟಿ ನೀಡುವಂತಿದೆ.
ಮೇ 27ಕ್ಕೆ ವಿನೂತನ ಧರಣಿ!
ಸರ್ಕಾರಿ ಭೂಮಿಯನ್ನು ರಕ್ಷಿಸಬೇಕಾದ ಅಧಿಕಾರಿಗಳು ತಮ್ಮ ಕರ್ತವ್ಯ ನಿಷ್ಠೆಗೆ ದ್ರೋಹ ಬಗೆದಿರುವುದನ್ನು ಖಂಡಿಸಿ ಹಾಗೂ ಪ್ರಮುಖ ಆರೋಪಿಯಾಗಿರುವ ಕಂದಾಯ ನಿರೀಕ್ಷಕ ರಾಘವೇಂದ್ರನನ್ನು ತಕ್ಷಣವೇ ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿ ವಿನೂತನ ಧರಣಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ: 27-05-2026
ಸಮಯ: ಬೆಳಿಗ್ಗೆ 11:00 ಗಂಟೆಯಿಂದ
ಸ್ಥಳ: ಕುಂದಾಪುರ ಸಹಾಯಕ ಕಮಿಷನರ್ (AC) ಅವರ ಕಚೇರಿ ಮುಂಭಾಗ
ಹವಾನಿಯಂತ್ರಣ ಕಚೇರಿಯ ತಣ್ಣನೆಯ ಗಾಳಿಯಲ್ಲಿ ಕೂತಿರುವ ಮೇಲಾಧಿಕಾರಿಗಳ ಕಣ್ಣು ತೆರೆಸಲು ಕಚೇರಿ ಮುಂಭಾಗದಲ್ಲೇ ಸೌದೆ ತಂದು, ಒಲೆ ಹೂಡಿ, ಅನ್ನ ಬೇಯಿಸುವ ಮೂಲಕ ವಿನೂತನ ಶೈಲಿಯ ಪ್ರತಿಭಟನೆ ನಡೆಸಲಾಗುವುದು.
ದಲಿತ ಸಮುದಾಯದ ಗಟ್ಟಿಗಿತ್ತಿ ನಾಗರತ್ನ ಅವರ ಈ ನ್ಯಾಯಯುತ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ನಾವೂ ಸಹ ಈ ಧರಣಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಎಸಿ ಕಚೇರಿ ಮುಂದೆ ಬೇಯಿಸಿದ ಗಂಜಿಯನ್ನ ಉಂಡು ಭ್ರಷ್ಟರ ವಿರುದ್ಧ ಗಟ್ಟಿ ಧ್ವನಿಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಲಿದ್ದೇವೆ.
ಸರ್ಕಾರಿ ಭೂಮಿಯನ್ನು ಉಳಿಸುವ ಹಾಗೂ ಭ್ರಷ್ಟ ಅಧಿಕಾರಿಗಳಿಗೆ ಪಾಠ ಕಲಿಸುವ ಈ ಮಹತ್ಕಾರ್ಯಕ್ಕೆ ದಲಿತ ಪರ, ಪ್ರಗತಿಪರ ಸಂಘಟನೆಗಳು ಹಾಗೂ ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿ ಹೋರಾಟಗಾರರು ವಿನಂತಿಸಿ ಕೊಂಡಿದ್ದಾರೆ.
