Screenshot_2026-04-26-13-35-33-416_com.miui_.gallery-edit.jpg
Spread the love

ದಿನಾಂಕ:26-04-2026 (ಹಾಯ್ ಉಡುಪಿ ನ್ಯೂಸ್)

ಕಾರ್ಕಳ: ದಿನಾಂಕ 23.04.2026 ರಂದು ಪತ್ತೊಂಜಿಕಟ್ಟೆಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಕಾರ್ಕಳ ನಗರ ಪೊಲೀಸರು ಕೇವಲ 24 ಗಂಟೆಯೊಳಗೆ ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಕಳ,ಪತ್ತೊಂಜಿ ಕಟ್ಟೆ ನಿವಾಸಿಯಾದ ಶಂಕರ ಕುಲಾಲ್ ಎಂಬವರು ನೀಡಿದ ದೂರಿನ ಪ್ರಕಾರ, ಅಪರಿಚಿತರು ಅವರ ಮನೆ ಬಾಗಿಲು ಒಡೆದು ಒಳನುಗ್ಗಿ, ಕಪಾಟಿನಲ್ಲಿ ಇಟ್ಟಿದ್ದ ಸುಮಾರು 24 ಗ್ರಾಂ ಚಿನ್ನದ ನೆಕ್ಲೆಸ್, 3 ಗ್ರಾಂ ತೂಕದ 3 ಉಂಗುರಗಳು, 3 ಗ್ರಾಂ ಬೆಂಡೋಲೆ ಹಾಗೂ 3 ಗ್ರಾಂ ಜುಮ್ಕಿ ಕಳವು ಮಾಡಿಕೊಂಡು ಹೋಗಿದ್ದರು. ಕಳವಾದ ಚಿನ್ನದ ಒಟ್ಟು ಮೌಲ್ಯ ಸುಮಾರು ₹2,64,000 ಎಂದು ಅಂದಾಜಿಸಲಾಗಿತ್ತು. ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ವಿಜಯಪ್ರಸಾದ್ ಅವರ ನೇತೃತ್ವದಲ್ಲಿ, ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್, ಪಿಎಸ್‌ಐ ಮುರುಳೀಧರ ನಾಯ್ಕ, ಶಿವಕುಮಾರ್ ಎಸ್.ಆರ್ ಹಾಗೂ ಸಿಬ್ಬಂದಿಗಳ ತಂಡ ತನಿಖೆ ನಡೆಸಿ  ಪ್ರಮುಖ ಆರೋಪಿಯಾದ ಆನಂದ ಕುಲಾಲ್ (40) ಎಂಬವನನ್ನು ಬಂಧಿಸಿದ್ದಾರೆ.

ಇದಲ್ಲದೆ, ಕಳವು ಮಾಡಿದ ಚಿನ್ನವನ್ನು ಮಾರಾಟ ಮಾಡಿದ ಆರೋಪದಲ್ಲಿ ಜಯರಾಮ ಆಚಾರ್ಯ (54) ಎಂಬವನನ್ನು ಸಹ ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಸುಮಾರು ₹5,60,000 ಮೌಲ್ಯದ 39 ಗ್ರಾಂ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಬಂಧಿತ ಆರೋಪಿಗಳನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

error: No Copying!